ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿವಾಣ ಬೇಕೇಬೇಕು

Last Updated 18 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಕಾರು ಚಾಲನೆ ಮಾಡಿ ಜನರ ಸಾವಿಗೆ ಕಾರಣವಾಗುವ ಪ್ರಕರಣಗಳು ಹೆಚ್ಚುತ್ತಿದ್ದು ಇದರ ನಿಯಂತ್ರಣಕ್ಕೆ ತಕ್ಷಣದ ಮತ್ತು ಪರಿಣಾಮಕಾರಿ ಕ್ರಮ ಅತ್ಯಗತ್ಯ. ಇತ್ತೀಚಿನ ಉದಾಹರಣೆ ಎಂದರೆ ಬೊಮ್ಮನಹಳ್ಳಿ ನಗರಸಭೆಯ ಮಾಜಿ ಅಧ್ಯಕ್ಷ ಕೃಷ್ಣಪ್ಪ ಅವರ ಕಾರಿಗೆ ಸಿಲುಕಿ ನಾಲ್ಕು ಜನರು ಮೃತಪಟ್ಟ ಘಟನೆ.

ಇಲ್ಲಿ ಕಾರು ಏಕಾಏಕಿ ಪಾದಚಾರಿ ಮಾರ್ಗಕ್ಕೆ ನುಗ್ಗಿ ತರಕಾರಿ ಕೊಳ್ಳಲು, ಮಾರಾಟ ಮಾಡಲು ನಿಂತವರು, ದಾರಿಹೋಕರು ಬಲಿಯಾಗಿದ್ದಾರೆ. ಪೊಲೀಸರು ಕೃಷ್ಣಪ್ಪ ವಿರುದ್ಧ ಮೊಕದ್ದಮೆ ದಾಖಲು ಮಾಡಿದ್ದಾರೆ. 

ಹಾಗೆಯೇ ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರಾಧ್ಯಾಪಕಿ, ಬ್ರೇಕ್ ತುಳಿಯುವ ಬದಲು ಆಕ್ಸಲೇಟರ್ ತುಳಿದ ಕಾರಣ ಕಾರು ನಿಯಂತ್ರಣ ತಪ್ಪಿ ಮೂವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಮತ್ತೊಂದು ಉದಾಹರಣೆಯಲ್ಲಿ, ಮಧ್ಯರಾತ್ರಿ ವೇಳೆ ಬೆಂಗಳೂರಿನಲ್ಲಿ ಪಾನಮತ್ತನಾಗಿ ಕಾರು ಚಾಲನೆ ಮಾಡುತ್ತಿದ್ದ ಯುವಕನನ್ನು ತಡೆದ ಪೊಲೀಸ್ ಅಧಿಕಾರಿಯ ಮೇಲೆ ಯುವಕನ ಜೊತೆಗಿದ್ದ ಯುವತಿ ಕಾರು ಹರಿಸಲು ಯತ್ನಿಸಿದ ಘಟನೆ ಕೂಡ ನಡೆದಿದೆ. ಇಂತಹ ಪ್ರಕರಣಗಳು ಬೆಳೆಯುತ್ತಿರುವ ಬೆಂಗಳೂರು ನಗರದ ದೊಡ್ಡ ಸಮಸ್ಯೆಗಳಾಗಿ ಬೆಳೆಯುತ್ತಿರುವುದು ಆತಂಕಕಾರಿ.

ಪಾನಮತ್ತರ ವಾಹನ ಚಾಲನೆಗೆ ಪೂರ್ಣವಿರಾಮ ಹಾಕಲು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಅವಧಿಯನ್ನು ಬೆಳಗಿನ ಜಾವ 4ಗಂಟೆಯವರೆಗೆ ವಿಸ್ತರಿಸುವುದಾಗಿ ಪೊಲೀಸ್ ಕಮಿಷನರ್ ಹೇಳಿದ್ದಾರೆ. ಆದರೆ ಇದು ಪರಿಹಾರವಾಗದು. ವಾಹನ ದಟ್ಟಣೆ ಜಾಸ್ತಿ ಇರುವಾಗಲೇ ಪಾನಮತ್ತರಾಗಿ ವಾಹನ ಓಡಿಸುವವರ ಸಂಖ್ಯೆಯೇನೂ ಕಡಿಮೆ ಇಲ್ಲ.

ಕುಡಿದು ವಾಹನ ಓಡಿಸುವವರ ವಿರುದ್ಧ ಕಠಿಣ ಕ್ರಮದ ಜತೆಗೆ ವಾಹನ ಚಾಲನೆಯ ಸಂದರ್ಭದಲ್ಲಿ ಲೈಸನ್ಸ್ ನೀಡುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ಯಾರು ಬೇಕಾದರೂ ಸುಲಭವಾಗಿ ಲೈಸೆನ್ಸ್ ಪಡೆಯುವ ಸ್ಥಿತಿ ಇಂದು ಇದೆ. ಚಾಲನೆಯಲ್ಲಿ ಸಾಕಷ್ಟು ಪರಿಣತಿ ಇರುವವರೇ ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಓಡಿಸಲು ಹಿಂದೆಮುಂದೆ ನೋಡುತ್ತಿರುವಾಗ ಹೊಸದಾಗಿ ಚಾಲನೆಯ ಲೈಸೆನ್ಸ್ ಪಡೆದವರು ಓಡಿಸುವ ಪರಿ ದಿಗಿಲು ಹುಟ್ಟಿಸುತ್ತದೆ. ರಸ್ತೆಗಳ ಹಳ್ಳದಿಣ್ಣೆಗಳೂ ಅಪಘಾತ ಹೆಚ್ಚಳಕ್ಕೆ ಕಾರಣವಾಗುತ್ತಿವೆ.

ಜೀವನ ಮಟ್ಟ ಸುಧಾರಣೆಯಿಂದ ಸಹಜವಾಗಿ ವಾಹನಗಳ ಖರೀದಿ ಗಣನೀಯವಾಗಿ ಹೆಚ್ಚಿದೆ. ಕುಟುಂಬಕ್ಕೆ ಒಂದರ ಬದಲು ಎರಡು ಮೂರು ವಾಹನಗಳು ಸಾಮಾನ್ಯವಾಗಿವೆ. ಕಾರು ಖರೀದಿಸಲು ಸುಲಭ ಕಂತಿನಲ್ಲಿ ಸಾಲ ಕೊಡುವ ಹಣಕಾಸು ಸಂಸ್ಥೆಗಳ ಮಧ್ಯೆ ತೀವ್ರ ಪೈಪೋಟಿ ಕೂಡ ಗಣನೀಯವಾಗಿ ಹೆಚ್ಚಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇವೆಲ್ಲ ಸಹಜ.

ಆದರೆ ಷೋಕಿಗಾಗಿಯೋ, ನಿರ್ಲಕ್ಷ್ಯದಿಂದಲೋ  ಅತೀವೇಗದಿಂದ ವಾಹನ ಓಡಿಸಿ ಜೀವಕ್ಕೆ ಕುತ್ತುತರುವುದು ಎಷ್ಟರಮಟ್ಟಿಗೆ ಸರಿ ? ಪೊಲೀಸರು ಇಂತಹ ವೇಗಿಗಳ ವಿರುದ್ಧ ತೀವ್ರ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಸುರಕ್ಷಿತ ವಾಹನ ಚಾಲನೆ ಹಾಗೂ ರಸ್ತೆ ಸಂಚಾರ ನಿಯಮಗಳ ಬಗ್ಗೆ ಜನರಲ್ಲೂ ಜಾಗೃತಿ ಹೆಚ್ಚಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT