ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲ ತಡಿಯಲ್ಲಿ ಮೂಡಿದ ಕಾಮನಬಿಲ್ಲು

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಮಂಗಳೂರು: ಕಡಲ ತಡಿಯ ಮತ್ಸ್ಯನಗರಿಯಲ್ಲಿ ಗುರುವಾರ ಮುಸ್ಸಂಜೆ ಅಕ್ಷರಶಃ ಬೆಡಗಿನ ಲೋಕ ಸೃಷ್ಟಿಯಾಗಿತ್ತು. ಬಣ್ಣ ಬಣ್ಣದ ವೇಷಭೂಷಣ ತೊಟ್ಟು ಯುವ ಸಹಜ ಉತ್ಸಾಹದಿಂದ ಸಾಗಿಬಂದ ದೇಶದ ವಿವಿಧ ರಾಜ್ಯಗಳ ಕಲಾ ತಂಡಗಳ ಮೆರವಣಿಗೆ ಕಾಮನಬಿಲ್ಲಿನ ಚೆಲುವನ್ನೂ ನಾಚಿಸುವಂತಿತ್ತು.

ನಗರದಲ್ಲಿ ಗುರುವಾರ ಆರಂಭವಾದ 17ನೇ ರಾಷ್ಟ್ರೀಯ ಯುವ ಜನೋತ್ಸವ ಅಂಗವಾಗಿ ನೆಹರೂ ಮೈದಾನದಿಂದ ಮಂಗಳಾ ಕ್ರೀಡಾಂಗಣದವರೆಗೆ ನಡೆದ `ಯುವ~ ಮೆರವಣಿಗೆ ಯುವಭಾರತದ ದರ್ಶನ ಮಾಡಿಸಿತು. ಬಗೆ ಬಗೆಯ ಧಿರಿಸು ಧರಿಸಿದ ಯುವ ತಂಡಗಳು ಮೋಹಕ ಕುಣಿತಗಳ ಮೂಲಕ, ಮೈನವಿರೇಳಿಸುವ ಕಸರತ್ತುಗಳ ಮೂಲಕ ಮೆರವಣಿಗೆಯ ಹಾದಿಯುದ್ದಕ್ಕೂ ಕಿಕ್ಕಿರಿದು ನೆರೆದ ಪ್ರೇಕ್ಷಕರಿಗೆ ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯ ಝಲಕ್ ಪ್ರದರ್ಶಿಸಿದವು. ವೇಷಭೂಷಣಗಳೂ ರಾಜ್ಯದ ಸಿರಿವಂತಿಕೆಯನ್ನು ಬಿಂಬಿಸುವಂತಿದ್ದವು.

ತಮಿಳುನಾಡಿನ ತಂಡ `ಕರಘಟಂ~ ಹಾಗೂ `ಒಯ್ಲಾಟ್ಟಂ~ ಎಂಬ ವಿಶೇಷ ಪ್ರಕಾರವನ್ನು ಪ್ರದರ್ಶಿಸಿತು. ಅದರ ಹಿಂದೆ ಸಾಗಿ ಬಂದಿದ್ದು ಕೇರಳದ ತಂಡ. ಕೇರಳದ ಕಳರಿಪಯಟ್ ಸಾಹಸ ಕಲೆಯ ಪ್ರದರ್ಶನಕ್ಕೆ ಪ್ರೇಕ್ಷಕರು ಮಂತ್ರಮುಗ್ಧರಾದರು. `ತೆಯ್ಯಂ~ ಹಾಗೂ ಕಥಕ್ಕಳಿ ವೇಷಗಳು ದೇವರ ಸ್ವಂತ ರಾಜ್ಯದ ಸಾಂಸ್ಕೃತಿಕ ವೈಭವವನ್ನು ತೆರೆದಿಟ್ಟವು.

`ಮಿಜೋರಾಂ~ ತಂಡದ ಸದಸ್ಯರು ತಮ್ಮ ವಿಶೇಷ ವಿನ್ಯಾಸದ ದಿರಿಸುಗಳ ಮೂಲಕ ಗಮನ ಸೆಳೆದರು. ಅವರು ಪ್ರದರ್ಶಿಸಿದ `ಪಾರ್ಲಂ~ ಕುಣಿತದ ವಿನೂತನ ಹೆಜ್ಜೆಗಳು ಮನಮೋಹಕವಾಗಿದ್ದವು. ಸ್ಥಳೀಯರು ಈ ಕುಣಿತದ ಹೆಜ್ಜೆ ಹಾಕಲು ಯತ್ನಿಸಿ ಕೈಚೆಲ್ಲಿದರು. ನಗರ್ ಹವೇಲಿಯ ತಂಡ ದಾಂಡಿಯಾ ರಾಸ್ ಕೋಲಾಟ ಪ್ರದರ್ಶಿಸಿತು. ತಂಡದ ಪುರುಷರು ಆದಿವಾಸಿ ನೃತ್ಯ ಪ್ರದರ್ಶಿಸಿದರು.

ಹಿಮಾಚಲ ಪ್ರದೇಶದ ತಂಡದವರು ವಿನೂತನ ವಾದ್ಯಗಳ ನಾದಕ್ಕೆ ಹೆಜ್ಜೆ ಹಾಕಿದರು. ಅದೇ ರಾಜ್ಯದ `ಧನುಷ್~ ತಂಡ ಬಿಲ್ಗಾರಿಕೆಯ ಸಾಹಸ ಕಲೆಯನ್ನು ಪ್ರದರ್ಶಿಸುತ್ತಾ ಸಾಗಿಬಂದಿತು. ಅವರು ಧರಿಸಿದ್ದ ಹಿಮಾಚಲಿ ಟೋಪಿ ಹಾಗೂ ಕರಿಕೋಟಿನ ಸಮವಸ್ತ್ರವೂ ಕುತೂಹಲ ಕೆರಳಿಸುವಂತಿತ್ತು. ಮಧ್ಯಪ್ರದೇಶದ ತಂಡ `ಬರ್ದಾಯ್~ ಎಂಬ ಜಾನಪದ ನೃತ್ಯ ಮಾಡುತ್ತಾ ಸಾಗಿಬಂತು.

ರಣಬೂತ್ ಕುಣಿತ
ಉತ್ತರಾಖಂಡ್‌ನ ಯುವ ಬಳಗವು `ರಣಬೂತ್~ ಹಾಗೂ `ಜುಮುಲೊ~ ಕುಣಿತಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆಯಿತು. ಕೈಬಳೆಯಷ್ಟು ದೊಡ್ಡ ಗಾತ್ರದ ನತ್ತು ಧರಿಸಿದ ಲಲನೆಯರ ಒಯ್ಯಾರ ಭರಿತ ಹೆಜ್ಜೆಗಳು ಆ ರಾಜ್ಯದ ಸಾಂಪ್ರದಾಯಿಕ ಸೊಬಗಿಗೆ ಕನ್ನಡಿ ಹಿಡಿದವು.

ಜಮ್ಮು ಮತ್ತು ಕಾಶ್ಮೀರದ ಚೆಲುವೆಯರು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದರು. ವೈವಿಧ್ಯಮಯ ಆಭರಣಗಳಿಂದ ಅಲಂಕೃತವಾದ ಶಾಲನ್ನು ತಲೆಗೆ ಮುಸುಕು ಹಾಕಿಕೊಂಡಿದ್ದ ಅವರು ಕೆನ್ನೆ ಕೆಂಪಾಗಿಸಿಕೊಂಡು ತುಸು ನಾಚುತ್ತಲೇ ಹೆಜ್ಜೆ ಹಾಕುತ್ತಿದ್ದರು.

ಒಡಿಷಾದ ಬಳಗ `ಸಿಂಗಾರಿ~ ನೃತ್ಯ ಕುತೂಹಲ ಕೆರಳಿಸಿತ್ತು. ನಗುಮೊಗದ ಸುಂದರಿಯರ ವಿಚಿತ್ರ ಹೆಜ್ಜೆಗಳಿಗೆ ಜನ ಮನಸೋತರು. ತಲೆಯಲ್ಲಿ ಗರಿ ಹಾಗೂ ಮೈಮೇಲೆ ಗರಿ ಧರಿಸಿದ ಅವರ ವೇಷಭೂಷಣವೂ ಆಕರ್ಷಕವಾಗಿತ್ತು.
ಮಣಿಪುರದವರ ಹೂ.. ಹೂ.. ನೃತ್ಯವೂ ಮುದ ನೀಡಿತು. ಗುಜರಾತ್ ಯುವಬಳಗ `ಗರ್ಭ~ ನೃತ್ಯಕ್ಕೆ ಹೆಜ್ಜೆ ಹಾಕುತ್ತಾ ಸಾಗಿ ಬಂತು.

ಪ್ರತಿ ರಾಜ್ಯದ ಯುವಕಲಾವಿದರು ತಮ್ಮ ರಾಜ್ಯದ ಸಾಂಸ್ಕೃತಿಕ ಸೊಬಗಿನ ಹೆಚ್ಚುಗಾರಿಕೆಯನ್ನು ತೋರ್ಪಡಿಸಲು ನಾನಾ ಕಸರತ್ತುಗಳ ಮೊರೆಹೋದರು.

ಆತಿಥೇಯರ ಆಕರ್ಷಕ ಪ್ರದರ್ಶನ
ಆತಿಥೇಯ ಕರ್ನಾಟಕದ ಪ್ರಮುಖ ಕಲಾ ಪ್ರಕಾರಗಳು ಮೆರವಣಿಗೆಗೆ ವಿಶೇಷ ಸೊಬಗು ನೀಡಿತ್ತು. ಡೊಳ್ಳು ಕುಣಿತ, ದುಡಿ ಕುಣಿತ, ಹುಲಿವೇಷ ಕುಣಿತ, ಜಕ್ಕಳಿಕೆ ಮೇಳ, ಶಾರ್ದೂಲ ಬಳಗ, ಪಟ ಕುಣಿತ ಕೀಲುಕುದುರೆ, ವೀರಗಾಸೆ, ಕಂಸಾಳೆ, ನಂದಿಧ್ವಜ ಕುಣಿತಗಳು ರಾಜ್ಯದ ಜಾನಪದ ಸಿರಿಯನ್ನು ತೆರೆದಿಟ್ಟವು.

ತುಳುನಾಡಿನದ್ದೇ ಆದ ಶಂಖ, ಕೊಂಬು, ಸ್ಯಾಕ್ಸೋಫೋನ್, ಕೊರಗರ ಡೋಲು, ತುಳುನಾಡ ತಾಸೆ, ಹಾಗೂ ಚಂಡೆವಾದನ ಮೆರವಣಿಗೆಯುದ್ದಕ್ಕೂ ಝೇಂಕರಿಸಿತು. ಕರಾವಳಿಯ ಯಕ್ಷಗಾನ ವೇಷಗಳು, ಕೊರಗರ ಗಜಮೇಳ ಮೆರವಣಿಗೆಗೆ ಮೆರುಗು ನೀಡಿದವು.

ಮುಖ್ಯಮಂತ್ರಿ ವೀಕ್ಷಣೆ: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಮಹಾನಗರ ಪಾಲಿಕೆ ಕಚೇರಿ ಮುಂದೆ ಕುಳಿತು ಕೆಲಹೊತ್ತು ಮೆರವಣಿಗೆ ವೀಕ್ಷಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಸಭಾ ಉಪ ಸಭಾಧ್ಯಕ್ಷ ಯೋಗೀಶ್ ಭಟ್, ಮೇಯರ್ ಪ್ರವೀಣ್, ಜಿಲ್ಲಾಧಿಕಾರಿ ಚೆನ್ನಪ್ಪ ಗೌಡ ಜತೆಗಿದ್ದರು. 

ನೆಹರೂ ಮೈದಾನದಲ್ಲಿ ಮೆರವಣಿಗೆಯನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್, ಶಾಸಕ ಯು.ಟಿ.ಖಾದರ್ ಮೊದಲಾದ ಗಣ್ಯರು ವರ್ಣಮಯ ಪೇಟಾ ಧರಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT