ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಗೊಂದಲ- ನ್ಯಾಯಾಂಗ ನಿಂದನೆ ಆರೋಪ

Last Updated 17 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಗೊಂದಲದ ಬಗ್ಗೆ ರಾಜ್ಯ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ) ನಡೆಸುತ್ತಿರುವ ಶಾಲಾ ಬಂದ್ ವಿರೋಧಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದವು.

ನಗರದ ಪುರಭವನದ ಎದುರು ಪ್ರತಿಭಟನೆ ನಡೆಸಿದ ಕರ್ನಾಟಕ ವಿದ್ಯಾರ್ಥಿಗಳ ಪೋಷಕರ ಜಾಗೃತಿ ವೇದಿಕೆಯ ಸದಸ್ಯರು, ಕುಸ್ಮಾ ಬಂದ್ ನಡೆಸುವ ಮೂಲಕ ಅಮಾಯಕ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕಿಗೆ ಧಕ್ಕೆತಂದಿದೆ ಎಂದು ಆರೋಪಿಸಿದರು.

`ಕಾಯ್ದೆಯ ಅನುಷ್ಠಾನದ ಬಗ್ಗೆ ಗೊಂದಲವಿದ್ದರೆ ಅದನ್ನು ಸರ್ಕಾರದ ಜೊತೆಗೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕಿತ್ತು. ಆದರೆ ಕುಸ್ಮಾ ಶಾಲೆಗಳ ಬಂದ್ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಖಾಸಗಿ ಶಾಲೆಗಳಲ್ಲಿ ಅನುಷ್ಠಾನಕ್ಕೆ ತರುವಂತೆ ಸುಪ್ರೀಂಕೋರ್ಟ್‌ನ ನಿರ್ದೇಶನವಿದ್ದರೂ ಅದನ್ನು ಉಲ್ಲಂಘಿಸಿ ಬಂದ್ ನಡೆಸುತ್ತಿರುವುದು ನ್ಯಾಯಾಂಗ ನಿಂದನೆಯಾಗಿದೆ~ ಎಂದು ವೇದಿಕೆಯ ಅಧ್ಯಕ್ಷ ರವಿ ಹೇಳಿದರು.

ಬಂದ್‌ನಿಂದ ಶಾಲೆಗಳಿಗೆ ಹೋಗದ ಮಕ್ಕಳು ಆಟವಾಡುವುದು ಅನಿವಾರ್ಯವಾಗಿದೆ ಎಂದು ಮಕ್ಕಳಿಂದ ಸಾಂಕೇತಿಕವಾಗಿ ಕ್ರಿಕೆಟ್ ಆಟ ಆಡಿಸಲಾಯಿತು.ಆನಂದರಾವ್ ವೃತ್ತದ ಬಳಿಯ ಮಹಾತ್ಮಗಾಂಧಿ ಪ್ರತಿಮೆಯ ಎದುರು ನಗರ ಯುವ ಕಾಂಗ್ರೆಸ್ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

`ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದು ಎರಡು ವರ್ಷಗಳಾದರೂ ಕಾಯ್ದೆಯನ್ನು ರಾಜ್ಯದಲ್ಲಿ ಈಗ ಅನುಷ್ಠಾನಕ್ಕೆ ತರಲಾಗಿದೆ. ಆದರೆ, ಈಗ ಕುಸ್ಮಾ ಕಾಯ್ದೆ ಅನುಷ್ಠಾನಕ್ಕೆ ಅಡ್ಡಗಾಲು ಹಾಕುತ್ತಿದೆ. ಇದು ಕಾನೂನು ಬಾಹಿರ. ಕುಸ್ಮಾ ಕರೆ ನೀಡಿರುವ ಬಂದ್ ಸಮಾಜ ವಿರೋಧಿಯಾದುದು~ ಎಂದು ಸಮಿತಿಯ ಅಧ್ಯಕ್ಷ ಡಿ.ಎ.ಪ್ರಮೋದ್‌ಶಂಕರ್ ಹೇಳಿದರು.

`ಬಂದ್ ಮೂಲಕ ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿರುವ ಕುಸ್ಮಾ ಸಂಘಟನೆಯನ್ನು ಸರ್ಕಾರ ವಜಾಗೊಳಿಸಬೇಕು. ಕಾಯ್ದೆಯನ್ನು ಅನುಷ್ಠಾನಕ್ಕೆ ತರದ ಶಾಲೆಗಳನ್ನು ಗುರುತಿಸಿ ಅವುಗಳನ್ನು ಸರ್ಕಾರ ವಶಕ್ಕೆ ತೆಗೆದುಕೊಳ್ಳಬೇಕು~ ಎಂದು ಅವರು ಒತ್ತಾಯಿಸಿದರು.

ಕುಸ್ಮಾ ಕರೆ ನೀಡಿರುವ ಬಂದ್ ಅನ್ನು ಸಾಮಾಜಿಕ ಪರಿವರ್ತನಾ ಜನಾಂದೋಲನ ಸಂಘಟನೆ ಖಂಡಿಸಿದೆ.
ಬಡ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಅನುಷ್ಠಾನಕ್ಕೆ ತರದ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದುಗೊಳಿಸಬೇಕು. ಬಡ ಮಕ್ಕಳ ಬಗ್ಗೆ ಅಮಾನವೀಯವಾಗಿ ಮಾತನಾಡಿರುವ ಕುಸ್ಮಾ ಅಧ್ಯಕ್ಷ ಜಿ.ಎಸ್.ಶರ್ಮ ಅವರನ್ನು ಬಂಧಿಸಿ, ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣವನ್ನು ದಾಖಲಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಬಡ ಮಕ್ಕಳ ಬಗ್ಗೆ ಜಿ.ಎಸ್.ಶರ್ಮ ನೀಡಿರುವ ಹೇಳಿಕೆಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಮಂಗಳವಾರ ರಾತ್ರಿ ಕಸ್ತೂರಬಾ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಕಸ್ತೂರಬಾ ರಸ್ತೆಯ ಖಾಸಗಿ ವಾಹಿನಿಯಲ್ಲಿ ಚರ್ಚೆಗೆ ಆಗಮಿಸಿದ್ದ ಶರ್ಮ ಅವರ ಕಾರನ್ನು ತಡೆದು ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.

`ಅವಹೇಳನ ಸಲ್ಲ~
`ಕುಸ್ಮಾ ಅಧ್ಯಕ್ಷ ಜಿ.ಎಸ್.ಶರ್ಮ ಬಡ ಮಕ್ಕಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಸರಿಯಲ್ಲ. ಬಡ ಕುಟುಂಬದಿಂದ ಬಂದವರೇ ಸಮಾಜದಲ್ಲಿ ಉನ್ನತ ಸ್ಥಾನ ತಲುಪುತ್ತಾರೆ. ಸಾಧನೆ ಮಾಡಿದ ಮಹನೀಯರಲ್ಲಿ ಬಹುತೇಕರು ಬಡತನದಿಂದ ಬೆಳೆದುಬಂದವರು. ಬಡ ಮಕ್ಕಳ ಬಗ್ಗೆ ಶರ್ಮ ನೀಡಿರುವ ಹೇಳಿಕೆ ಖಂಡನೀಯ~
-ಕೆ.ಎನ್.ಗೋಪಾಲಕೃಷ್ಣ, ಖಾಸಗಿ ಕಂಪೆನಿ ಉದ್ಯೋಗಿ.

ಮಾನವ ಹಕ್ಕುಗಳ ಆಯೋಗಕ್ಕೆ ದೂರು
ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಅನುಷ್ಠಾನಕ್ಕೆ ತರದೇ ರಾಜ್ಯ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ) ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದು, ಕುಸ್ಮಾ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ನಗರ ಯುವ ಕಾಂಗ್ರೆಸ್ ಸಮಿತಿ ಸದಸ್ಯರು ಮಾನವ ಹಕ್ಕುಗಳ ಆಯೋಗಕ್ಕೆ ಮಂಗಳವಾರ ದೂರು ಸಲ್ಲಿಸಿದರು.

ಬಡ ಮಕ್ಕಳ ಬಗ್ಗೆ ಕುಸ್ಮಾ ಅಧ್ಯಕ್ಷ ಜಿ.ಎಸ್.ಶರ್ಮ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ದೂರು ದಾಖಲಿಸಿಕೊಳ್ಳಬೇಕು ಎಂದು ಸದಸ್ಯರು ಆಯೋಗದ ಅಧ್ಯಕ್ಷ ಎಸ್.ಆರ್.ನಾಯಕ್ ಅವರಿಗೆ ಮನವಿ ಸಲ್ಲಿಸಿದ್ದಾರೆ.`ದೂರಿನ ಬಗ್ಗೆ ಪರಿಶೀಲಿಸಿ, ಆಯೋಗದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು~ ಎಂದು ಆಯೋಗದ ಅಧ್ಯಕ್ಷ ಎಸ್.ಆರ್. ನಾಯಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT