ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ಖರ್ಚಿನಲ್ಲಿ ಸುಂದರ ಮನೆ

Last Updated 3 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಆ ಮನೆಯ ಹೆಸರೇ `ಗುಬ್ಬಿಮನೆ'! ಎದುರಿಗೆ ಇರುವುದು `ಕಡೆಮನೆ'! ಗುಬ್ಬಿಮನೆಯ ಹಿಂದೇ ಇರುವ ಮನೆಯ ಹೆಸರು ಮಾತ್ರ `ವಾಣಿಶ್ರೀ'!

ಇದರಲ್ಲೇನು ವಿಶೇಷ ಎಂದಿರಾ? ವಿಶೇಷ ಇರುವುದು ಈ ಮೂರೂ ಮನೆಗಳ ಆಕಾರ ಮತ್ತು ಗಾತ್ರದಲ್ಲಿ. ಈ ಮನೆಗಳು ಗಾತ್ರದಲ್ಲಿ ಚಿಕ್ಕವು ನಿಜ, ಆದರೆ ಬಹಳ ಚೊಕ್ಕವಾಗಿವೆ.

ಈ ಮನೆಗಳ ಮಾಲೀಕರು ಮೈಸೂರು ರಂಗಾಯಣದ ಕಲಾವಿದರಾದ ಸಂತೋಷ ಕುಮಾರ್ ಕುಸನೂರ, ವಿನಾಯಕ ಭಟ್ ಹಾಸಣಗಿ ಹಾಗೂ ಕೃಷ್ಣಕುಮಾರ್ ನಾರ್ಣಕಜೆ.

ರಂಗಾಯಣವೇನೋ ಬೆಳ್ಳಿಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದೆ ನಿಜ. ಅಲ್ಲಿಯ ಕಲಾವಿದರು ಕೂಡಾ ಮೈಸೂರಿಗೆ ಹಾಗೂ ರಂಗಾಯಣಕ್ಕೆ ಕಾಲಿಟ್ಟು 25 ವರ್ಷಗಳಾಯಿತು. ಎಲ್ಲ ಅನಿಶ್ಚಿತಗಳು, ಏರಿಳಿತಗಳ ನಡುವೆಯೇ 18 ಕಲಾವಿದರಲ್ಲಿ ಕೆಲವರಷ್ಟೆ ಬಹಳ ಕಷ್ಟಪಟ್ಟು `ಸ್ವಂತ ಮನೆ' ಕಟ್ಟಿಕೊಂಡಿದ್ದಾರೆ.

ಅದರಲ್ಲೂ ಸಂತೋಷ ಕುಮಾರ್ ಕುಸನೂರ, ವಿನಾಯಕ ಭಟ್ ಹಾಸಣಗಿ ಹಾಗೂ ಕೃಷ್ಣಕುಮಾರ್ ನಾರ್ಣಕಜೆ ಬಹಳ ಚಿಕ್ಕದಾದ ನಿವೇಶನದಲ್ಲಿ, ಕಡಿಮೆ ವೆಚ್ಚದಲ್ಲಿ ಸರಳವಾದ, ಆದರೆ, ಅಷ್ಟೇ ಅಚ್ಚುಕಟ್ಟಾದ ಮನೆಗಳನ್ನು ಕಟ್ಟಿಕೊಂಡಿದ್ದಾರೆ.

ಹುಣಸೂರು ರಸ್ತೆಯ ಹೋಟೆಲ್ ರುಚಿ ಪ್ರಿನ್ಸ್ ಹಿಂಭಾಗದಲ್ಲಿಯ ಸುಬ್ರಹ್ಮಣ್ಯ ನಗರದಲ್ಲಿ ಈ ಮೂವರೂ ಕಲಾವಿದರ ಮನೆಗಳು ಒತ್ತಟ್ಟಿಗೇ ಇವೆ.

ಸಂತೋಷ ಕುಮಾರ್ ಕುಸನೂರ ಅವರ ಮನೆ 18 ಅಡಿ ಅಗಲ ಹಾಗೂ 40 ಅಡಿ ಉದ್ದದ ಮನೆ. ನಂಜನಗೂಡಿನ ಕಲ್ಲುಗಳಿಂದ ಮನೆಯ ಮುಂದಿನ ಗೋಡೆಯನ್ನು ಆಕರ್ಷಕವಾಗಿಸಿದ್ದಾರೆ. ಪ್ರತಿ ಅಡಿಯೂ ಉಪಯುಕ್ತವಾಗಿ ಬಳಕೆಯಾಗುವಂತೆ ಮನೆಯನ್ನು ನಿರ್ಮಿಸಿದ್ದಾರೆ.

ಗಾಳಿ, ಬೆಳಕು ಚೆನ್ನಾಗಿ ಬರುವಂತೆ ಯೋಜಿಸಿ ನಿರ್ಮಿಸಿರುವ ಈ ಮನೆಯೊಳಗೆ ಹಜಾರ, ಅಡುಗೆ ಮನೆ, ಮಲಗುವ ಕೋಣೆಗಳಿವೆ. ಬಟ್ಟೆ ತೊಳೆಯಲು, ಬಟ್ಟೆ ಒಣಹಾಕಲು ಪ್ರತ್ಯೇಕ ಜಾಗ ಇವೆ. ಆ ಮನೆಯ ಹೆಸರೇ ಗುಬ್ಬಿಮನೆ.

`ಎರಡು ವರ್ಷದ ಹಿಂದೆ ಕಟ್ಟಿಸಿದಾಗ 14 ಲಕ್ಷ ರೂಪಾಯಿ ವೆಚ್ಚವಾಯಿತು. ಅನಗತ್ಯವಾದ ಖರ್ಚುಗಳನ್ನಂತೂ ಮಾಡಲು ಹೋಗಲಿಲ್ಲ. ಮನೆಯ ಅಲಂಕಾರಕ್ಕಾಗಿ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆದರೂ ಮನೆ ಕಟ್ಟಲು ಮಾಡಿದ ಸಾಲ ತೀರಿಸಲು ಅನುಕೂಲವಾಗಲೆಂದು ಮನೆಯ ಮೇಲೊಂದು ಎರಡು ಕೋಣೆಗಳ ಪುಟ್ಟ ಮನೆ ನಿರ್ಮಿಸಿದ್ದೇವೆ' ಎನ್ನುತ್ತಾ ಮನೆ ಕಟ್ಟಿದ ಕಷ್ಟ ಸುಖ ಹಂಚಿಕೊಂಡರು ಸಂತೋಷ ಕುಮಾರ್.

`ಇನ್ನು ಮನೆಯ ಹೆಸರನ್ನು ಗುಬ್ಬಿಮನೆ ಇಡಬೇಕೆನ್ನುವುದು ಹಳೆಯ ಕನಸು. ಆ ಕನಸನ್ನು ನನಸಾಗಿಸಿದ ಈ ಮನೆಗೆ ಆ ಹೆಸರಿಟ್ಟಿರುವೆ. ಗಮನಿಸಿ; ಗುಬ್ಬಿಗಳು ಒಂಟಿಯಾಗಿರುವುದಿಲ್ಲ. ಜೋಡಿಯಾಗಿರುತ್ತವೆ. ಹೀಗಾಗಿ ಮನೆಯಾಕೆ ರೂಪಾಳೊಂದಿಗೆ ವಾಸಿಸಲು ಗುಬ್ಬಿಮನೆ ಕಟ್ಟಿಸಿದೆ. ಆದರೆ ಮನೆಯ ಮುಂದಿನ ಮಲ್ಲಿಗೆ ಬಳ್ಳಿಯಲ್ಲಿ ಗುಬ್ಬಿಗಳು ಗೂಡು ಕಟ್ಟಿಕೊಂಡಿವೆ' ಎಂದು ಖುಷಿಯಿಂದ ಹೇಳುತ್ತಾರೆ ಸಂತೋಷ ಕುಮಾರ್ ಕುಸನೂರ.

ಇವರ ಮನೆಯ ಎದುರಿಗೇ ಇರುವುದು `ಕಡೆಮನೆ'. ಇದು ವಿನಾಯಕ ಭಟ್ ಹಾಸಣಗಿ ಅವರ ಮನೆ. `ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ ಹತ್ತಿರದ ಹಾಸಣಗಿಯಲ್ಲಿಯೂ ನಮ್ಮದು ಕಡೆಯ ಮನೆ. ಮೈಸೂರಲ್ಲೂ ಕಡೆಯದಾಗಿದೆ. ಹೀಗಾಗಿ ಊರಲ್ಲಿಯ ಮನೆ ನೆನಪಿಸುವ ಹಾಗೂ ಆಯಿತು. ಇಲ್ಲೂ ಕಡೆಯ ಮನೆ ಆಗಿರುವುದಕ್ಕೆ ಅನ್ವರ್ಥವಾದಂತೆಯೂ ಸರಿ ಎಂದು ಈ ಹೆಸರು ಇಟ್ಟಿದ್ದೇವೆ' ಎನ್ನುತ್ತಲೇ ಮಾತು ಶುರು ಮಾಡಿದರು ವಿನಾಯಕ ಭಟ್ ಹಾಸಣಗಿ.

40 ಅಡಿ ಅಗಲ ಹಾಗೂ 40 ಅಡಿ ಉದ್ದದ ನಿವೇಶನದಲ್ಲಿ ಅವರು 30 ಅಡಿ ಉದ್ದ ಹಾಗೂ 30 ಅಡಿ ಅಗಲದ ಮನೆ ಕಟ್ಟಿಸಿದ್ದೇನೆ. ಮನೆಯೊಳಗೆ ಕಡಿಮೆ ಗೋಡೆಗಳಿವೆ. ಮಲಗುವ ಕೋಣೆಗಳಿಗೆ ಮಾತ್ರ ಗೋಡೆಗಳಿವೆ. ಇದರಿಂದ ಇಟ್ಟಿಗೆ, ಸಿಮೆಂಟ್, ಮರಳು ಹಾಗೂ ವೈರಿಂಗ್ ವೆಚ್ಚ ಉಳಿದಿದೆ ಎನ್ನುತ್ತಾರೆ ಹಾಸಣಗಿ.

ಅಡುಗೆ ಮನೆಗೆ ಪ್ರತ್ಯೇಕ ಗೋಡೆಯಿಲ್ಲ. ವಾರ್ಡ್‌ರೋಬ್‌ಗಳಿಗೆ ಮನೆಯ ನೆಲಕ್ಕೆ ಹಾಕುವ ಗ್ರಾನೈಟ್ ಹಾಕಿದ್ದಾರೆ. ಜತೆಗೆ ವಾರ್ಡ್‌ರೋಬ್‌ನಲ್ಲಿಯೇ ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಇನ್ನೊಂದು ವಾರ್ಡ್‌ರೋಬ್‌ನಲ್ಲಿ ಮಹಿಳೆಯರ ಅಲಂಕಾರ ವಸ್ತುಗಳನ್ನು ಇಡಲು 24 ಖಾನೆಗಳ ಡ್ರಾಯರ್ ಇದೆ. ಸೋಲಾರ್ ಸೌಲಭ್ಯವಿದೆ. ಬಿಸಿನೀರು ಸಾಲದೇ ಇದ್ದಾಗ ಅಂದರೆ ಮಳೆಗಾಲ ಹಾಗೂ ಚಳಿಗಾಲದಲ್ಲಿ ಬಿಸಿನೀರು ಸಾಕಾಗದು ಎಂದಾಗ ಸೋಲಾರ್ ಪೈಪು ಅಳವಡಿಸಿರುವ ತಾಮ್ರದ ಹಂಡೆಯ ಕೆಳಕ್ಕೆ ಉರಿ ಹಾಕಿದರೆ ಹೆಚ್ಚು ಬಿಸಿನೀರು ಬರುವಂತೆ ಪ್ರತ್ಯೇಕ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ. ಹೀಗಾಗಿ ಪಾರಂಪರಿಕ ಶೈಲಿ ಜತೆಗೇ ಆಧುನಿಕತೆಯನ್ನೂ ಬೆಸೆದುಕೊಂಡಂತಹ ಮನೆ ಇದು.

`ಎರಡು ವರ್ಷಗಳ ಹಿಂದೆ ಕಟ್ಟಿದಾಗ 15 ಲಕ್ಷ ರೂಪಾಯಿ ವೆಚ್ಚವಾಗಿತ್ತು. ನಮ್ಮ ಮಲೆನಾಡಿನ ಮನೆಯ ಹಾಗೆ ಕಲ್ಲಿನ ಕಂಬಗಳಿರುವ ಜಗುಲಿ ಇದೆ. ಕುಳಿತು ಹರಟೆ ಹೊಡೆಯಬಹುದು. ಹೆಂಚುಗಳನ್ನು ಹೊದಿಸಲಾಗಿದೆ. ಮನೆ ಸುತ್ತ ಜಾಗ ಇರುವುದರಿಂದ ತರಕಾರಿ ಬೆಳೆಯುತ್ತಿದ್ದೇವೆ. ಸವತೆಬಳ್ಳಿ, ತೊಂಡೆಬಳ್ಳಿ, ಪತ್ರೊಡೆ ಕೆಸು, ಗಾಂಧಾರಿ ಮೆಣಸು, ಕರಿಬೇವು, ಟೊಮೆಟೊ, ಮಂದಾರ ಹೂವು, ದಾಸವಾಳ, ಡೇರಿಯಾ, ಎಂಟು ಬಗೆಯ ಕಾಬಳ್ಳಿ ಹೂವು, ಪಾರಿಜಾತ, ಪಪ್ಪಾಯಿ ಹಣ್ಣು... ಹೀಗೆ ಫಲ-ಪುಷ್ಪಗಳೊಂದಿಗಿನ ಮಲೆನಾಡಿನ ಬದುಕಿನ ಪುಟ್ಟಲೋಕವನ್ನು ನಮ್ಮದೇ ಅಂಗಳದಲ್ಲಿ ಮರುಸೃಷ್ಟಿ ಮಾಡಿಕೊಳ್ಳಲು ಸಾಧ್ಯವಾಗಿದೆ'.

`ನಿಜ ಹೇಳಲಾ? ಹಸಿರಿಲ್ಲದ ಮನೆ, ಮನೆಯೇ ಅಲ್ಲ. ಭೂಮಿ ಬರಡಲ್ಲ. ಕೈ ಬರಡು. ಸಸಿ ಹಾಕಿ, ನೀರು ಹಾಕಿದರೆ ಚಿಗುರೊಡೆಯದೇ ಇರುವುದಿಲ್ಲ' ಎಂದು ವಿನಾಯಕ ತಮ್ಮ ಕೈತೋಟದ ಕುರಿತು ಹೆಮ್ಮೆಯಿಂದ ವಿವರಿಸುತ್ತಾರೆ.

30 ಅಡಿ ಅಗಲ ಹಾಗೂ 40 ಅಡಿ ಉದ್ದ ಇರುವ ಮನೆ ಕೃಷ್ಣಕುಮಾರ್ ನಾರ್ಣಕಜೆ ಅವರದು. ಅದರೊಳಗೆ ಗಾಳಿ, ಬೆಳಕು ಯಥೇಚ್ಛ ಬರುತ್ತದೆ. ಸಿಂಕ್ ಕೆಳಗಿನ ಜಾಗವನ್ನು ವ್ಯರ್ಥಗೊಳಿಸದೆ ವಸ್ತುಗಳನ್ನು ಇಡಲು ಬಳಸಿಕೊಳ್ಳಲು ಅವಕಾಶವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಮಹಡಿಗೆ ಹೋಗಲು ಬಳಸುವ ಮೆಟ್ಟಿಲುಗಳ ಪಕ್ಕ ದಿನಸಿ ವಸ್ತುಗಳನ್ನು ಇಡಲು ಗೂಡು ಮಾಡಲಾಗಿದೆ. ಕೆಳಗೆ ಹಜಾರ, ಅಡುಗೆಮನೆ, ಮಲಗುವ ಕೋಣೆ ಇವೆ. ಬಟ್ಟೆ ತೊಳೆಯಲು ಹಾಗೂ ಒಣಹಾಕಲು ಪ್ರತ್ಯೇಕ ಸ್ಥಳವಿದೆ.

`ಮೆಟ್ಟಿಲು ಹತ್ತಿಕೊಂಡು ಮೇಲೆ ಹೋದರೆ ಮಗನಿಗೆ ಓದಲು ಸ್ಥಳವಿದೆ. ಜತೆಗೆ ಮಲಗುವ ಕೋಣೆ ಪ್ರತ್ಯೇಕವಿದೆ. ಹೀಗೆ ಇರುವ ಜಾಗ ಸದುಪಯೋಗವಾಗಿದೆ' ಎಂದು ಹೆಮ್ಮೆಯಿಂದ ಹೇಳುತ್ತಾರೆ ಕೃಷ್ಣಕುಮಾರ್.

`18 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಿದ ಮನೆಯಿದು. ನಟನಾದ ಪರಿಣಾಮ ರಂಗದ ಮೇಲೆ ಮಾತಾಡುವುದೇ ಮುಖ್ಯ. ಪತ್ನಿಯದು ವಕೀಲಿ ವೃತ್ತಿ.  ಹೀಗಾಗಿ ಇಬ್ಬರಿಗೂ ಮಾತೇ ಮಾಣಿಕ್ಯ. ಇದಕ್ಕಾಗಿ ವಾಣಿಶ್ರೀ ಎಂದು ಹೆಸರಿಟ್ಟೆವು' ಎಂದು ನಗುತ್ತಾರೆ ಅವರು.
ಈ ಮೂರೂ ಮನೆಗಳಿಗೆ ಮಳೆ ನೀರು ಸಂಗ್ರಹ ವ್ಯವಸ್ಥೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT