ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲೆ: ಇಳುವರಿ, ದರದಲ್ಲೂ ಖೋತಾ

Last Updated 2 ಜನವರಿ 2014, 9:59 IST
ಅಕ್ಷರ ಗಾತ್ರ

ಬಳ್ಳಾರಿ: ಸತತವಾಗಿ ಬರಗಾಲದ ದವಡೆಗೆ ಸಿಲುಕಿರುವ ತಾಲ್ಲೂಕಿನ ಮಳೆಯಾಶ್ರಿತ ಪ್ರದೇಶಗಳಲ್ಲಿ ಕಡಲೆ ಬೆಳೆ ಬೆಳೆದಿರುವ ರೈತರು ಸಮರ್ಪಕ ಮಳೆಯ ಕೊರತೆಯಿಂದಾಗಿ ತೀವ್ರ ನಷ್ಟ ಅನುಭವಿಸುವಂತಾಗಿದೆ. 2009ರಲ್ಲಿ ಭಾರಿ ಮಳೆ, 2010ರಲ್ಲಿ ಅಕಾಲಿಕ ಮಳೆಯಿಂದಾಗಿ, ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂಬ ಸ್ಥಿತಿ ಎದುರಿಸಿದ್ದ ತಾಲ್ಲೂಕಿನ ಜೋಳದರಾಶಿ, ಚೇಳ್ಳಗುರ್ಕಿ, ಮೀನಳ್ಳಿ, ವೈ.ಕಗ್ಗಲ್‌, ಶಿಡಿಗಿನಮೋಳ, ಯಾಳ್ಪಿ, ವೀರಾಪುರ, ಕಾರೇಕಲ್ಲು ಮತ್ತಿತರ ಗ್ರಾಮಗಳ ರೈತರು, 2011ರಿಂದ ಸತತ ಮೂರು ವರ್ಷಗಳಿಂದ ಅನಾವೃಷ್ಟಿಯಿಂದ ತತ್ತರಿಸಿ ಹೋಗಿದ್ದು, ಕಡಲೆ ಬೆಳೆ ಕೈಗೆಟುಕದೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಪ್ರತಿ ಎಕರೆಗೆ ಅಂದಾಜು 8ರಿಂದ 10 ಕ್ವಿಂಟಲ್‌ನಷ್ಟು ಬರಬೇಕಿರುವ ಇಳುವರಿ ಈ ಬಾರಿ ಕೇವಲ 2 ಕ್ವಿಂಟಲ್‌ಗೆ ಕುಸಿದಿದೆ. ಸಾಲದ್ದಕ್ಕೆ ಕಡಲೆ ದರವೂ ಕುಸಿದಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.

‘ಪ್ರತಿ ಎಕರೆಗೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಕೃಷಿ ಕೂಲಿಗಾಗಿ ಕನಿಷ್ಠ 8ರಿಂದ 10 ಸಾವಿರ ವೆಚ್ಚ ಮಾಡಲಾಗಿದ್ದು, ಎಕರೆಗೆ ಕೇವಲ 2 ಕ್ವಿಂಟಲ್‌ ಕಡಲೆ ಕೈಗೆಟುಕಿದೆ. ಮಾರುಕಟ್ಟೆಯಲ್ಲಿ ಸದ್ಯ ಪ್ರತಿ ಕ್ವಿಂಟಲ್‌ ಕಡಲೆಗೆ ಕೇವಲ ₨ 2500ರಿಂದ ₨ 2900 ದರ ದೊರೆಯುತ್ತಿದ್ದು, ಬೆಳೆಗಾಗಿ ವ್ಯಯಿಸಿದ ಹಣವನ್ನೂ ಹಿಂದಕ್ಕೆ ಪಡೆಯುವುದು ಸಾಧ್ಯವಾಗದೆ ಪರದಾಡುವಂತಾಗಿದೆ ಎಂದು ಜೋಳದರಾಶಿಯ ರೈತ ಲಾಲೆಪ್ಪ ‘ಪ್ರಜಾವಾಣಿ’ ಎದುರು ನೋವು ತೋಡಿಕೊಂಡರು.

ದೊರೆಯದ ವಿಮೆ: ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ತತ್ತರಿಸಿದರೂ ಬೆಳೆ ವಿಮೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ಈ ಭಾಗದಲ್ಲಿ ಅಂದಾಜು 30,000 ಎಕರೆ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದ್ದು, ನಿರೀಕ್ಷಿತ ಇಳುವರಿ ದೊರೆತಿಲ್ಲ. ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದ್ದರೂ, ಸರ್ಕಾರದಿಂದ ಅಥವಾ ವಿಮಾ ಕಂಪೆನಿಯಿಂದ ಪರಿಹಾರ ದೊರೆಯುವ ಭರವಸೆ ಇಲ್ಲ ಎಂದು ಅನೇಕ ರೈತರು ಅಳಲು ತೋಡಿಕೊಂಡರು.

‘ಮೂರು ವರ್ಷದಿಂದ ನಷ್ಟ ಎದುರಾದರೂ ಒಮ್ಮೆಯೂ ಬೆಳೆ ಪರಿಹಾರ ದೊರೆತಿಲ್ಲ. ಪಕ್ಕದ ಆಂಧ್ರದಲ್ಲಿ ಕಡಲೆ ಬೆಳೆದು ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ದೊರೆಯುತ್ತಿದೆ. ಆದರೆ, ಇಲ್ಲಿ ಪರಿಹಾರ ಎಂಬ ಪದದ ಪರಿಚಯವೇ ಇಲ್ಲ’ ಎಂದು ಚೇಳ್ಳಗುರ್ಕಿ ಗ್ರಾಮದ ರೈತರಾದ ಎರ್ರೆಣ್ಣ ಮತ್ತು ದೊಡ್ಡಬಸವನಗೌಡ ತಿಳಿಸಿದರು.

ಪ್ರತ್ಯೇಕ ಸಮೀಕ್ಷೆ ನಡೆಸಿ: ‘ನಮ್ಮ ಗ್ರಾಮಗಳು ಬಳ್ಳಾರಿ ತಾಲ್ಲೂಕಿನ ರೂಪನಗುಡಿ ಹೋಬಳಿ ವ್ಯಾಪ್ತಿಯಲ್ಲಿದ್ದು, ನೀರಾವರಿ ಸೌಲಭ್ಯ ಹೊಂದಿಲ್ಲ. ಕೇವಲ ಹಿಂಗಾರು ಹಂಗಾಮಿನಲ್ಲಿ ಮಾತ್ರ ಬಿತ್ತನೆ ಮಾಡುವ ಈ ಪ್ರದೇಶವನ್ನು ನೀರಾವರಿ ವ್ಯಾಪ್ತಿಯಲ್ಲಿರುವ ಹೋಬಳಿಯ ಇತರ ಪ್ರದೇಶಗಳೊಂದಿಗೆ ಸೇರಿಸುವುದರಿಂದ ಪರಿಹಾರವೇ ದೊರೆಯುತ್ತಿಲ್ಲ.

ಈ ಭಾಗದ ಮಳೆಯಾಶ್ರಿತ ಗ್ರಾಮಗಳ ಪ್ರತ್ಯೇಕ ಸಮೀಕ್ಷೆ ನಡೆಸದೆ, ವರದಿ ಕೊಡುವುದರಿಂದ ಬರಗಾಲದಿಂದ ತತ್ತರಿಸಿದರೂ ಪರಿಹಾರದ ಪ್ರಯೋಜನ ದೊರೆಯುತ್ತಿಲ್ಲ ಎಂದು ಅವರು ದೂರಿದರು. ‘ಕೃಷಿ ಇಲಾಖೆಯ ಅಧಿಕಾರಿಗಳು ಈ ಭಾಗಕ್ಕೆ ಭೇಟಿ ನೀಡದೆ, ಸರ್ಕಾರಕ್ಕೆ ವರದಿ ಸಲ್ಲಿಸುವುದರಿಂದ ಸೌಲಭ್ಯದಿಂದ ವಂಚಿತರಾಗುತ್ತಿದ್ದೇವೆ. ಮಳೆಯಾಶ್ರಿತ ಪ್ರದೇಶಗಳ ಪ್ರತ್ಯೇಕ ಸಮೀಕ್ಷೆ ನಡೆಸಿ, ಪ್ರತ್ಯೇಕ ವರದಿ ಸಲ್ಲಿಸಿದರೆ ಮಾತ್ರ ನಮ್ಮ  ಸಮಸ್ಯೆಗಳು ದೂರವಾಗಲಿವೆ. ಇಲ್ಲದಿದ್ದರೆ, ಕೃಷಿಯನ್ನು ತ್ಯಜಿಸಿ ಗುಳೆ ಹೋಗುವುದು ಅನಿವಾರ್ಯವಾಗಲಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT