ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣು ಹಾಯಿಸಿದಲ್ಲೆಲ್ಲ ಕಡಲೆಕಾಯಿ ರಾಶಿ

Last Updated 2 ಡಿಸೆಂಬರ್ 2013, 19:34 IST
ಅಕ್ಷರ ಗಾತ್ರ

ಬೆಂಗಳೂರು: ಕಣ್ಣು ಹಾಯಿಸಿದಲ್ಲೆಲ್ಲ ಕಡಲೆಕಾಯಿ ರಾಶಿ, ದೊಡ್ಡ ಬಸವಣ್ಣ­ನಿಗೆ ನೈವೇದ್ಯ ಮಾಡಿದ ಕಡಲೆಕಾಯಿ ಪ್ರಸಾದ ಕೊಳ್ಳಲು ಮುಗಿ ಬಿದ್ದ ಭಕ್ತರು, ಕಡಲೆಕಾಯಿ ಕೊಳ್ಳಲು ಬಂದ ಜನ ಸಾಗರ... ನಗರದ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದ ಬಳಿ ಸೋಮ­ವಾರ­ದಿಂದ ಆರಂಭಗೊಂಡ ಕಡಲೆ­ಕಾಯಿ ಪರಿಷೆಯಲ್ಲಿ ಕಂಡುಬಂದ ನೋಟವಿದು. ಬಸವನಗುಡಿ ಬೀದಿ ಬೀದಿಗಳಲ್ಲಿ ಪರಿಷೆಯ ಸಂಭ್ರಮ ಮನೆ ಮಾಡಿತ್ತು.

ನಗರದ ಅಕ್ಕಪಕ್ಕದ ಊರುಗಳಿಂದ ಕಡಲೆಕಾಯಿ ತಂದಿದ್ದ ಮಾರಾಟ­ಗಾರರು ಮಾರಾಟದ ಭರಾಟೆಯಲ್ಲಿ­ದ್ದರೆ, ಕಡಲೆಕಾಯಿ ಕೊಳ್ಳುವ ಸಂಭ್ರಮ ಜನರದ್ದು. ಬೆಲೆಯ ಬಗ್ಗೆ ತಲೆಕೆಡಿಸಿ­ಕೊಳ್ಳದ ಭಕ್ತರು ಕಡಲೆಕಾಯಿಕೊಳ್ಳುವ ಧಾವಂತದಲ್ಲಿ ಇದ್ದರು. ‘ಚಿಕ್ಕಂದಿನಿಂದಲೂ ಕಡಲೆಕಾಯಿ ಪರಿಷೆಗೆ ತಪ್ಪದೆ ಬರುತ್ತಿದ್ದೇನೆ. ನಾನು ಮೊದಲು ಪರಿಷೆಯಲ್ಲಿ ಕಡಲೆಕಾಯಿ ಕೊಂಡಾಗ ಸೇರಿಗೆ ತುಂಬಾ ಕಡಿಮೆ ಹಣವಿತ್ತು.

ಆದರೆ,  ಮೂವತ್ತು ವರ್ಷದ ಬಳಿಕ ಸೇರು ಕಡಲೆಕಾಯಿ ಬೆಲೆ ಅತಿ ಹೆಚ್ಚಾಗಿದೆ. ಕಡಲೆಕಾಯಿ ಕೊಳ್ಳು­ವುದು, ತಿನ್ನುವುದು ಮುಖ್ಯವಲ್ಲ. ಆದರೆ, ಈ ಸಡಗರ ನೋಡುವುದೇ ಒಂದು ಭಾಗ್ಯ. ಪಾಶ್ಚಾತ್ಯರ ಪ್ರಭಾವ ನಗರದ ಮೇಲಾಗುತ್ತಿದ್ದರೂ ಇಂತಹ ಪರಿಷೆ­ಗಳಿಂದ ನಮ್ಮತನ ಉಳಿದಿದೆ ಎನಿಸುತ್ತದೆ’ ಎಂದು ಗಿರಿನಗರದ ವೆಂಕಟೇಶಾಚಾರ್‌ ಹೇಳಿದರು.

‘ಪ್ರತಿ ವರ್ಷವೂ ಕಡಲೆಕಾಯಿ ಮಾರಾಟಕ್ಕೆ ಇಲ್ಲಿ ಬರುತ್ತೇನೆ. ಈ ಬಾರಿ ಹತ್ತು ಚೀಲ ಕಡಲೆಕಾಯಿಗಳನ್ನು ತಂದಿದ್ದೆ. ಅದರಲ್ಲಿ ಈಗಾಗಲೇ ಏಳು ಚೀಲಗಳು ಖಾಲಿಯಾಗಿವೆ. ಪ್ರತಿ ವರ್ಷದಂತೆ ಈ ಬಾರಿಯೂ ಮಾರಾಟ ಭರ್ಜರಿಯಾಗಿದೆ’ ಎಂದು ಆನೇಕಲ್‌ ರೈತ ಗಿರಿಯಪ್ಪ ಸಂತಸ ವ್ಯಕ್ತಪಡಿಸಿದರು. ಕಡಲೆಕಾಯಿ ಪರಿಷೆಯಷ್ಟೇ ಅಲ್ಲ: ಇಲ್ಲಿ ನಡೆಯುವುದು ಬರೀ ಕಡಲೆಕಾಯಿ ಪರಿಷೆಯಷ್ಟೇ ಅಲ್ಲ. ಅಲ್ಲಿ ಜಾತ್ರೆಯ ಸಂಭ್ರಮವೂ ಇತ್ತು. ಸೆಣಬಿನ ಕಸೂತಿ ಬ್ಯಾಗುಗಳು, ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌­ನಲ್ಲಿ ತಯಾರಿಸಿದ ಸರಸ್ವತಿ, ಗಣಪತಿ ಮೂರ್ತಿಗಳೂ ಇಲ್ಲಿ ಮಾರಾಟಕ್ಕೆ ಲಭ್ಯವಿದ್ದವು.

ಮಕ್ಕಳಿಗೆ ಇಷ್ಟವಾಗುವ ಬೊಂಬೆ­ಗಳು, ಮಹಿಳೆಯರಿಗೆ ಇಷ್ಟವಾಗುವ ಓಲೆ, ಬಳೆಗಳ ಮಾರಾಟಗಾರರು ಸಹ ಸಂಭ್ರಮದಿಂದ ಭಾಗವಹಿಸಿದ್ದರು. ಕಡಲೆಕಾಯಿ ಪರಿಷೆಗೆ ಮೇಯರ್‌ ಬಿ.ಎಸ್‌.ಸತ್ಯನಾರಾಯಣ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT