ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣುಬಿಟ್ಟು ನೋಡಿ!

Last Updated 3 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಅಂಧತ್ವ ನಿವಾರಣೆಗೆ ಡಾ.ರಾಜ್‌ಕುಮಾರ್ ನೇತ್ರ ಬ್ಯಾಂಕ್‌ ಸ್ಥಾಪಿಸಿರುವ ನಾರಾಯಣ ನೇತ್ರಾಲಯ ನೇತ್ರದಾನ ಉತ್ತೇಜಿಸಲು ಸೆಪ್ಟೆಂಬರ್ 8ರವರೆಗೆ ಪ್ರಚಾರಾಂದೋಲನ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ನೇತ್ರಾಲಯದ ಅಧ್ಯಕ್ಷ ಡಾ.ಕೆ.ಭುಜಂಗ ಶೆಟ್ಟಿ ‘ಮೆಟ್ರೊ’ ಜೊತೆ ಮಾತನಾಡಿದರು.

ನೇತ್ರದಾನದ ಕುರಿತು ಅರಿವು ಮೂಡಿಸಲು ತೊಡಗಿಕೊಂಡಿದ್ದು ಏಕೆ?
ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ ಎಂಎಸ್ ಮಾಡಿದೆ. ಆ ಸಂದರ್ಭದಲ್ಲಿ ಕಣ್ಣಿನ ಅಗತ್ಯವಿದ್ದವರಿಗೆ ಶ್ರೀಲಂಕಾದಿಂದ ಕಣ್ಣು ತರಿಸಿಕೊಳ್ಳುತ್ತಿದ್ದ ವಿಷಯ ತಿಳಿಯಿತು. ಶ್ರೀಲಂಕಾದಲ್ಲಿ ಬೌದ್ಧ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಅವರಿಗೆ ಸತ್ತ ನಂತರ ಅಂಗಾಂಗಗಳನ್ನು ದಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ. ಹೀಗಾಗಿ ಅವರು ಪ್ರಪಂಚದ ನೂರಕ್ಕೂ ಹೆಚ್ಚು ರಾಷ್ಟ್ರಗಳಿಗೆ ಅಗತ್ಯವಿರುವ ಕಣ್ಣುಗಳನ್ನು ದಾನ ಮಾಡುತ್ತಿದ್ದರು. ಈ ವಿಷಯ ನನ್ನ ಮೇಲೆ ಗಾಢ ಪರಿಣಾಮ ಬೀರಿತು. ನಮ್ಮ ದೇಶದವರಿಗೆ ಬೇಕಾಗುವ ಕಣ್ಣುಗಳನ್ನು ನಾವೇ ಏಕೆ ಸಂಗ್ರಹಿಸಿಬಾರದು ಎಂಬ ಚಿಂತನೆ ಮೂಡಿತು.

ಡಾ.ರಾಜ್‌ಕುಮಾರ್ ಅವರ ಹೆಸರಿನಲ್ಲಿ ನೇತ್ರ ಬ್ಯಾಂಕ್ ಆರಂಭ ಹೇಗೆ ಸಾಧ್ಯವಾಯಿತು?
ಓದು ಮುಗಿದ ಬಳಿಕ ಇಲ್ಲಿನ ದೇವಯ್ಯ ಪಾರ್ಕ್‌ನಲ್ಲಿ ಕ್ಲಿನಿಕ್ ಆರಂಭಿಸಿದೆ. ಡಾ.ರಾಜ್‌ಕುಮಾರ್ ಅವರು ಕಣ್ಣು ಪರೀಕ್ಷೆಗೆಂದು ಆಗಾಗ ಕ್ಲಿನಿಕ್‌ಗೆ ಬರುತ್ತಿದ್ದರು. ಬದುಕಿರುವಾಗ ಕಣ್ಣುಗಳನ್ನು ದಾನ ಮಾಡುವುದು ಹೇಗೆ? ಕಣ್ಣುಗಳನ್ನು ದಾನ ಮಾಡುವುದರಿಂದ ಮುಂದಿನ ಜನ್ಮದಲ್ಲಿ ಅಂಧರಾಗಿ ಹುಟ್ಟುತ್ತೇವೆಯೇ? ಇಂತಹ ಅದೆಷ್ಟೋ ಮೂಢನಂಬಿಕೆಗಳಿರುವ ಜನರಲ್ಲಿ ಜಾಗೃತಿ ಮೂಡಿಸಲು ರಾಜ್‌ಕುಮಾರ್ ಅವರೇ ಸೂಕ್ತ ವ್ಯಕ್ತಿ ಎಂದು ಭಾವಿಸಿದೆ. ಅವರು ಆಸ್ಪತ್ರೆಯೊಂದಿಗೆ ಕೈಜೋಡಿಸಿದರೆ ನಗರದಲ್ಲಿ ಮಾತ್ರವಲ್ಲ ಗ್ರಾಮೀಣ ಭಾಗದಲ್ಲೂ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯ ಸುಲಭವಾಗಲಿದೆ ಎಂದು ಎಣಿಸಿದೆ. ಶಸ್ತ್ರಚಿಕಿತ್ಸೆಗಾಗಿ ತಮ್ಮ ತಂಗಿಯನ್ನು ನೇತ್ರಾಲಯಕ್ಕೆ ಕರೆತಂದಾಗ ವಿಷಯ ಪ್ರಸ್ತಾಪಿಸಿದೆ. ರಾಜ್‌ಕುಮಾರ್ ಸಂತೋಷವಾಗಿ ಒಪ್ಪಿಕೊಂಡರು. ಅಂತೆಯೇ 1994ರಲ್ಲಿ ಡಾ.ರಾಜ್‌ಕುಮಾರ್ ಹೆಸರಿನಲ್ಲಿ ನೇತ್ರ ಬ್ಯಾಂಕ್ ಉದ್ಘಾಟಿಸಲಾಯಿತು. ಅಂದೇ ರಾಜ್‌ಕುಮಾರ್ ಹಾಗೂ ಅವರ ಕುಟುಂಬದವರು ನೇತ್ರದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.

ಐ ಬ್ಯಾಂಕ್‌ನಿಂದ ಕಣ್ಣುಗಳ ಸಂಗ್ರಹ ಪ್ರಮಾಣ ಎಷ್ಟಿದೆ?
ದೇಶದಲ್ಲಿ 30 ಲಕ್ಷಕ್ಕೂ ಹೆಚ್ಚು ಜನ ಕಾರ್ನಿಯಾ ಅಂಧತ್ವದಿಂದ ಬಳಲುತ್ತಿದ್ದಾರೆ. ರಾಜ್ಯದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಕಾರ್ನಿಯಾಗೆ ಬೇಡಿಕೆ ಇದೆ. ಆದರೆ ಇಲ್ಲಿವರೆಗೆ ನಲವತ್ತು ಸಾವಿರಕ್ಕೂ ಹೆಚ್ಚು ಮಂದಿ ನೇತ್ರದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದು, 4,500 ಕಣ್ಣುಗಳನ್ನು ಸಂಗ್ರಹಿಸಿದ್ದೇವೆ. ನಮ್ಮ ಆಸ್ಪತ್ರೆ ಒಂದರಲ್ಲಿಯೇ 100-150 ಜನ ಕಾರ್ನಿಯಾ ಬದಲಾವಣೆಗಾಗಿ ಸರದಿಯಲ್ಲಿ ನಿಂತಿದ್ದಾರೆ. ಅಂದರೆ ಬೇಡಿಕೆಗಿಂತಲೂ ಸಂಗ್ರಹದ ಪ್ರಮಾಣ ಕಡಿಮೆ ಇದೆ. ಕಣ್ಣುಗಳನ್ನು ಸಂಗ್ರಹಿಸುವ ಕೆಲಸ ಅಷ್ಟು ಸುಲಭವಲ್ಲ. ತುಂಬಾ ಸೂಕ್ಷ್ಮವಾದುದು. ವ್ಯಕ್ತಿಯೊಬ್ಬ ತೀರಿ ಹೋದ ನಂತರ ಕಣ್ಣುಗಳನ್ನು ದಾನ ಮಾಡುವುದಾಗಿ ಹೇಳಿದ್ದರೂ ಸಂಬಂಧಿಕರು ಶೋಕದಲ್ಲಿ ಮುಳುಗಿರುವಾಗ ಕೇಳಲು ಕಷ್ಟ. ಅವರಿಗೂ ಸತ್ತ ನಂತರ ಕಣ್ಣು ಕಿತ್ತು ಏಕೆ ನೋಯಿಸಬೇಕು ಎಂಬ ಭಾವನೆ ಇರುತ್ತದೆ. ಹಾಗಾಗಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೊಂದೇ ಇರುವ ಪರಿಹಾರ.

ನೇತ್ರದಾನದ ಬಗ್ಗೆ ಅರಿವು ಮೂಡಿಸುವಲ್ಲಿ ತಕ್ಕ ಮಟ್ಟಿನ ಯಶಸ್ಸನ್ನು ಹೇಗೆ ಸಾಧಿಸಿದಿರಿ?
ನೇತ್ರ ಬ್ಯಾಂಕ್ ಆರಂಭಿಸಿದ ದಿನದಿಂದಲೂ ಎಡೆಬಿಡದೆ ಪ್ರಚಾರಾಂದೋಲನ ನಡೆಸಿಕೊಂಡು ಬಂದಿದ್ದೇವೆ. ರಾಜ್‌ಕುಮಾರ್ ಅವರು ವಿಧಿವಶರಾದ ದಿನ ಅವರ ಪುತ್ರ ರಾಘವೇಂದ್ರ ರಾಜ್‌ಕುಮಾರ್ ನನಗೆ ಕರೆ ಮಾಡಿ ಅಪ್ಪಾಜಿ ಅವರ ಆಸೆಯಂತೆ ಅವರ ಕಣ್ಣುಗಳನ್ನು ತೆಗೆದುಕೊಂಡು ಹೋಗಿ ಎಂದು ತಿಳಿಸಿದರು. ಈ ವಿಷಯ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಪಡೆಯಿತು. ಇದು ಜನಸಾಮಾನ್ಯರಿಗೆ ನೇತ್ರದಾನಕ್ಕೆ ಪ್ರೇರಣೆ ನೀಡಿತು.

ಪ್ರತಿಜ್ಞೆ ಮಾಡಿರುವವರಿಂದ ಕಣ್ಣುಗಳನ್ನು ಹೇಗೆ ಸಂಗ್ರಹಿಸುತ್ತೀರಿ?
ನೇತ್ರದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿರುವವರಿಗೆ ಕಾರ್ಡ್ ನೀಡಿರುತ್ತೇವೆ. ಇದನ್ನು ತಮ್ಮ ಬಳಿಯಲ್ಲೇ ಇಟ್ಟುಕೊಂಡಿರಬೇಕು. ತಮ್ಮ ಮನೆಯವರಿಗೂ ವಿಷಯ ತಿಳಿಸಿ ಎಂದು ಹೇಳಿರುತ್ತೇವೆ. ಈ ಬಗ್ಗೆ ಗೊತ್ತಿದ್ದವರು ಆ ವ್ಯಕ್ತಿ ಮೃತಪಟ್ಟ ಬಳಿಕ ಸ್ವಪ್ರೇರಣೆಯಿಂದ ನಮಗೆ ಕರೆ ಮಾಡಿ ವಿಷಯ ತಿಳಿಸಿದಲ್ಲಿ ನಮ್ಮ ತಂಡ ನೇರವಾಗಿ ಮನೆಗೆ ತೆರಳಿ ಇಪ್ಪತ್ತು ನಿಮಿಷದ ಒಳಗೆ ಕಣ್ಣುಗಳನ್ನು ತೆಗೆದುಕೊಂಡು ಬರಲಿದೆ. ಪ್ರತಿಜ್ಞೆ ಮಾಡಿದ್ದಾರೆ ಎಂಬ ಕಾರಣಕ್ಕೆ ಒತ್ತಾಯವೇನೂ ಇಲ್ಲ. ವ್ಯಕ್ತಿಯು ಮೃತಪಟ್ಟ ಆರು ಗಂಟೆ ಒಳಗೆ ಕಣ್ಣುಗಳನ್ನು ತೆಗೆದಲ್ಲಿ ಮಾತ್ರ ಮತ್ತೊಬ್ಬರಿಗೆ ನೀಡಲು ಸಾಧ್ಯ.

ಜನರಲ್ಲಿ ಜಾಗೃತಿ ಮೂಡಿಸಲು ಕೈಗೊಂಡ ಕ್ರಮ?
ಕಳೆದ ಹತ್ತೊಂಬತ್ತು ವರ್ಷಗಳಿಂದ ಪ್ರತಿ ಆಗಸ್ಟ್ 25ರಿಂದ ಸೆಪ್ಟೆಂಬರ್ 8ರವರೆಗೆ ‘ನೇತ್ರದಾನ ಪಾಕ್ಷಿಕ’ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ. ಕೆಲವರಿಗೆ ನೇತ್ರದಾನ ಮಾಡುವ ಇಚ್ಛೆ ಇದ್ದರೂ ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿ ಇರುವುದಿಲ್ಲ. ಹಾಗಾಗಿ ಈ ವರ್ಷ ‘ಐ ಡೊನೇಷನ್ ಡ್ರಾಪ್ ಬಾಕ್ಸ್’ ಮಾಡಿ ಮಾಲ್‌ಗಳು, ಬ್ಯಾಂಕ್ಗಳು, ಕಾಫಿ ಡೇಗಳ ಮುಂದೆ ಇರಿಸಿದ್ದೇವೆ. ದೊಡ್ಡದಾಗಿ ಭಿತ್ತಿಪತ್ರಗಳನ್ನೂ ಅಂಟಿಸಿದ್ದೇವೆ. ಆಸಕ್ತರು ನೇತ್ರದಾನದ ಪ್ರತಿಜ್ಞೆ ಅರ್ಜಿಯಲ್ಲಿ ವಿವರ ಬರೆದು ಬಾಕ್ಸ್‌ನಲ್ಲಿ ಹಾಕಬೇಕು. ಪ್ರತಿ ವಾರಕ್ಕೊಮ್ಮೆ ಅವುಗಳನ್ನು ಸಂಗ್ರಹಿಸಿ ಸಂಬಂಧ ಪಟ್ಟವರಿಗೆ ನೇತ್ರದಾನ ಮಾಡಲು ಅನುಸರಿಸುವ ವಿಧಾನಗಳ ಕುರಿತ ಕಾರ್ಡನ್ನು ಮನೆಗೆ ಕಳುಹಿಸುತ್ತೇವೆ.

ನೇತ್ರದಾನದ ಬಗ್ಗೆ ಬೆಂಗಳೂರಿನಲ್ಲಿ ಮಾತ್ರ ಪ್ರಚಾರ ನಡೆಸಲಾಗುತ್ತಿದೆಯೇ?
ಇಲ್ಲ. ಬೆಂಗಳೂರು ಸುತ್ತಮುತ್ತ ನೇತ್ರ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ಆಸಕ್ತ ನೇತ್ರ ತಜ್ಞರು ತಂಡದೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಕೇಂದ್ರ ಸ್ಥಾಪಿಸುವ ಉದ್ದೇಶ ಇದ್ದು, ಆಸಕ್ತರು ಮುಂದೆ ಬಂದಲ್ಲಿ ಕನಸು ನನಸಾಗಲಿದೆ.

ಯಾರೆಲ್ಲಾ ನೇತ್ರದಾನ ಮಾಡಬಹುದು?
ಮೃತಪಟ್ಟವರ ಕಣ್ಣು ತೆಗೆದರೆ ಮುಖ ವಿಕಾರವಾಗುತ್ತದೆ. ಮಧುಮೇಹ, ರಕ್ತದ ಒತ್ತಡ ಇರುವವರು ಕಣ್ಣು ನೀಡಲು ಸಾಧ್ಯವಾಗುವುದಿಲ್ಲ ಎಂಬ ತಪ್ಪು ಕಲ್ಪನೆ ಜನರಲ್ಲಿ ಇದೆ. ಆದರೆ 90 ವರ್ಷದವರೆಗಿನ ಯಾರು ಬೇಕಾದರೂ ನೇತ್ರದಾನ ಮಾಡಬಹುದು. ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವವರೂ ನೇತ್ರದಾನ ಮಾಡಬಹುದು. ನೇತ್ರದಾನ ಮಾಡುವ ವ್ಯಕ್ತಿಯು ಮೃತಪಟ್ಟಾಗ ಕಣ್ಣುಗಳು ಅರ್ಧ ತೆರೆದುಕೊಂಡಿರದಂತೆ ತಲೆ ಹಿಂಬದಿ ದಿಂಬು ಇಟ್ಟು ಕಣ್ಣುಗಳನ್ನು ಹತ್ತಿಯಿಂದ ಮುಚ್ಚಬೇಕು. ಆಗಮಾತ್ರವೇ ಬೇರೆಯವರಿಗೆ ಜೋಡಿಸಲು ಸಾಧ್ಯ.

ಹೆಚ್ಚು ಕಂಪ್ಯೂಟರ್ ಬಳಸುವವರು ಗಮನಿಸಬೇಕಿರುವುದೇನು?
ವೈದ್ಯರ ಸಲಹೆ ಪಡೆದು ‘ಲ್ಯೂಬ್ರಿಕೆಂಟ್ ಐ ಡ್ರಾಪ್’ ಬಳಸಬೇಕು. ನಾವು ಕೂರುವ ಜಾಗ ಮತ್ತು ಕಂಪ್ಯೂಟರ್ ಇಡಲಾಗಿರುವ ಜಾಗ ಸಮನಾಂತರವಾಗಿರಬೇಕು. ಇಲ್ಲದಿದ್ದಲ್ಲಿ ಬೆನ್ನು ನೋವಿನ ಜೊತೆಗೆ ಕಣ್ಣಿನ ಮೇಲೂ ಪರಿಣಾಮ ಬೀರುತ್ತದೆ.

ಮಕ್ಕಳಲ್ಲಿ ಕಂಡುಬರುವ ಸಮಸ್ಯೆಗಳ ಕುರಿತು?
ಮೂರು ವರ್ಷ ತುಂಬಿದ ಪ್ರತಿ ಮಗುವಿನ ಕಣ್ಣನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಿಸಬೇಕು. ಆಗ ಆರಂಭದಲ್ಲಿಯೇ ಸಮಸ್ಯೆ ಗುರುತಿಸಿ ಸೂಕ್ತ ಚಿಕಿತ್ಸೆ ಮೂಲಕ ಸರಿಪಡಿಸಲು ಸಾಧ್ಯವಾಗುತ್ತದೆ. ಒಂದು ಕಣ್ಣು ಕಾಣಿಸಿ ಮತ್ತೊಂದು ಕಣ್ಣು ಕಾಣಿಸದಿರುವ ಮಗುವಿನ ಬಗ್ಗೆ ಪೋಷಕರು ವಿಶೇಷ ಎಚ್ಚರಿಕೆ ವಹಿಸಬೇಕಾಗುತ್ತದೆ. ಎಂಟು ವರ್ಷದ ಒಳಗೆ ಕಣ್ಣಿನ ಸಂಪೂರ್ಣ ಬೆಳವಣಿಗೆ ಆಗುವುದರಿಂದ ಅಷ್ಟರಲ್ಲಿ ಸಮಸ್ಯೆ ಗುರುತಿಸಿ ಚಿಕಿತ್ಸೆ ಕೊಡಿಸಿದಿದ್ದಲ್ಲಿ ದೋಷವಿರುವ ಕಣ್ಣು ಶಾಶ್ವತವಾಗಿ ಅಂಧತ್ವಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT