ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣೀರಿಟ್ಟ ಜಾನುವಾರು ಮಾಲೀಕರು

Last Updated 17 ಫೆಬ್ರುವರಿ 2012, 10:40 IST
ಅಕ್ಷರ ಗಾತ್ರ

ಕುಕನೂರು: ರಾಜೂರು ಗ್ರಾಮದ ಹೊಲದಲ್ಲಿ ಆರು ಎಮ್ಮೆಗಳು ಸಾವಿನಪ್ಪಿದ ಧಾರುಣ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಮಾಲೀಕರು ಪ್ರತಿ ದಿನದಂತೆ ತಮ್ಮ ಜಾನುವಾರುಗಳನ್ನು ಮೇಯಿಸಲು ಬಿಟ್ಟಾಗ ರೈತರು ರಾಶಿ ಮಾಡಿ ಮುಖ್ಯ ರಸ್ತೆಯ ಪಕ್ಕದಲ್ಲಿ ಬಿಟ್ಟು ಹೋಗಿದ್ದ ಅಗಸಿ ಕಾಳು ಹೊಟ್ಟು (ಅಗಸೇಂದ್ರ) ತಿಂದು ಸಾವನಪ್ಪಿವೆ ಎಂದು ಹೇಳಲಾಗುತ್ತಿದೆ.

ರಸ್ತೆ ಪಕ್ಕದ ಹೊಲದಲ್ಲಿ ಬಿದ್ದು ಒದ್ದಾಡುತ್ತಿರುವ ಎಮ್ಮೆಗಳನ್ನು ಗಮನಿಸಿದ ರೈತರು ಜೀವ ಉಳಿಸಲು ಶ್ರಮ ಪಡುತ್ತಿರುವಾಗಲೇ ಆರು ಎಮ್ಮೆಗಳು ಜೀವ ಬಿಟ್ಟಿವೆ. ಅಗಸೇಂದ್ರ ತಿಂದು ತೀವ್ರವಾಗಿ ಅಸ್ವಸ್ಥಗೊಂಡಿದ್ದ ಒಂದು ಜರ್ಸಿ ಆಕಳು, ಒಂದು ಎಮ್ಮೆ ಹಾಗೂ ಕರುಗೆ ಸಕಾಲದಲ್ಲಿ ಚಿಕಿತ್ಸೆ ನೀಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿವೆ. ಈ ಕಹಿ ಸುದ್ದಿ ತಿಳಿದ ರಾಜೂರ-ಆಡೂರ, ಕುಕನೂರು, ಕಲ್ಲೂರ ಗ್ರಾಮಗಳ ನೂರಾರು ರೈತರು ಹಾಗೂ ರೈತ ಮಹಿಳೆಯರು ಆತಂಕದಿಂದ ವೀಕ್ಷಿಸಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

`ಎಪ್ಪಾ ಏನ್ ಮಾಡಬೇಕ್ರಿ ನಮ್ಮ ಮನೀನ ಮುರಿದೋಯ್ತು, ದಿನಾಲು 10-12 ಲೀಟರ್ ಹಾಲು ಹಿಂಡುತ್ತಿದ್ವು, ಮಕ್ಕಳ್ನ ಸಾಕಿದಂಗ ಸಾಕಿದ್ವಿ~ ಎಂದು ನಾಲ್ಕು ಎಮ್ಮೆಯನ್ನು ಕಳೆದುಕೊಂಡಿದ್ದ ಗವಿಸಿದ್ದಪ್ಪ ಅಂಗಡಿ ಅವರ ಕುಟುಂಬದವರೆಲ್ಲರೂ ರೋಧಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.

` ಏಳೆಂಟು ವರ್ಷದಿಂದ ಇವು ಮನ್ಯಾಗ ಹುಟ್ಯಾವ್ರಿ, ಆವಾಗಿನಿಂದ ನಮ್ಮ ಮನೀಗೆ ಆಸರೆ ಆಗಿದ್ದವು, ಇಬ್ಬರೂ ಮುದುಕರು ಅವುಗಳನ್ನು ಜೋಪಾನ ಮಾಡ್ತಿದ್ವಿ, ಒಂದು ಎಮ್ಮೆ ದಿನಾಲು 4 ಲೀಟರ್ ಹಾಲು ಕೊಡ್ತಿತ್ತು, ಮತ್ತೊಂದು ಎಮ್ಮೆ ಇವತ್ನಾಳೆ ಕರು ಹಾಕ್ತಿತ್ತರಿ, ಈಗ ನಾವೆಂಗ ಬದುಕಬೇಕ್ರಿ~ ಎಂದು ಎರಡು ಎಮ್ಮೆ ಕಳೆದುಕೊಂಡಿದ್ದ ಶರಣವ್ವ ಶಂಕ್ರಪ್ಪ ಮೂಗನೂರ `ಪ್ರಜಾವಾಣಿ~ ಜತೆಗೆ ತಮ್ಮ ನೋವನ್ನು ಹೇಳಿಕೊಂಡರು.

`ಅಗಸೇಂದ್ರ ಮತ್ತು ಕಳಲಿನಲ್ಲಿ ಹೆಚ್ಚು ವಿಷಕಾರಿ ಅಂಶ ಇದ್ದು, ಇಂತಹ ಮೇವನ್ನು ತಿನ್ನಿಸದಂತೆ ಜಾನುವಾರು ಮಾಲೀಕರು ಹಾಗೂ ರೈತರು ಅತ್ಯಂತ ಜಾಗೃತಿ ವಹಿಸಿದಲ್ಲಿ ಇಂತಹ ಅವಘಡ ತಪ್ಪಿಸಬಹುದು. ಆರು ಎಮ್ಮೆಗಳ ಸಾವಿನಿಂದ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ~ ಎಂದು ಪಶು ಸಂಗೋಪನಾ ಇಲಾಖೆ ತಾಲ್ಲೂಕು ವೈದ್ಯಾಧಿಕಾರಿ ಡಾ.ತಿಪ್ಪಣ್ಣ ತಳಕಲ್ ಹೇಳಿದರು. ಹಿರಿಯ ಪಶು ಪರೀಕ್ಷಕ
ಶಿವಶಂಕರ್ ಮಂಗಲ್, ಬೈಫ್ ಸಂಸ್ಥೆಯ ಬೈಯಣ್ಣ ಚಿಕಿತ್ಸೆಗೆ ಶ್ರಮಿಸಿದರು.

ತಹಸೀಲ್ದಾರ ಈ.ಡಿ.ಬೃಂಗಿ, ಬಿ.ಜೆ.ಪಿ ಯುವ ಮುಖಂಡ ನವೀನ್‌ಕುಮಾರ ಗುಳಗಣ್ಣವರ, ಡಾ.ಮಲ್ಲಿಕಾರ್ಜುನ ಬಿನ್ನಾಳ, ಫಕೀರಸಾಬ ನೂರಭಾಷಾ, ಶಿವಾನಂದ ದೊಡ್ಮನಿ ಸೇರಿದಂತೆ ಸ್ಥಳೀಯ ಗ್ರಾಮದ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಸಿದ ಇಲಾಖೆಯಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿ ಜಾನುವಾರು ಮಾಲೀಕರಿಗೆ ಧೈರ್ಯ ತುಂಬಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT