ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ವೆಚ್ಚದ ಇಂಧನ ಅಭಿವೃದ್ಧಿ

ವಿಜ್ಞಾನ ಲೋಕದಿಂದ
Last Updated 8 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ನೈಸರ್ಗಿಕ ಇಂಧನದ ಪೂರೈಕೆ ಪ್ರಮಾಣವು ಸೀಮಿತವಾಗಿದ್ದರೆ ಜಾಗತಿಕ ಬೇಡಿಕೆ ಮಾತ್ರ ನಿರಂತರವಾಗಿ ಹೆಚ್ಚುತ್ತಲೇ ಇದೆ. ಅಲ್ಲದೆ, ಇಂತಹ ಇಂಧನದ ಬಳಕೆಯಿಂದ ಆಗುವ ದುಷ್ಪರಿಣಾಮವೂ ಹೆಚ್ಚು ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ ಸ್ವಚ್ಛ, ನವೀಕರಿಸಬಲ್ಲ ಹಾಗೂ ಮಿತವ್ಯಯದ ಇಂಧನ ಉತ್ಪಾದನೆ ಇಂದಿನ ತುರ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರೊ. ಸಿಎನ್‌ಆರ್ ರಾವ್ ಅವರು ನಡೆಸಿದ ಒಂದು ಸಂಶೋಧನೆ ಕಡಿಮೆ ವೆಚ್ಚದ ಕೃತಕ ಇಂಧನ ಉತ್ಪಾದನೆಗೆ ಕಾರಣ­ವಾಗುವ ಸಾಧ್ಯತೆ ಇದೆ.

ಜಲಜನಕ ಮತ್ತು ಇಂಗಾಲದ ಮೊನಾಕ್ಸೈಡ್ ಸಮ್ಮಿಶ್ರಣದಲ್ಲಿ ತಯಾರಿಸಿದ ಕೃತಕ ಅನಿಲದಿಂದ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿದೆ. ಆದರೆ, ಜಲಜನಕ ಮತ್ತು ಇಂಗಾಲದ ಮೊನಾಕ್ಸೈಡ್ ಉತ್ಪಾದನೆ ಈಗಲೂ ಕ್ಲಿಷ್ಟಕರ. ಈಗ ಅನುಸರಿ­ಸುತ್ತಿರುವ ವಿಧಾನಗಳು ದುಬಾರಿ­ಯಾಗಿದ್ದು ಅದರಿಂದ ವಿದ್ಯುತ್ ಉತ್ಪಾದನೆ ಮಾಡುವುದು ಬಲು ವೆಚ್ಚದಾಯಕ.
ನೀರು ಮತ್ತು ಇಂಗಾಲದ ಡೈಆಕ್ಸೈಡ್ ಎರಡನ್ನೂ ಕ್ರಮವಾಗಿ ವಿಭಜಿಸಿದಾಗ ನೀರಿನಿಂದ ಜಲಜನಕ ಹಾಗೂ ಇಂಗಾಲದ ಡೈಆಕ್ಸೈಡ್‌ನಿಂದ ಇಂಗಾಲದ ಮೊನಾಕ್ಸೈಡ್ ಉತ್ಪತ್ತಿ­ಯಾಗುತ್ತದೆ. ಇರುವುದರಲ್ಲೆ ಅತ್ಯುತ್ತ­ಮ­ವಾದ ಪದ್ಧತಿಯನ್ನು ಬಳಸಿದರೂ ಅವುಗಳನ್ನು ವಿಭಜಿಸಲು ಅತಿಹೆಚ್ಚಿನ ಉಷ್ಣಾಂಶ ಬೇಕು. ಈ ಪ್ರಕ್ರಿಯೆಗೆ ಹೆಚ್ಚಿನ ಹಣಕಾಸಿನ ಅಗತ್ಯವಿದೆ.
     
ಲ್ಯಾಂತನಮ್ ಕ್ಯಾಲ್ಸಿಯಂ ಮ್ಯಾಂಗ­ನೇಟ್ ಎಂಬ ರಾಸಾಯನಿಕವನ್ನು ಬಳಕೆ ಮಾಡಿ ಸಮರ್ಥ ರೀತಿಯಲ್ಲಿ ಜಲಜನಕ ಹಾಗೂ ಇಂಗಾಲದ ಮೊನಾಕ್ಸೈಡ್‌ ಉತ್ಪಾದಿಸುವಲ್ಲಿ ಪ್ರೊ. ಸಿಎನ್‌ಆರ್ ರಾವ್ ಮತ್ತು ಅವರ ತಂಡ ಯಶಸ್ವಿಯಾಗಿದೆ. ಪ್ರೊ. ಸಿಎನ್ಆರ್ ರಾವ್ ಅವರಲ್ಲದೆ ಪ್ರೊ. ಎ.ಗೋವಿಂದ­ರಾಜ್, ಸುನಿತಾ ದೇವ್‌ ಮತ್ತು ಬಿ.ಎಸ್.ನಾಯ್ಡು ತಂಡದಲ್ಲಿದ್ದರು. ಈ ರಾಸಾಯನಿಕ ವಸ್ತುವು ಭಾರಿ ಪ್ರಮಾಣದಲ್ಲಿ ಜಲಜನಕ ಹಾಗೂ ಇಂಗಾಲದ ಮೊನಾಕ್ಸೈಡ್‌ ಉತ್ಪಾದಿಸುತ್ತದೆ. ಅಲ್ಲದೆ ಈ ಪ್ರಕ್ರಿಯೆಗೆ ಹೆಚ್ಚಿನ ಉಷ್ಣಾಂಶದ ಅಗತ್ಯವೂ ಇಲ್ಲ.

‘ಲ್ಯಾಂತನಮ್ ಕ್ಯಾಲ್ಸಿಯಂ ಮ್ಯಾಂಗ­ನೇಟ್ ರಾಸಾಯನಿಕ ಒಳ್ಳೆಯ ಪ್ರಮಾಣದಲ್ಲಿ ಜಲಜನಕ ಹಾಗೂ ಇಂಗಾಲದ ಮೊನಾಕ್ಸೈಡ್ ಉತ್ಪಾದಿ­ಸುತ್ತಿದ್ದು ಅತ್ಯಂತ ಕ್ಷಮತೆಯಿಂದ ಕೂಡಿದೆ’ ಎಂದು ಹೇಳುತ್ತಾರೆ ಪ್ರೊ. ರಾವ್.

ಈ ಹೊಸ ವಿಧಾನಕ್ಕೆ ಸದ್ಯ ೧,೦೦೦ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಅಗತ್ಯ­ವಿದ್ದು, ಅದನ್ನು ಸೌರಶಕ್ತಿಯಿಂದ ಸಾಧಿಸಬಹುದು ಎಂಬುದು ಈ ಹಿರಿಯ ವಿಜ್ಞಾನಿಯ ನಂಬಿಕೆ. ‘ಸೌರಶಕ್ತಿ ಮತ್ತು ನೀರು ಎರಡೂ ನವೀಕರಿಸಬಹುದಾದ ಸಂಪನ್ಮೂಲಗಳು. ಹೀಗಾಗಿ ಸೌರಶಕ್ತಿ ಬಳಸಿ ಕಡಿಮೆ ವೆಚ್ಚದಲ್ಲಿ ನೀರು ಮತ್ತು ಇಂಗಾಲದ ಡೈಆಕ್ಸೈಡ್ ವಿಭಜಿಸಿ ಜಲಜನಕ ಹಾಗೂ ಇಂಗಾಲದ ಮೊನಾಕ್ಸೈಡ್ ಉತ್ಪಾದಿಸುವುದು ಅಗತ್ಯ’ ಎಂದು ವಿವರಿಸುತ್ತಾರೆ.

‘ಸದ್ಯದ ದೇಶದ ಜನಸಂಖ್ಯೆ ಸಾಂದ್ರತೆ ಹೆಚ್ಚಿದ್ದು ಇಂಧನ ಶಕ್ತಿಯು ವ್ಯಾಪಕ ಬೇಡಿಕೆಯಲ್ಲಿದೆ. ಈ ರೀತಿಯ ಪರ್ಯಾಯ ಶಕ್ತಿಯ ಸಂಶೋಧನೆಯು ಸಮಾಜದ ಮೇಲೆ ಖಂಡಿತವಾಗಿಯೂ ಉತ್ತಮ ಪರಿಣಾಮ ಬೀರುತ್ತದೆ’ ಎಂದು ಪ್ರೊ. ರಾವ್ ತಂಡದ ಸದಸ್ಯರೊಬ್ಬರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT