ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣಿವೆ-ಕೊರಕಲು: ಹೇಗೆ?

Last Updated 5 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಕಣಿವೆ-ಕೊರಕಲು. ಗೆಳೆಯರೇ, ನಿಮಗೇ ತಿಳಿದಿರುವಂತೆ ನದಿಗಳಿಂದ ಭೂ ನೆಲದಲ್ಲಿ ಮೈದಳೆವ ಲಕ್ಷಣಗಳು ಇವು. ವಿಶಾಲ ಕಣಿವೆಗಳು ನಯನ ಮನೋಹರ ದೃಶ್ಯಗಳಾಗಿ ಗೋಚರಿಸಿದರೆ ಕೊರಕಲುಗಳು ರುದ್ರ ಭಯಂಕರ ದೃಶ್ಯಗಳಾಗಿ ಬೆರಗುಗೊಳಿಸುತ್ತವೆ.

ನದಿಗಳದು ಅಪಾರ ವಿಚ್ಛಿದ್ರಕ ಶಕ್ತಿ. ಭಾರೀ ಜಲರಾಶಿಯನ್ನು ಧರಿಸಿ (ಚಿತ್ರ-1) ಬಾಗಿ ಬಳುಕಿ ಪ್ರವಹಿಸುವ (ಚಿತ್ರ-2) ಎಲ್ಲ ನದಿಗಳದೂ ಯೌವ್ವನದ ಹಂತದಲ್ಲಿ ಕಲ್ಪನಾತೀತ ಶಿಥಿಲಕಾರಕ ಬಲ. ಹಾಗಾಗಿ ಯುವ ನದಿಗಳು ತಾವು ಹರಿವ ಹಾದಿಯುದ್ದಕ್ಕೂ ರಭಸವಾಗಿ ನುಗ್ಗಿ (ಚಿತ್ರ-6), ಇಳಿದಿಳಿದು (ಚಿತ್ರ-3), ಜಲಪಾತಗಳಾಗಿ ಧುಮುಕಿ (ಚಿತ್ರ-10) ಎಂಥ ನೆಲವನ್ನೂ, ಬಂಡೆ ಹಾಸುಗಳನ್ನೂ ಸವೆಸಿ ಕೊರೆದು ಮುನ್ನಡೆಯುತ್ತವೆ; ಹಾಗೆ ಕೊರೆದ ಮಣ್ಣು, ಶಿಲಾ ತುಣುಕು ಇತ್ಯಾದಿ ಎಲ್ಲವನ್ನೂ ಎಳೆದೊಯ್ದು ಕಡಲಿಗೆ ಸುರಿಯುತ್ತವೆ. ಹಾಗಾಗಿಯೇ ಉಗಮ ಸ್ಥಾನದಿಂದ ಕಡಲನ್ನು ತಲುಪುವವರೆಗೂ ನದಿಯ ಹಾದಿಯಲ್ಲಿ ಅಲ್ಲಲ್ಲಿ ಕಣಿವೆ-ಕೊರಕಲುಗಳು ರೂಪುಗೊಳ್ಳುತ್ತವೆ.

ಅದೇನೇ ಇದ್ದರೂ ಕಣಿವೆ ಮತ್ತು ಕೊರಕಲು ಇವುಗಳ ಸ್ವರೂಪಗಳ ನಡುವೆ ಬಹಳ ಅಂತರಗಳಿವೆ. ನದೀ ಕಣಿವೆಗಳು ವಿಶಾಲವಾಗಿರುತ್ತವೆ; ನದೀ ಪಾತ್ರದ ಇಕ್ಕೆಡೆಗಳಲ್ಲೂ ಅವು ಇಳಿಜಾರಾಗಿರುತ್ತವೆ (ಚಿತ್ರ 5 ಮತ್ತು ಚಿತ್ರ 13). ಈ ಲಕ್ಷಣಗಳಿಗೆ ವಿರುದ್ಧವಾಗಿ ಕೊರಕಲುಗಳು ಕಿರಿದಾಗಿರುತ್ತವೆ, ಆಳವಾಗಿರುತ್ತವೆ. ಅವುಗಳ ಎರಡೂ ಪಾರ್ಶ್ವಗಳು ಗೋಡೆಗಳಂತೆ ಕಡಿದಾಗಿರುತ್ತವೆ (ಚಿತ್ರ 4, 7, 8, 9, 11, 12 ನೋಡಿ). ವಿಸ್ಮಯ ಏನೆಂದರೆ ನದಿಯ ಶಿಥಿಲೀಕರಣ ಶಕ್ತಿಯೇ ಕಣಿವೆ-ಕೊರಕಲು ಎರಡೂ ರೂಪುಗೊಳ್ಳಲು ಕಾರಣವಾದರೂ ಅದರ ಪರಿಣಾಮವಾಗಿ ಮೈದಳೆಯುವುದು ಕಣಿವೆಯೋ ಕೊರಕಲೋ ಎಂಬುದನ್ನು ಆಯಾ ಪ್ರದೇಶದ ಹವಾಗುಣ ಮತ್ತು ಭೂ ಚಟುವಟಿಕೆ ನಿರ್ಧರಿಸುತ್ತವೆ.
ಪ್ರಶಾಂತ ಸ್ವಭಾವದ, ತಟಸ್ಥ ಗುಣದ ಭೂ ಪ್ರದೇಶಗಳಲ್ಲಿ ಧಾರಾಳ ಮಳೆಯೂ ಸುರಿವ ಹವಾಗುಣ ಬೆರೆತಲ್ಲಿ ಕಣಿವೆಗಳು ರೂಪುಗೊಳ್ಳುತ್ತವೆ. ಅಂತಹ ನೆಲೆಗಳಲ್ಲಿ ನದಿಯ ಜಲಪ್ರವಾಹ ನೆಲ ಬಗೆಯುತ್ತ ಆಳಕ್ಕೆ ಇಳಿದಂತೆಲ್ಲ ಎಲ್ಲ ಕಡೆಗಳಿಂದ ಹರಿಹರಿದು ಬರುವ ಮಳೆ ನೀರಿನ ಧಾರೆಗಳು ನದಿಯ ದಡಗಳನ್ನು ಕೊರೆದು ಕೊಚ್ಚಿ ಪ್ರವಹಿಸಿ ಬಂದು ನದಿಗೆ ಸೇರುತ್ತವೆ. ಹಾಗಾಗಿ ನದಿಯ ಬದಿಗಳು ಇಳಿಜಾರಾಗುತ್ತವೆ, ವಿಸ್ತಾರವಾಗುತ್ತವೆ. ಕಣಿವೆ ಮೈದಳೆಯುತ್ತದೆ.

ತದ್ವಿರುದ್ಧವಾಗಿ ಭೂ ನೆಲದ ಶಿಲಾಫಲಕಗಳು ನಿರಂತರ ಕ್ರಿಯಾಶೀಲವಾಗಿರುವ ಪ್ರದೇಶಗಳಲ್ಲಿ ಅತಿ ಕಡಿಮೆ ಮಳೆ ಬೀಳುವ ಶುಷ್ಕ ಹವಾಗುಣವೂ ಬೆಸೆಗೊಂಡ ನೆಲೆಗಳಲ್ಲಿ ಕೊರಕಲುಗಳು ರೂಪುಗೊಳ್ಳುತ್ತವೆ. ಧರೆಯ ಹಲವಾರು ಪ್ರದೇಶಗಳಲ್ಲಿ ಭೂ ನೆಲದ ಹತ್ತಾರು ಕಿ.ಮೀ. ದಪ್ಪದ, ಹಲವು ಹತ್ತು ಸಾವಿರ ಚದರ ಕಿಲೋಮೀಟರ್ ವೈಶಾಲ್ಯದ ಶಿಲಾಫಲಕಗಳು ಒಂದನ್ನೊಂದು ಒತ್ತುತ್ತಿವೆ. ಅವುಗಳು ಸಂಧಿಸುತ್ತಿರುವ ಅಂಚುಗಳಲ್ಲಿ ಬಾಗುತ್ತಿವೆ, ಮಡಿಸಿಕೊಳ್ಳುತ್ತಿವೆ ಅಥವಾ ಒಂದರ ಮೇಲೆ ಮತ್ತೊಂದು ಸರಿಯುತ್ತಿದೆ. ಇಂತಹ ಚಟುವಟಿಕೆಗಳಿಂದ ಮೈದಳೆದಿರುವ ಪರ್ವತ ಪಂಕ್ತಿಗಳು ಉದಾಹರಣೆಗೆ ಹಿಮಾಲಯ, ಆಲ್ಪ್ಸ್-ಈಗಲೂ ದಿನದಿನವೂ ಎತ್ತರಗೊಳ್ಳುತ್ತಲೇ ಇವೆ; ವರ್ಷಕ್ಕೆ ಒಂದೋ ಎರಡೋ ಸೆಂ.ಮೀ. ವೇಗದಲ್ಲಿ ಉನ್ನತಗೊಳ್ಳುತ್ತಲೇ ಇವೆ.

ಇಂತಹ ಪ್ರದೇಶಗಳಲ್ಲಿ ಪ್ರವಹಿಸುವ ನದಿಗಳು ನೆಲವನ್ನು ಬಗೆದಂತೆಲ್ಲ ಸರಿಸುಮಾರು ಅಷ್ಟೇ ವೇಗದಲ್ಲಿ ಇಡೀ ಭೂ ಪ್ರದೇಶವೇ ಮೇಲೇಳುತ್ತಿರುತ್ತದೆ. ಹಾಗಾಗಿ ನದಿ ಹರಿವ ಎತ್ತರ ಸಾಗರಮಟ್ಟದಿಂದ ಒಂದೇ ಎತ್ತರದಲ್ಲೇ ಉಳಿದು ಅದರ ದಂಡೆಗಳು ಮಾತ್ರ ನಿರಂತರ ಮೇಲೇರುತ್ತಿರುತ್ತವೆ. ಅಂಥ ಕಡೆ ಅಲ್ಪ ಪ್ರಮಾಣದ ಮಳೆಯ ಹವಾಗುಣವೂ ಮೇಳೈಸಿದರೆ ನದಿಯ ದಡಗಳನ್ನು ಕೊರೆವ ಅಗಲಿಸುವ ಜಲಧಾರೆಗಳೂ ಇಲ್ಲವಾಗಿ ನದೀ ತಳದ ನೆಲ ಮಾತ್ರ ಸವೆದು ಸವೆದು ಆಳಕ್ಕಿಳಿಯುತ್ತದೆ. ದಂಡೆಗಳು ಕಡಿದಾಗಿ ಕೋಟೆ ಗೋಡೆಗಳಂತೆ ನಿಲ್ಲುತ್ತವೆ. ಅದೇ ಕೊರಕಲು. ಕೆಲವು ಕೊರಕಲುಗಳ ಆಳ ಸಾವಿರಾರು ಅಡಿ ಮುಟ್ಟಿದ್ದರೂ ಎದುರು ಬದುರು ಗೋಡೆಗಳ ನಡುವಣ ಅಂತರ ಐದು-ಆರು ಅಡಿ ಮೀರಿಲ್ಲ! ಜಗತ್ತಿನ ಅತ್ಯದ್ಭುತ ನದೀ ಕಣಿವೆ-ಕೊರಕಲುಗಳ ಆಯ್ದ ಒಂದೆರಡು ಸ್ಯಾಂಪಲ್‌ಗಳು:

ಧರೆಯ ಅತ್ಯಂತ ವಿಶಾಲ ನದೀ ಕಣಿವೆ ಹಿಮಾಲಯದಲ್ಲಿದೆ. ಧವಳಗಿರಿ ಮತ್ತು ಅನ್ನಪೂರ್ಣ ಶಿಖರಗಳ ನಡುವೆ `ಕಾಳೀ-ಗಂಡಕೀ ನದಿ~ ಸೃಜಿಸಿರುವ ಈ ಅಸದೃಶ ಕಣಿವೆಯ ಅಗಲ 18.2 ಕಿ.ಮೀ.!

ಧರೆಯ ಅತ್ಯಂತ ಆಳದ ನದೀ ಕೊರಕಲು ಕೂಡ ಹಿಮಾಲಯದಲ್ಲೇ ಇದೆ. `ಬ್ರಹ್ಮಪುತ್ರ~ ನದಿ ಕೊರೆದಿರುವ `ಯಾರ್ಲುಂಗ್ ಸಾಂಗ್‌ಪೋ~ ಹೆಸರಿನ ಈ ಕೊರಕಲಿನ ಆಳ 6.8. ಮೀ.! ಉದ್ದ 240 ಕಿ.ಮೀ.

ಜಗತ್ತಿನ ಅತ್ಯಂತ ಪ್ರಸಿದ್ಧ ಕೊರಕಲು `ದಿ ಗ್ರ್ಯಾಂಡ್ ಕ್ಯಾನ್ಯನ್~ (ಚಿತ್ರ 9, 12) ಯ.ಎಸ್.ಎ. ಯಲ್ಲಿದೆ. `ಕಾಲೆರೇಡೋ~ ನದಿ ಏಳು ದಶಲಕ್ಷ ವರ್ಷಗಳಿಂದ ಕೊರೆಯುತ್ತಿರುವ ಕೊರಕಲು ಇದು. ಒಟ್ಟು 2200 ಕಿ.ಮೀ. ಉದ್ದ ಹರಿಯುತ್ತಿರುವ ಈ ನದಿ ಅದರ ಹಾದಿಯ ಮರುಭೂಮಿಯಲ್ಲಿ 450 ಕಿ.ಮೀ. ಉದ್ದಕ್ಕೆ ರೂಪಿಸಿರುವ ಈ ಕೊರಕಲಿನ ಸರಾಸರಿ ಆಳ 1.6 ಕಿ.ಮೀ. ಕೆಲವು ಕಡೆಗಳಲ್ಲಿ ಅದರ ಆಳ 2.5 ಕಿ.ಮೀ. ಮುಟ್ಟಿದೆ.

ಚೀನಾದ `ಜಿಂಶಾ ನದಿ~ ಕೊರೆದಿರುವ `ಹುಲಿ ದಾಟು~ ಕೊರಕಲು 16 ಕಿ.ಮೀ. ಉದ್ದ ಇದೆ. 3.9 ಕಿ.ಮೀ. ಉದ್ದ ಇದೆ. ಕೇವಲ 100ರಿಂದ 200 ಅಡಿ ಅಗಲ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT