ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿದ ಕೊಡಲಿಗೂ ಕತ್ತರಿಸಿದ ಮನುಷ್ಯರಿಗೂ ಏನು ವ್ಯತ್ಯಾಸ?

ಸಾಲು ಮರಗಳ ನೆನೆದು ಹೀಗೊಂದು ಪ್ರಶ್ನೆ
Last Updated 9 ಡಿಸೆಂಬರ್ 2013, 9:35 IST
ಅಕ್ಷರ ಗಾತ್ರ

ಕೋಲಾರ: ರಸ್ತೆ ಬದಿ ನೆರಳು ಬೀಳಲೆಂದು, ತಂಪಾದ ಗಾಳಿ ಬೀಸಲೆಂದು ಯಾರೋ ನೆಟ್ಟ ಬೀಜ ಚಿಗುರಿ ಮೇಲೆ ಬಂದ ಮರಗಳು ತಾವಾಗಿಯೇ ಬೀಳುವವರೆಗೂ ಅಮಾಯಕ ಜೀವಿಗಳೇ. ಯಾರನ್ನೂ ಏನನ್ನೂ ಕೇಳದೆ ಕೊಡುವುದನ್ನೇ ಜೀವನ ಮಾಡಿಕೊಂಡ ಮರಗಳೆಂದರೆ ಅಭಿವೃದ್ಧಿ ಕಾಮಗಾರಿಗಳಿಗೆ ಆಗುವುದೇ ಇಲ್ಲ. ರಸ್ತೆ ವಿಸ್ತರಣೆ, ಸೇತುವೆಗಳ ನಿರ್ಮಾಣ ಮರಗಳನ್ನು ಹೊಡೆದು ಉರುಳಿಸುವುದರಿಂದಲೇ ಶುರುವಾಗಬೇಕೇ?

ನಗರದ ಟೇಕಲ್ ರಸ್ತೆ ವಿಸ್ತರಣೆ ಕಾಮಗಾರಿಯಲ್ಲೂ ಮೊದಲು ಬಲಿಯಾಗಿದ್ದು ಮರಗಳೇ. ಅದೂ ಆರು ತಿಂಗಳ ಹಿಂದೆ. ಒಂದೇ ಸಮಕ್ಕೆ ಸಾಲಾಗಿ ನಿಂತ ಮರಗಳನ್ನು ಹೊಡೆದು ಉರುಳಿಸಲಾಯಿತು. ಹಸಿರು ಚಪ್ಪರದ ನೆರಳಲ್ಲಿ ಚಾಚಿಕೊಂಡಿದ್ದ ಸುಮಾರು 900 ಮೀ. ರಸ್ತೆಯು ನೆತ್ತಿ ಸುಡುವ ಸೂರ್ಯನಿಗೆ ಸದಾ ನಮಸ್ಕಾರ ಮಾಡುವ ಸನ್ನಿವೇಶವಂತೂ ನಿರ್ಮಾಣವಾಯಿತು.

ಕಾಮಗಾರಿ ಸಮಗ್ರವಾಗಿ ಮುಂದುವರಿಯಿತೇ? ಅದೂ ಇಲ್ಲ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕೊಡಲಿ ಪೆಟ್ಟಿಗೆ ಮೈ ಕೊಟ್ಟ ಮರಗಳಿಗೆ ಯಾವ ರೀತಿಯಲ್ಲೂ ವಿರೋಧ ವ್ಯಕ್ತಪಡಿಸಲು ಆಗಲಿಲ್ಲ. ಆ ಮರಗಳ ಪರವಾಗಿ ಕೆಲವು ಜನ ನಿಂತರೂ ಅವರ ಮಾತು ನಡೆಯಲಿಲ್ಲ.

‘ಮರಗಳು ತಾನೇ ಬೀಳುವುದು. ನಮ್ಮ ಮನೆ ಅಲ್ಲವಲ್ಲ’ ಎಂಬ ಭಾವನೆಯಲ್ಲಿ ಬಹಳ ಮಂದಿ ಸುಮ್ಮನಾಗಿದ್ದರು. ಹೀಗಾಗಿಯೇ ಮರಗಳು ‘ವೀರಸ್ವರ್ಗ’ ಸೇರಿದವು. ನೆರಳು, ಗಾಳಿ ಕಾಣೆಯಾಯಿತು. ರಸ್ತೆಯ ಎರಡೂ ಬದಿಯಲ್ಲಿ ಮರಗಳನ್ನು ಉರುಳಿಸಿದರೂ ಒಂದೇ ಬದಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗಿತು.

ಮತ್ತೊಂದು ಬದಿಯ ಮನೆ ಮಾಲೀಕರೊಬ್ಬರು ವಿಸ್ತರಣೆಗೆ ಜಾಗ ಬಿಟ್ಟುಕೊಡುವುದಿಲ್ಲ ಎಂದು ಹೇಳಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದರು. ಅಧಿಕಾರಿ--- ಮತ್ತು ಗುತ್ತಿಗೆದಾರರಿಗೆ ಅದಷ್ಟೇ ಸಾಕಾಯಿತು. ರಸ್ತೆಯ ಆ ಬದಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿಯನ್ನು ಶುರು ಮಾಡಲೇ ಇಲ್ಲ.

ಆಡಳಿತ ಯಂತ್ರದ ಬಲವನ್ನು ಬಳಸಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಿ ಕಾಮಗಾರಿ ಶುರು ಮಾಡಲು ತಮ್ಮಿಂದ ಆಗುವುದಿಲ್ಲ ಎಂದು ಗೊತ್ತಿದ್ದರೂ ‘ನಮ್ಮನ್ನು ಸುಮ್ಮನೆ ಕಡಿದು ಉರುಳಿಸಿದ್ದೇಕೆ’ ಎಂಬ ಮರಗಳ ಪ್ರಶ್ನೆಗಳೂ ಹಾಗೇ ಉಳಿದುಹೋದವು.


ಮರಗಳ ಅಕಾಲ ಮರಣ: ಸಾರ್ವಜನಿಕ ಆಡಳಿತದ ಪ್ರಮುಖ ಸ್ಥಾನಗಳಲ್ಲಿರುವ ಅಧಿಕಾರಿಗಳ ಇಂಥ ನಿರ್ಲಿಪ್ತ ಮತ್ತು ನಿರ್ಲಕ್ಷ್ಯ ತುಂಬಿದ ಕಾರ್ಯವೈಖರಿ ಪರಿಣಾಮವಾಗಿಯೇ ಟೇಕಲ್ ರಸ್ತೆ­ಯಲ್ಲಿದ್ದ ಹಚ್ಚಹಸುರಿನ ಮರಗಳು ಅಕಾಲ ಮರಣ ಕಾಣ­ಬೇಕಾ­ಯಿತು.

ಆರು ತಿಂಗಳು ಕಡಿಮೆ ಕಾಲಾವಧಿ ಏನಲ್ಲ. ಅಷ್ಟು ದಿನಗಳ ಹಿಂದೆಯೇ ಮರಗಳನ್ನು ಕಡಿಯುವ ಮುನ್ನ, ಕಾಮಗಾರಿ ವೇಳಾಪಟ್ಟಿಯನ್ನು ಜಾರಿ ಮಾಡಲು ಏನೇನು ಮಾಡಬೇಕು ಎಂಬ ಯಾವ ಪೂರ್ವಾಲೋಚನೆಯೂ ಇಲ್ಲದ ಪರಿಣಾಮ ಇಷ್ಟು ದಿನ ಮರಗಳ ಆಯಸ್ಸು ಕಡಿಮೆಯಾಯಿತು. ಜನರಿಗೆ ನೆರಳೂ ಗಾಳಿಯೂ ದೊರಕದೇ ಹೋಯಿತು.

ಸ್ಥಳೀಯರು, ಆಟೊ ಚಾಲಕರು, ಜನಪ್ರತಿನಿಧಿಗಳು ರಸ್ತೆ ತಡೆ ಮಾಡಿ ಪ್ರತಿಭಟಿಸಿದ ಪರಿಣಾಮವಾಗಿ, ಡಿ.6ರಂದು ಜಿಲ್ಲಾಧಿಕಾರಿ ಡಿ.ಕೆ.ರವಿ ಗುತ್ತಿಗೆದಾರರು, ಲೋಕೋಪಯೋಗಿ ಇಲಾಖೆ, ನಗರಸಭೆ

ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆ ಕರೆದು, ‘ನಾಳೆಯಿಂದಲೇ ಕಾಮಗಾರಿ ಶುರು ಮಾಡಬೇಕು. ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು’ ಎಂದು ಕಟ್ಟುನಿಟ್ಟಿನ ಆದೇಶ ಜಾರಿ ಮಾಡದೇ ಹೋಗಿದ್ದರೆ ಇವತ್ತಿಗೂ ಟೇಕಲ್ ರಸ್ತೆ ವಿಸ್ತರಣೆ ಕುಂಟುತ್ತಲೇ ಇರುತ್ತಿತ್ತು.

ಆರು ತಿಂಗಳ ಬಳಿಕ, ಹೈಕೋರ್ಟ್ ಮೆಟ್ಟಿಲೇರಿದ ಮನೆಯನ್ನು ಹೊರತುಪಡಿಸಿ ಶನಿವಾರ ಮತ್ತೆ ಶುರುವಾದ ಒತ್ತುವರಿ ತೆರವು ಕಾರ್ಯಾಚರಣೆಗೆ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿದರೆ ಯಾರೊಬ್ಬರೂ ವಿರೋಧ ವ್ಯಕ್ತಪಡಿಸಲಿಲ್ಲ.

ಕಾರ್ಯಾಚರಣೆ ಶುರುವಾದ ಕೂಡಲೇ ಎಚ್ಚೆತ್ತುಕೊಂಡ ಹಲವು ಮನೆಯವರು, ಅಂಗಡಿ ಮಾಲೀಕರು ಒತ್ತುವರಿ ಸ್ಥಳದಲ್ಲಿದ್ದ ಸಾಮಗ್ರಿಗಳನ್ನು ಸ್ವಯಂಪ್ರೇರಣೆಯಿಂದ ತೆರವು ಮಾಡಿದರು.

ಈ ತರಾತುರಿಯಲ್ಲಿ, ಆರು ತಿಂಗಳ ಹಿಂದೆ ನಡೆದ ಮರಗಳ ಅಕಾಲ ಮರಣ ಯಾರಿಗೂ ನೆನಪಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT