ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣದಲ್ಲಿ ರೈತರ ಕಷ್ಟ ಕೇಳಿದ ಶಾಸಕ

Last Updated 19 ಜನವರಿ 2011, 7:00 IST
ಅಕ್ಷರ ಗಾತ್ರ

ತಿಪಟೂರು: ಉರಿವ ಬಿಸಲಲ್ಲಿ ಬೆವರು ಹರಿಸುತ್ತಾ “ವಾಲಾಡಿ ಬೀಸೋ ವಾಸುದೇವ ಎಂದು ಕೂಗುತ್ತಾ ರಾಗಿ ತೂರುವ ಅವಸರಲ್ಲಿದ್ದ ರೈತರು ಕಣಕ್ಕೆ ಬಂದ ಶಾಸಕರನ್ನು ಕಂಡು ಬೆರಗಾದರು!

ಶಾಸಕ ಬಿ.ಸಿ. ನಾಗೇಶ್ ಮಂಗಳವಾರ ಕೆಲ ಹಳ್ಳಿಗಳಲ್ಲಿ ಅಡ್ಡಾಡಿ ಒಕ್ಕಣೆ ಕಾರ್ಯದಲ್ಲಿ ನಿರತರಾಗಿದ್ದ ರೈತರ ಕಷ್ಟಸುಖ ಆಲಿಸಿದರು. ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಭೂಮಿ ಪೂಜೆ ನೆರವೇರಿಸಲು ಸಾಲು ಕಾರ್ಯಕ್ರಮ ಹಮ್ಮಿಕೊಂಡಿದ್ದ ಅವರು ಮಾರ್ಗಮಧ್ಯೆ ಅಲ್ಲಲ್ಲಿ ರೈತರೊಂದಿಗೆ ಬೆರೆತು ಹುರಿದುಂಬಿಸಿದರು. ಸ್ವತಃ ರಾಗಿ ತೂರಿ ರವರವ ಬಿಸಿಲು, ಧೂಳು, ಗಾಳಿಗೆ ಕಾಯುತ್ತಾ ಮರ ಎತ್ತಿ ಹಿಡಿಯುವ ಕಷ್ಟ ಅನುಭವಿಸಿದರು. ಉಳುಮೆ, ಬಿತ್ತನೆ, ಕೊಯ್ಲಿನಿಂದ ಆರಂಭಿಸಿ, ಕಣ ಮಾಡುವ, ರೋಣು ಕಟ್ಟಿ ಅರೆಯುವ ಪ್ರಕ್ರಿಯೆಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ಎದುರಾಗಿರುವ ಕಷ್ಟಗಳನ್ನು ಕೇಳಿ ತಿಳಿದರು.

ರಸ್ತೆಯಲ್ಲಿ ಹುಲ್ಲು ಹರಡಿ ಒಕ್ಕಣೆ ಕೆಲಸ ಮಾಡುವ ಮನೋಭಾವದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಸಾಂಪ್ರದಾಯಿಕ ಪದ್ಧತಿಯ ಒಳಿತುಗಳ ಬಗ್ಗೆ ಚರ್ಚಿಸಿದರು. ಮತ್ತೊಂದು ಕಣದಲ್ಲಿ ಯಂತ್ರದ ಮೂಲಕ ರಾಗಿ ಒಕ್ಕಣೆ ಕೆಲಸ ಕಾರ್ಯ ವೀಕ್ಷಿಸಿ ಅದರ ಲಾಭನಷ್ಟದ ಬಗ್ಗೆಯೂ ತಿಳಿದರು. ಸಾಂಪ್ರದಾಯಿಕ ಪದ್ಧತಿಯನ್ನೇ ಅವಲಂಬಿಸಿ ಲಾಭದಾಯಕ ಕೃಷಿ ಮಾಡುತ್ತಿರುವ ಗೋಪಾಲಪುರ, ಕೊನೇಗೌಡನ ಪಾಳ್ಯ, ಧರ್ಮೇಗೌಡನಪಾಳ್ಯ ವ್ಯಾಪ್ತಿಯಲ್ಲಿ ಅವರು ಸಂಚರಿಸಿದರು.

ಸಾಲು ಕಾರ್ಯಕ್ರಮ: ಅಧಿಕೃತ ಕಾರ್ಯಕ್ರಮದಂತೆ ಅವರು ಬುರುಡೇಘಟ್ಟ, ನೆಲ್ಲೆಕೆರೆ, ಗೋಪಾಲಪುರ ಕಾಲೋನಿ (ತಲಾ 5 ಲಕ್ಷ ರೂಪಾಯಿ) ರಸ್ತೆ ಅಭಿವೃದ್ಧಿ, ಆಲ್ಬೂರು- ಅಣಪನಹಳ್ಳಿ ಹಾಗೂ ವಿಘ್ನಸಂತೆ ಸುವರ್ಣ ಗ್ರಾಮ ಯೋಜನೆ (55 ಮತ್ತು 41 ಲಕ್ಷ), ನಾಗರಘಟ್ಟ ಕಾಲೋನಿ ರಸ್ತೆ ಅಭಿವೃದ್ಧಿಗೆ (2 ಲಕ್ಷ) ಭೂಮಿ ಪೂಜೆ ನೆರವೇರಿಸಿದರು.

ಆಲ್ಬೂರಿನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಶಾಸಕ ಬಿ.ಸಿ. ನಾಗೇಶ್, ಗ್ರಾಮಸ್ಥರು ಮುತುವರ್ಜಿ ವಹಿಸಿ ಎಲ್ಲಾ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಮಾಡಿಸಿಕೊಳ್ಳಬೇಕು. ಕೆಲಸ ಚೆನ್ನಾಗಿ ಮತ್ತು ತುರ್ತಾಗಿ ನಡೆಯಲು ಗುತ್ತಿಗೆದಾರರೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು. ಮುಖಂಡರಾದ ಕೃಷ್ಣೇಗೌಡ, ಬಸವರಾಜು, ಶಂಕರಪ್ಪ, ಶಂಕರಪ್ಪ ಇದ್ದರು.ಎಂಜಿನಿಯರ್‌ಗಳಾದ ನರೇಂದ್ರಪ್ಪ, ಚೆನ್ನಿಗಪ್ಪ, ಆರಾಧ್ಯ, ದೊಡ್ಡಯ್ಯ ಮತ್ತಿತರ ಅಧಿಕಾರಿಗಳು ಶಾಸಕರ ಜತೆಯಲ್ಲಿ ಸಂಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT