ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲ ಕಿನಾರೆಯಲ್ಲಿ ಮುಗಿಲೆತ್ತರಕ್ಕೇರಿದ ಬಾನ ಹಕ್ಕಿಗಳು

ಕೋಡಿ: ಗುರುಕುಲ ಪಬ್ಲಿಕ್‌ ಸ್ಕೂಲ್‌ನ ‘ಗಾಳಿಪಟ ಉತ್ಸವ – 2013’
Last Updated 23 ಡಿಸೆಂಬರ್ 2013, 9:57 IST
ಅಕ್ಷರ ಗಾತ್ರ

ಕುಂದಾಪುರ: ಅಲ್ಲಿ ನೆರೆದಿದ್ದ ಸಾವಿರಾರು ಜನರಲ್ಲಿ  ಯಾವುದೆ ಅಂತಸ್ತುಗಳ ನಿರ್ಬಂಧವಿರಲಿಲ್ಲ, ವಯಸ್ಸಿನ ಅಂತರವೂ ಇರಲಿಲ್ಲ. ಮಕ್ಕಳಿಂದ ಹಿಡಿದು 80 ರ ವಯಸ್ಸಿನ ಗಡಿ ತಲುಪಿದವರಲ್ಲಿಯೂ ಒಂದೆ ತರದ ಉತ್ಸಾಹ, ಬಾನಿನ ಎತ್ತರಕ್ಕೆ ತಮ್ಮ ಕೈಯಲ್ಲಿ ಹಿಡಿದ್ದಿದ್ದ ಸೂತ್ರದ ದಾರಗಳನ್ನು ಬಿಟ್ಟು, ಬಣ್ಣ, ಬಣ್ಣದ ಚಿಟ್ಟೆಗಳನ್ನು ಬಾನಿಗೆ ಅಟ್ಟಿಸಿ ಬಿಡಬೇಕು ಎನ್ನುವ ಸಂಭ್ರಮವಿತ್ತು.

ಇದಕ್ಕೆಲ್ಲ ಭಾನುವಾರ ಸಾಕ್ಷಿಯಾದುದು ಕುಂದಾಪುರ ಸಮೀಪದ ಕೋಡಿಯ ಕಡಲ ಕಿನಾರೆ. ಮಧ್ಯಾಹ್ನ ಅರಬ್ಬಿ ಕಡಲಂಚಿನಲ್ಲಿ ಹರಡಿದ್ದ ಬಿಸಿ ಮರಳಿನ ಮೇಲೆ ಸುಡು ಬಿಸಲನ್ನು ಲೆಕ್ಕಿಸದ ಗಾಳಿಪಟ ಪ್ರೇಮಿಗಳ ಕೈಯಿಂದ ನೂರಾರು ಗಾಳಿ ಪಟಗಳು ಬಾನಿನಲ್ಲಿ ಬಣ್ಣದ ಚಿತ್ತಾರಗಳನ್ನು ಅರಳಿಸಿದವು.

ಕೋಟೇಶ್ವರ ಸಮೀಪದ ವಕ್ವಾಡಿಯ ಗುರುಕುಲ ಪಬ್ಲಿಕ್‌ ಸ್ಕೂಲ್‌ನ ಆಡಳಿತೆಯ ಬಾಂಡ್ಯಾ ಎಜುಕೇಶನ್‌ ಟ್ರಸ್ಟ್‌ನವರು ಆಯೋಜಿಸಿದ್ದ  ’ಗಾಳಿ ಪಟ ಉತ್ಸವ–2013’  ಉದ್ಘಾಟಿಸಿ ಮಾತನಾಡಿದ ಪ್ರಸಿದ್ದ ಸಂಗೀತ ನಿರ್ದೇಶಕ ಗುರುಕಿರಣ್‌ ಅವರು ಈ ಅಪೂರ್ವವಾದ ಕಾರ್ಯಕ್ರಮದ ಸೊಬಗನ್ನು ಸವಿಯಲು ಆನಂದವಾಗುತ್ತಿದೆ. ಕಡಲ ಕಿನಾರೆಗಳ ಪ್ರಾಕೃತಿಕ ಸೌಂದರ್ಯಗಳನ್ನು ಉಳಿಸಿಕೊಳ್ಳಲು ಇಂತಹ ಕಡಲೋತ್ಸವ­ಗಳನ್ನು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು. ‘ಕೊಲ್ಲೆ ನನ್ನನ್ನೇ... ’ ಗೀತೆಯನ್ನು ಹಾಡಿ ರಂಜಿಸಿದರು.

8 ವರ್ಷಗಳ ಹಿಂದೆ ಸ್ಥಾಪಿತವಾದ ಈ ಟ್ರಸ್ಟ್‌, ತಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ ಸಾಂಸ್ಕೃತಿಕ– ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಕಳೆದ ವರ್ಷದಿಂದ ಅಂತರಾಷ್ಟ್ರೀಯ ಖ್ಯಾತಿಯ ಮಂಗಳೂರಿನ ’ಟೀ ಮಂಗಳೂರು’ ತಂಡದವರ ಸಹಕಾರದೊಂದಿಗೆ ಗಾಳಿ ಪಟ ಉತ್ಸವವನ್ನು ಯಶಸ್ವಿಯಾಗಿ ನಡೆಸುತ್ತಿದೆ.

ಕೋಡಿಯ ಸುಂದರ ಕಿನಾರೆಯಲ್ಲಿ ಇಂದು ನಡೆದ ಈ ಉತ್ಸವದಲ್ಲಿ ಸಾವಿರಾರು ಮಂದಿ ಸೇರಿದ್ದರು. ಮಾರಾಟ­ಕ್ಕೆಂದು ತಂದಿದ್ದ ಗಾಳಿ ಪಟಗಳು ಬಿಸಿ ದೋಸೆಯಂತೆ ಖಾಲಿಯಾಗಿದ್ದರಿಂದ, ಗಾಳಿ ಪಟವನ್ನು ಹಾರಿಸಿ ಖುಷಿ ಪಡಬೇಕು ಎಂದು ಕಡಲಂಚಿಗೆ ಬಂದಿದ್ದ ದೊಡ್ಡ ಸಂಖ್ಯೆಯ ಆಸಕ್ತರು, ಇನ್ನೊಬ್ಬರು ಹಾರಿಸಿದ ಬಾನಿನ ಬಣ್ಣದ ಹಕ್ಕಿಗಳನ್ನು ನೋಡಿ ಸಂತಸಪಟ್ಟರು.

ಸಮುದ್ರ ಕಿನಾರೆಯ ಅಂಚಿನಲ್ಲಿ ಮೈತೆಳೆದ ಗುರುಕುಲ ಪಬ್ಲಿಕ್‌ ಸ್ಕೂಲ್‌ನ ವಿದ್ಯಾರ್ಥಿಗಳು ರಚಿಸಿದ್ದ ಮರಳು ಶಿಲ್ಪಗಳು ಉತ್ಸವದಲ್ಲಿ ಭಾಗಿಯಾದ ಸಾವಿರಾರು ಕಲಾಸಕ್ತರ  ಮನಸ್ಸನ್ನು ಮುದಗೊಳಿಸಿದವು.

ಕುಂದಾಪುರದ ಪೊಲೀಸ್‌ ಉವಪವಿಭಾಗದ ಡಿವೈಎಸ್‌ಪಿ ಸಿ.ಬಿ.ಪಾಟೀಲ್‌, ಬಾಂಡ್ಯಾ ಎಜುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ಬಸ್ರೂರು ಅಪ್ಪಣ್ಣ ಹೆಗ್ಡೆ, ಆಡಳಿತ ಟ್ರಸ್ಟಿಗಳಾದ ಬಾಂಡ್ಯಾ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್‌.ಶೆಟ್ಟಿ, ಬಾಂಡ್ಯಾ ಸುಬ್ಬಣ್ಣ ಶೆಟ್ಟಿ, ಕಿಶನ್‌ ಹೆಗ್ಡೆ, ಆಡಳಿತಾಧಿಕಾರಿ ಎಚ್‌.ಪ್ರಭಾಕರ ಶೆಟ್ಟಿ, ಗುರುಕುಲ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾದ ರೂಪಾ ಶೆಣೈ ಹಾಗೂ ಪ್ರವೀಣ್‌ ಶೆಟ್ಟಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT