ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣ ಹಂಗಿಲ್ಲದವರಿಗೆ ಒಲಿಯಿತು ಲಿಮ್ಕಾ

Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮುಂಜಾನೆ, ಮುಸ್ಸಂಜೆ, ಬೆಳದಿಂಗಳ ಬಣ್ಣ ಇವರ ಕಣ್ಣು ಸೋಕಿಲ್ಲ. ಆದರೆ ಅವೆಲ್ಲವನ್ನೂ ತಮ್ಮ ಸಂಗೀತ, ಕಲ್ಪನೆಯ ಮೂಲಕ ಅನುಭವಕ್ಕೆ ನಿಲುಕಿಸಿಕೊಂಡವರು ಇವರು. ತಮ್ಮಳಗಿನ ನೋವು, ಸಂತಸ, ಮೌನ, ಪ್ರೀತಿ, ಕೋಪ, ಅಳು ಎಲ್ಲದರ ಅಭಿವ್ಯಕ್ತಿಗೂ ಸಂಗೀತವೇ ಇವರಿಗೆ ದಾರಿ. ಒಳಗಣ್ಣಿದ್ದರೆ ನೋಟದ ಹಂಗಿಲ್ಲ ಎಂಬುದನ್ನು ನಂಬಿರುವ ಈ ತಂಡದ ಹೆಸರು ‘ಐಡಿಎಲ್’. ಆದರ್ಶವಾಗಿ ಬದುಕಬೇಕೆಂಬ ಬಯಕೆಯೊಂದಿಗೆ ತಂಡ ಹುಟ್ಟಿಕೊಂಡಿದ್ದು 2007ರಲ್ಲಿ.

ಅಂಧರಲ್ಲಿ ಪ್ರತಿಭೆಯಿದೆ. ಆದರೆ ಅವರು ಎಲೆಮರೆಕಾಯಿಯಂತೆ. ಅಂಥವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಬೇಕೆಂಬ ಉದ್ದೇಶವೇ ತಂಡದ ಹುಟ್ಟಿಗೆ ಕಾರಣವಾಯಿತು. ಐಡಿಎಲ್ ತಂಡದ ಒಟ್ಟು ಸದಸ್ಯರು ಹದಿಮೂರು. ಇವರಲ್ಲಿ ನಲವತ್ತು ಮಂದಿ ತಾತ್ಕಾಲಿಕ ಕಲಾವಿದರೂ ಇದ್ದಾರೆ.

‘ಸಂಗೀತದ ಮೂಲಕ ಸಮಾಜದಲ್ಲಿ ಕಿಂಚಿತ್ತಾದರೂ ಬದಲಾವಣೆ ತರಬೇಕು. ಎಲ್ಲರಂತೆಯೇ ಅಂಧರೂ ಜೀವನ ನಡೆಸಬೇಕೆಂಬ ಕಾರಣಕ್ಕೆ ಬ್ಯಾಂಡ್ ರೂಪಿಸಿದೆವು. ಕೆಲವರು ಹವ್ಯಾಸಕ್ಕೆ ಸಂಗೀತವನ್ನು ಆರಿಸಿಕೊಳ್ಳುತ್ತಾರೆ. ಆದರೆ ಇವರಿಗೆ ಸಂಗೀತವೇ ಬದುಕು’ ಎನ್ನುತ್ತಾರೆ ಐಡಿಎಲ್ ಫೌಂಡೇಶನ್‌ನ ಪಿ.ಕೆ. ಪಾಲ್.

ಹಲವಾರು ಅಡೆತಡೆ ಕಂಡಿರುವ ತಂಡ ಇದೀಗ 500 ಕಾರ್ಯಕ್ರಮಗಳನ್ನು ನೀಡಿ, ಲಿಮ್ಕಾ ದಾಖಲೆ ಸೇರಿದೆ. ಆದರೆ ದೊಡ್ಡ ಸಂಗೀತಗಾರರನ್ನು ಲಕ್ಷಗಟ್ಟಲೆ, ಕೋಟಿಗಟ್ಟಲೆ ಕೊಟ್ಟು ಕರೆಸುವ ಮಂದಿ ಅಂಧರ ವಿಷಯಕ್ಕೆ ಬಂದರೆ ಲೆಕ್ಕಾಚಾರಕ್ಕೆ ಮುಂದಾಗುತ್ತಾರೆ ಎಂಬ ಸಣ್ಣ ಬೇಸರವನ್ನೂ ವ್ಯಕ್ತಪಡಿಸುತ್ತಾರೆ.

ಮನೋಹರ್, ಮೂರ್ತಿ, ನಗೀನಾ, ನರಸಿಂಗ್, ನಂಜುಂಡ, ಪ್ರತಾಪ್, ಪಾಶಾ, ಮನೋಜ್, ನಾಗರಾಜ್, ಶಿವಕುಮಾರ್, ಸುನಿಲ್, ಶಿವಕುಮಾರ್ (ಮಿಮಿಕ್ರಿ), ಜಯಕೋಡಿ, ರಮೇಶ್ ತಂಡದ ಸದಸ್ಯರು. ಇವರಲ್ಲಿ ಗಿಟಾರ್, ಕೊಳಲು, ಗಾಯಕಿ, ಗಾಯಕ, ಡ್ರಮ್ಮರ್, ಹಾರ್ಮೊನಿಯಂ ವಾದಕರು, ರಿದಂ ಪ್ಯಾಡ್, ತಬಲ, ಡೋಲಕ್, ಕಾಂಗೋ, ಬಾಂಗೋ ನುಡಿಸುವವರೂ ಇದ್ದಾರೆ. ‘ಮೈ ಆಟೊಗ್ರಾಫ್’, ‘ಮುಸ್ಸಂಜೆ ಮಾತು’ ಚಿತ್ರದ ಹಾಡುಗಳಿಗೂ ಕಲಾವಿದರು ಕೊಳಲು ನುಡಿಸಿ ಸೈ ಎನಿಸಿಕೊಂಡಿದ್ದಾರೆ. ಈ ತಂಡದ್ದು ಬಹುಭಾಷೆಯ ಸಂಗೀತ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ ಭಾಷೆಗಳ ಹಾಡುಗಳು ಇವರ ಪಟ್ಟಿಯಲ್ಲಿವೆ. ಭಾವಗೀತೆ, ಭಕ್ತಿ ಗೀತೆ, ಜಾನಪದ, ದೇಶಭಕ್ತಿ ಗೀತೆ, ಶಾಸ್ತ್ರೀಯ ಸಂಗೀತ ಎಲ್ಲವನ್ನೂ ಅಭ್ಯಸಿಸಿದ್ದಾರೆ.

ಬ್ಯಾಂಡ್ ಉದ್ಘಾಟನೆಗೆ ಕ್ರಿಕೆಟಿಗರಾದ ಧೋನಿ, ಶ್ರೀಶಾಂತ್, ಹರಭಜನ್ ಸಿಂಗ್, ಯುವರಾಜ್ ಸಿಂಗ್ ಬಂದಿರುವುದು ಮರೆಯಲಾರದ ಕ್ಷಣವೆಂದು ನೆನಪಿಸಿಕೊಳ್ಳುತ್ತಾರೆ.

ಕೇವಲ ಮನರಂಜನೆಗಷ್ಟೆ ಅಲ್ಲದೆ ಸಾಮಾಜಿಕ ಕಳಕಳಿಯಿಂದಲೂ ಕಾರ್ಯಕ್ರಮ ನೀಡಿದೆ ಬ್ಯಾಂಡ್. ‘ಡಾ. ರಾಜ್ ಸವಿನೆನಪು’ ಎಂಬ ಸೀಡಿಯನ್ನೂ ಬಿಡುಗಡೆ ಮಾಡಿದ್ದು, ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಡಾ. ರಾಜ್‌ಕುಮಾರ್ ಅವರ ಸಮಾಧಿ ಬಳಿ ನಿರಂತರ 24 ಗಂಟೆಗಳ ಕಾರ್ಯಕ್ರಮ ನೀಡುವ ತಯಾರಿಯಲ್ಲಿದೆ ತಂಡ. ಅಷ್ಟೇ ಅಲ್ಲ, ‘ಅಂಧರ ಸರಿಗಮಪ’ ಎಂಬ ಸೀಡಿ ಹೊರತರುವ ಯೋಜನೆಯೂ ಇವರಿಗಿದೆ.

ಸಂಗೀತದ ಬಂಡಿಯಲ್ಲಿ ಕೇವಲ ಕರ್ನಾಟಕದಲ್ಲಲ್ಲದೆ, ದೆಹಲಿ, ಕೊಚ್ಚಿ, ಬಾಂಬೆ, ಹೈದರಾಬಾದ್ ಹೀಗೆ ಹೊರ ರಾಜ್ಯಗಳಿಗೂ ಹೋಗಿದ್ದಾರೆ. ‘ಅನುಕಂಪ ತೋರಬೇಡಿ, ಅವಕಾಶ ಕೊಡಿ’ ಎಂಬುದಷ್ಟೇ ಇವರ ಕೋರಿಕೆ.

ಕುರುಡು ಪ್ರೀತಿ
ನಗೀನಾ ಮತ್ತು ನರಸಿಂಗ್ ಅವರ ಪ್ರೇಮ ಕತೆ ಸಂಗೀತದೊಂದಿಗೇ ಬೆರೆತಿದ್ದು. ತಂಡದೊಂದಿಗೆ ಗುರುತಿಸಿಕೊಂಡ ಇವರ ನಡುವೆ ಪ್ರೀತಿ ಚಿಗುರಿ ಹೂವಾಗಿತ್ತು. ಸಂಗೀತದೊಟ್ಟಿಗೆ ತಮ್ಮ ಬದುಕನ್ನೂ ಹಂಚಿಕೊಂಡ ಈ ದಂಪತಿ ಅವರ ಪ್ರೀತಿಯ ಕುರಿತು ಹೇಳಿಕೊಂಡಿದ್ದಿಷ್ಟು.

‘ಪ್ರೀತಿ ಕುರುಡು ಎಂದು ಎಲ್ಲರೂ ಸುಮ್ಮನೆ ಹೇಳುತ್ತಾರೆ. ಆದರೆ ನಮ್ಮ ಜೀವನದಲ್ಲಿ ಅದು ನಿಜ. ಸಂಗೀತ ದೇವರು. ಅಂಧತ್ವದೊಂದಿಗೆ ನಮಗೆ ವಿಶೇಷ ಸಾಮರ್ಥ್ಯವನ್ನೂ ದೇವರು ನೀಡಿದ್ದಾನೆ. ದಿನನಿತ್ಯವೂ ಹೊಸತನವನ್ನು ಅಳವಡಿಸಿಕೊಳ್ಳುತ್ತೇವೆ. ಹಟ ಬೆರೆತ ಪ್ರೀತಿಯೊಂದಿಗೆ ಜಗತ್ತನ್ನು ಪ್ರೀತಿಸುತ್ತೇವೆ’ ಎಂದು ಭಾವುಕರಾದರು.

‘ನಗು ನಗುತಾ ನಲಿ ನಲಿ ಏನೇ ಆಗಲಿ... ರಾಜ್ ಕುಮಾರ್ ಅವರ ಈ ಹಾಡನ್ನು ಸದಾ ಗುನುಗುತ್ತಲೇ ಮುಂದಿನ ದಾರಿ ನೋಡುತ್ತೇವೆ’ ಎನ್ನುತ್ತಾರೆ.

ಓದಿನೊಂದಿಗೆ ಹಾಡು
ತಂಡದ ಸದಸ್ಯರಾದ ಮನೋಜ್ ಹಾಗೂ ನಂಜುಂಡ ಇಬ್ಬರೂ ಪ್ರಥಮ ಪಿಯುಸಿ ಓದುತ್ತಿದ್ದಾರೆ. ಜೊತೆಗೆ ಕರ್ನಾಟಕ ಸಂಗೀತವನ್ನು ಕಲಿಯುತ್ತಿದ್ದಾರೆ. ಓದಿನೊಂದಿಗೆ ಸಂಗೀತದ ರುಚಿ ಹತ್ತಿಸಿಕೊಂಡಿರುವ ಇವರಿಗೆ ಮುಂದೆ ಸಂಗೀತ ಕಲಿತು ಹೆಸರು ಮಾಡುವಾಸೆ.

ಕಣ್ಣಿಲ್ಲದಿದ್ದರೂ ಕಾಣಬಲ್ಲೆ
ನನಗೆ 20 ವರ್ಷವಿದ್ದಾಗ ಸೂರ್ಯಗ್ರಹಣ ನೋಡಿ ಕಣ್ಣು ಕಳೆದುಕೊಂಡೆ. ಬದುಕು ಕ್ಷಣ ಕ್ಷಣಕ್ಕೂ ದಿಗಿಲೆನಿಸುತ್ತಿತ್ತು. ಇಷ್ಟು ದಿನದವರೆಗೂ ಆರಾಮಾಗಿ ಇದ್ದವನಿಗೆ ಇದ್ದಕ್ಕಿದ್ದಂತೆ ಕಣ್ಣು ಕಳೆದುಕೊಂಡಿದ್ದು ಅರಗಿಸಿಕೊಳ್ಳಲಾಗಲಿಲ್ಲ. ಆಗ ತುಂಬಾ ಖಿನ್ನತೆ ಕಾಡಿತು.

ಐಡಿಎಲ್ ಸಂಸ್ಥೆ ಸೇರಿ ಕಷ್ಟಪಟ್ಟು ಗಿಟಾರ್ ನುಡಿಸುವುದನ್ನು ಕಲಿತುಕೊಂಡೆ. ಅದರ ಅಭ್ಯಾಸದಲ್ಲಿ ತಲ್ಲೀನನಾಗುತ್ತಿದ್ದೆ. ಗಿಟಾರ್ ಎಷ್ಟು ಆಪ್ತವಾಯಿತು ಎಂದರೆ, ನನಗೆ ಕಣ್ಣಿಲ್ಲ ಎಂಬುದನ್ನೂ ಮರೆಯುವಷ್ಟು! ಇಷ್ಟು ಕಾರ್ಯಕ್ರಮಗಳನ್ನು ನೀಡಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಎಲ್ಲರೂ ಪ್ರೋತ್ಸಾಹಿಸಿದಾಗ ಸಂತಸದ ಕಣ್ಣೀರು ತುಂಬಿಕೊಳ್ಳುತ್ತದೆ. ಬದುಕೇ ಕೊನೆಯಾಯಿತು ಎಂದ ಸಂದರ್ಭದಲ್ಲಿ ಚೈತನ್ಯ ನೀಡಿದ್ದೇ ಸಂಗೀತ.
  -ಮನೋಹರ್ (ಗಿಟಾರ್ ವಾದಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT