ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ವೆಚ್ಚದಲ್ಲಿ ಮಳೆ ನೀರು ಸಂಗ್ರಹಣೆ

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅತ್ಯಂತ ಕಡಿಮೆ ವೆಚ್ಚದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸುವ ವಿಧಾನವೊಂದನ್ನು ನಗರದ ಹೊಸಕೆರೆಹಳ್ಳಿ ನಿವಾಸಿ ಪ್ರಸನ್ನಮೂರ್ತಿ ಅವರು ಅಭಿವೃದ್ಧಿಪಡಿಸಿದ್ದಾರೆ. 10 ಮತ್ತು 10 ಅಡಿ ಅಳತೆಯ ಕಟ್ಟಡಕ್ಕೂ ಈ ವಿಧಾನವನ್ನು ಸುಲಭವಾಗಿ ಅಳವಡಿಸಬಹುದಾಗಿದೆ.

ತಮ್ಮ ವಿಧಾನದ ಬಗ್ಗೆ `ಪ್ರಜಾವಾಣಿ~ಗೆ ವಿವರ ನೀಡಿದ ಮೂರ್ತಿ, `ಸಾಮಾನ್ಯವಾಗಿ ಆಗುವ ಖರ್ಚಿನ ಮೂರನೇ ಒಂದು ಭಾಗದಷ್ಟು ಖರ್ಚಿನಲ್ಲಿ ನನ್ನ ವಿಧಾನದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು~ ಎಂದರು.

`ಈಗಿರುವ ವಿಧಾನದಲ್ಲಿ ಮಳೆ ನೀರು ಶುದ್ಧೀಕರಣ ಮಾಡುವ ಫಿಲ್ಟರ್‌ಗೆ ಹೆಚ್ಚು ಖರ್ಚಾಗುತ್ತಿದೆ. ಫಿಲ್ಟರ್ ಅಳವಡಿಸಲು ನೆಲ ಅಗೆದು ಗುಂಡಿ ತೋಡಬೇಕಾಗಿದೆ. ಆದರೆ ನಾನು ಅಭಿವೃದ್ಧಿಪಡಿಸಿರುವ ಫಿಲ್ಟರ್‌ಗೆ ಹೆಚ್ಚು ಖರ್ಚಾಗುವುದಿಲ್ಲ. ಗೋಡೆಯ ಮೇಲೆ ಬಹಳ ಸುಲಭವಾಗಿ ಅಳವಡಿಸಬಹುದಾದ್ದರಿಂದ ಗುಂಡಿಯ ಅಗತ್ಯವೂ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಫಿಲ್ಟರ್ ನಿರ್ವಹಣೆಯನ್ನು ಕಟ್ಟಡ ಮಾಲೀಕರೇ ಮಾಡಿಕೊಳ್ಳಬಹುದಾಗಿದೆ~ ಎಂದು ಅವರು ಹೇಳಿದರು.

`ವೆಚ್ಚದ ಕಾರಣಕ್ಕೆ ಕಟ್ಟಡ ಮಾಲೀಕರು ಮಳೆ ನೀರು ಸಂಗ್ರಹ ವ್ಯವಸ್ಥೆಯಿಂದ ದೂರ ಉಳಿಯಬಾರದು. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಅದಕ್ಕಾಗಿಯೇ ಕಡಿಮೆ ವೆಚ್ಚದ ಸುಲಭ ವಿಧಾನವನ್ನು ನಾನು ಅಭಿವೃದ್ಧಿಪಡಿಸಿದೆ~ ಎಂದು ಅವರು ತಿಳಿಸಿದರು.

`30 ಮತ್ತು 40 ಅಡಿ ಅಳತೆಯ ನಿವೇಶನದ ಕಟ್ಟಡಕ್ಕೆ ಎಲ್ಲಾ ವೆಚ್ಚ ಸೇರಿ ಆರು ಸಾವಿರ ರೂಪಾಯಿಯೊಳಗೆ ನಾನು ಅಭಿವೃದ್ಧಿಪಡಿಸಿದ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಬಹುದು. ಇಷ್ಟೇ ವಿಸ್ತೀರ್ಣದ ಕಟ್ಟಡಕ್ಕೆ ಇತರರು ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿದರೆ ರೂ. 15,000ಕ್ಕೂ ಹೆಚ್ಚಿನ ವೆಚ್ಚವಾಗುತ್ತಿದೆ~ ಎಂದು ಅವರು ಹೇಳಿದರು.

`ದಿನೇ ದಿನೇ ಅಂತರ್ಜಲ ಮಟ್ಟ ಕುಸಿಯುತ್ತಿದೆ. ನೀರಿನ ಅಭಾವ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಎಲ್ಲರೂ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಸರ್ಕಾರ 40/ 60 ಅಡಿ ಮತ್ತು ಅದಕ್ಕಿಂತ ಹೆಚ್ಚು ಅಳತೆಯ ನಿವೇಶನದಲ್ಲಿರುವ ಕಟ್ಟಡಗಳಿಗೆ ಮಳೆ ನೀರು ಸಂಗ್ರಹವನ್ನು ಕಡ್ಡಾಯಗೊಳಿಸಿದೆ.

ಅದಕ್ಕಿಂತ ಚಿಕ್ಕ ಗಾತ್ರದ ಕಟ್ಟಡಗಳು ಕೂಡ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಆ ಮೂಲಕ ನೀರಿನ ಕೊರತೆ ಸಮಸ್ಯೆಗೆ ಸ್ವಯಂ ಪರಿಹಾರ ಕಂಡುಕೊಳ್ಳಬೇಕು~ ಎಂದು ಅವರು ಅಭಿಪ್ರಾಯಪಟ್ಟರು.

ಪೇಟೆಂಟ್‌ಗೆ ಅರ್ಜಿ: `ನಾನು ಓದಿದ್ದು ಬಿ.ಎ. ಪ್ಲಾಸ್ಟಿಕ್ ಅಚ್ಚು (ಮೌಲ್ಡ್) ತಯಾರಿಸುವ ಎರಡು ಕಾರ್ಖಾನೆಗಳಲ್ಲಿನ ಸಂಶೋಧನಾ ವಿಭಾಗದಲ್ಲಿ. ಕೆಲವು ವರ್ಷ ಕೆಲಸ ಮಾಡಿದೆ. ಆ ಅನುಭವದ ಆಧಾರದಲ್ಲಿ ನಾನು ಮಳೆ ನೀರಿನ ಸಂಗ್ರಹಕ್ಕಾಗಿ ಫಿಲ್ಟರ್ ತಯಾರಿಸಿದೆ~ ಎಂದು ಅವರು ಹೇಳಿದರು.

`ಫಿಲ್ಟರ್ ಅಭಿವೃದ್ಧಿಪಡಿಸಿದ ಮೇಲೆ ಜಲಮಂಡಳಿ ಅಧಿಕಾರಿಗಳನ್ನು ಭೇಟಿ ಮಾಡಿ ಸುಲಭ ವಿಧಾನದ ಬಗ್ಗೆ ವಿವರಿಸಿದೆ. ಸಂಗ್ರಹವಾದ ನೀರು ಬಳಕೆಗೆ ಯೋಗ್ಯವೇ ಎಂಬುದನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಎಂದು ನನಗೆ ಸಲಹೆ ನೀಡಿದರು. ಅದರಂತೆ ನಾನು ಸಂಗ್ರಹಿಸಿದ ಮಳೆ ನೀರನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಂತರ್ಜಲ ಘಟಕದಿಂದ ಪರೀಕ್ಷೆಗೆ ಒಳಪಡಿಸಿದೆ.
 
ಘಟಕವು ನೀಡಿದ ವರದಿಯು ಅಡುಗೆ ಮತ್ತು ಕುಡಿಯುವುದಕ್ಕೆ ಹೊರತುಪಡಿಸಿ ಉಳಿದೆಲ್ಲ ಉದ್ದೇಶಗಳಿಗೆ ಬಳಸಲು ನೀರು ಯೋಗ್ಯವಾಗಿದೆ ಎಂದು ದೃಢಪಡಿಸಿತು. ಈ ನೀರನ್ನು ಬ್ಯಾಕ್ಟೀರಿಯಾ ನಿವಾರಕ ಫಿಲ್ಟರ್‌ನಲ್ಲಿ ಶುದ್ಧೀಕರಿಸುವ ಮೂಲಕ ಕುಡಿಯುವ ಮತ್ತು ಅಡುಗೆ ಉದ್ದೇಶಕ್ಕೂ ಉಪಯೋಗಿಸಬಹುದು~ ಎಂದು ಅವರು ವಿವರಿಸಿದರು.

`ನಾನು ಈ ವಿಧಾನಕ್ಕೆ ಸುಲಭ ಮಳೆ ನೀರು ಸಂಗ್ರಹ ವ್ಯವಸ್ಥೆ ಎಂದು ಕರೆದಿದ್ದು, ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿದ್ದೇನೆ~ ಎಂದು ಅವರು ತಿಳಿಸಿದರು.

ವಿವರಗಳಿಗೆ ಮೊಬೈಲ್: 9742015060 ಅನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT