ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣದಲ್ಲಿ ನಾಯಕರ ಪ್ರಚಾರ

Last Updated 23 ಏಪ್ರಿಲ್ 2013, 9:37 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸಮಾಜದ ಕಟ್ಟೆ ಕಡೆಯ ಜನರ ಸಮಸ್ಯೆಗಳನ್ನು ಪರಿಹರಿಸಲು ಜೆಡಿಎಸ್‌ನಿಂದ ಮಾತ್ರ ಸಾಧ್ಯ. ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಒತ್ತುವರಿ ಸಮಸ್ಯೆ, ಅರಣ್ಯ ಇಲಾಖೆಯಿಂದ ರೈತರಿಗೆ ಆಗುತ್ತಿರುವ ಕಿರುಕುಳ, ಹುಲಿ ಯೋಜನೆ, ಮರಳು ದಂಧೆಗಳಿಗೆ ತಿಲಾಂಜಲಿ ಇಟ್ಟು, ಬಡವರ ನೆಮ್ಮದಿ ಜೀವನಕ್ಕೆ ಪ್ರಯತ್ನಿಸಲಾಗುವುದು ಎಂದು ಮೂಡಿಗೆರೆ ಕ್ಷೇತ್ರದ ಅಭ್ಯರ್ಥಿ ಬಿ.ಬಿ.ನಿಂಗಯ್ಯ ತಿಳಿಸಿದರು.

ಮೂಡಿಗೆರೆ ಕ್ಷೇತ್ರ ವ್ಯಾಪ್ತಿಯ ಬೆಟ್ಟದಮರಡಿ, ಆವತಿ, ಬೆರಣಗೋಡು, ಬೈಗೂರು, ಕೆರೆಮಕ್ಕಿಯಲ್ಲಿ ಸೋಮವಾರ ಮತಯಾಚನೆ ಮಾಡಿದ ನಂತರ ಮಲ್ಲಂದೂರಿನಲ್ಲಿ ನಡೆದ  ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಜನತಾ ಪರಿವಾರದ ಸರ್ಕಾರಗಳು ಅಧಿಕಾರದಲ್ಲಿದ್ದಾಗ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ, ಬಡವರಿಗೆ ಸೂರು, ರಸ್ತೆ, ರೈತರ ಸಾಲ ಮನ್ನಾ ಮಾಡಿ ಇತಿಹಾಸ ನಿರ್ಮಿಸಲಾಗಿದೆ.

ಆದರೆ ಈಗಿನ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಚಿವ ರಾದಿಯಾಗಿ ಮುಖ್ಯಮಂತ್ರಿಗಳವರೆಗೂ ಜೈಲು ಸೇರಿ ದಾಖಲೆ ನಿರ್ಮಿಸಿದ್ದಾರೆ ಎಂದು ಟೀಕಿಸಿದರು.
ಆಶಾವಾದದ ಮೂಲಕ ಜನ ಮನ್ನಣೆ ಗಳಿಸಿ, ಚಿಕ್ಕ ವಯಸ್ಸಿನಲ್ಲಿ ಜನಮಾನಸದಲ್ಲಿ ಶಹಬ್ಬಾಸ್ ಗಿರಿ ಗಿಟ್ಟಿಸಿದ ಏಕೈಕ ಶಕ್ತಿ ಮತ್ತು ವ್ಯಕ್ತಿ ಎಚ್.ಡಿ.ಕೆ ಮಾತ್ರ ಎಂದರು.

ಪಕ್ಷದ ಜಿಲ್ಲಾ ಅಧ್ಯಕ್ಷ ಎಚ್.ಎಸ್.ಮಂಜಪ್ಪ ಮಾತನಾಡಿ, ಐದು ದಶಕ ಕಾಲ ರಾಜ್ಯ ಆಳಿದ ಕಾಂಗ್ರೆಸ್ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಕತ್ತಲಲ್ಲಿ ಇಟ್ಟಿದೆ. ಬಿಜೆಪಿ ಆಡಳಿತದಲ್ಲೂ ಭ್ರಷ್ಟಾಚಾರ ಮಾಡದ ಜನಪ್ರತಿನಿಧಿಯನ್ನು ಹುಡುಕಬೇಕಿದೆ ಎಂದು ಟೀಕಿಸಿದರು.

ಎಚ್‌ಡಿಕೆ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷ ಹೊಲದಗದ್ದೆ ಗಿರೀಶ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಪುಟ್ಟಸ್ವಾಮಿ, ಪುಟ್ಟೇಗೌಡ ಮುಖಂಡರಾದ ಎಂ.ಡಿ.ರಮೇಶ್, ಎಚ್.ಎನ್.ಕೃಷ್ಣೇಗೌಡ, ತಮ್ಮಣ್ಣ ಗೌಡ ರುದ್ರೇಗೌಡ, ಸತೀಶ್ ಇತರರು ಹಾಜರಿದ್ದರು.

ನ್ಯಾಯದ ತಕ್ಕಡಿಯಲ್ಲಿ ತೂಗಿ: ರವಿ
ಚಿಕ್ಕಮಗಳೂರು: ನಗರ ಅಭಿವೃದ್ಧಿಪಡಿಸುವ ಮೂಲಕ ಜನತೆ ಮೂರು ದಶಕಗಳಿಂದ ಅನುಭವಿಸುತ್ತಿದ್ದ ಕೊರಗಿಗೆ ಕೊನೆ ಹಾಡಿದರೆ, ರಾಜಕೀಯ ವಿರೋಧಿಗಳು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ವಿರೋಧ ಪಕ್ಷಗಳ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಹೊರವಲಯದ ಗವನಹಳ್ಳಿಯಲ್ಲಿ ಸೋಮವಾರ ಮತಯಾಚನೆ ಮಾಡಿ ಮಾತನಾಡಿದ ಅವರು, ನಗರಕ್ಕೆ 108 ಕೋಟಿ ರೂಪಾಯಿ ವಿಶೇಷ ಅನುದಾನ ತಂದು ಯುಜಿಡಿ, ರಸ್ತೆ, ಚರಂಡಿ, ಸೇತುವೆ ನಿರ್ಮಾಣ ಆಗಿದೆ. ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ, ಅಧಿಕಾರದಲ್ಲಿದ್ದಾಗಿನ ನಡವಳಿಕೆ, ಕ್ಷೇತ್ರದಲ್ಲಿ ಮೂಡಿಸಿರುವ ಸಾಮರಸ್ಯ ಇವೆಲ್ಲವನ್ನು ಮತದಾರರು ನ್ಯಾಯದ ತಕ್ಕಡಿಯಲ್ಲಿ ತೂಗಿ ನೋಡಬೇಕು. ಯಾರು ಹೆಚ್ಚು ತೂಗುತ್ತಾರೋ ಅವರನ್ನು ಜನಪ್ರತಿನಿಧಿಯಾಗಿ ಆಯ್ಕೆ ಮಾಡಬೇಕು ಎಂದರು.

ಕಾಂಗ್ರೆಸ್ ಸರ್ಕಾರವಿದ್ದಾಗ ಮೂವರು 3 ಸಚಿವರು ಪೂರ್ಣಾವಧಿ ಅಧಿಕಾರದಲ್ಲಿದ್ದರೂ ಬಡ ವಿಧ್ಯಾರ್ಥಿಗಳ ಶಿಕ್ಷಣಕ್ಕೆ ಸ್ಪಂದಿಸುವ ಕಾಳಜಿ ಇರಲಿಲ್ಲ. ಜಿಲ್ಲೆಗೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸಲು ಶ್ರಮಿಸುವ ಕಾಳಜಿ ಇರಲಿಲ್ಲ ಎಂದು ಟೀಕಿಸಿದರು.

ಜಾತಿಯ ವಿಷ ಬೀಜ ಬಿತ್ತಿ, ಬಿಜೆಪಿಗೆ ಕೋಮುವಾದದ ಪಟ್ಟ ಕಟ್ಟಿ ಜಾತಿ ರಾಜಕಾರಣ ಮಾಡುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಅವು ಮಾಡಿರುವ ತಂತ್ರಗಳೇ ಮುಳುವಾಗಲಿದೆ. ಶಾಸಕನಾದಾಗಿಂದಲೂ ಸಾಮರಸ್ಯ ಕಾಪಾಡುವ ಕೆಲಸ ಮಾಡಿದ್ದೇನೆ. ಎಲ್ಲ ವರ್ಗದ ಜನರು ನನ್ನ ಕೈಹಿಡಿಯುವ ವಿಶ್ವಾಸವಿದೆ ಎಂದರು.

ಪಕ್ಷದ ನಗರ ಘಟಕ ಅಧ್ಯಕ್ಷ ರಂಗನಾಥ್, ಜಿಲ್ಲಾ ಕಾರ್ಯದರ್ಶಿ ವರಸಿದ್ದಿವೇಣುಗೋಪಾಲ್, ನಗರಸಭೆ ಸದಸ್ಯ ಶ್ರೀನಿವಾಸ್, ಸಿ.ಆನಂದ್, ಉಮೇಶ್ ರಾಜ್ ಅರಸ್, ಯಶೋಧರಾಜ್ ಅರಸ್ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT