ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣಿಗೆ ಕಾಣುವ ದೇವರು ಎಂದರೆ...

Last Updated 31 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಆಗಷ್ಟೇ ಮಳೆ ಬಂದು ನಿಂತಿತ್ತು. ನೆಲವಿನ್ನೂ ಹಸಿಯಾಗಿಯೇ ಇತ್ತು.  ತೋಟದಲ್ಲಿ ಕೆಲಸ ಮಾಡುವಾಗ ತೆಂಗಿನ ಮರದ ಪಕ್ಕದಲ್ಲಿದ್ದ ಒಂದು  ಕಲ್ಲು ಮಗುಚಿ ಹಾಕಿದ್ದೇ ತಡ, ಅದರ ಅಡಿಯಿಂದ ಸುಮಾರು 10 ಸೆಂ. ಮೀಟರ್ ಉದ್ದದ ಶತಪದಿಯೊಂದು  ತೆಂಗಿನ ಕಾಯಿ ತುರಿಯಂಥ ಬಿಳಿ ವಸ್ತುಗಳನ್ನು ಅವುಚಿ ಮಲಗಿರುವ ಅಚ್ಚರಿಯ ದೃಶ್ಯ ಕಂಡಿತು.

ಕುತೂಹಲದಿಂದ ಮಲಗಿದ್ದ ಶತಪದಿಯನ್ನು ನೋಡಲು ನನ್ನ ಮಗನೂ ನನ್ನ ಜೊತೆ ಬಂದು ಕೂತ. ತೀರಾ ಹತ್ತಿರದಿಂದ ಗಮನಿಸತೊಡಗಿದಾಗ ಶತಪದಿ ಅವುಚಿಕೊಂಡ ತೆಂಗಿನ ಕಾಯಿ ತುರಿಯಂಥ ಬಿಳಿಯ ವಸ್ತುಗಳು ಅವುಗಳ ಮರಿಗಳು ಎಂಬುದು ಖಚಿತವಾಯಿತು. ತೆಂಗಿನ ಗರಿಯ ಒಂದು ಉದ್ದ ಕಡ್ಡಿಯನ್ನು ತೆಗೆದುಕೊಂಡು ಮಲಗಿದ್ದ ಶತಪದಿಯನ್ನು ಎಬ್ಬಿಸಿ ಮೆಲ್ಲಗೆ ತಳ್ಳಿದೆವು. ಮೈಗೆ ಏನೋ ತಗುಲಿರಬಹುದು ಎಂದು ಶತಪದಿ ಅಷ್ಟು ಲಕ್ಷ್ಯ ಹಾಕದೆ ಕೊಂಚ ಮಿಸುಕಾಡಿ ಮತ್ತೆ ಮಲಗಿಕೊಂಡಿತು.

ಈ ಸಲ ಕಡ್ಡಿಯಿಂದ ಶತಪದಿಯನ್ನು ಕೊಂಚ ಎತ್ತಿ ಸರಿಸಿದೆವು. ಆಗಲೂ  ಹೆಚ್ಚು ಪ್ರತಿಭಟಿಸದೆ ಶತಪದಿ  ತನ್ನ ಮರಿಗಳನ್ನು ಸರಿಯಾಗಿ ತನ್ನ ತೆಕ್ಕೆಗೆ ತೆಗೆದುಕೊಂಡು ಅತ್ತಿತ್ತ ಅಲ್ಲಾಡಿ ಸರಿಯಾಗಿ ಮಲಗಿತು. ಮೂರನೇ ಸಾರಿ ಕಡ್ಡಿಯಿಂದ ಅದನ್ನು ಕೊಂಚ ದೂರ ಎತ್ತಿಟ್ಟು ಮರಿಗಳನ್ನು ನೋಡಲು ಬಗ್ಗಿದಾಗ ಶತಪದಿ ಸರ್ಪದಂತೆ ತಲೆ ಎತ್ತಿ ಪ್ರತಿಭಟಸಿ ಮತ್ತೆ ಮರಿಗಳನ್ನು ಆವರಿಸಿಕೊಂಡಿತು. ನಾವು ಬೆಚ್ಚಿ ಕೂತಲ್ಲಿಂದೇ ಹಿಂದೆ ಹಾರಿದೆವು. ಶತಪದಿಯ ತಾಯ್ತನದ ಬಗ್ಗೆ ಮತ್ತಷ್ಟು ಕುತೂಹಲವುಂಟಾಯಿತು. ಮನೆಗೆ ಓಡಿ ಹೋಗಿ ಕ್ಯಾಮೆರಾ ತರಲು ಮಗನಿಗೆ ಹೇಳಿದೆ.

ಕಡ್ಡಿಯಿಂದ ಶತಪದಿಯನ್ನು ಎಷ್ಟೇ ಎಳೆದು ಬದಿಗೆ ಸರಿಸಿಟ್ಟರೂ ಅದು  ಪ್ರತಿಭಟನಾರ್ಥ ಒಮ್ಮೆ ಸುತ್ತಲೂ ಹರಿದಾಡಿ ಮತ್ತೆ ಓಡೋಡಿ ಬಂದು ಮರಿಗಳನ್ನು ಅವುಚಿಕೊಳ್ಳುತ್ತಿತ್ತು. ತೆಂಗಿನ ಕಾಯಿಯ ತುರಿಯಂಥ ಆ ಮರಿಗಳೋ ಇನ್ನೂ ಕಣ್ಣು ತೆರೆಯದ ಸ್ಥಿತಿಯಲ್ಲಿದ್ದವು. ಮರಿಗಳನ್ನು ಹೇಗೆ ಅವುಚಿಕೊಂಡರೂ ಶತಪದಿಗೆ ಸಮಾಧಾನವಾಗುತ್ತಿರಲಿಲ್ಲ. ಎಲ್ಲ ಮರಿಗಳನ್ನೂ ತನ್ನ ಕಾಲುಗಳ ತೆಕ್ಕೆಯೊಳಗೇ ಸೇರಿಸಿ ಸರಿಯಾಗಿ ಮಲಗಲು ಅದು ಸುಮಾರು ಮೂರು ನಿಮಿಷ ತೆಗೆದುಕೊಳ್ಳುತ್ತಿತ್ತು. ಶತಪದಿಯ ತಾಯ್ತನದ ಪ್ರೀತಿ, ಕಾಳಜಿಯನ್ನು ಕಣ್ಣಾರೆ ಕಂಡ ನಮಗೆ ಮತ್ತೆ ಅದಕ್ಕೆ ತೊಂದರೆ ಕೊಡುವ ಮನಸ್ಸಾಗಲಿಲ್ಲ.

`ಕೈಲೋಪೋಡಾ ಎನ್ನುವ ಉಪವರ್ಗಕ್ಕೆ ಸೇರಿದ ಈ ಹುಳುವನ್ನು ವೈಜ್ಞಾನಿಕವಾಗಿ ಸ್ಕೋಲೋಪೆಂಡ್ರಾ ಹಾರ್ಡ್‌ವಿಕೇರಿ ಎಂದು ಗುರುತಿಸಲಾಗುತ್ತದೆ. ಇದರಲ್ಲಿ ಕೆಲವು ಪ್ರಬೇಧಗಳಿಗೆ  ಟೈಗರ್ ಸೆಂಟಿಪೀಡ್ ಎಂದು ಕರೆಯುತ್ತಾರೆ. ಇವು ಹೆಚ್ಚಾಗಿ ಹಣ್ಣಡಿಕೆಯ ಕೆಂಪು-ಹಳದಿ ಮಿಶ್ರಿತ ಬಣ್ಣ ಹೊಂದಿರುವುದರಿಂದ ಅವುಗಳಿಗೆ ಗ್ರಾಮೀಣ ಭಾಗದಲ್ಲಿ `ಹಣ್ಣಡಿಕೆ ಪಟಚುಳ' ಎಂದೂ ಕರೆಯುತ್ತಾರೆ. ಹೆಚ್ಚಾಗಿ ರಾತ್ರಿ ಹೊತ್ತು ಓಡಾಡುವ ಇವು ಕೆಸರು, ತಂಪು ಮಣ್ಣಲ್ಲಿ ವಾಸಿಸುತ್ತವೆ.

ಮಾತೃ ವಾತ್ಸಲ್ಯ: ಇದರ ಬಾಯಿಯ ಹತ್ತಿರದ ಕೆಂಪು ಭಾಗದಲ್ಲಿ  ವಿಷದ ಗ್ರಂಥಿಗಳಿರುವುದರಿಂದ ಅದು ತನ್ನ  ರಕ್ಷಣೆಗಾಗಿ ಹೋರಾಟ ಮಾಡುತ್ತದೆ. ತನ್ನ ವೈರಿಗಳಿಂದ ಇನ್ನು ತನ್ನ ರಕ್ಷಣೆ ಸಾಧ್ಯವಿಲ್ಲ ಎಂದು ಗೊತ್ತಾದಾಗ ಇದು  ಮರಿಗಳನ್ನು ಬಿಟ್ಟು ಓಡಿ ಹೋಗುತ್ತದೆ. ತನ್ನ ಮರಿಗಳೆಂದರೆ ಇದಕ್ಕೆ ಎಷ್ಟು ಪ್ರೀತಿ ಎಂದರೆ ಕೆಲವು ಸಲ ಮರಿಗಳು ಬೇರೆಯವರ ಪಾಲಾಗುವುದು ಬೇಡ ಎಂದು ಅವುಗಳನ್ನು ತಾನೇ ತಿಂದುಬಿಡುವ ಸಾಧ್ಯತೆಯೂ ಇದೆ' ಎಂಬ ಅಚ್ಚರಿಯ ಸಂಗತಿಗಳು ನಂತರ ಪ್ರಾಣಿಶಾಸ್ತ್ರ ಪ್ರಾಧ್ಯಾಪಕ ಡಾ. ಪ್ರಕಾಶ ಪಂಡಿತ ಅವರಿಂದ ಗೊತ್ತಾಯಿತು.

ನಮ್ಮ ತೋಟದಲ್ಲಿ ಕಂಡು ಬಂದ ಶತಪದಿಗೆ ತೊಂದರೆ ಕೊಟ್ಟು ಅದು ಮರಿಗಳನ್ನು ಬಿಟ್ಟು ಓಡಿ ಹೋಗಿ ಪ್ರಾಣ ತಪ್ಪಿಸಿಕೊಳ್ಳುವ ಅಥವಾ ಮರಿಗಳನ್ನು ತಾನೇ ತಿನ್ನುವಂಥ ಪರಿಸ್ಥಿತಿಯನ್ನು ತರಲಿಲ್ಲವಲ್ಲ ಎಂದು  ಸಮಾಧಾನದ ನಿಟ್ಟುಸಿರು ಬಿಟ್ಟೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT