ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ಮಳೆ: ಬೆಳೆ ಸ್ಥಿತಿ ಉತ್ತಮ

Last Updated 5 ಜುಲೈ 2013, 5:48 IST
ಅಕ್ಷರ ಗಾತ್ರ

ಬೀದರ್: ಮುಂಗಾರು ಮಳೆ ಬಳಿಕ ಆರಿದ್ರಾ ನಕ್ಷತ್ರದ ಮಳೆ ಆರಂಭವಾದರೂ ವರುಣನ ಕೃಪೆ ಜಿಲ್ಲೆಯ ಮಟ್ಟಿಗೆ ಕಳೆದ ವರ್ಷದಷ್ಟು ಇಲ್ಲ. ಹಿಂದಿನ ವರ್ಷ ಜಿಲ್ಲಾವಾರು ರಾಜ್ಯದಲ್ಲಿಯೇ ಅಧಿಕ ಮಳೆ ಆಗುವುದರೊಂದಿಗೆ ಉತ್ತಮ ಸ್ಥಿತಿಯಲ್ಲಿದ್ದ ಜಿಲ್ಲೆ ಈ ಬಾರಿ ಮಳೆ ಕೊರತೆ ಎದುರಿಸುತ್ತಿದೆ.

ಈವರೆಗಿನ ಅಂಕಿ ಅಂಶದ ಪ್ರಕಾರ, ಜಿಲ್ಲೆಯಲ್ಲಿ ಮಾಸಿಕವಾರು ಕಳೆದ ವರ್ಷಕ್ಕಿಂತಲೂ ಮಳೆ ಕಡಿಮೆಯಾಗಿದೆ. ಮೇಲ್ನೋಟಕ್ಕೆ ಬಯಲು ಹಸಿರಾಗಿ ಉತ್ತಮ ಮಳೆ ಆಗಿರುವ ಸೂಚನೆಗಳು ಇದ್ದರೂ, ವಾಸ್ತವದಲ್ಲಿ ಬರುವ ದಿನಗಳಲ್ಲಿ ಉತ್ತಮ ಮಳೆ ಆಗದಿದ್ದರೆ ಪರಿಸ್ಥಿತಿ ಆತಂಕವಾಗಬಹುದು ಎಂಬ ಸ್ಥಿತಿ ಇದೆ.

ಸಾಮಾನ್ಯವಾಗಿ ಮುಂಗಾರು ಹಂಗಾಮಿನ ಬಿತ್ತನೆ ಚಟುವಟಿಕೆ ಮೇ ತಿಂಗಳಲ್ಲಿ ಆರಂಭವಾಗಲಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 21.4 ಮಿ.ಮೀ ಮಳೆಯಾಗಿದ್ದು, ಈ ವರ್ಷ ಏಪ್ರಿಲ್ ತಿಂಗಳಲ್ಲಿ 30.9 ಮಿ.ಮೀ ಮಳೆ ಸುರಿದು ಭರವಸೆ ಮೂಡಿಸಿದ್ದರೂ ನಂತರ ಮೇ ಮತ್ತು ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗಿಲ್ಲ.

ಮೇ ಮತ್ತು ಜೂನ್ ತಿಂಗಳು ಕಳೆದ ವರ್ಷಕ್ಕಿಂತ ಕಡಿಮೆ ಅಷ್ಟೇ ಅಲ್ಲ, ವಾಡಿಕೆಗಿಂತಲೂ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಕಳೆದ ವರ್ಷ ಮೇ ಮತ್ತು ಜೂನ್ ತಿಂಗಳಲ್ಲಿ ಕ್ರಮವಾಗಿ 18.3 ಮಿ.ಮೀ., ಮತ್ತು 146.3 ಮಿ.ಮೀ., ಮಳೆಯಾಗಿದ್ದರೆ, ಈ ವರ್ಷ ಕ್ರಮವಾಗಿ 17.8 ಮಿ.ಮೀ. ಮತ್ತು 128.7 ಮಿ.ಮೀ., ಅಷ್ಟೇ ಮಳೆಯಾಗಿದೆ.

ವಾಡಿಕೆಯಂತೆ ಈ  ಎರಡು ತಿಂಗಳಲ್ಲಿ ಆಗಬೇಕಾಗಿದ್ದ ಮಳೆ ಪ್ರಮಾಣ ಕ್ರಮವಾಗಿ 32.2 ಮಿ.ಮೀ., ಮತ್ತು 132.4 ಮಿ.ಮೀ., ಇನ್ನು ಜುಲೈ ತಿಂಗಳಲ್ಲಿ ಗುರುವಾರದವರೆಗೂ (ಜು. 4) ಜಿಲ್ಲೆಯಲ್ಲಿ 32.5 ಮಿ. ಮೀ. ಮಳೆಯಾಗಿದೆ.

ಈ ತಿಂಗಳು ಕ್ರಮವಾಗಿ ಬೀದರ್, ಭಾಲ್ಕಿ ಮತ್ತು ಔರಾದ್ ತಾಲ್ಲೂಕು ಉತ್ತಮವಾದ ಮಳೆಯನ್ನು ಸ್ವೀಕರಿಸಿವೆ.  ಔರಾದ್ ತಾಲ್ಲೂಕಿನಲ್ಲಿ ಗರಿಷ್ಠ ಅಂದರೆ 72 ಮಿ.ಮೀ. ಮಳೆಯಾಗಿದ್ದರೆ; ಬೀದರ್ ತಾಲ್ಲೂಕಿನಲ್ಲಿ 30 ಮಿ.ಮೀ ಮತ್ತು ಭಾಲ್ಕಿ ತಾಲ್ಲೂಕಿನಲ್ಲಿ 40.5 ಮಿ.ಮೀ. ಮಳೆಯಾಗಿದೆ. ಉಳಿದಂತೆ ಬಸವಕಲ್ಯಾಣ ತಾಲ್ಲೂಕಿನಲ್ಲಿ ಕನಿಷ್ಠ ಅಂದರೆ ಕೇವಲ 5.2 ಮಿ.ಮೀ. ಮಳೆಯಾಗಿದ್ದರೆ ಹುಮನಾಬಾದ್  ತಾಲ್ಲೂಕಿನಲ್ಲಿ ಜುಲೈ ತಿಂಗಳು ನಾಲ್ಕರವರೆಗೂ 14.9 ಮಿ.ಮೀ. ಮಳೆ ಆಗಿದೆ.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜಿ.ಟಿ.ಪುಥ್ರಾ ಅವರನ್ನು ಸಂಪರ್ಕಿಸಿದಾಗ, `ಇದುವರೆಗೂ ಜಿಲ್ಲೆಯಲ್ಲಿ ಸುರಿದಿರುವ ಮಳೆ ಪ್ರಮಾಣ ಆಶಾದಾಯಕವಾಗಿದೆ. ಬೆಳೆಯೂ ಉತ್ತಮ ಸ್ಥಿತಿಯಲ್ಲಿದೆ. ಈ ತಿಂಗಳು ಉತ್ತಮಮಳೆಯನ್ನು ನಿರೀಕ್ಷಿಸಲಾಗಿದೆ' ಎಂದರು.

ಕಪ್ಪು ಮಣ್ಣು ಇರುವ ಭಾಗದಲ್ಲಿ ಇನ್ನೊಂದು ಹದದ ಮಳೆಯಾದರೂ ಬೆಳೆಗೆ ಪೂರಕವಾಗಿ ಇರುತ್ತದೆ; ಆದರೆ, ಕೆಂಪು ಮಣ್ಣು ಇರುವ ಕಡೆ ಒಂದೆರಡು ಹದದ ಮಳೆಯಾದರೂ ಬೇಕಾಗುತ್ತದೆ. ಆದರೆ, ಈಗಿನ ಅಂಕಿ-ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಬೆಳೆ ಪರಿಸ್ಥಿತಿ ಉತ್ತಮವಾಗಿದೆ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT