ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣು ನಿಮ್ಮದೊಂದು ಕಣ್ಣಿರಲಿ

Last Updated 26 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಒಮ್ಮೆ ಕಣ್ಣು ಮುಚ್ಚಿಕೊಳ್ಳಿ. ಆಮೇಲೆ ಕಣ್ಣುಗಳಿಗೆ ಅಂಗೈ ಅಡ್ಡವಿರಿಸಿ. ಇನ್ನಷ್ಟು ಬಿಗಿಯಾಗಿ ಮುಚ್ಚಿಕೊಂಡು, ಮನೆಯಲ್ಲಿ ಅತ್ತಿತ್ತ ಓಡಾಡಲು ಪ್ರಯತ್ನಿಸಿ. ಆಗುತ್ತಿಲ್ಲ, ತೊಡರುತ್ತೀರಿ, ತಡವರಿಸುತ್ತೀರಿ. ನಡೆಯುವುದು ಸಾಧ್ಯವಾಗದು ಅಲ್ಲವೇ?

ಮತ್ತೆ, ಜಗತ್ತಿನಾದ್ಯಂತ ಇರುವ ಕೋಟ್ಯಂತರ ಅಂಧರು ದೃಷ್ಟಿರಹಿತ ಕತ್ತಲ ಜಗತ್ತಿನಲ್ಲಿ ಯಾವ ರೀತಿ ತೊಂದರೆ ಅನುಭವಿಸುತ್ತಿರಬಹುದು? ಒಮ್ಮೆ ಯೋಚಿಸಿ ನೋಡಿ. ಅಂದರೆ ದೃಷ್ಟಿಗಿರುವ ಪ್ರಾಮುಖ್ಯತೆ ಏನು ಎಂಬುದು ನಿಮಗೆ ಅರ್ಥವಾಗುತ್ತದೆ. ಹಾಗಿದ್ದ ಮೇಲೆ ನಮ್ಮ ಕಣ್ಣಿನ ಬಗ್ಗೆ ನಾವು ನಿಗಾ ವಹಿಸಲೇಬೇಕಲ್ಲವೇ?

ದೀರ್ಘ ಕಾಲದವರೆಗೆ ಆರೋಗ್ಯಯುತ ಸುಂದರ ಕಣ್ಣುಗಳನ್ನು ಹೊಂದಲು ಸ್ವತಃ ನಾವೇ ತೆಗೆದುಕೊಳ್ಳಬಹುದಾದ ಕೆಲವು ಮುಂಜಾಗ್ರತಾ ಕ್ರಮಗಳು ಇಲ್ಲಿವೆ:

ಪ್ರತಿ ನಿತ್ಯ ಶುದ್ಧ ತಣ್ಣೀರಿನಿಂದ ಕಣ್ಣುಗಳನ್ನು ತೊಳೆಯಬೇಕು.

ಕಣ್ಣಿನೊಳಗೆ ಯಾವುದೇ ವಸ್ತು ಸೇರಿಕೊಂಡಾಗ ಕಣ್ಣನ್ನು ಉಜ್ಜಬಾರದು, ರೆಪ್ಪೆಗಳನ್ನು ಪದೇ ಪದೇ ಬಡಿಯುವುದರಿಂದ ವಸ್ತು ಹೊರಬರುತ್ತದೆ.  ಇಲ್ಲವೇ ಈರುಳ್ಳಿಯ ವಾಸನೆಯನ್ನು ಮೂಗಿನಲ್ಲಿ ಹೀರಿಕೊಳ್ಳಬೇಕು. ಆಗ ಕಣ್ಣಲ್ಲಿ ನೀರಾಡಿ ಒಳ ಸೇರಿದ ವಸ್ತು ಹೊರಬರುತ್ತದೆ.

ಕಣ್ಣಿನೊಳಗೆ ಉಸುಕು, ಹರಳು ಸೇರಿಕೊಂಡಾಗ ಅಗಲವಾದ ಪಾತ್ರೆಯಲ್ಲಿ ಶುದ್ಧ ತಣ್ಣೀರನ್ನು ಹಾಕಿ ಕಣ್ಣನ್ನು ಮುಳುಗಿಸಿ ರೆಪ್ಪೆ ಮುಚ್ಚಿ, ತೆಗೆಯಬೇಕು.  8-10 ಸಲ ಹೀಗೆ ರೆಪ್ಪೆ ಬಡಿಯುವುದರಿಂದ ಹರಳು ಹೊರಬರುತ್ತದೆ.

ಪ್ರಖರವಾದ ಸೂರ್ಯನನ್ನು ಬರಿಗಣ್ಣಿನಿಂದ ನೋಡಬಾರದು.

ನಿತ್ಯ ಆಹಾರದಲ್ಲಿ ನುಗ್ಗೆಕಾಯಿ, ನುಗ್ಗೆಸೊಪ್ಪು, ಪಪ್ಪಾಯಿ ಹಣ್ಣು, ಗಜ್ಜರಿ, ಬಸಳೆ, ಪಾಲಕ್ ಸೊಪ್ಪನ್ನು ಹೆಚ್ಚು ಉಪಯೋಗಿಸುವುದರಿಂದ ಕಣ್ಣಿನ ಆರೋಗ್ಯ ರಕ್ಷಿಸಿಕೊಳ್ಳಬಹುದು.

ಕಣ್ಣುಗಳಿಗೆ ರಾಸಾಯನಿಕಯುಕ್ತ ಕಾಡಿಗೆ ಅಥವಾ ತಲೆಕೂದಲಿಗೆ ಬಣ್ಣ ಹಚ್ಚುವುದರಿಂದ ಕಣ್ಣಿನ ಆರೋಗ್ಯಕ್ಕೆ ಅಪಾಯ ಉಂಟಾಗಬಹುದು.

ಅತ್ಯಂತ ಕಡಿಮೆ ಬೆಳಕಿನಲ್ಲಿ ಓದಬಾರದು. ಚಲಿಸುತ್ತಿರುವ ಬಸ್ಸು ಮತ್ತು ರೈಲಿನಲ್ಲಿ ಓದುವುದು ಸಹ ಸೂಕ್ತವಲ್ಲ, ಓದುವಾಗ ಬೆಳಕಿನ ಎದುರು ಕುಳಿತುಕೊಳ್ಳದೆ ಬೆಳಕು ನಮ್ಮ ಎಡಭಾಗದ ಹಿಂದಿನಿಂದ ಪುಸ್ತಕದ ಮೇಲೆ ಬೀಳುವಂತೆ ಇರಬೇಕು. ಓದುವಾಗ ನಮ್ಮ ಕಣ್ಣಳತೆ ಅಂದಾಜು 35ರಿಂದ 40 ಸೆಂಟಿಮೀಟರ್ ದೂರ ಇರಬೇಕು.

ದೀರ್ಘ ಕಾಲದವರೆಗೆ ಓದುವ, ಬರೆಯುವ ಸಂದರ್ಭ ಬಂದಾಗ ಆಗಾಗ್ಗೆ ಕಣ್ಣುಗಳನ್ನು ಒಂದೆರಡು ನಿಮಿಷ ಮುಚ್ಚಿ ವಿಶ್ರಾಂತಿ ಕೊಡಬೇಕು.

ಕಣ್ಣುಗಳು ಬಹಳಷ್ಟು ಆಯಾಸಗೊಂಡಿದ್ದರೆ, ರಾತ್ರಿ ಮಲಗುವಾಗ ಸೌತೆಕಾಯಿಯನ್ನು ಬಿಲ್ಲೆಯ ಆಕಾರದಲ್ಲಿ ಕತ್ತರಿಸಿ ಮುಚ್ಚಿದ ಕಣ್ಣುಗಳ ಮೇಲೆ 30 ನಿಮಿಷ ಇರಿಸಿಕೊಳ್ಳಬೇಕು. ಆಗ ದಣಿವು ಮಾಯವಾಗುತ್ತದೆ.

ಕೆಲವರಿಗೆ ಕನ್ನಡಕ ಉಪಯೋಗಿಸುವ ಪ್ರಮೇಯ ಇದ್ದರೂ ಸಂಕೋಚದಿಂದ ಕನ್ನಡಕ ಹಾಕಲು ಹಿಂಜರಿಯುತ್ತಾರೆ. ಇದರಿಂದ ಕಣ್ಣಿನ ಆರೋಗ್ಯ ಮತ್ತಷ್ಟು ಕೆಡುತ್ತದೆ. ಆದ್ದರಿಂದ ವೈದ್ಯರ ಸಲಹೆ ಮೇರೆಗೆ ಕನ್ನಡಕ ಉಪಯೋಗಿಸುವುದು ಸೂಕ್ತ. ಕೊಳಕಾದ, ಒಡೆದು ಹೋದ, ಗೀಚು ಬಿದ್ದಿರುವ ಕನ್ನಡಕ ಉಪಯೋಗಿಸುವುದು ಒಳ್ಳೆಯದಲ್ಲ. ವೈದ್ಯರ ಸಲಹೆ ಇಲ್ಲದೆ ಕಣ್ಣಿನ ಒಳಗೆ ಯಾವುದೇ ಔಷಧಿ ಹಾಕುವುದು ಅಪಾಯಕರ. ಪ್ರತಿದಿನ ಎಂಟು ತಾಸು ನಿದ್ರಿಸುವುದು ಕಣ್ಣಿಗೆ ಹಿತಕರ. ಏನೇ ಆಗಲಿ, ಕಣ್ಣಿನ ಮೇಲೆ ನಿಮ್ಮ ಒಂದು ಕಣ್ಣಿರಲಿ.

ಕಣ್ಣಿಟ್ಟು ಪಾಲಿಸಿ
ಕಣ್ಣಿನ ಆರೋಗ್ಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಯಸ್ಸಿನ ಭೇದವಿಲ್ಲದೆ ಯಾರೇ ಆದರೂ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುವುದು ಒಳ್ಳೆಯದು.

1. ವಿಟಮಿನ್ `ಎ'ಯುಕ್ತ ಆಹಾರವನ್ನು ಜಾಸ್ತಿ ಸೇವಿಸಬೇಕು.

2. ಚಿಕ್ಕ ಮಕ್ಕಳಿಗೆ ವಿಟಮಿನ್ `ಎ' ಹನಿ ಹಾಕಿಸಬೇಕು.

3. ಮಕ್ಕಳಿಗೆ ಆಟದ ಸಾಮಾನು ಕೊಡಿಸುವಾಗ ಎಚ್ಚರಿಕೆ ಅಗತ್ಯ.

4. ಕಣ್ಣಿಗೆ ಸಣ್ಣ ಗಾಯವಾದರೂ ಕೂಡಲೇ ನೇತ್ರ ತಜ್ಞರನ್ನು ಸಂಪರ್ಕಿಸಿ.

5. ಪ್ರತಿ ಮಗು ಜನಿಸಿದಾಗ, ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಹಾಗೂ ಯಾವುದೇ ತೊಂದರೆಯ ಲಕ್ಷಣ ಕಂಡಾಗ ನೇತ್ರ ಪರೀಕ್ಷೆ ಮಾಡಿಸಿ.

6. ಸುಮಾರು 40 ವರ್ಷ ದಾಟಿದವರು ನಿರಂತರ ನೇತ್ರ ಪರೀಕ್ಷೆ ಮಾಡಿಸಿಕೊಳ್ಳಬೇಕು.

7. ಮಧುಮೇಹ, ಅಧಿಕ ರಕ್ತದೊತ್ತಡ ಇರುವವರು ಆರು ತಿಂಗಳಿಗೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು.

8. ಯಾವುದೇ ಕಾರಣಕ್ಕೂ ಮಕ್ಕಳ ಬಳಿ ಸುಣ್ಣ ತರುವಂತೆ ಹೇಳಬೇಡಿ.

9. ಮಾಲ್ಗಣ್ಣು ಅದೃಷ್ಟವಲ್ಲ, ಸಮಸ್ಯೆಯ ಸಂಕೇತ ಎಂಬುದು ನೆನಪಿರಲಿ.

10. ಬರಿಗಣ್ಣಲ್ಲಿ ಎಂಥ ಸಂದರ್ಭದಲ್ಲೂ ಗ್ರಹಣ ನೋಡಬೇಡಿ.

ಈ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಬಹುತೇಕ ನೇತ್ರ ಸಮಸ್ಯೆಗಳನ್ನು ಸುಲಭವಾಗಿ ತಡೆಯಬಹುದು. ಬದುಕನ್ನು ಹೆಚ್ಚು ಪ್ರಕಾಶಮಾನ ಆಗಿಸಿಕೊಳ್ಳಬಹುದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT