ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡ್ಲಬಾಳು ಕಾಲುವೆಗೆ ನೆರವಿನ ಭರವಸೆ

Last Updated 23 ಆಗಸ್ಟ್ 2012, 4:40 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಕಡ್ಲಬಾಳು ಗ್ರಾಮದ ಬಳಿ ಇರುವ ಹಗರಿ ಹಳ್ಳದಲ್ಲಿ 1.5 ಕಿಮೀ ಉದ್ದದ ಕಾಲುವೆ ತೋಡುವ ಮೂಲಕ ತುಂಗಭದ್ರಾ ಹಿನ್ನೀರನ್ನು ಹಿಮ್ಮುಖವಾಗಿ ಹರಿಸಿ ಆ ಮೂಲಕ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾಮದ ರೈತರು ಕೈಗೊಂಡಿರುವ ಮಹತ್ವದ ನೀರಾವರಿ ಪುನಶ್ಚೇತನ ಕಾಮಗಾರಿಗೆ ಜಿ.ಪಂ.ಯ ಡಿಡಿಪಿ ಅನುದಾನದದಲ್ಲಿ ರೂ.2 ಲಕ್ಷ ಒದಗಿಸುವುದಾಗಿ ಜಿ.ಪಂ. ವಿರೋಧ ಪಕ್ಷದ ನಾಯಕ ಎಸ್.ಭೀಮಾ ನಾಯ್ಕ ಭರವಸೆ ನೀಡಿದರು.

ತಾಲ್ಲೂಕಿನ ಕಡ್ಲಬಾಳು ಗ್ರಾಮದ ನೂರಾರು ರೈತರು ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ತಮ್ಮ ಮಿತಿಯಲ್ಲಿ ಸಂಪನ್ಮೂಲ ಕ್ರೋಡೀಕರಿಸಿಕೊಂಡು ಜೊತೆಗೆ ಸಮುದಾಯದ ಸಹಭಾಗಿತ್ವದಲ್ಲಿ ಗ್ರಾಮದ ಪಕ್ಕ ಇರುವ ಹಗರಿ ಹಳ್ಳದಲ್ಲಿ ನಡೆಸಿ ರುವ ಕಾಲುವೆ ತೋಡುವ ಕಾಮಗಾರಿಯನ್ನು ಬುಧವಾರ ಸಂಜೆ ಪರಿಶೀಲಿಸಿ ಬಳಿಕ ಪ್ರಜಾವಾಣಿ ಯೊಂದಿಗೆ ಮಾತನಾಡಿದರು.

ಕಡ್ಲಬಾಳು ಗ್ರಾಮದಿಂದ ಬ್ಯಾಲಾಳು ಗ್ರಾಮದವರೆಗೆ ಹಗರಿ ಹಳ್ಳದಲ್ಲಿ 3 ಕಿಮೀ ಉದ್ದ ಕಾಲುವೆ ತೋಡಿದರೆ ಹೆಚ್ಚಿನ ಪ್ರಮಾಣದಲ್ಲಿ ತುಂಗಭದ್ರಾ ಹಿನ್ನೀರು ಹಳ್ಳದಲ್ಲಿ ಹಿಮ್ಮುಖವಾಗಿ ಹರಿದು ಕಡ್ಲಬಾಳು ಗ್ರಾಮ ಸಹಿತ ಬ್ಯಾಲಾಳು, ಓಬಳಾಪುರ, ಕತ್ಯಾಯನಮರಡಿ, ನಂದೀಪುರ, ಅನಂದದೇವನಹಳ್ಳಿ ಗ್ರಾಮಗಳ 5000ಕ್ಕೂ ಹೆಚ್ಚು ಕೊಳವೆ ಬಾವಿಗಳಲ್ಲಿ ಅಂತರ್ಜಲದ ಮರುಪೂರಣ ಸಾಧ್ಯತೆ ಇದೆ. ಕುಡಿಯುವ ನೀರಿನ ಸಮಸ್ಯೆ ನೀಗುತ್ತದೆ ಎಂದು ತಿಳಿಸಿದರು.

ರೈತರು ಸ್ವಯಂಪ್ರೇರಿತರಾಗಿ ನಡೆಸಿರುವ ಕಾಮಗಾರಿಗೆ ಜಿ.ಪಂ. ಅನುದಾನ ಒದಗಿಸುವ ನಿಟ್ಟಿನಲ್ಲಿ, ಅಧ್ಯಕ್ಷೆ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು  

ಸ್ಥಳಕ್ಕೆ ಭೇಟಿ ನೀಡುವಂತೆ ಒತ್ತಾಯಿಸುತ್ತೇನೆ. ಕಾಮಗಾರಿಗೆ ವೈಯಕ್ತಿಕವಾಗಿ ರೂ. 2 ಲಕ್ಷ ಧನ ಸಹಾಯ ನೀಡುತ್ತೇನೆ ಎಂದು ಪ್ರಕಟಿಸಿದರು.

ಹಿಂದುಳಿದ ತಾಲ್ಲೂಕುಗಳ ಅಭಿವೃದ್ದಿಯ ನಿಟ್ಟಿನಲ್ಲಿ ನಂಜುಂಡಪ್ಪನವರ ವರದಿ ಆಧರಿಸಿ ಕೇಂದ್ರ ಸರಕಾರ ಜಿಲ್ಲೆಯ ಹಡಗಲಿ, ಕೂಡ್ಲಿಗಿ, ಸಂಡೂರು ಮತ್ತು ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳ 414 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಗೆ 221 ಕೋಟಿ ಅನುದಾನ ಒದಗಿಸಿದೆ. ಆದರೆ, ಕ್ಷೇತ್ರದ ಶಾಸಕರಾದ ನೇಮರಾಜನಾಯ್ಕ ಕ್ಷೇತ್ರ ವ್ಯಾಪ್ತಿಯ 78 ಹಳ್ಳಿಗಳಿಗೆ ಕುಡಿಯುವ ನೀರಿನ ಕಾಮಗಾರಿಗೆ ರೂ.125 ಕೋಟಿ ಬಿಡುಗಡೆಯಾಗಿದೆ ಎಂದು ಜನತೆಗೆ ಸುಳ್ಳು ಹೇಳುವ ಮೂಲಕ ತಮ್ಮ ರಾಜಕೀಯ ಅಪ್ರಬುದ್ಧತೆ ಪ್ರದರ್ಶಿಸಿದ್ದಾರೆ ಎಂದು ಲೇವಡಿ ಮಾಡಿದರು.

ಕುಡಿಯುವ ನೀರಿನ ಯೋಜನೆಗೆ ಅನುದಾನ ಬಿಡುಗಡೆ ಮಾಡಿದ್ದು ಕೇಂದ್ರ ಸರಕಾರವೋ ಅಥವಾ ರಾಜ್ಯ ಸರಕಾರವೇ ಎಂದು ನೇಮರಾಜ ನಾಯ್ಕ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.

ಜಿ.ಪಂ.ಸದಸ್ಯ ರೋಗಾಣಿ ಹುಲುಗಪ್ಪ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ವಕ್ತಾರ ಅಕ್ಕಿ ತೋಟೇಶ್, ಜಿಲ್ಲಾ ಕಾರ್ಯದರ್ಶಿ ಹುಡೇದ ಗುರುಬಸವರಾಜ, ತಾ.ಪಂ.ಸದಸ್ಯ ಉಪ್ಪಾರ ಬಾಲು, ಮಾಜಿ ಸದಸ್ಯ ಆರ್.ವೆಂಕಟೇಶ್, ಗ್ರಾ.ಪಂ. ಸದಸ್ಯ ಪವಾಡಿ ಹನಮಂತಪ್ಪ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಸುರೇಶ್ ಪಟ್ಟಣಶೆಟ್ಟಿ, ಜುಲ್ಫಿ ರಾಮಣ್ಣ, ನೀಲಕಂಠಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT