ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ಬೆಲೆಯ ಇನ್‌ಕ್ಯುಬೇಟರ್

Last Updated 13 ಜೂನ್ 2012, 19:30 IST
ಅಕ್ಷರ ಗಾತ್ರ

ಹುಟ್ಟಿದ ಮೇಲೆ ಸಾವು ಸಹಜ. ಆದರೆ ಜನ್ಮ ಪಡೆದ ಸ್ವಲ್ಪ ದಿನಗಳಲ್ಲಿಯೇ ತಾಯಿಯ ಮಡಿಲಲ್ಲೂ ಆಡದೆ ಸಾವನ್ನಪ್ಪುತ್ತಿದ್ದ ಕಂದಮ್ಮಗಳನ್ನು ಕಂಡರೆ ದುಃಖವಾಗುತ್ತಿತ್ತು. ಒಂಬತ್ತು ತಿಂಗಳು ತನ್ನ ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಕನಸು ಸಾಕಾರವಾಗುವ ಹೊತ್ತಿಗೆ ಮಗುವನ್ನು ಕಳೆದುಕೊಂಡು ಗೋಳಾಡುವ ಅಮ್ಮಂದಿರನ್ನು ನೋಡಿ ಸಂಕಟ ಪಟ್ಟಿದ್ದೇನೆ. ಆದರೆ ಇದಕ್ಕೆಲ್ಲಾ ಏನಾದರೂ ಮಾಡಲೇಬೇಕೆನ್ನುವ ಹಂಬಲವೇ ಈ ಕಡಿಮೆ ವೆಚ್ಚದ ಇನ್‌ಕ್ಯುಬೇಟರ್ ಹೊರತರಲು ಕಾರಣವಾಯಿತು ಎಂದು ಮಾತಿಗಿಳಿದರು ಎಂಬ್ರೇಸ್ ಸಂಸ್ಥೆಯ ಜೇನ್ ಚೆನ್.

ನವಜಾತ ಶಿಶುಗಳ ಮರಣ ಪ್ರಮಾಣ ಹೆಚ್ಚುವುದಕ್ಕೆ ಹೈಪೋಥರ್ಮಿಯಾ ಮುಖ್ಯ ಕಾರಣ. ಅವಧಿಗೆ ಮುನ್ನ ಜನಿಸಿದ ಅಥವಾ ಅತಿ ಕಡಿಮೆ ತೂಕ ಹೊಂದಿದ ನವಜಾತ ಶಿಶುಗಳ ಈ ಸಮಸ್ಯೆಯನ್ನು ನೀಗಿಸಲೆಂದೇ ಬಂದದ್ದು `ಇನ್‌ಕ್ಯುಬೇಟರ್~ (ಕೃತಕ ಶಾಖೋಪಕರಣ) ವ್ಯವಸ್ಥೆ. ಅವಧಿಗೆ ಮುನ್ನ ಜನಿಸಿದ ಮಕ್ಕಳಲ್ಲಿ ದೇಹದ ಅಂಗಾಂಗಗಳು ಪೂರ್ಣ ಬೆಳವಣಿಗೆ ಕಂಡಿರದಿದ್ದರಿಂದ ಮತ್ತು ದೇಹವನ್ನು ತನ್ನಷ್ಟಕ್ಕೆ ತಾನೆ ಬೆಚ್ಚಗಿಟ್ಟಲು ಅವಶ್ಯಕ ಕೊಬ್ಬು ಇಲ್ಲದ ಕಾರಣ ದೇಹದ ಉಷ್ಣತೆ ಕಾಪಾಡಿಕೊಳ್ಳಲು ಶಿಶುಗಳು ಅಸಮರ್ಥವಾಗುತ್ತವೆ. ಇಂತಹ ಸಮಯದಲ್ಲಿ ಸೂಕ್ತ ವ್ಯವಸ್ಥೆಯಿಲ್ಲದಿದ್ದರೆ ಶಿಶುಗಳು ಸಾವನ್ನಪ್ಪುತ್ತವೆ. ಇದಕ್ಕೆಂದು ಆಸ್ಪತ್ರೆಗಳಲ್ಲಿ ತಾತ್ಕಾಲಿಕ ಶಾಖ ಕೊಟ್ಟು ಮಕ್ಕಳನ್ನು ಬೆಚ್ಚಗಿಡಲು ಇನ್‌ಕ್ಯುಬೇಟರ್‌ಗಳಲ್ಲಿ ಇರಿಸಲಾಗುತ್ತದೆ. ಆದರೆ ಹಳ್ಳಿಗಳಲ್ಲೆಲ್ಲಾ ಇನ್‌ಕ್ಯುಬೇಟರ್ ವ್ಯವಸ್ಥೆಯಿಲ್ಲದ ಕಾರಣ ಈ ಕಡಿಮೆ ವೆಚ್ಚದ ಇನ್‌ಕ್ಯುಬೇಟರ್ ಹೊರತರಲಾಗಿದೆ ಎಂದು ವಿವರಿಸಿದರು ಅವರು.

ಸಾಂಪ್ರದಾಯಿಕ ಇನ್‌ಕ್ಯುಬೇಟರ್‌ಗಿಂತ ಈ ಇನ್‌ಕ್ಯುಬೇಟರ್ ಹೇಗೆ ವಿಭಿನ್ನ?
ಸಾಂಪ್ರದಾಯಿಕ ಇನ್‌ಕ್ಯುಬೇಟರ್ ಅನ್ನು ಆಸ್ಪತ್ರೆಗಳಲ್ಲಿ ಮಾತ್ರ ಇಡಲಾಗುತ್ತದೆ. ತುಂಬಾ ದೊಡ್ಡದಾದ ಎಲೆಕ್ಟ್ರಾನಿಕ್ ಮೆಷಿನ್‌ನಂತೆ ಅವು ಇರುತ್ತದೆ. ಆದರೆ ಈಗ ನಾವು ಹೊರತಂದಿರುವ ಇನ್‌ಕ್ಯುಬೇಟರ್ ಸ್ಲೀಪಿಂಗ್ ಬ್ಯಾಗ್‌ನಂತೆ ಅತಿ ಪುಟ್ಟದು ಮತ್ತು ಬಳಸಲು ಸುಲಭ. ಮನೆಗಳಲ್ಲಿಯೂ ಇವುಗಳ ಬಳಕೆ ಸಾಧ್ಯ.

ಈ ಇನ್‌ಕ್ಯುಬೇಟರ್ ಕಂಡುಹಿಡಿಯಲು ಪ್ರೇರಣೆ?
ಭಾರತದ ಹಳ್ಳಿಗಳಲ್ಲಿನ ಆರೋಗ್ಯ ಕೇಂದ್ರಗಳ ಪರಿಸ್ಥಿತಿಯನ್ನು ನೋಡಿದ ನನಗೆ ಈ ರೀತಿ ಕಡಿಮೆ ವೆಚ್ಚದ ಇನ್‌ಕ್ಯುಬೇಟರನ್ನು ಹೊರತರಲೇಬೇಕೆಂಬ ಪ್ರೇರಣೆಯಾಯಿತು. ಪ್ರತಿ ವರ್ಷ ಸುಮಾರು 20 ದಶಲಕ್ಷ ನವಜಾತ ಶಿಶುಗಳು ಈ ಸಮಸ್ಯೆಯನ್ನು ಹೊತ್ತಿರುತ್ತವೆ. ಸಮರ್ಪಕ ವ್ಯವಸ್ಥೆಯಿಲ್ಲದೆ 40 ಸಾವಿರ ಮಕ್ಕಳು ಸಾವನ್ನಪ್ಪುತ್ತವೆ ಮತ್ತು ಮಕ್ಕಳನ್ನು ಈ ಸಮಸ್ಯೆಯಿಂದ ರಕ್ಷಿಸಲು ಹಳ್ಳಿಗಳಲ್ಲಿ ಅಸಮರ್ಪಕ ದಾರಿಯನ್ನು ಹಿಡಿಯುತ್ತಾರೆ. ಬಿಸಿ ನೀರಿನ ಶಾಖದಲ್ಲಿ ಅಥವಾ ಬಲ್ಬ್ ನ ಕೆಳಗೆ ಮಗುವನ್ನು ಇಡುವುದು ಹೀಗೆ... ಆದರೆ ಇದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಇವುಗಳನ್ನು ತಗ್ಗಿಸಬೇಕೆಂಬುದೇ ನನಗೆ ಪ್ರೇರಣೆಯಾಯಿತು.

ಇನ್‌ಕ್ಯುಬೇಟರ್ ಇಲ್ಲದೆಯೇ ಮಕ್ಕಳು ಉಳಿದುಕೊಂಡಿರುವ ಉದಾಹರಣೆ ಇದೆಯಾ?
ಅವಧಿಗೆ ಮುನ್ನ ಜನಿಸಿದ ಮಕ್ಕಳು ಅಥವಾ ಅತಿ ಕಡಿಮೆ ತೂಕ ಹೊಂದಿ ಜನಿಸಿದ ಮಕ್ಕಳು ಸಮಸ್ಯೆಗೆ ಒಳಗಾಗಿ, ಅದರಿಂದ ಪಾರಾಗಿದ್ದೂ ಇದೆ. ಆದರೆ ಇಂತಹ ಮಗುವಿಗೆ ಆರಂಭದಲ್ಲಿಯೇ ಸೂಕ್ತ ಚಿಕಿತ್ಸೆ ನೀಡದಿದ್ದರೆ ಮುಂದೆ ಮಧುಮೇಹ, ಹೃದಯ ಸಂಬಂಧಿ ತೊಂದರೆ ಮತ್ತು ಇನ್ನಿತರ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಆದ್ದರಿಂದ ಇನ್‌ಕ್ಯುಬೇಟರ್‌ಗಳು ಹೆಚ್ಚು ಸಹಕಾರಿ.

ಎಂಬ್ರೇಸ್ ಸಂಸ್ಥೆಯ ಮೂಲ?
ಪದವಿ ಪಡೆದಿದ್ದು ಮನಃಶಾಸ್ತ್ರ ವಿಷಯದಲ್ಲಿ. ಸ್ಟ್ಯಾಂಫರ್ಡ್ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಬಿಸಿನೆಸ್ ಮತ್ತು ಜಾನ್ ಎಫ್ ಕೆನಡಿ ಸ್ಕೂಲ್‌ನಿಂದ ಎಂ.ಬಿ.ಎ ಮತ್ತು ಪಬ್ಲಿಕ್ ಪಾಲಿಸಿ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು  ಪಡೆದುಕೊಂಡೆ. 2007ರಲ್ಲಿ ಎಂಬ್ರೇಸ್ ಹುಟ್ಟಿಕೊಂಡಿತು. ಸಹಪಾಠಿಗಳಾದ ಲೈನಸ್ ಲಿಯಾಂಗ್, ನಾಗ್‌ಮೂರ್ತಿ ಮತ್ತು ರಾಹುಲ್ ಪನಿಕ್ಕರ್ ಅವರ ಜೊತೆಗೂಡಿ `ಎಂಬ್ರೇಸ್~ ಜನ್ಮತಾಳಿತು. ಬೆಂಗಳೂರು ಮೂಲದ ಈ ಸಂಸ್ಥೆಗೆ ನಾನು ಈಗ ಕಾರ್ಯ ನಿರ್ವಾಹಕ ಅಧಿಕಾರಿ. ಇದಕ್ಕೆ ಹಣಕಾಸು ವ್ಯವಸ್ಥೆ ಒದಗಿಸಿದ್ದು ಅಮೆರಿಕದ ಮುಲಾಗೊ ಫೌಂಡೇಶನ್.

ಪ್ರತಿಕ್ರಿಯೆ ಹೇಗಿದೆ?
ತೈವಾನ್ ಮೂಲದ ನನಗೆ ಆರೋಗ್ಯ ಸುಧಾರಣೆಯಲ್ಲಿ ಹೆಚ್ಚು ಆಸಕ್ತಿ. ಇದಕ್ಕೆಂದು ಭಾರತದ ಸುಮಾರು  11 ರಾಜ್ಯಗಳಲ್ಲಿ ಸುತ್ತಾಡಿ ಹಲವು ವೈದ್ಯರನ್ನು ಸಂದರ್ಶನ ಮಾಡಿ, ಹಲವು ಸಂಶೋಧನೆಗಳನ್ನು ನಡೆಸಿ, ವೈದ್ಯರ ಸಹಾಯ ತೆಗೆದುಕೊಂಡು, ಸರ್ಕಾರದ ಆರೋಗ್ಯ ಅಧಿಕಾರಿಗಳ ಬಳಿ ಚರ್ಚಿಸಿ ಇದನ್ನು ಹೊರತರಲಾಗಿದೆ. ಮಾತನಾಡಿದ್ದಾರೆ. ಕೆಲವು ಸರ್ಕಾರೇತರ ಸಂಸ್ಥೆಗಳಲ್ಲದೆ ಜಿವಿ ಹೆಲ್ತ್ ಕೇರ್, ನೊವಲ್ಟೀಸ್ ಇವುಗಳ ಬೆಂಬಲವನ್ನೂ ಪಡೆದಿದ್ದಾಗಿದೆ. ಎಲ್ಲರೂ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.

ನಗರಗಳಲ್ಲಿ ಈ ಇನ್‌ಕ್ಯುಬೇಟರ್ ಅವಶ್ಯಕತೆ ಎಷ್ಟಿದೆ?
ಇಂದು ನಗರಗಳಲ್ಲಿನ ಎಲ್ಲಾ ಆಸ್ಪತ್ರೆಗಳಲ್ಲೂ ಇನ್‌ಕ್ಯುಬೇಟರ್ ಸೌಲಭ್ಯ ಅಷ್ಟು ಒಳ್ಳೆಯ ಮಟ್ಟದಲ್ಲಿ ಇಲ್ಲ. ಇದರ ನಿರ್ವಹಣೆಯೂ ಕಷ್ಟವಾದ್ದರಿಂದ ಕೆಲವು ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಬಿಟ್ಟರೆ ಇನ್ನಿತರ ಆರೋಗ್ಯ ಕೇಂದ್ರಗಳಲ್ಲಿಯೂ ಹೇಳಿಕೊಳ್ಳುವ ಮಟ್ಟಿಗೆ ಅವಶ್ಯಕವಿದೆ. ಆದ್ದರಿಂದ ಈ ಕಡಿಮೆ ವೆಚ್ಚದ ಇನ್‌ಕ್ಯುಬೇಟರ್ ಎಲ್ಲರಿಗೂ ಸುಲಭ.

ವೆಚ್ಚದಲ್ಲಿ ಎಷ್ಟು ಅಂತರವಿದೆ?
ಸಾಂಪ್ರದಾಯಿಕ ಇನ್‌ಕ್ಯುಬೇಟರ್‌ಗಳು ಸುಮಾರು 3 ಲಕ್ಷದಿಂದ 13 ಲಕ್ಷದವರೆಗೂ ಇದೆ. ಆದರೆ ನಾವು ಹೊರತಂದಿರುವುದು ಸಾಂಪ್ರದಾಯಿಕ ಇನ್‌ಕ್ಯುಬೇಟರ್‌ನ ಕೇವಲ ಶೇಕಡಾ 1ರಷ್ಟು ವೆಚ್ಚದ್ದು ಅಂದರೆ 12ರಿಂದ 15 ಸಾವಿರದವರೆಗಿದೆ.

ಇನ್‌ಕ್ಯುಬೇಟರ್ ರಚನೆ ಹೇಗಿದೆ?
ಉಪಯೋಗಿಸಲು ಅತಿ ಸುಲಭ, ಸುರಕ್ಷಿತ ಮತ್ತು ಬ್ಯಾಗ್‌ನಂತೆ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಚಿಕ್ಕ ಸ್ಲೀಪಿಂಗ್ ಬ್ಯಾಗ್‌ನಂತೆ ಕಾಣುವ ಈ ಇನ್‌ಕ್ಯುಬೇಟರ್‌ನಲ್ಲಿ ಒಂದು ಪೌಚ್ ಅಳವಡಿಸಲಾಗಿದೆ. ಇದರಲ್ಲಿ ವ್ಯಾಕ್ಸ್ ಇರುತ್ತವೆ. ಜೊತೆಗೆ ಹೀಟರ್ ನೀಡಿರಲಾಗುತ್ತದೆ. ಹೀಟರ್‌ನಲ್ಲಿ 20 ನಿಮಿಷ ಪೌಚ್ ಅನ್ನು ಚಾರ್ಜ್ ಮಾಡಿ ಅದನ್ನು ಬ್ಯಾಗ್‌ನೊಳಗೆ ಇಟ್ಟು ಮಗುವನ್ನು ಅದರಲ್ಲಿಟ್ಟು ಹೊದ್ದಿಸಬಹುದು. ಮಗುವಿನ ಮುಖದ ಭಾಗ ತೆರೆದಿಡಲು ಅವಕಾಶವಿದೆ.

ಇನ್‌ಕ್ಯುಬೇಟರ್‌ನಿಂದ ಎಷ್ಟು ಹೊತ್ತು ಶಾಖ ನೀಡಬಹುದು?
ಮಗುವಿನ ದೇಹದ ಉಷ್ಣತೆಯನ್ನು ನಾಲ್ಕರಿಂದ ಆರು ತಾಸಿನವರೆಗೆ ಕಾಪಾಡುತ್ತದೆ. ಸದ್ಯಕ್ಕೆ ಇದು ಆರೋಗ್ಯ ಕೇಂದ್ರಗಳಿಗೆ ಮತ್ತು ಆಸ್ಪತ್ರೆಗಳಿಗೆ ಸೂಕ್ತವಿದ್ದು ಇಂತಹದ್ದೇ ಇನ್ನೊಂದು ಬಗೆಯನ್ನು ಅಕ್ಟೋಬರ್‌ನಲ್ಲಿ ಹೊರತರುವ ಯೋಜನೆಯಿದೆ. ಅದನ್ನು ಬಿಸಿ ನೀರನ್ನು ಬಳಸಿಕೊಂಡು ಉಪಯೋಗಿಸಬಹುದು.

ಬೆಂಗಳೂರಿನಲ್ಲಿ ಎಲ್ಲಿ ದೊರೆಯುತ್ತದೆ?
ನಂ 18/19,ಪ್ಲಾಟಿನಂ ಸ್ಕ್ವೇರ್, ಲಿಯೊನಾರ್ಡ್ ಲೇನ್, ರಿಚ್ಮಂಡ್ ಟೌನ್. ಇಮೇಲ್ www.embraceglobal.org
 

 -ಸುಮಲತಾ ಎನ್. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT