ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ಸಂರಕ್ಷಣಾ ಕ್ರಮಕ್ಕೆ ಎನ್‌ಟಿಸಿಎ ಸೂಚನೆ

Last Updated 1 ಮೇ 2012, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯದ ಐದು ಹುಲಿ ರಕ್ಷಿತಾರಣ್ಯಗಳ ಮೇಲೆ ವೃತ್ತಿಪರ ಬೇಟೆಗಾರರ ಕಾಕದೃಷ್ಟಿ ಬಿದ್ದಿದ್ದು, ಹುಲಿ ಸಂರಕ್ಷಣೆಗೆ ರಾಜ್ಯ ಸರ್ಕಾರ ಕಟ್ಟೆಚ್ಚರವಹಿಸಬೇಕು ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಸೂಚಿಸಿದೆ.

ಕರ್ನಾಟಕ ಸೇರಿದಂತೆ ದೇಶದ ಉತ್ತರಖಂಡ, ಮಹಾರಾಷ್ಟ್ರ, ಅಸ್ಸಾಂ, ಮಧ್ಯಪ್ರದೇಶ, ಛತ್ತೀಸ್‌ಗಡ, ತಮಿಳುನಾಡು, ರಾಜಸ್ತಾನ ಹಾಗೂ ಆಂಧ್ರಪ್ರದೇಶದಲ್ಲಿ ಹುಲಿಗಳನ್ನು ಕೊಲ್ಲಲು ಬೇಟೆಗಾರ ತಂಡಗಳು ಸಂಚು ರೂಪಿಸಿವೆ.

ಈ ರಾಜ್ಯಗಳ ಒಟ್ಟು 29 ಹುಲಿ ರಕ್ಷಿತಾರಣ್ಯಗಳನ್ನು ಬೇಟೆಗಾರರು ಗುರಿಯಾಗಿಟ್ಟುಕೊಂಡಿದ್ದಾರೆ. ಇದರಲ್ಲಿ ರಾಜ್ಯದ ಬಂಡೀಪುರ, ನಾಗರಹೊಳೆ, ದಾಂಡೇಲಿ-ಅಣಶಿ, ಭದ್ರಾ ಹಾಗೂ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯ ಕೂಡ ಸೇರಿವೆ.

ಇತ್ತೀಚೆಗೆ ಕೆಲವು ರಕ್ಷಿತಾರಣ್ಯದ ವ್ಯಾಪ್ತಿ ಬೇಟೆಗಾರರು ಅಳವಡಿಸಿದ್ದ ಉರುಳು ವಶಪಡಿಸಿಕೊಳ್ಳಲಾಗಿದೆ. ಮೃತಪಟ್ಟಿರುವ ಹುಲಿಗಳ ಮರಣೋತ್ತರ ಪರೀಕ್ಷೆಯ ವರದಿ ಅನ್ವಯ ಅವುಗಳಿಗೆ ವಿಷ ಉಣಿಸಿರುವುದು ಹಾಗೂ ಉರುಳಿಗೆ ಸಿಲುಕಿ ಕಾಲಿನ ಗಾಯಗಳಿಂದ ವ್ಯಾಘ್ರಗಳು ಅಸುನೀಗಿರುವುದು ಬಯಲಾಗಿದೆ.

ಹೀಗಾಗಿ, ಎಲ್ಲ ಹುಲಿ ರಕ್ಷಿತಾರಣ್ಯಗಳ ವ್ಯಾಪ್ತಿ ಸಂರಕ್ಷಣಾ ಕ್ರಮಗಳನ್ನು ಬಿಗಿಗೊಳಿಸಬೇಕು ಎಂದು ಎನ್‌ಟಿಸಿಎ ಸದಸ್ಯ ಕಾರ್ಯದರ್ಶಿ ಡಾ.ರಾಜೇಶ್‌ಗೋಪಾಲ್ ಅವರು, ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಸೂಚನಾಪತ್ರದ ಪ್ರತಿ `ಪ್ರಜಾವಾಣಿ~ಗೆ ಲಭ್ಯವಾಗಿದೆ.

ರಕ್ಷಿತಾರಣ್ಯದ ವ್ಯಾಪ್ತಿ ಅಗತ್ಯವಿರುವೆಡೆ ಕಳ್ಳಬೇಟೆ ತಡೆ ಶಿಬಿರ ಸ್ಥಾಪಿಸಬೇಕು. ಹಾಲಿ ಕಾರ್ಯ ನಿರ್ವಹಿಸುತ್ತಿರುವ ಶಿಬಿರಗಳನ್ನು ಬಲಗೊಳಿಸಬೇಕು. ಅರಣ್ಯದ ಸೂಕ್ಷ್ಮ ಪ್ರದೇಶದಲ್ಲಿ ನಿರಂತರವಾಗಿ ಕೂಂಬಿಂಗ್ ನಡೆಸಬೇಕು. ಕಾಡಂಚಿನ ಭಾಗದಲ್ಲಿ ಬೇಟೆಗಾರರು ಉರುಳು ಅಳವಡಿಸುವ ಸಾಧ್ಯತೆಯಿದ್ದು, ಕಾರ್ಯಾಚರಣೆ ಮೂಲಕ ಪತ್ತೆ ಹಚ್ಚಬೇಕು.

ಹುಲಿ ಹಾಗೂ ಅವುಗಳ ಮರಿಗಳು ಸಂಚರಿಸುವ ಪ್ರದೇಶದ ಸುತ್ತಮುತ್ತ ತೀವ್ರ ನಿಗಾವಹಿಸಬೇಕು. ಕಾಡಿನೊಳಗೆ ವನ್ಯಜೀವಿಗಳಿಗೆ ನೀರಿನ ಆಸರೆಯಾಗಿರುವ ಗುಂಡಿಗಳು, ಆಯಕಟ್ಟಿನ ಸ್ಥಳ ಹಾಗೂ ಹೆದ್ದಾರಿಗಳ ಅಕ್ಕಪಕ್ಕದಲ್ಲಿ ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.

ಜಿಲ್ಲಾಮಟ್ಟದ ಗುಪ್ತಚರ ದಳ ಹಾಗೂ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ರಕ್ಷಣಾ ಕ್ರಮಗಳನ್ನು ಬಲಗೊಳಿಸಬೇಕು. ಹುಲಿ ರಕ್ಷಿತಾರಣ್ಯದ ಅಕ್ಕಪಕ್ಕದಲ್ಲಿರುವ ವನ್ಯಜೀವಿಧಾಮಗಳ ಅಧಿಕಾರಿಗಳೊಂದಿಗೆ ಸಂಬಂಧಪಟ್ಟ ಹುಲಿ ಯೋಜನೆಯ ನಿರ್ದೇಶಕರು ಹೊಂದಾಣಿಕೆ ಕಾಯ್ದುಕೊಂಡು ಬೇಟೆಗಾರರ ಹಾವಳಿ ತಡೆಗೆ ಮುಂದಾಗಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.

56 ಹುಲಿ ಸಾವು: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಪ್ರಕಟಿಸಿರುವ ವರದಿ ಅನ್ವಯ 2011ರಲ್ಲಿ ದೇಶದಲ್ಲಿ ಒಟ್ಟು 56 ಹುಲಿಗಳು ಮೃತಪಟ್ಟಿವೆ.ಇದರಲ್ಲಿ 11 ಹುಲಿಗಳು ಬೇಟೆಗಾರರ ಸಂಚಿಗೆ ಬಲಿಯಾಗಿವೆ. ಕರ್ನಾಟಕದಲ್ಲಿ 6 ಹುಲಿಗಳು ಮೃತಪಟ್ಟಿದ್ದು, ಇದರಲ್ಲಿ ಮೂರು ವ್ಯಾಘ್ರಗಳು ಬೇಟೆಗಾರರ ದಾಳಿಗೆ ಪ್ರಾಣತೆತ್ತಿವೆ ಎಂದು ಎನ್‌ಟಿಸಿಎ ವರದಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT