ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲತಡಿಯ ನಗರದಲ್ಲಿ ಕಲರವ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಮಂಗಳೂರು: ಕಡಲತಡಿಯ ಯುವ ಮನಗಳ ಕಲರವ. ದೇಶದ ವಿವಿಧ ಭಾಷೆ, ಸಂಸ್ಕೃತಿಯ ಯುವ ಸಮೂಹ ನಗರದಲ್ಲಿ ಬೀಡು ಬಿಟ್ಟಿದೆ. ದೇಶದ ಬಹುಸಂಸ್ಕೃತಿಯ ಶ್ರೀಮಂತಿಕೆಯನ್ನು ರಾಷ್ಟ್ರೀಯ ಯುವಜನೋತ್ಸವಕ್ಕೆ ರಾಜ್ಯ ಮೊದಲ ಬಾರಿ ಆತಿಥ್ಯ ವಹಿಸುತ್ತಿದ್ದು, ಈ ಅಪೂರ್ವ ಸಂದರ್ಭವನ್ನು ಆಸ್ವಾದಿಸುವ ಸಲುವಾಗಿ ನಗರದ ಜನತೆ ಕಾತರದಿಂದ ಕಾಯುತ್ತಿದ್ದಾರೆ.  ಗುರುವಾರದಿಂದ ಐದು ದಿನಗಳ ಕಾಲ ಯುವ ಹಬ್ಬ ನಡೆಯಲಿದೆ.

ಆತಿಥ್ಯಕ್ಕೆ ಹೆಸರಾದ ನಗರದಲ್ಲಿ 17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ 12ರ ಸಂಜೆ ಚಾಲನೆ ಸಿಗಲಿದ್ದು, 16ರವರೆಗೆ ಯುವ ಪ್ರತಿಭೆಗಳ ಸಂಭ್ರಮ ಮುಂದುವರಿಯಲಿದೆ.

ಅಂತಿಮ ಸಿದ್ಧತೆ: ಸ್ವಾಮಿ ವಿವೇಕಾನಂದ ಅವರ ಜನ್ಮದಿನದಂದೇ ಆರಂಭಗೊಳ್ಳುತ್ತಿರುವ ಈ ~ಮಹಾ ಉತ್ಸವ~ಕ್ಕೆ ಕೊನೆ ಕ್ಷಣದ ಸಿದ್ಧತೆ ಭರದಿಂದ ಸಾಗಿದೆ. ಮಂಗಳಾ ಕ್ರೀಡಾಂಗಣದಲ್ಲಿ ಕರಾವಳಿಯ ಸಾಂಪ್ರದಾಯಿಕ `ಗುತ್ತಿನ ಮನೆ~ಯ ಗತ್ತು ಹೊತ್ತ  ಪ್ರಧಾನ ವೇದಿಕೆ ರೂಪುಗೊಂಡಿದೆ. ವೇದಿಕೆಗೆ ಅಂತಿಮ ಸ್ಪರ್ಶ ನೀಡುವ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದ್ದುದು ಬುಧವಾರ ಕಂಡುಬಂದಿತು.

ನಗರದ ಹೃದಯ ಭಾಗದಲ್ಲಿರುವ ಟಿ.ಎಂ.ಎ.ಪೈ ಅಂತರರಾಷ್ಟ್ರೀಯ ಸಮಾವೇಶ ಸಭಾಂಗಣ ಯುವ ಬಳಗಗಳ ಕಲರವದ ಕೇಂದ್ರವಾಗಿ ಮಾರ್ಪಟಿತ್ತು. ಅಲ್ಲಿ ಯುವ ಸ್ಪರ್ಧಿಗಳ ನೋಂದಣಿ, ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಸ್ಪರ್ಧಿಗಳು ಅಲ್ಲಿ ಒಂದೆಡೆ ಕಲೆತು ~ವಿಚಾರ ವಿನಿಮಯ~ ಮಾಡಿಕೊಳ್ಳುತ್ತಿದ್ದರು.

ನಗರ ಝಗಮಗ: ಯುವಜನೋತ್ಸವದಿಂದಾಗಿ ನಗರಕ್ಕೆ ಹೊಸ ಕಳೆ ಬಂದಿದೆ. ನಗರದ ಪ್ರಮುಖ ರಸ್ತೆಗಳಲ್ಲಿನ ಕಟ್ಟಡಗಳು ಸುಣ್ಣ ಬಣ್ಣಗಳಿಂದ ಮೆರುಗು ಪಡೆದಿದ್ದರೆ, ಮುಖ್ಯ ವೃತ್ತಗಳು ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿವೆ. ಬಣ್ಣ ಮಾಸಿದ್ದ ರಸ್ತೆ ವಿಭಜಕಗಳಿಗೂ ಹಳದಿ-ಕಪ್ಪು ಬಣ್ಣ ಬಳಿಯುವ ಕಾರ್ಯ ಅಂತಿಮ ಘಟ್ಟದವರೆಗೂ ಮುಂದುವರಿದಿದೆ. ಒಂದೆಡೆ ಕೊನೆ ಕ್ಷಣದ ಸಿದ್ಧತೆಯಲ್ಲಿ ಜಿಲ್ಲಾಡಳಿತದ ಸಿಬ್ಬಂದಿ ತಲ್ಲೆನರಾಗಿದ್ದರೆ, ಇನ್ನೊಂದೆಡೆ ಸಂಭ್ರಮ ಕಣ್ತುಂಬಿಕೊಳ್ಳಲು ನಗರದ ಜನತೆ ಕಾತರದಿಂದ ಕಾಯುತ್ತಿದ್ದಾರೆ.

5 ಸಾವಿರ ಮಂದಿ ನೋಂದಣಿ: ಪ್ರತಿನಿಧಿಗಳ ನೋಂದಣಿ ಪ್ರಕ್ರಿಯೆ ಮಂಗಳವಾರ ಆರಂಭವಾಗಿದ್ದು, ಬುಧವಾರ ಸಂಜೆ ವೇಳೆಗೆ 5 ಸಾವಿರ ಮಂದಿ ನೋಂದಣಿ ಮಾಡಿಸಿದ್ದರು. ಇವರಲ್ಲಿ 2,500 ಮಂದಿ ಸ್ಪರ್ಧಿಗಳು ಸೇರಿದ್ದಾರೆ.

ಎರಡು ರಾಜ್ಯಗಳ ಸ್ಪರ್ಧಿಗಳು ಇನ್ನಷ್ಟೇ ಆಗಮಿಸಬೇಕಿದೆ. ಇನ್ನು 500 ಮಂದಿ ಪ್ರತಿನಿಧಿಗಳು ಆಗಮಿಸುವ ನಿರೀಕ್ಷೆ ಇದೆ. ಸ್ಪರ್ಧಿಗಳಿಗೆ ನಗರ ಹಾಗೂ ಆಸುಪಾಸಿನ 18 ಕಡೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ `ಪ್ರಜಾವಾಣಿ~ಗೆ ಬುಧವಾರ ತಿಳಿಸಿದರು.

ಬುಧವಾರ ಒಂದೇ ದಿನ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಸ್ಪರ್ಧಿಗಳು ಹಾಗೂ ಸಾವಿರಾರು ಪ್ರತಿನಿಧಿಗಳು ಆಗಮಿಸಿದ್ದರಿಂದ ನೋಂದಣಿ ಪ್ರಕ್ರಿಯೆಯಲ್ಲಿ ಗೊಂದಲ ಮೂಡಿತ್ತು.  ಸ್ಪರ್ಧೆಗಳು ನಡೆಯುವ ಸ್ಥಳ ಹಾಗೂ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ ಪ್ರದೇಶ ದೂರವಾಯಿತು ಎಂಬ ಬಗ್ಗೆ ಸ್ಪರ್ಧಿಗಳು ಹಾಗೂ ಪ್ರತಿನಿಧಿಗಳಿಂದ ಅಸಮಾಧಾನ ವ್ಯಕ್ತವಾಗಿದೆ.

3 ರಾಜ್ಯಗಳಿಂದ ಸ್ಪರ್ಧಿಗಳಿಲ್ಲ: 28 ರಾಜ್ಯಗಳು, ಏಳು ಕೇಂದ್ರಾಡಳಿತ ಪ್ರದೇಶಗಳು, ಸಾರ್ಕ್ ರಾಷ್ಟ್ರಗಳಿಂದ ಸ್ಪರ್ಧಿಗಳು ಹಾಗೂ ಪ್ರತಿನಿಧಿಗಳ ನಿರೀಕ್ಷೆ ಮಾಡಲಾಗಿತ್ತು. ಹಿಮಾಚಲ ಪ್ರದೇಶ, ಮೇಘಾಲಯ ಹಾಗೂ ಅರುಣಾಚಲ ಪ್ರದೇಶದಿಂದ ಸ್ಪರ್ಧಿಗಳು ಆಗಮಿಸುತ್ತಿಲ್ಲ. ಸಾರ್ಕ್ ದೇಶಗಳಿಂದ 18 ಪ್ರತಿನಿಧಿಗಳು ಆಗಮಿಸಿದ್ದಾರೆ.

ಮೆರವಣಿಗೆ: ಗುರುವಾರ ಮಧ್ಯಾಹ್ನ ಮೂರು ಗಂಟೆಗೆ ನಗರದ ನೆಹರು ಮೈದಾನದಿಂದ ಸಾಂಸ್ಕೃತಿಕ ಮೆರವಣಿಗೆ ಆರಂಭಗೊಂಡು ಮಂಗಳಾ ಕ್ರೀಡಾಂಗಣಕ್ಕೆ ಸಾಗಿ ಬರಲಿದೆ. ರಾಜ್ಯದ ವಿವಿಧೆಡೆಯ 54 ಕಲಾ ತಂಡಗಳು ಸಾಂಸ್ಕೃತಿಕ ವೈಭವ ಪ್ರದರ್ಶಿಸಲಿವೆ. ಸಮ್ಮೇಳನದ ಉದ್ಘಾಟನೆ ನಡೆಯಲಿರುವ ಮಂಗಳಾ ಕ್ರೀಡಾಂಗಣದಲ್ಲಿ ಸ್ಪರ್ಧಿಗಳ ತಂಡಗಳು ಹಾಗೂ 54 ಕಲಾ ತಂಡಗಳು ಪಥಸಂಚಲನದಲ್ಲಿ ಪಾಲ್ಗೊಳ್ಳಲಿವೆ.

ಸಂಜೆ 5.30ಕ್ಕೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಯುವಜನೋತ್ಸವ ಉದ್ಘಾಟಿಸುವರು. ಇದೇ ವೇಳೆ ಎರಡು ಲಘು ವಿಮಾನಗಳಲ್ಲಿ ಪುಷ್ಪ ವೃಷ್ಟಿಯೂ ನಡೆಯಲಿದೆ. ಸಮಾರಂಭದ ಬಳಿಕ ಲೇಸರ್ ಶೋ, ಸಾಂಸ್ಕೃತಿಕ ಕಾರ್ಯಕ್ರಮದ ವೈಭವ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT