ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಣ್ಣುದಾನಿಗಳ ಸಂಖ್ಯೆ ಹೆಚ್ಚಲಿ'

ದೃಷ್ಟಿ ದೋಷವುಳ್ಳ ವಿದ್ಯಾರ್ಥಿಗಳಿಗೆ ಕನ್ನಡಕ ವಿತರಣೆ
Last Updated 5 ಜುಲೈ 2013, 8:15 IST
ಅಕ್ಷರ ಗಾತ್ರ

ರಾಮನಗರ: `ಅಂಧತ್ವದ ಕತ್ತಲಿನಲ್ಲಿರುವ ಜನರಿಗೆ ಬೆಳಕು ನೀಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಣ್ಣುಗಳನ್ನು ದಾನ ಮಾಡಲು ಮುಂದಾಗಬೇಕು' ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದರು.

ಬಿಡದಿಯ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಫೌಂಡೇಷನ್, ಡಾ.ರಾಜ್‌ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರ, ಡಾ. ರಾಜ್‌ಕುಮಾರ್ ಟ್ರಸ್ಟ್, ಸಾರ್ವಜನಿಕ ಶಿಕ್ಷಣ ಇಲಾಖೆ, ಶಂಕರ್ ಕಣ್ಣಿನ ಆಸ್ಪತ್ರೆ ಜಂಟಿಯಾಗಿ ಗುರುವಾರ ಗುರುಭವನದಲ್ಲಿ ಏರ್ಪಡಿಸಿದ್ದ ದೃಷ್ಟಿ ದೋಷವುಳ್ಳ ವಿದ್ಯಾರ್ಥಿಗಳಿಗೆ ಕನ್ನಡಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವರನಟ ಡಾ. ರಾಜ್ ಕುಮಾರ್ ಅವರೇ ಸ್ವತಃ ತಮ್ಮ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ಆ ನಂತರದ ದಿನಗಳಲ್ಲಿ ಇತರರು ತಮ್ಮ ಕಣ್ಣುಗಳನ್ನು ದಾನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದು ಆಂದೋಲನದ ರೀತಿಯಲ್ಲಿ ನಡೆಯಬೇಕು. ಇದಕ್ಕೆ ಸಮಾಜದ ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ಡಾ. ರಾಜ್ ಅವರ ಕುಟುಂಬದವರು ನೇತ್ರದಾನ ಕಾರ್ಯಕ್ರಮಗಳಲ್ಲಿ ನೇರವಾಗಿ ಭಾಗಿಯಾಗಿ ತಮ್ಮ ಬದ್ಧತೆ ಮತ್ತು ಕಾಳಜಿಯನ್ನು ತೋರುತ್ತಿರುವುದು ಶ್ಲಾಘನೀಯ ಎಂದರು.

ಬಿಡದಿಯ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಫೌಂಡೇಷನ್‌ನವರು ರಾಜ್ ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರದ ವತಿಯಿಂದ ಇಲ್ಲಿಯವರೆಗೆ 450ಕ್ಕೂ ಹೆಚ್ಚು ಮೃತರಿಂದ ಕಣ್ಣುಗಳನ್ನು ಸಂಗ್ರಹಿಸಿ, ಹಲವಾರು ಅಂಧರ ಬಾಳಿನಲ್ಲಿ ಬೆಳಕು ಮೂಡುವಂತೆ ಮಾಡಿದ್ದಾರೆ. ಸತ್ತವರ ಮನೆ ಬಾಗಿಲಿಗೆ ಹೋಗಿ ನೇತ್ರದಾನದ ಬಗ್ಗೆ ತಿಳಿ ಹೇಳಿ ನೇತ್ರ ಸಂಗ್ರಹಣಾ ಕಾರ್ಯದಲ್ಲಿ ತೊಡಗಿರುವ ಅವರ ಕೆಲಸ ಶ್ಲಾಘನೀಯ ಎಂದು ಅಭಿನಂದಿಸಿದರು.

ಡಾ. ರಾಜ್‌ಕುಮಾರ್ ಟ್ರಸ್ಟ್‌ನ ಅಧ್ಯಕ್ಷರೂ ಆದ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಮಾತನಾಡಿ, `ನೇತ್ರದಾನದಿಂದ ಹಲವರ ಅಂಧತ್ವ ನಿವಾರಣೆ ಆಗುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ಎಲ್ಲರೂ ಮನಸ್ಸು ಮಾಡಬೇಕು' ಎಂದು ಮನವಿ ಮಾಡಿದರು.

ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, `ಶಾಲಾ ಮಕ್ಕಳಲ್ಲಿನ ದೃಷ್ಟಿ ದೋಷ ನಿವಾರಣಾ ಕಾರ್ಯಕ್ರಮಗಳು ಒಂದು ತಾಲ್ಲೂಕು, ಜಿಲ್ಲೆಗೆ ಸೀಮಿತ ಆಗಬಾರದು. ಅದು ಇಡೀ ರಾಜ್ಯದಲ್ಲಿ ನಡೆಯಬೇಕು' ಎಂದರು.

ಹಿರಿಯ ನಟ ಎಸ್.ದೊಡ್ಡಣ್ಣ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಔಷಧಿ ವ್ಯಾಪಾರಿ ಸಂಘಗಳ ಅಧ್ಯಕ್ಷ ಕೆ.ಇ.ಪ್ರಕಾಶ್, ಜಿ.ಪಂ ಸಿಇಒ ಡಾ. ಎಂ.ವಿ.ವೆಂಕಟೇಶ್, ಡಿಡಿಪಿಐ ಪ್ರಹ್ಲಾದ್‌ಗೌಡ, ಡಾ. ರಾಜ್ ಕುಮಾರ್ ಟ್ರಸ್ಟ್‌ನ  ಟ್ರಸ್ಟಿ ಟಿ. ವಾಸನ್, ಎಸ್‌ಪಿಆರ್ ಗ್ರೂಪ್ಸ್‌ನ ಅಧ್ಯಕ್ಷ ಎಸ್.ಪಿ.ತಿಮ್ಮೇಗೌಡ, ಶಂಕರ್ ಕಣ್ಣಿನ ಆಸ್ಪತ್ರೆಯ ನಿರ್ದೇಶಕ ಬಾಲ ಸುಬ್ರಹ್ಮಣ್ಯನ್, ನೇತ್ರ ತಜ್ಞ ಡಾ. ಆನಂದ್, ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಫೌಂಡೇಷನ್‌ನ ಕಾರ್ಯದರ್ಶಿ ಎಚ್.ಮಂಜುನಾಥ್, ಖಜಾಂಚಿ ಜಯರಾಮ್, ಮುಖಂಡ ಡಿ.ಎಂ.ವಿಶ್ವನಾಥ್‌ವಿಶ್ವನಾಥ್ ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT