ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡ್ಡಾಯ ಶಿಕ್ಷಣ ಕಾಯ್ದೆಗೆ ರಾಜಧಾನಿಯಲ್ಲೇ ಸವಾಲು!

Last Updated 9 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳು ವಿವಿಧ ನೆಪವೊಡ್ಡಿ ಕಡ್ಡಾಯ ಶಿಕ್ಷಣ ಕಾಯ್ದೆ ಅನುಷ್ಠಾನಕ್ಕೆ ತಗಾದೆ ತೆಗೆಯುತ್ತಿರುವ ಹಿನ್ನೆಲೆಯಲ್ಲಿ ಕಾಯ್ದೆ ಅನುಷ್ಠಾನಕ್ಕೆ ರಾಜಧಾನಿಯಲ್ಲೇ ಹೆಚ್ಚು ಸವಾಲು ಎದುರಾಗಿದೆ.
ಶಾಲೆಗಳ ಆರಂಭಕ್ಕೆ ದಿನಗಣನೆ ಆರಂಭಗೊಂಡಿದ್ದು, ನೆರೆಹೊರೆಯ ಶಾಲೆಯ ಗುರುತಿಸುವಿಕೆಯಲ್ಲಿ ಪೋಷಕರಿಂದ ತಕರಾರು ಎದುರಾಗಲಾರಂಭಿಸಿದೆ.

ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, (ಡಿಡಿಪಿಐ) ಕ್ಷೇತ್ರ ಶಿಕ್ಷಣಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಲಾಗಿದೆ. ಸರ್ಕಾರ ದಿನಕ್ಕೊಂದು ಆದೇಶ ಹೊರಡಿಸುತ್ತಿದ್ದು, ಕಾಯ್ದೆಯ ಪೂರ್ಣ ಚಿತ್ರಣ ಇನ್ನೂ ದೊರಕಿಲ್ಲ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆ, ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ 5 ಕಿ.ಮೀ. ವ್ಯಾಪ್ತಿ ಒಳಗೆ ಪ್ರೌಢಶಾಲೆ ಇರಬೇಕು. ನಗರ ಪ್ರದೇಶದಲ್ಲಿ ವಾರ್ಡ್ ವ್ಯಾಪ್ತಿಯಲ್ಲಿ ಶಾಲೆ ಇರಬೇಕು ಎಂಬುದಾಗಿ ಕಾಯ್ದೆಯಲ್ಲಿ ಮಾನದಂಡ ನಿಗದಿಪಡಿಸಲಾಗಿದೆ. ಈ ಮಾನದಂಡದಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮೀಸಲಿಟ್ಟ ಸೀಟುಗಳ (ಶೇ 25 ಸೀಟು ಮೀಸಲು) ಸಂಖ್ಯೆ ಎಷ್ಟು ಎಂಬುದನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಇದೇ 10ರೊಳಗೆ ಪ್ರಕಟಿಸಬೇಕು. ಇದೇ 25ರ ವರೆಗೆ ಅರ್ಜಿಗಳನ್ನು ಸ್ವೀಕರಿಸಬೇಕು.

ಆಯ್ಕೆ ಪ್ರಕ್ರಿಯೆಯನ್ನು ಮೇ 30ರಿಂದ ಜೂನ್ 5ರ ನಡುವೆ ನಡೆಸಬೇಕು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜೂನ್ 10ರೊಳಗೆ ಅಂತಿಮ ಪಟ್ಟಿಯನ್ನು ಪ್ರಕಟಿಸಬೇಕು ಎಂಬುದಾಗಿ ಸೂಚಿಸಲಾಗಿದೆ. ಇದರಿಂದಾಗಿ ಹಿಂದುಳಿದ ವಿದ್ಯಾರ್ಥಿಗಳ ಶಾಲಾ ಸೇರ್ಪಡೆ ಪ್ರಕ್ರಿಯೆ 15 ದಿನಗಳ ಕಾಲ ವಿಳಂಬವಾಗಲಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. 

`ರಾಜ್ಯದಲ್ಲಿರುವ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಒಟ್ಟು ಸಂಖ್ಯೆ 10,961. ಬೆಂಗಳೂರು ನಗರವೊಂದಲ್ಲೇ ಸುಮಾರು ಮೂರು ಸಾವಿರಕ್ಕೂ ಅಧಿಕ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿವೆ. ಗ್ರಾಮೀಣ ಪ್ರದೇಶದಲ್ಲಿ ನೆರೆಹೊರೆಯ ಶಾಲೆಗಳನ್ನು ಗುರುತಿಸುವಾಗ ಸಮಸ್ಯೆ ಉಂಟಾಗುವುದಿಲ್ಲ.

ನಗರ ಪ್ರದೇಶಕ್ಕೆ ಬಂದಾಗ ಅಧಿಕಾರಿಗಳಿಗೆ ಹೆಚ್ಚಿನ ಸವಾಲು ಎದುರಾಗುತ್ತದೆ. ನಗರದ ಪ್ರತಿ ವಾರ್ಡ್‌ನಲ್ಲೂ 20ರಷ್ಟು ಶಾಲೆಗಳು ಇವೆ. ಕೆಲವು ವಾರ್ಡ್‌ಗಳಲ್ಲಿ 50ಕ್ಕೂ ಅಧಿಕ ಶಾಲೆಗಳಿವೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನೆರೆಹೊರೆಯ ಶಾಲೆಯ ಆಯ್ಕೆ ಕಷ್ಟಕರ~ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

`ಮನೆ ಸಮೀಪದ ತಮಗೆ ಇಷ್ಟವಾದ ಶಾಲೆಗೆ ತಮ್ಮ ಮಗುವನ್ನು ಕಳುಹಿಸಬೇಕು ಎಂದು ಪೋಷಕರು ಬಯಸುತ್ತಾರೆ. ಮನೆಗೆ ಹೆಚ್ಚು ಸಮೀಪದಲ್ಲಿರುವ ಶಾಲೆಯೇ ಅವರಿಗೆ ಇಷ್ಟವಾಗಬೇಕೆಂದೇನು ಇಲ್ಲ. ಆ ಶಾಲೆ ಪಕ್ಕದ ವಾರ್ಡ್‌ನಲ್ಲಿ ಹಾಗೂ ಒಂದು ಕಿ.ಮೀ.ಗಿಂತ ದೂರದಲ್ಲಿ ಇದ್ದರೆ ಕಾಯ್ದೆಯ ಪ್ರಕಾರ ಆ ಶಾಲೆಗೆ ಸೇರಿಸುವ ಹಾಗಿಲ್ಲ. ಇದರಿಂದಾಗಿ ಪೋಷಕರು ಇಲಾಖೆಯ ವಿರುದ್ಧ ಅಸಮಾಧಾನಗೊಳ್ಳುವುದು ಖಚಿತ~ ಎಂದು ಅವರು ಅಭಿಪ್ರಾಯಪಟ್ಟರು.  

`ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಕಾಯ್ದೆಯಿಂದ ಹೊರಟ್ಟಿರುವುದರಿಂದಲೂ ಗೊಂದಲ ಸೃಷ್ಟಿಯಾಗಬಹುದು. ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಪೈಕಿ ಶೇ 50ಕ್ಕೂ ಅಧಿಕ ಸಂಸ್ಥೆಗಳು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಎಂದು ಅಂದಾಜಿಸಲಾಗಿದೆ. ಒತ್ತಡ ತಂದು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಎಂಬ ಪ್ರಮಾಣಪತ್ರ ಪಡೆದು ವಿದ್ಯಾರ್ಥಿ ಸೇರ್ಪಡೆಯಿಂದ ವಿನಾಯಿತಿ ಪಡೆಯುವ ಸಾಧ್ಯತೆ ಇದೆ.

ಈ ಬಗ್ಗೆಯೂ ಎಚ್ಚರ ವಹಿಸಬೇಕಿದೆ~ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಎಚ್ಚರಿಸಿದರು.
 `ಈ ಕಾನೂನು ಜಾರಿಯಿಂದ ನಗರ ಪ್ರದೇಶದಲ್ಲಿರುವ ಖಾಸಗಿ ಶಾಲೆಗಳಿಗೆ ಹೆಚ್ಚು ಲಾಭವಾಗಲಿದೆ. ಹಿಂದುಳಿದ ವರ್ಗದ ವಿದ್ಯಾರ್ಥಿಯ ಸೇರ್ಪಡೆ ವೇಳೆಗೆ ಖಾಸಗಿ ಸಂಸ್ಥೆಗೆ ಶಿಕ್ಷಣ ಇಲಾಖೆ ವರ್ಷಕ್ಕೆ ಶುಲ್ಕ ರೂಪದಲ್ಲಿ ರೂ. 11,848 ಪಾವತಿಸುತ್ತದೆ.

ಇದರಿಂದ ಖಾಸಗಿ ಶಾಲೆಗಳಿಗೆ ಹಣದ ಜತೆಗೆ ವಿದ್ಯಾರ್ಥಿಗಳನ್ನು ನೀಡಿ ಪ್ರೋತ್ಸಾಹ ಮಾಡಿದಂತೆ ಆಗುತ್ತದೆ. ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಕಾಯ್ದೆ ಜಾರಿಗೆ ಬಂದ ಬಳಿಕ ಸಮಸ್ಯೆಯ ಗಂಭೀರತೆ ಅರಿವಾಗುತ್ತದೆ~ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

`ಈ ವಿದ್ಯಾರ್ಥಿಗಳನ್ನು ಖಾಸಗಿ ಶಾಲೆಗೆ ಒಂದನೇ ತರಗತಿಗೆ ಸೇರಿಸಲು ಅವಕಾಶ ಇದೆ ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ. ಆಗ ಖಾಸಗಿ ಶಾಲೆಯ ಮೂಲ ವಿದ್ಯಾರ್ಥಿಗಳು (ಎಲ್‌ಕೆಜಿ, ಯುಕೆಜಿಯಿಂದ ಒಂದನೇ ತರಗತಿಗೆ ಬಂದವರು) ಹಾಗೂ ಹಿಂದುಳಿದ ವಿದ್ಯಾರ್ಥಿಗಳ ನಡುವೆ ಅಂತರ ಸೃಷ್ಟಿಯಾಗಲಿದೆ. ಈ ವಿದ್ಯಾರ್ಥಿಗಳನ್ನು ದ್ವಿತೀಯ ದರ್ಜೆಯ ವಿದ್ಯಾರ್ಥಿಗಳಂತೆ ಸಂಸ್ಥೆಗಳು ನೋಡುವ ಸಾಧ್ಯತೆ ಇದೆ.

ಎಲ್‌ಕೆಜಿಯಿಂದಲೇ ಸೇರ್ಪಡೆ ಕಡ್ಡಾಯ ಮಾಡಬೇಕಿತ್ತು~ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.
`ಖಾಸಗಿ ಸಂಸ್ಥೆಗಳು ಶಿಕ್ಷಕರ ಮೂಲಕವೂ ಇಲಾಖೆಗೆ ಒತ್ತಡ ತರಲು ಆರಂಭಿಸಿವೆ. ತರಗತಿಯಲ್ಲಿ ಬೈದರೆ, ದಂಡಿಸಿದರೆ ವಿದ್ಯಾರ್ಥಿಗಳು ತಕರಾರು ಎತ್ತುವ ಸಾಧ್ಯತೆ ಇದೆ ಎಂದು ಖಾಸಗಿ ಶಾಲೆಗಳ ಶಿಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಕೆಲವು ಶಿಕ್ಷಕರು ಪಾಠ ಮಾಡಲು ಹಿಂದೇಟು ಹಾಕಿದ್ದಾರೆ. ಒಟ್ಟಾರೆ ಹಿಂದುಳಿದ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಅವರಿಗೆ ಇಷ್ಟ ಇಲ್ಲ ಎಂಬುದು ಈ ಮೂಲಕ ಗೊತ್ತಾಗುತ್ತದೆ~ ಎಂದು ಅವರು ಗಮನ ಸೆಳೆದರು.

`ಪರಿಣಾಮಕಾರಿ ಅನುಷ್ಠಾನ ಕಷ್ಟ~: ಹೆಚ್ಚಿನ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ವರ್ಷದಿಂದಲೇ ಕಾಯ್ದೆಯನ್ನು ಕಡ್ಡಾಯವಾಗಿ ಜಾರಿಗೆ ತರುವುದು ಬೇಡ ಎಂಬುದು ಖಾಸಗಿ ಶಿಕ್ಷಣ ಸಂಸ್ಥೆಗಳ ವಾದ. ಕಾಯ್ದೆಯಲ್ಲಿ ಲೋಷದೋಷಗಳಿದ್ದು, ಪರಿಣಾಮಕಾರಿ ಅನುಷ್ಠಾನ ಕಷ್ಟ ಎಂಬುದು ಅವರ ಅಭಿಮತ.

`ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅತ್ಯುತ್ತಮ ಯೋಜನೆ. ಈ ಯೋಜನೆ ಈ ಹಿಂದೆಯೇ ರಾಜ್ಯದಲ್ಲಿ ಜಾರಿಗೆ ಬರಬೇಕಿತ್ತು. ಕಾಯ್ದೆಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಲೇಬೇಕು. ಕಾಯ್ದೆ ಅನುಷ್ಠಾನದಿಂದ ಪ್ರತಿಷ್ಠಿತ ಉತ್ತಮ ಶಾಲೆಗಳಲ್ಲಿ ಕಲಿಯುವ ಹಿಂದುಳಿದ ವರ್ಗದ ಮಕ್ಕಳ ಕನಸು ನನಸಾಗಲಿದೆ~ ಎಂದು ಹೆಬ್ಬಾಳದ ಸುಮಾ ಪಬ್ಲಿಕ್ ಸ್ಕೂಲ್ ಮುಖ್ಯಸ್ಥ ರಮೇಶ್ ಅಭಿಪ್ರಾಯಪಟ್ಟರು.

`ಸಾಕಷ್ಟು ಪೂರ್ವಸಿದ್ಧತೆ ನಡೆಸದೆ ಕಾಯ್ದೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ದಿಕ್ಕು ತೋಚದ ಪರಿಸ್ಥಿತಿ ಉಂಟಾಗಿದೆ. ಹಿಂದುಳಿದ ಮಕ್ಕಳನ್ನೇ ಗುರುತಿಸುವುದು ದೊಡ್ಡ ಸವಾಲು. ಶಿಕ್ಷಣ ಇಲಾಖೆ ಅಥವಾ ಕಂದಾಯ ಇಲಾಖೆಯು ಹಿಂದುಳಿದ ಮಕ್ಕಳನ್ನು ಗುರುತಿಸುತ್ತದಾ ಎಂಬುದು ಪ್ರಶ್ನೆ. ಇಲ್ಲೂ ಸಹ ರಾಜಕೀಯ ಒತ್ತಡಕ್ಕೆ ಮಣಿದು ಹಿಂದುಳಿದ ಮಕ್ಕಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ. ಶಿಕ್ಷಣ ಇಲಾಖೆಯೇ ಹಿಂದುಳಿದವರ ವರ್ಗೀಕರಿಸಿ ಪ್ರಮಾಣಪತ್ರ ನೀಡಿ ಮಕ್ಕಳನ್ನು ಆಯಾ ಶಾಲೆಗೆ ಕಳುಹಿಸಿಕೊಟ್ಟರೆ ಸಮಸ್ಯೆ ಬಗೆಹರಿಸಬಹುದು~ ಎಂಬುದು ಅವರ ಸಲಹೆ.

`ನಗರದಲ್ಲಿ ಒಬ್ಬ ವಿದ್ಯಾರ್ಥಿಗೆ ವರ್ಷಕ್ಕೆ ರೂ ಮೂರು ಲಕ್ಷ ಶುಲ್ಕ ಪಡೆಯುವ ಪ್ರತಿಷ್ಠಿತ ಶಾಲೆಗಳು ಇವೆ. ಆ ಶಾಲೆಗಳಿಗೆ ಸಾಮಾಜಿಕ ಕಳಕಳಿ ಇಲ್ಲ. ಅಲ್ಲಿನ ಆಡಳಿತ ಮಂಡಳಿಯವರು ಬಡ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುತ್ತಾರಾ ಎಂಬುದು ದೊಡ್ಡ ಸವಾಲು. ನಗರ ಪ್ರದೇಶಗಳಲ್ಲಿ ಅಧಿಕಾರಿಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಅವರು ನೆರೆಹೊರೆಯ ಶಾಲೆಯ ಪಟ್ಟಿಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾದರೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಅಂತರ ಮತ್ತಷ್ಟು ಜಾಸ್ತಿ ಆಗುತ್ತದೆ~ ಎಂದು ಅವರು ಪ್ರತಿಪಾದಿಸಿದರು.

`ಖಾಸಗಿ ಶಾಲೆಗಳಲ್ಲಿ ದಾಖಲಾತಿಯದ್ದೇ ದೊಡ್ಡ ಸಮಸ್ಯೆ. ಹೆಚ್ಚಿನ ಶಾಲೆಗಳು ದಾಖಲಾತಿ ಪೂರ್ಣಗೊಳಿಸಿವೆ. ಸರ್ಕಾರ ತರಾತುರಿಯಲ್ಲಿ ಅನುಷ್ಠಾನಗೊಳಿಸಲು ಹೊರಟಿರುವುದು ಅವೈಜ್ಞಾನಿಕ. ನಗರ ವ್ಯಾಪ್ತಿಯ ಶೇ 90ಕ್ಕೂ ಅಧಿಕ ಖಾಸಗಿ ವಿದ್ಯಾಸಂಸ್ಥೆಗಳು ಪೂರ್ವ ಪ್ರಾಥಮಿಕ ವಿಭಾಗ ಹೊಂದಿವೆ. ಎರಡು ವರ್ಷಗಳ ಹಿಂದೆ ಎಲ್‌ಕೆಜಿ, ಯುಕೆಜಿಗೆ ಸೇರ್ಪಡೆಯಾದ ವಿದ್ಯಾರ್ಥಿಗಳು ಈ ಬಾರಿ ಒಂದನೇ ತರಗತಿಗೆ ಬಂದಿರುತ್ತಾರೆ. ಆ ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿ ಪ್ರವೇಶ ನೀಡಬೇಕಾಗುತ್ತದೆ.

ಇಲ್ಲದಿದ್ದರೆ ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಆಗ ಖಾಲಿ ಉಳಿಯುವ ಸೀಟುಗಳು ಬೆರಳೆಣಿಕೆಯಷ್ಟು. ಆ ಸೀಟುಗಳನ್ನು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನ್ಯಾಯಯುತವಾಗಿ ಹಂಚುವುದು ಹೇಗೆ~ ಎಂದು ಖಾಸಗಿ ಸಂಸ್ಥೆಗಳ ಸಂಘಟನೆಯ ಕಾರ್ಯದರ್ಶಿ ಶಶಿಕುಮಾರ್ ಪ್ರಶ್ನಿಸುತ್ತಾರೆ.

`ಹಳ್ಳಿ ಹಾಗೂ ಪಟ್ಟಣ ಪ್ರದೇಶಗಳಲ್ಲಿ ನೆರೆಹೊರೆಯ ಶಾಲೆಗಳನ್ನು ಗುರುತಿಸುವುದು ಕಷ್ಟವಾಗಲಾರದು. ಆದರೆ ನಗರ ಪ್ರದೇಶಕ್ಕೆ ಬಂದಾಗ ಈ ಪ್ರಕ್ರಿಯೆ ಜಟಿಲ ಆಗುತ್ತದೆ. ಶೇ 25ರಷ್ಟು ಸೀಟು ಖಾಲಿ ಇಟ್ಟು ಶೇ 75ರಷ್ಟು ದಾಖಲಾತಿ ಮಾಡಿಕೊಳ್ಳಿ ಎಂದು ಶಿಕ್ಷಣ ಇಲಾಖೆ ಸೂಚಿಸಿದೆ. ಎಲ್ಲ ಶಾಲೆಗಳು ಶೇ 25ರಷ್ಟು ಸೀಟು ಮೀಸಲಿಟ್ಟು ದಾಖಲಾತಿ ಮಾಡಿಕೊಂಡರೂ ಎಷ್ಟು ದಿನ ಕಾಯಲು ಸಾಧ್ಯ. ಕೊನೆಗೆ ವಿದ್ಯಾರ್ಥಿಗಳು ಬಾರದಿದ್ದರೆ ಸಂಸ್ಥೆಗಳಿಗೆ ಆಗುವ ಆರ್ಥಿಕ ನಷ್ಟವನ್ನು ಸರ್ಕಾರ ತುಂಬಿ ಕೊಡುತ್ತದೆಯೇ~ ಎಂದು ಅವರು ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT