ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣಿಗೆ ಬಿದ್ದ ಆನೆ ಹಿಂಡು: ಗಣತಿದಾರರ ಸಂತಸ

Last Updated 22 ಮೇ 2012, 19:30 IST
ಅಕ್ಷರ ಗಾತ್ರ

ಚಾಮರಾಜನಗರ/ಮೈಸೂರು: ರಾಜ್ಯದಲ್ಲಿಯೇ ಅತಿಹೆಚ್ಚು ಆನೆಗಳಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಗಜ ಗಣತಿ ಆರಂಭಗೊಂಡಿದೆ.

ಅರಣ್ಯ ವೀಕ್ಷಕರು, ಸ್ವಯಂ ಸೇವಕರು, ವನ್ಯಜೀವಿ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ತಂಡದ ಸದಸ್ಯರು ಮುಂಜಾನೆಯೇ ನಿಗದಿತ ಮಾದರಿ ಬ್ಲಾಕ್‌ಗಳಲ್ಲಿ ಎಣಿಕೆ ಕಾರ್ಯ ಆರಂಭಿಸಿದ್ದಾರೆ.

(ಚಾಮರಾಜನಗರ ವರದಿ): ಜಿಲ್ಲೆಯಲ್ಲಿ ಗಜ ಗಣತಿಗಾಗಿ ಒಟ್ಟು 173 ಬ್ಲಾಕ್ ಸ್ಥಾಪಿಸಲಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನ- 59,  ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯ- 53, ಕಾವೇರಿ ವನ್ಯಜೀವಿಧಾಮ- 24 ಹಾಗೂ ಕೊಳ್ಳೇಗಾಲ ಅರಣ್ಯ ವಿಭಾಗದ ವ್ಯಾಪ್ತಿ 37 ಬ್ಲಾಕ್  ಸ್ಥಾಪಿಸಲಾಗಿದೆ. ಮೊದಲ ದಿನದ `ಬ್ಲಾಕ್ ಗಣತಿ~ಗೆ ತೆರಳಿದ್ದ ಗಣತಿದಾರರಿಗೆ ಆನೆಗಳು ನಿರಾಸೆ ಮೂಡಿಸಲಿಲ್ಲ. ಹಿಂಡು ಹಿಂಡು ಆನೆಗಳನ್ನು ಕಂಡು  ಗಣತಿದಾರರು ಪುಳಕಿತರಾದರು.

ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ತೆರಳಿದ್ದ ಸ್ವಯಂ ಸೇವಕರಿಗೆ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದ ವ್ಯಾಪ್ತಿಯ ಕೃಷ್ಣಯ್ಯನಕಟ್ಟೆ  ಪ್ರದೇಶದಲ್ಲಿ 11ಕ್ಕೂ ಹೆಚ್ಚು ಆನೆಗಳ ಗುಂಪು ಕಾಣಿಸಿಕೊಂಡಿತು. ಅಯ್ಯನಕೆರೆ, ಕುಂಟಗುಡಿ ಪ್ರದೇಶದಲ್ಲಿ ಕಾಡಾನೆಗಳು ಗಣತಿದಾರರ ಕಣ್ಣಿಗೆ ಬಿದ್ದಿವೆ.

ಕೊಳ್ಳೇಗಾಲ ಅರಣ್ಯ ವಿಭಾಗದ ಗುಂಡಾಲ್, ಒಡಕೆಹಳ್ಳ ಪ್ರದೇಶ, ಕಾವೇರಿ ವನ್ಯಜೀವಿಧಾಮದ ಆಲಂಬಾಡಿ ಪ್ರದೇಶದಲ್ಲಿ ಕಾಡಾನೆಗಳ ಹಿಂಡು  ಗಣತಿದಾರರ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನದ ದೇವರಮಡು, ಹುಲಿಕಟ್ಟೆ ಪ್ರದೇಶದಲ್ಲಿ ಆನೆಗಳು ಗಣತಿದಾರರಿಗೆ ಕಾಣಿಸಿಕೊಂಡಿವೆ. ಬಂಡೀಪುರ ರಾಷ್ಟ್ರೀಯ ಉದ್ಯಾನ ನೀಲಗಿರಿ ಜೀವವೈವಿಧ್ಯ ಪ್ರದೇಶಕ್ಕೆ ಒಳಪಟ್ಟಿದೆ. ಈ ಪ್ರದೇಶದಲ್ಲಿ ಆನೆಗಳ ಸಂಖ್ಯೆ ಹೆಚ್ಚಿದೆ.
 
ಬೆಳಿಗ್ಗೆಯೇ ಗಣತಿಗೆ ತೆರಳಿದ್ದವರಿಗೆ ನೂರಾರು ಆನೆಗಳ ದರ್ಶನವಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಆಯ್ದ ಮಾದರಿ ಬ್ಲಾಕ್‌ಗಳಲ್ಲಿ ಗಣತಿದಾರರು ಸುತ್ತಾಡಿ ನೇರವಾಗಿ ಕಣ್ಣಿಗೆ ಕಾಣಿಸುವ ಆನೆಗಳ ಸಂಖ್ಯೆಯನ್ನು ಅರಣ್ಯ ಇಲಾಖೆಯಿಂದ ನೀಡಿರುವ   ನಮೂನೆಗಳಲ್ಲಿ ದಾಖಲಿಸಿಕೊಂಡಿದ್ದಾರೆ. ಬುಧವಾರ ಲೈನ್‌ಟ್ರಾನ್ಸೆಕ್ಟ್ ಲದ್ದಿ ಎಣಿಕೆ ವಿಧಾನದಡಿ ಆನೆಗಳ ಗಣತಿ ನಡೆಯಲಿದೆ.

(ಪಿರಿಯಾಪಟ್ಟಣ ವರದಿ): ಪಿರಿಯಾಪಟ್ಟಣ ತಾಲ್ಲೂಕಿನ ಅರಣ್ಯ ವಲಯದಲ್ಲಿ ಮಂಗಳವಾರ ನಡೆದ ಆನೆ ಗಣತಿ ಕಾರ್ಯದ 22 ಆನೆಗಳು  ಕಾಣಿಸಿಕೊಂಡಿವೆ. ಮುತ್ತೂರು ಅರಣ್ಯದಲ್ಲಿ 7, ದೊಡ್ಡಹರವೆ ಅರಣ್ಯದಲ್ಲಿ 7 ಹಾಗೂ ಆನೇಚೌಕೂರು ಅರಣ್ಯದಲ್ಲಿ 8 ಆನೆಗಳು ಗೋಚರವಾಗಿವೆ.
 

 ಒಂಟಿ ಸಲಗ ದಾಳಿ
ಹುಣಸೂರು
: ಇಲ್ಲಿನ ವೀರನಹೊಸಹಳ್ಳಿ ವಲಯದ ಸಿ.ಪಿ.ಟಿ.4 ರ ಅರಣ್ಯ ಪ್ರದೇಶದ ಹೊಸಕಟ್ಟೆಯಲ್ಲಿ ಮಂಗಳವಾರ ಆನೆ ಗಣತಿ ಕಾರ್ಯದಲ್ಲಿ ತೊಡಗಿದ್ದ ಸ್ವಯಂ ಸೇವಕರ ಮೇಲೆ  ಒಂಟಿ ಸಲಗ ದಾಳಿ ಮಾಡಿದೆ.

ದಾಳಿಯಲ್ಲಿ ಅರಣ್ಯ ಇಲಾಖೆ ದಿನಗೂಲಿ ನೌಕರ ಗಣೇಶ ಬಲಭುಜ ಮತ್ತು ಕೈಕಾಲುಗಳಿಗೆ ತೀವ್ರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಗಣೇಶ್ ಜೊತೆಯಲ್ಲಿ ಗಣತಿದಾರ ಶಶಿಕಾಂತ್, ಗಾರ್ಡ್ ಕಿರಣ್ ಹಾಗೂ ತಂಡ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT