ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು: ಕೃಷಿ ಚಟುವಟಿಕೆ ಬಿರುಸು

Last Updated 5 ಜುಲೈ 2013, 8:13 IST
ಅಕ್ಷರ ಗಾತ್ರ

ಕಡೂರು: ತಾಲ್ಲೂಕಿನಲ್ಲಿ ಬಿತ್ತನೆಗೆ ಪೂರಕವಾಗಿ ಉತ್ತಮ ಮಳೆಯಾಗಿದೆ. ತಾಲ್ಲೂಕಿನ ಬಹುತೇಕ ಕಡೆ ಕೃಷಿ ಚಟುವಟಿಕೆ ಬಿರುಸುಗೊಂಡಿದ್ದು, ಶೇ.45ರಷ್ಟು ಪ್ರದೇಶದಲ್ಲಿ ಬಿತ್ತನೆ ಆಗಿದೆ. ಬಿತ್ತನೆಯಾದ ಬೀಜ ಮೊಳಕೆಯೊಡೆಯುತ್ತಿರುವುದರಿಂದ ರೈತರೂ ಸಂತಸದಲ್ಲಿದ್ದಾರೆ.

ತಾಲ್ಲೂಕಿನಲ್ಲಿ 2013-14ನೇ ಸಾಲಿಗೆ 69,200 ಹೆಕ್ಟೆರ್ ಪ್ರದೇಶದಲ್ಲಿ ನೆಲಗಡಲೆ, ಎಳ್ಳು, ಮುಸುಕಿನ ಜೋಳ, ಬಿಳಿಜೋಳ, ಸೂರ್ಯಕಾಂತಿ, ಹೆಸರು, ಉದ್ದು, ತೊಗರಿ, ಅಲಸಂದೆ, ಹರಳು, ಉಚ್ಚೆಳ್ಳು, ಹೈಬ್ರೀಡ್ ಹತ್ತಿ ಮತ್ತು ಕಬ್ಬು ಬಿತ್ತನೆಯ ಗುರಿ ಹೊಂದಲಾಗಿದೆ. ಜೂನ್ ತಿಂಗಳ ಅಂತ್ಯಕ್ಕೆ 25,492 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆಕಾರ್ಯ ಮುಗಿದಿತ್ತು.

ಕಡೂರು ಕಸಬಾ ಹೋಬಳಿಯಲ್ಲಿ ಮುಸುಕಿನ ಜೋಳ, ಹತ್ತಿ, ನೆಲಗಡಲೆ, ಹೆಸರು ಮತ್ತು ಸೂರ್ಯಕಾಂತಿ ಪ್ರಮುಖವಾಗಿ ಬಿತ್ತನೆಯಾಗಿದ್ದರೆ, ಬೀರೂರು ಹೋಬಳಿಯಲ್ಲಿ ಮುಸುಕಿನ ಜೋಳ, ಹೆಸರು, ನೆಲಗಡಲೆ, ಈರುಳ್ಳಿ ಮತ್ತು ಸೂರ್ಯಕಾಂತಿ, ಹಿರೇನಲ್ಲೂರಿನಲ್ಲಿ ಎಳ್ಳು, ಮುಸುಕಿನ ಜೋಳ, ಯಗಟಿ ಹೋಬಳಿಯಲ್ಲಿ ಹೆಸರು, ಎಳ್ಳು, ಈರುಳ್ಳಿ, ಸೂರ್ಯಕಾಂತಿ, ಸಿಂಗಟಗೆರೆ ಹೋಬಳಿಯಲ್ಲಿ ಬಿಳಿಜೋಳ, ಉದ್ದು, ಹೆಸರು, ಎಳ್ಳು, ಈರುಳ್ಳಿ, ಸಖರಾಯಪಟ್ಟಣದಲ್ಲಿ ಮುಸುಕಿನ ಜೋಳ, ಎಳ್ಳು ಮತ್ತು ಕಬ್ಬು ಬಿತ್ತನೆಯಾಗಿದೆ. ಪಂಚನಹಳ್ಳಿ ಹೋಬಳಿಯಲ್ಲಿ ಹೆಸರು, ಎಳ್ಳು, ಉದ್ದು, ಚೌಳಹಿರಿಯೂರಿನಲ್ಲಿ ಹೆಸರು, ನೆಲಗಡಲೆ, ಎಳ್ಳು ಪ್ರಮುಖವಾಗಿ ಬಿತ್ತನೆ ಆಗಿವೆ.

ಈ ಬಾರಿ ಮಳೆ ಉತ್ತಮವಾಗಿ ಆಗಿದ್ದು ರೈತರು ಉತ್ಸಾಹದಿಂದಲೇ ಕೃಷಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಈ ಮಾಸಾಂತ್ಯದ ವೇಳೆಗೆ ಬಿತ್ತನೆ ಕಾರ್ಯ ಇನ್ನೂ ಚುರುಕುಗೊಂಡು ರಾಗಿ, ಅವರೆ, ಉಚ್ಚೆಳ್ಳು ಮತ್ತು ಇನ್ನಷ್ಟು ಪ್ರದೇಶಗಳಲ್ಲಿ ಮುಸುಕಿನ ಜೋಳ ಬಿತ್ತನೆ ಆಗುವ ನಿರೀಕ್ಷೆಯನ್ನು ಕೃಷಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಬಿತ್ತನೆ ಆಗಿರುವ ಸುಮಾರು 25,500 ಹೆಕ್ಟೆರ್ ಪ್ರದೇಶದಲ್ಲಿ 12,580 ಹೆಕ್ಟೆರ್‌ನಲ್ಲಿ ಏಕದಳ ಧಾನ್ಯಗಳಾದ ಹೈಬ್ರಿಡ್‌ಜೋಳ ಮತ್ತು ಮುಸುಕಿನ ಜೋಳ ಬಿತ್ತನೆ ಆಗಿದ್ದರೆ, ಸುಮಾರು 3950 ಹೆಕ್ಟೆರ್ ಪ್ರದೇಶದಲ್ಲಿ ಹೆಸರು, ಉದ್ದು ಮತ್ತು ಅಲಸಂದೆ ಬಿತ್ತನೆಯಾಗಿದೆ. ಎಣ್ಣೆಕಾಳುಗಳಾದ ನೆಲಗಡಲೆ, ಸೂರ್ಯಕಾಂತಿ ಮತ್ತು ಎಳ್ಳು 8600 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಬೆಳೆವಿಮೆ ವಿಚಾರದಲ್ಲಿ ರಾಷ್ಟ್ರೀಯ ಕೃಷಿ ವಿಮಾಯೋಜನೆಯು ಎಲ್ಲ ಹೋಬಳಿಗಳಲ್ಲಿ ಲಭ್ಯವಿದ್ದು ಆಗಸ್ಟ್ 31ರ ಒಳಗೆ ರೈತರು ವಿಮಾ ಕಂತು ಪಾವತಿಸಬಹುದು. ಹವಾಮಾನ ಆಧಾರಿತ ಬೆಳೆವಿಮೆ ಕ್ಷೇತ್ರಗಳಾದ ಹಿರೇನಲ್ಲೂರು, ಕಡೂರು ಕಸಬಾ ಮತ್ತು ಚೌಳಹಿರಿಯೂರು ವ್ಯಾಪ್ತಿಯ ರೈತರು ಇದೇ 31ರ  ಒಳಗೆ ವಿಮೆ ಕಂತು ಪಾವತಿಸಬಹುದು. ರಸಗೊಬ್ಬರ ಮತ್ತು ಬಿತ್ತನೆ ಬೀಜಗಳು ಅಗತ್ಯ ಪ್ರಮಾಣದಲ್ಲಿ ದಾಸ್ತಾನಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಲ್ಲೂಕಿನಲ್ಲಿ ಮೇ ತಿಂಗಳಿನಲ್ಲಿ ಸರಾಸರಿ ಪ್ರಮಾಣ 84ಮಿ.ಮೀ ಗಿಂತ  ಉತ್ತಮ ಮಳೆ ಆಗಿದ್ದು, ಜೂನ್ ತಿಂಗಳಿನಲ್ಲಿ ಪಂಚನಹಳ್ಳಿ ಹೋಬಳಿಯಲ್ಲಿ ಮಾತ್ರ ಕಡಿಮೆ ಪ್ರಮಾಣದ ಮಳೆ ಆಗಿದೆ. ಉಳಿದ ಹೋಬಳಿಗಳಲ್ಲಿ ಯಗಟಿ, ಸಿಂಗಟಗೆರೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ 14 ಮಿ.ಮೀ ಕಡಿಮೆ ಮಳೆ ಆಗಿದ್ದು ಇನ್ನುಳಿದ ಕಡೆ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT