ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲೆ ಬೀಜಕ್ಕಾಗಿ ನೂಕುನುಗ್ಗಲು

Last Updated 4 ಅಕ್ಟೋಬರ್ 2011, 7:55 IST
ಅಕ್ಷರ ಗಾತ್ರ

ಹುನಗುಂದ: ನೆತ್ತಿ ಸುಡುವ ಬಿಸಿಲು, ಮೀಟರ್‌ಗಟ್ಟಲೆ ಉದ್ದದ ಸಾಲು. ಪಾಳಿಯಲ್ಲಿ ನಿಂತವರಲ್ಲಿ ಪ್ರತಿಕ್ಷಣ ತವಕ, ಆತಂಕ... ಇದು ಇಲ್ಲಿನ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಮಿತಿ ಮುಂದೆ ಸೋಮವಾರ ಕಂಡುಬಂದ ಚಿತ್ರ.
 
ತಾಲ್ಲೂಕಿನ ನೂರಾರು ರೈತರು ಕಡಲೆ ಬೀಜ ಪಡೆಯುವುದಕ್ಕಾಗಿ ಸಾಲುಗಟ್ಟಿ ನಿಂತ ಕಾರಣದಿಂದ ಅನೇಕ ಬಾರಿ ನೂಕುನುಗ್ಗಲು ಉಂಟಾಯಿತು. ಹಿಂಗಾರಿ ಹಂಗಾಮಿನಲ್ಲಿ ರೈತರಿಗೆ ವಿತರಿಸುವುದಕ್ಕಾಗಿ ಸರ್ಕಾರ ನೀಡಿದ ಬೀಜಕ್ಕಾಗಿ ನಡೆದ ಪರದಾಟ ಅನೇಕರಲ್ಲಿ ಆತಂಕ ಮೂಡಿಸಿತು.

ನಿಯಮದಂತೆ ಒಬ್ಬ ಸಣ್ಣ, ಅತಿಸಣ್ಣ ರೈತನಿಗೆ 40 ಕೆ.ಜಿ. ಬೀಜ ಕೊಡಬೇಕು. ಆದರೆ ಸುಮಾರು 100 ರಿಂದ 120 ಕೆ.ಜಿ. ನಿಡಬೇಕೆಂಬುದು ರೈತರ ಬೇಡಿಕೆ. ಕೃಷಿಗೆ ಸಂಬಂಧಿಸಿದ ಪಾಸ್‌ಬುಕ್ ಹಿಡಿದು ಪಾಳಿಯಲ್ಲಿ ನಿಂತ ರೈತರು ಬೀಜದ ಚೀಟಿ ಕೈಗೆ ಸಿಗುವ ವರೆಗೆ ಆತಂಕದಲ್ಲೇ ಕಾಲ ಕಳೆದರು.

ಬೀಜಕ್ಕೆ ಸೇರಿಸಲು ಕೊಡುವ ಪುಡಿ ಬೇಡ ವೆಂದರೂ ಒತ್ತಾಯದಿಂದ ಐದು ಕೆ.ಜಿ. ಪುಡಿ ಕೊಡುವುದನ್ನು ಅನೇಕರು ವಿರೋಧಿಸಿದರು. ಆದರೆ ಅದಕ್ಕೆ ಯಾರೂ ಕಿಮ್ಮತ್ತು ನೀಡಲಿಲ್ಲ. `ಈ ಪುಡಿಗೆ ರಸೀದಿ ನೀಡಲಿಲ್ಲ. ಇದು ಮೋಸ. ಇದೇ ಸಂದರ್ಭದಲ್ಲಿ ಬೀಜ ವಿತರಿಸುವ ಗೋದಾಮಿನಲ್ಲಿ 10 ರೂಪಾಯಿ ಲಂಚ ಕೂಡ ಪಡೆಯಲಾಗಿದೆ~ ಎಂದು ಅನೇಕರು ಆರೋಪಿಸಿದರು.

`ಈ ಮಾರಾಟ ವ್ಯವಸ್ಥೆ ಅವೈಜ್ಞಾನಿಕ. ಪಂಚಾಯಿತಿ ಮಟ್ಟದಲ್ಲೇ ಬೀಜ ಮಾರಾಟ ಮಾಡಬೇಕು. ರಾಜಕಾರಣಿಗಳಿಗೆ ಹಿಂಬಾಗಿಲಿನಿಂದ ಅಕ್ರಮವಾಗಿ ಹಣ ನೀಡುವುದು ನಿಲ್ಲಬೇಕು~ ಎಂದು  ಕೆಲವು ರೈತರು ಕಿಡಿಕಾರಿದರು. ಪರಿಸ್ಥಿತಿಯ ದುರ್ಲಾಭ ಪಡೆದುಕೊಂಡು ರೈತರನ್ನು ಮೋಸ ಮಾಡಲು ಅನೇಕರು ಶ್ರಮಿಸುತ್ತಿದ್ದುದು ಕೂಡ ಕಂಡುಬಂತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT