ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡತೋಕ ಮಂಜುನಾಥ ಭಾಗವತ ನಿಧನ

Last Updated 31 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಯಕ್ಷಗಾನ ರಂಗವು ಕಳೆದೊಂದು ಶತಮಾನದಲ್ಲಿ ಕಂಡ ವಿಶಿಷ್ಟ ಮಹೋನ್ನತ ಸಾಧಕರಲ್ಲೊಬ್ಬರಾದ ಕಡತೋಕ ಮಂಜುನಾಥ ಭಾಗವತರ (1929-2011) ನಿಧನದೊಂದಿಗೆ, ಭಾಗವತಿಕೆಯ ಒಂದು ಯುಗ ಅಂತ್ಯಗೊಂಡಿದೆ. ಸಾಧನೆ, ಸಿದ್ಧಿ, ಜನಪ್ರಿಯತೆ, ವೈಶಿಷ್ಟ್ಯ, ಗುಣಮಟ್ಟ ಈ ಐದೂ ನೆಲೆಗಳಲ್ಲಿ ಕಡತೋಕ, ಭಾರತೀಯ ಸಾಂಪ್ರದಾಯಿಕ ರಂಗಭೂಮಿಯ ಶ್ರೇಷ್ಠರಲ್ಲಿ ಒಬ್ಬರು.

ಪ್ರಸಿದ್ಧ ಭಾಗವತರಾಗಿದ್ದ ತಂದೆ ಕುಮಟಾ ಬಳಿಯ ಕಡತೋಕದ ಭಾಗವತ ವೆಂಕಟರಮಣ ಯಾಜಿ, ನಟವರರಾದ ಕರ್ಕಿ ಪರಮಯ್ಯ ಹಾಸ್ಯಗಾರ, ಕೆರೆಮನೆ ಶಿವರಾಮ ಹೆಗಡೆ ಅವರ ಶಿಷ್ಯನಾಗಿ, ಗುರು ಮಾಂಬಾಡಿ ಭಾಗವತರಲ್ಲೂ ತರಬೇತಿ ಪಡೆದು- ಬಾಲ್ಯದಲ್ಲೇ ವಿಸ್ಮಯಕರ ಪ್ರತಿಭೆ ಎನಿಸಿದಲ್ಲಿಂದ, ಮುಂದೆ ಆರು ದಶಕ ಕಾಲ ಯಕ್ಷಗಾನದಲ್ಲಿ ಅನ್ಯಭಿನ್ನವಾದ ಸಾಧಕನಾಗಿ ರಂಗವನ್ನಾಳಿದ ಕಡತೋಕ, ತೆಂಕು- ಬಡಗು ಎರಡೂ ತಿಟ್ಟುಗಳಲ್ಲಿ ಸಮಾನ ಪ್ರಭುತ್ವ ಹೊಂದಿದ ಭಾಗವತ. ಇಡಿಯ ರಂಗದ ಮೂರು ತಲೆಮಾರುಗಳ ಕಲಾವಿದರನ್ನು ಕುಣಿಸಿ ಮೆರೆಸಿದ ಪ್ರೇರಕ, ನಿರ್ದೇಶಕ.

ಕೆಲಕಾಲ ಅಧ್ಯಾಪಕರಾಗಿ ದುಡಿದು, ಕರ್ಕಿ, ಕೆರೆಮನೆ, ಕೋಳಗಿಬೀಸ್ ಮೇಳಗಳಲ್ಲಿ ತಿರುಗಾಟ ನಡೆಸಿ, ಮುಲ್ಕಿ, ಕೂಡ್ಲು ಮೇಳಗಳಿಗೆ ಬಂದು ಆ ಬಳಿಕ ಮೂರು ದಶಕಗಳಿಗೂ ಮಿಕ್ಕಿ ಶ್ರೀಧರ್ಮಸ್ಥಳ ಮೇಳದ ಭಾಗವತರಾಗಿ ಇತಿಹಾಸ ನಿರ್ಮಿಸಿದ ಕಡತೋಕ- ~ಭಾಗವತಿಕೆ~ ಎಂಬುದಕ್ಕೆ ಹೊಸ ಹೊಳವು, ಹೊಸ ಆಯಾಮ, ಹೊಸ ವ್ಯಾಖ್ಯೆ ನೀಡಿದ ಪ್ರತಿಭಾವಂತ.

ಹೊನ್ನಾವರ: ಕಂಚಿನ ಕಂಠದ ಭಾಗವತರೆಂದೇ ಹೆಸರಾಗಿದ್ದ ಕಡತೋಕ ಮಂಜುನಾಥ ಭಾಗವತ (80) ಅವರು ಹಳದೀಪುರ-ಅಗ್ರಹಾರ ಸಮೀಪದ ಕುಂಬಾರಕೇರಿಯ ತಮ್ಮ ನಿವಾಸದಲ್ಲಿ ಭಾನುವಾರ ಮಧ್ಯರಾತ್ರಿ ನಿಧನ ಹೊಂದಿದರು.

ಅವರಿಗೆ ಪತ್ನಿ ಗೋದಾವರಿ, ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ. ವೃದ್ಧಾಪ್ಯದ ಕಾಯಿಲೆಯಿಂದ ಬಳಲುತ್ತಿದ್ದ ಭಾನುವಾರ ರಾತ್ರಿ ತೀವ್ರ ಅಸ್ವಸ್ಥರಾಗಿ ಕೊನೆಯುಸಿರೆಳೆದರು ಎಂದು ಅವರ ಮಗ, ಯಕ್ಷರಂಗ ಪತ್ರಿಕೆಯ ಸಂಪಾದಕ ಗೋಪಾಲಕೃಷ್ಣ ಭಾಗವತ ತಿಳಿಸಿದ್ದಾರೆ.

ಯಕ್ಷಗಾನದ ಬಡಗು ಹಾಗೂ ತೆಂಕು ತಿಟ್ಟುಗಳೆರಡರಲ್ಲೂ ಪ್ರಬುದ್ಧ ಭಾಗವತರಾಗಿದ್ದ ಮಂಜುನಾಥ ಭಾಗವತ ರಾಜ್ಯೋತ್ಸವ, ಪಾರ್ಥಿ ಸುಬ್ಬ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ-ಗೌರವಗಳಿಗೆ ಭಾಜನರಾಗಿದ್ದರು.

ನಿರಾಯಾಸದ ಏರುಶ್ರುತಿಯ ಆಕರ್ಷಕ, ಹೆಣ್ಣು ಕಂಠ, ಸ್ವಚ್ಛ, ಸ್ಪಷ್ಟ ಉಚ್ಚಾರ, ಖಚಿತ ಲಯಜ್ಞಾನ, ಛಂದಸ್ಸಿನ ಕಟ್ಟುನಿಟ್ಟಾದ ಪ್ರಭುತ್ವ, ಸಾಹಿತ್ಯ ಶುದ್ಧಿ, ಉತ್ಕೃಷ್ಟವೆನಿಸಿದ ಭಾವಪ್ರಕಾಶನ ಸಾಮರ್ಥ್ಯ, ರಂಗನಡೆಯ ಹಿಡಿತ, ಪರಿಪಕ್ವವಾದ ರಾಗವಿಧಾನ, ಕಾವ್ಯಗಳ ಅಧ್ಯಯನದ ಹಿನ್ನೆಲೆ, ಸಮಗ್ರ ಪ್ರಸಂಗಾನುಭವ, ಮೋಹಕ ಮಾಧುರ್ಯ, ನಟನಾ ಹದವರಿತು ಕುಣಿಸುವ ಜಾಣ್ಮೆ, ಚಮತ್ಕಾರ, ಕಲಾತ್ಮಕ ವಿಷಮ ನಡೆ- ಎಲ್ಲದರಲ್ಲೂ ಹಿಡಿತವಿದ್ದ ಕಡತೋಕ ಓರ್ವ ಸರ್ವಾಂಗ ಸಮರ್ಥ ನಿರ್ದೇಶಕ- ಭಾಗವತ. ಉತ್ತರ ಕರ್ನಾಟಕದ ರಂಗಪಡೆಯನ್ನು ತೆಂಕುತಿಟ್ಟಿಗೆ ಸಮನ್ವಯಗೊಳಿಸಿ, ತೆಂಕಿನ ರಂಗಕೃತಿಗಳಿಗೆ ಹೊಸರೂಪ ನೀಡಿದ ಇವರು ಅಭಿನಯಕ್ಕೆ ಪೋಷಕರಾಗಿ ಹಾಡುವ ಇವರ ಸಿದ್ಧಿ ವಿರಳ ಪಂಕ್ತಿಯದು. ಪ್ರತಿಯೊಬ್ಬ ವೇಷಧಾರಿಯ ಹದವರಿತು ಕುಣಿಸುವ, ಅರ್ಥವನ್ನು ಪೇರಿಸಿ, ಕಲಿಸಿ ನಿರ್ಮಿಸುವ ಕಡತೋಕ ಕಲಾವಿದ- ನಿರ್ಮಾಪಕ. ಕುರಿಯ ವಿಠಲ ಶಾಸ್ತ್ರಿ, ಶೇಣಿ, ಗೋವಿಂದ ಭಟ್, ನಾರಾಯಣ ಹೆಗ್ಡೆ, ಕುಂಬ್ಳೆ, ಚಂದ್ರಗಿರಿ, - ಇಂತಹ ನಟರಿಂದ ತೊಡಗಿ, ಅಭ್ಯಾಸಿ ಹವ್ಯಾಸಿಗಳತನಕ ಎಲ್ಲರನ್ನೂ ಮೆರೆಸಿ ಕುಣಿಸುವ ಕಡತೋಕ- ಸಹಜಸಿದ್ಧಿ, ಸತತ ಸೃಜನಶೀಲ ಸಾಧನೆ ಬೆರೆತ ಕಲಾವಿದ ಶ್ರೇಷ್ಠ. ಇವರು ರಂಗದಲ್ಲಿದ್ದರೆ ಹಿಮ್ಮೇಳ, ಮುಮ್ಮೇಳಕ್ಕೆ ಹಬ್ಬ. ರಸಿಕನಿಗೆ ಸ್ಪಂದನ. ತನ್ನ ಸುತ್ತ ಉಲ್ಲಾಸದ ವಾತಾವರಣ ನಿರ್ಮಿಸುವ ಮಂಜುನಾಥರು, ರಂಗದ ಹಾಸ್ಯರಸಕ್ಕೂ ಹೊಸರೂಪವಿತ್ತವರು.

ತಾಳಮದ್ದಲೆ ಭಾಗವತರಾಗಿ ಅವರು ನೀಡುವ ಪ್ರೇರಣೆ, ಪೋಷಣೆಗಳ ಸಿರಿ ಸೊಗಡು ಅನುಭವಿಸಿಯೇ ತಿಳಿಯಬೇಕು. ಗದ್ಯಪದ್ಯಗಳ ಸೊಗಸಿನ ಸಮನ್ವಯವನ್ನು ಆಶ್ಚರ್ಯಕರವಾಗಿ ಸಾಧಿಸುವ ಕಡತೋಕ ನಿಜಾರ್ಥ ವಾಙ್ಮಯ ಭಾಗವತ. ಜೋಡಾಟಗಳಲ್ಲೂ ಪ್ರವೀಣ. ದಣಿವರಿಯದ ದುಡಿಮೆಗಾರ. ಚಾಲೆಂಜ್ ತೆಗೆದುಕೊಳ್ಳುವ ಧೀರ.

ಹಿರಿಯ ಭಾಗವತ ಬಲಿಪರು ಸಲುಗೆಯಿಂದ ಪ್ರಶಂಸಿಸುವಂತೆ ~ಕಡತೋಕ ಓರ್ವ ಉತ್ಪಾತ ಭಾಗವತ. ಏನೂ ಮಾಡಿಯಾರು!~. ಅವರೊಂದಿಗೆ ಹಿಮ್ಮೇಳದಲ್ಲಿ ದುಡಿದ ಕುದ್ರೆಕೂಡ್ಲ ರಾಮಭಟ್, ಧರ್ಮಶಾಲಾ ಮಹಾಬಲೇಶ್ವರ, ದುರ್ಗಪ್ಪ ಗುಡಿಗಾರ, ಚಿಪ್ಪಾರು ಬಲ್ಲಾಳ, ನೆಡ್ನೆ ನರಸಿಂಹ ಭಟ್ಟರಂತಹವರ ಅಚ್ಚುಮೆಚ್ಚು ಕಡತೋಕ.

ಮದ್ದಲೆಗಾರರ ಪರಿಶ್ರಮವನ್ನು ಕಾಣಿಸುವ ಭಾಗವತಿಕೆ ಅವರದು. ಕಥಾ ನಿರ್ವಹಣೆ, ನೃತ್ಯ ವಿಭಾಗ, ಬಾಯಿ ತಾಳ, ಕಾವ್ಯ ಪದ್ಯಗಳ ಬಳಕೆಗಳಲ್ಲಿ ಹಲವು ಪ್ರಯೋಗಗಳನ್ನು ನಡೆಸಿದವರು. ಇಪ್ಪತ್ತು  ಪ್ರಸಂಗಗಳನ್ನು ಬರೆದಿದ್ದಾರೆ. ಅನೇಕ ಪ್ರಸಂಗಕರ್ತರ ರಚನೆಗಳನ್ನು ಹಾಡಿ ಮೆರೆಸಿದ್ದಾರೆ. ತೀರಾ ಹೊಸ ಪ್ರಸಂಗವನ್ನಾದರೂ ಸಲೀಸಾಗಿ ಹಾಡಬಲ್ಲ ಭಾಗವತರವರು.

ಇಪ್ಪತ್ತರ ಹರೆಯಲ್ಲಿ ಶಿರಸಿಯಲ್ಲಿ ~ಯಕ್ಷಗಾನ~ ಪತ್ರಿಕೆ ಆರಂಭಿಸಿ ಕಲಾ ಪತ್ರಿಕೋದ್ಯಮದಲ್ಲಿ ಅಧ್ಯಾಯ ನಿರ್ಮಿಸಿದವರು ಅವರು. (ಈಗ ಈ ಪತ್ರಿಕೆ ~ಯಕ್ಷರಂಗ~ವೆಂಬ ಹೆಸರಿನಲ್ಲಿ ಅವರ ಪುತ್ರನಿಂದ ಪ್ರಕಾಶಿತವಾಗುತ್ತಿದೆ). ಹಲವು ಲೇಖನಗಳನ್ನು ಕಡತೋಕ ಬರೆದಿದ್ದಾರೆ. ಕಾರ್ಯಕ್ರಮ ಸಂಘಟಕರಾಗಿಯೂ ದುಡಿದು, ಹಲವು ಕಲಾವಿದರನ್ನು ಸಂಮಾನಿಸಿ ಹೃದಯವಂತಿಕೆ ಮೆರೆದ ಕಡತೋಕ ಕ್ರಿಯಾಶೀಲ. ಪಾದರಸ ಪ್ರತಿಭೆ. ಸ್ನೇಹಶೀಲ.

ಪಾಂಡಿತ್ಯ, ಪರಿಣಾಮ, ನಾವಿನ್ಯ, ಕಲಾ ಸೌಂದರ್ಯ, ವಿಭಿನ್ನ ಸಾಧನೆಗಳಲ್ಲಿ ದೀರ್ಘಕಾಲ ಔನ್ನತ್ಯ ಸಾಧಿಸಿದ ಮಂಜು ಭಾಗವತ, ~ಕಡತೋಕ~ ಎಂದು ರಸಿಕರ ಮನೆ ಮಾತಾದ ಮಂಜುನಾಥ ಶಂಭು ಭಾಗವತರ ನಿಧನ- ಒಂದು ದೊಡ್ಡ ಕಲಾನಿಧಿಯ ಅಗಲಿಕೆ. ಅವರಿಗೆ ಪರ್ಯಾಯವಿಲ್ಲ.
- ಡಾ.ಎಂ.ಪ್ರಭಾಕರ ಜೋಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT