ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣೆದುರು ಕಪ್ಪುಚುಕ್ಕೆಗಳು...

Last Updated 10 ಜೂನ್ 2011, 19:30 IST
ಅಕ್ಷರ ಗಾತ್ರ

ಈ ಕೆ 30 ವರ್ಷದ ಮಹಿಳೆ. ಕಳೆದ ಒಂದು ತಿಂಗಳಿಂದ ಈಕೆಯ ಕಣ್ಣ ಮುಂದೆ ಏನೋ ಸರಿದಾಡಿದ ಹಾಗೆ ಅನಿಸುತ್ತಿದೆ. ಕಪ್ಪು ಬಣ್ಣದ ಸಣ್ಣ ಸಣ್ಣ ಚುಕ್ಕೆಗಳು ಮೊದಲು 2 ಇದ್ದುದು ನಂತರ ನಾಲ್ಕಾಗಿದ್ದರ ಅನುಭವ ಆಗುತ್ತಿದೆ. ಕಣ್ಣನ್ನು ಆಚೆ ಮತ್ತು ಈಚೆ ಸರಿದಾಡಿಸಿದಾಗ ಅವೂ ಆಚೀಚೆ ಹೋದದ್ದು ಗೊತ್ತಾಗುತ್ತದೆ. ಹಾಗೆಂದು ಕಣ್ಣಿನಲ್ಲಿ ನೋವಿಲ್ಲ, ನೀರು ಜಾಸ್ತಿ ಬರುತ್ತಿಲ್ಲ. ದೃಷ್ಟಿಯಲ್ಲೂ ಹೆಚ್ಚಿನ ವ್ಯತ್ಯಾಸ ಕಾಣಿಸುತ್ತಿಲ್ಲ. ತನ್ನಿಂದ ತಾನೇ ಸರಿ ಹೋಗಬಹುದೆಂದು ಕೆಲವು ದಿವಸಗಳವರೆಗೆ ವೈದ್ಯರಲ್ಲಿ ಹೋಗುವುದನ್ನು ಮುಂದೆ ಹಾಕಿದಳು. ಅದೇ ರೀತಿಯ ಅನುಭವ ಆಗಾಗ ಆಗುತ್ತಿದ್ದುದರಿಂದ ಮನಸ್ಸಿಗೆ ಕಿರಿಕಿರಿಯಾಗಿ ನೇತ್ರ ವೈದ್ಯನಾದ ನನ್ನಲ್ಲಿ ಕಣ್ಣಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಬಂದಳು.

ಮೇಲಿನ ಎಲ್ಲ ಲಕ್ಷಣಗಳ ಜೊತೆ ಆಕೆ ಬಹಳ ವರ್ಷಗಳಿಂದ ದೂರದ ವಸ್ತು ಕಾಣಿಸುವುದಿಲ್ಲ ಎನ್ನುವ ಕಾರಣಕ್ಕೆ  -14.00 ನಂಬರಿನ ಕನ್ನಡಕ ಧರಿಸುತ್ತಿದ್ದಳು. ಅಂದರೆ ಆಕೆಗೆ ಸಮೀಪದೃಷ್ಟಿಯ ಸಮಸ್ಯೆ ಇತ್ತು.

ಇದು ಕಣ್ಣು ಮುಂದೆ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುವ ಒಂದು ಪ್ರಾತಿನಿಧಿಕ ರೀತಿ. ಮೇಲೆ ತಿಳಿಸಿದ ರೀತಿಯಲ್ಲದೆ ಭಿನ್ನ ಭಿನ್ನ ರೀತಿಗಳಲ್ಲಿಯೂ ಹಲವರಲ್ಲಿ ಕಾಣಿಸಿಕೊಳ್ಳಬಲ್ಲದು. ಕೆಲವರು ನಕ್ಷತ್ರದ ರೀತಿ ತಿರುಗಾಡುತ್ತಿದೆ, ಒಂದು ಸಣ್ಣ ಕಡ್ಡಿ ಸರಿದಾಡುತ್ತಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರೆ ಮತ್ತೆ ಕೆಲವರಲ್ಲಿ ಈ ನಕ್ಷತ್ರ ಅಥವಾ ಕಡ್ಡಿಗಳು 2, 4, 6 ಹೀಗೆ ಹೆಚ್ಚಿನ ಸಂಖ್ಯೆಗಳಲ್ಲಿಯೂ ಕಾಣಿಸಿಕೊಳ್ಳಬಲ್ಲವು. ಮತ್ತೆ ಕೆಲವರಲ್ಲಿ ನೇರವಾಗಿ ದಿಟ್ಟಿಸುವಾಗ ದೃಷ್ಟಿಯ ಮಧ್ಯಭಾಗದಲ್ಲಿ ಕಾಣಿಸಿಕೊಂಡು ದೃಷ್ಟಿಯನ್ನೂ ಮಸುಕಾಗಿಸಬಲ್ಲವು.

ಏನೀ ಕಪ್ಪು ಚುಕ್ಕೆಗಳು? ಯಾಕಾಗಿ ಕಾಣಿಸುತ್ತಿವೆ?
ಕಣ್ಣಿನ ರಚನೆಯನ್ನು ಅವಲೋಕಿಸಿದಾಗ ಕಣ್ಣಿನ ಮುಂಭಾಗ ಕಪ್ಪುಗುಡ್ಡೆಯ ಹಿಂಭಾಗದಲ್ಲಿ ಪಾರದರ್ಶಕವಾದ ಮಸೂರವಿದೆ. ಈ ಮಸೂರಕ್ಕೂ ಕಣ್ಣಿನ ಗುಡ್ಡೆಯ ಹಿಂಭಾಗದಲ್ಲಿರುವ ಅಕ್ಷಿಪಟಲಕ್ಕೂ ಮಧ್ಯೆ ಒಂದು ದೊಡ್ಡ ಕವಾಟವಿದೆ. ಆರೋಗ್ಯವಂತ ಮನುಷ್ಯನಲ್ಲಿ ಇದರಲ್ಲಿ ವಿಟ್ರಿಯಸ್ ಅಥವಾ ಕಾಚೀರಸ ಎಂಬ ಲೋಳೆಯಂತಹ ವಸ್ತು ತುಂಬಿರುತ್ತದೆ. ಕಾಚೀರಸವು ಸಹಿತ ಪಾರದರ್ಶಕವಾಗಿದ್ದು ಇದರ ಬಹುಪಾಲು ನೀರೇ ಆಗಿದೆ. ಇದರಲ್ಲಿ ಬಹಳಷ್ಟು ಸಣ್ಣ ಸಣ್ಣ ಜೀವಕೋಶಗಳು ಎಳೆಗಳ ರೀತಿಯಲ್ಲಿದ್ದು, ಇಡೀ ಕಾಚೀರಸ ಲೋಳೆಯಂತೆ ಅಂಟಾಗಿ ತೋರುತ್ತದೆ. ಇದರಲ್ಲಿ ಆಗುವ ಬದಲಾವಣೆ, ಜೀವಕೋಶಗಳ ಸರಿದಾಟವೇ ನಮಗೆ ಮೊದಲು ತಿಳಿಸಿದ ಕಪ್ಪು ಚುಕ್ಕೆಗಳು ಅಥವಾ ಆಕೃತಿಗಳು ಕಾಣಿಸಲು ಮುಖ್ಯ ಕಾರಣ.

ಹಾಗೆಂದು ಈ ಆಕೃತಿಗಳು ಅಥವಾ ಚುಕ್ಕೆಗಳು ಕಂಡಾಕ್ಷಣ ಕಣ್ಣಿನಲ್ಲಿ ಏನೋ ತೊಂದರೆಯಿದೆ. ಕಾಯಿಲೆಯಿದೆ ಎಂದು ತಿಳಿಯಬಾರದು. ಎಷ್ಟೋ ಬಾರಿ ಕಣ್ಣಿನಲ್ಲಿ ಏನೂ ತೊಂದರೆಯಿಲ್ಲದ ಆರೋಗ್ಯವಂತ ಮನುಷ್ಯರಲ್ಲಿ ಸಹಿತ ಇವು ಕಾಣಿಸುತ್ತವೆ. ಬೆಳಕಿನ ಕಿರಣಗಳು ಕಣ್ಣಿನ ಒಳಗೆ ಪ್ರವೇಶಿಸುವಾಗ ಸಾಮಾನ್ಯವಾಗಿ ಅಕ್ಷಿಪಟಲದ ಸೂಕ್ಷ್ಮ ಅಂಗಗಳಲ್ಲಿ ಪ್ರತಿಫಲಿಸಿ ನಮಗೆ ನಮ್ಮೆದುರಿನ ವಸ್ತುವಿನ ಅಥವಾ ಆಕೃತಿಯ ಅನುಭವವನ್ನು ಕೊಡುತ್ತವೆ. ಆ ಕ್ರಿಯೆ ಜರುಗುತ್ತಿರುವಾಗ ಈ ದಾರಿಗೆ ಅಡ್ಡಬರುವ ಅಪಾರದರ್ಶಕ ವಸ್ತುಗಳು ಕಾಚೀರಸದಲ್ಲಿ ಯಾವುದೋ ನಿರ್ದಿಷ್ಟ ಕೋನದಲ್ಲಿದ್ದಾಗ ಈ ರೀತಿಯ ಕಪ್ಪುಚುಕ್ಕೆ ಅಥವಾ ಆಕೃತಿಗಳು ಹಿಂದಿರುವ ವಸ್ತುವಿನ ಮುಂಭಾಗದಲ್ಲಿ ಕಾಣುವಂತೆ ತೋರುತ್ತದೆ. ಇದಕ್ಕೆ ಇಂಗ್ಲಿಷ್‌ನಲ್ಲಿ ENTOPTIC PHENOMENA ಎನ್ನುತ್ತಾರೆ. ಇದನ್ನು ನಾವು `ನೆರಳಿನ ಪ್ರತಿಫಲನ~ ಎನ್ನಬಹುದು. ಕೆಲವರಲ್ಲಿ ಕೆಲವೊಮ್ಮೆ ವ್ಯಕ್ತಿಯ ಅಕ್ಷಿಪಟಲದಲ್ಲಿರುವ ರಕ್ತನಾಳಗಳಲ್ಲಿನ ಜೀವಕೋಶಗಳು ಸಹಿತ ಹೀಗೆ ನೆರಳನ್ನು ಪ್ರತಿಫಲಿಸುತ್ತವೆ.

ಹಾಗೆಂದು ಈ ಆಕೃತಿಗಳು ಎಲ್ಲ ಬಾರಿಯೂ ಆರೋಗ್ಯವಂತ ಕಣ್ಣಿನಲ್ಲಿಯೇ ಕಾಣಿಸಿಕೊಳ್ಳುತ್ತವೆ ಎಂದೇನಿಲ್ಲ. ಲೇಖನದ ಆರಂಭದ ಉದಾಹರಣೆಯಲ್ಲಿಯಂತೆ ತೀರಾ ಹೆಚ್ಚಿನ ಪ್ರಮಾಣದ ಸಮೀಪದೃಷ್ಟಿ ಅಂದರೆ  -6.00 ಅಥವಾ  -8.00ಕ್ಕಿಂತ ಹೆಚ್ಚಿನ ನಂಬರಿನ ದೃಷ್ಟಿದೋಷವಿರುವವರಲ್ಲಿ ಇವು ಒಮ್ಮೆಲೇ ಕಾಣಿಸಿಕೊಂಡು ಕೆಲವೊಮ್ಮೆ ದೃಷ್ಟಿಯನ್ನೂ ಮಸುಕಾಗಿಸುತ್ತವೆ. ಇದನ್ನು ನೇತ್ರತಜ್ಞ ಗಂಭೀರವಾಗಿ ತೆಗೆದುಕೊಳ್ಳಬೇಕು. ಆಗ ಕಾಚೀರಸ ಅಥವಾ ವಿಟ್ರಿಯಸ್‌ನಲ್ಲಿ ಸಮಸ್ಯೆಯಿದೆಯಾ ಎಂದು ವಿವರವಾಗಿ ಪರೀಕ್ಷಿಸಬೇಕು ಜೊತೆಗೆ ನಂಬರಿನ ಸಮೀಪದೃಷ್ಟಿ ಸಮಸ್ಯೆಯವರಲ್ಲಿ ಕಣ್ಣಿನಲ್ಲಿ ಉಂಟಾಗಬಹುದಾದ ಗಂಭೀರ ತೊಡಕು ಎಂದರೆ ಅಕ್ಷಿಪಟಲ ಕಳಚುವಿಕೆ (ರೆಟಿನಲ್ ಡಿಟ್ಯಾಚ್‌ಮೆಂಟ್).  ಹೆಚ್ಚಿನ ಸಂದರ್ಭದಲ್ಲಿ ಅಂತಹ ವ್ಯಕ್ತಿಗೆ ದಿಢೀರನೆ ದೃಷ್ಟಿ ಕಡಿಮೆಯಾಗುತ್ತದೆ. ಆದರೆ ಕೆಲವೊಮ್ಮೆ ಏನೋ ಎದುರಿಗೆ ಪರದೆ ಬಿದ್ದ ಹಾಗೆ ಅನಿಸಿ ಅದರಿಂದ ಆಚೆ ಕಾಣಿಸುವುದಿಲ್ಲ ಎಂಬ ಭಾವನೆ ಬರುತ್ತದೆ. ಆಗ ಕಣ್ಣಿನ ತಜ್ಞರು ತಕ್ಷಣವೇ ಕಾಯಿಲೆ ಪತ್ತೆ ಹಚ್ಚಿ ಇನ್ನೂ ಸೂಕ್ತ ವಿವರವಾದ ಪರೀಕ್ಷೆಗಳನ್ನೂ ನಡೆಸಿ ಚಿಕಿತ್ಸೆಗೆ ತೊಡಗಬೇಕಾಗುತ್ತದೆ.

ಈ ಕಪ್ಪುಚುಕ್ಕೆಗಳ ಮತ್ತೊಂದು ಮುಖ್ಯ ಕಾರಣ ಎಂದರೆ ಕಣ್ಣಿನ ತಾರಕೆಗೆ ಸಂಬಂಧಪಟ್ಟ ಕಾಯಿಲೆಗಳು. ಒಬ್ಬ ವ್ಯಕ್ತಿಯ ಕಣ್ಣು ಕಪ್ಪು, ಮತ್ತೊಬ್ಬರದು ಕಂದು, ಇನ್ನೊಬ್ಬನದು ಬಿಳಿ ಎಂದು ಜನರು ಕಣ್ಣಿನ ಬಣ್ಣವನ್ನು ಆ ವ್ಯಕ್ತಿ ಹೊಂದಿದ `ತಾರಕೆ~ಯ ಬಣ್ಣದ ಮೇಲೆ ವರ್ಣಿಸುತ್ತಾರೆ. ಕಣ್ಣಿನ ಪಾರದರ್ಶಕ ಪಟಲ ಕಾರ‌್ನಿಯಾದ ಹಿಂಭಾಗದಲ್ಲಿ ಒಂದು ರೀತಿಯ ಪರದೆಯ ರೀತಿಯಲ್ಲಿ ತಾರಕೆಯಿರುತ್ತದೆ. ಇದರ ಮಧ್ಯಭಾಗದಲ್ಲಿ ದುಂಡಗಿನ ಸಣ್ಣರಂಧ್ರವಿರುತ್ತದೆ. ಹೊರಗಿನಿಂದ ಕಣ್ಣಿನೊಳಗೆ ಬೆಳಕು ಸಾಗಿಸುವ ಈ ರಂಧ್ರವನ್ನೇ ನಾವು ಕಣ್ಣಿನ ಪಾಪೆ      (PUPIL)ಎನ್ನುತ್ತೇವೆ. ಆರೋಗ್ಯವಂತ ವ್ಯಕ್ತಿಯಲ್ಲಿ ಈ ಪಾಪೆ ಬೆಳಕಿನ ವಿವಿಧ ತೀಕ್ಷ್ಣತೆಗಳನ್ನನುಸರಿಸಿ ಅಗತ್ಯವಿದ್ದಷ್ಟು ಬೆಳಕನ್ನು ಮಾತ್ರ ಒಳಗೆ ಸಾಗಿಸಲು ಅನುಕೂಲವಾಗುವಂತೆ ಹಿಗ್ಗುವ ಮತ್ತು ಕುಗ್ಗುವ ಗುಣ ಹೊಂದಿರುತ್ತದೆ. ಈ ಹಿಗ್ಗುವ ಮತ್ತು ಕುಗ್ಗುವ ಕೆಲಸ ಮಾಡುವ ಅಂಗಾಂಶವೇ ತಾರಕೆ.

ತಾರಕೆಯ ಕಾಯಿಲೆಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ತಾರಕೆಯ ಮುಂಭಾಗದ ಕಾಯಿಲೆಗಳು ಮತ್ತು ಹಿಂಭಾಗದ ಕಾಯಿಲೆಗಳು. ಮುಂಭಾಗದ ಕಾಯಿಲೆಗಳಲ್ಲಿ ಕಣ್ಣು ಹೆಚ್ಚು ಕೆಂಪಾಗಿ ದೃಷ್ಟಿ ಕಡಿಮೆಯಾಗುವುದಲ್ಲದೇ ವೈದ್ಯರು ಪರೀಕ್ಷಿಸಿದಾಗ ಎಷ್ಟೋ ಅಂಶಗಳು ಮೇಲ್ನೋಟಕ್ಕೆ ಕಂಡುಬರುತ್ತವೆ. ಕಾಯಿಲೆ ಪತ್ತೆಹಚ್ಚುವುದು ತುಂಬಾ ಸುಲಭ. ಹಿಂಭಾಗದ ತಾರಕೆಯ ಕಾಯಿಲೆಗಳಲ್ಲಿ ಕಣ್ಣು ಕೆಂಪಾಗಿರುವುದಿಲ್ಲ. ದೃಷ್ಟಿ ಸ್ವಲ್ಪ ಕಡಿಮೆಯಾಗುತ್ತದೆ ಎಂಬ ಅಂಶ ಬಿಟ್ಟರೆ ಹೊರಗಿನ ಲಕ್ಷಣಗಳು ಏನೂ ಇರುವುದಿಲ್ಲ. ಇದರಲ್ಲಿ ಕಾಚೀರಸದ ಭಾಗದಲ್ಲಿ ಕಪ್ಪುಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಈ ಚುಕ್ಕೆಗಳು ಸಣ್ಣ ಆಕೃತಿಯಿಂದ ಹಿಡಿದು ಉದ್ದ ಉದ್ದ ಕಡ್ಡಿಯ ತುಂಡುಗಳಂತೆ ತೋರಬಹುದು. ನಿಖರವಾಗಿ ಕಾಯಿಲೆ ಪತ್ತೆಮಾಡಿ ಸರಿಯಾದ ಚಿಕಿತ್ಸೆ ಮಾಡಿದರೆ, ಇವೆಲ್ಲಾ ಸಂಪೂರ್ಣವಾಗಿ ಕಾಣೆಯಾಗುತ್ತವೆ.

ಕಣ್ಣಿನ ಎದುರು ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುವ ಇನ್ನೊಂದು ಕಾಯಿಲೆ ಎಂದರೆ ಅಕ್ಷಿಪಟಲದಲ್ಲಿ ಕಾಣಿಸಿಕೊಳ್ಳುವ ಒಂದು ಕಾಯಿಲೆ ರೆಟಿನೋಕೋರ‌್ಯಾಡೈಟಿಸ್. ಇದರಲ್ಲಿ ಚುಕ್ಕೆಗಳು ಬಹಳ ಸಂಖ್ಯೆಯಲ್ಲಿ ತುಂಬಾ ಸಣ್ಣ ಸಣ್ಣ ತುಣುಕುಗಳ ರೀತಿಯಲ್ಲಿ ಕಾಣಿಸಿಕೊಂಡು ನಂತರ ಇಡೀ ಕಾಚೀರಸಕ್ಕೆ ವ್ಯಾಪಿಸಿ ಗಮನಾರ್ಹವಾಗಿ ದೃಷ್ಟಿಯನ್ನೂ ಮಸುಕು ಮಾಡುತ್ತವೆ. ಈ ಕಾಯಿಲೆಯ ಕಾರಣದಿಂದ ಕಾಚೀರಸದಲ್ಲಿ  ರಕ್ತಸ್ರಾವವಾದರೆ ದೊಡ್ಡ ದೊಡ್ಡ ತುಣುಕುಗಳು ವಿವಿಧ ಆಕಾರದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಕಾಯಿಲೆಯಲ್ಲೂ ಕಣ್ಣಿನ ಮುಂಭಾಗದಲ್ಲಿ ಯಾವ ರೋಗಲಕ್ಷಣವೂ ಇರುವುದಿಲ್ಲ. ನೇತ್ರತಜ್ಞರು  ಅಕ್ಷಿಪಟಲವನ್ನು ವಿವರವಾಗಿ ಪರೀಕ್ಷಿಸಿದಾಗ ಕಾಯಿಲೆ ಪತ್ತೆಹಚ್ಚುವುದು ಏನೂ ಕಷ್ಟವಿಲ್ಲ.

ಕಪ್ಪು ಚುಕ್ಕೆಗಳಿಗೆ ಚಿಕಿತ್ಸೆ ಅಗತ್ಯವೇ?
ಸುಮಾರು ಶೇ 85 ರಷ್ಟು ರೋಗಿಗಳಲ್ಲಿ ಕಾಣಿಸಿಕೊಳ್ಳುವ ಕಪ್ಪುಚುಕ್ಕೆಗಳು ನಿರ್ದಿಷ್ಟ ಕಾಯಿಲೆಯ ಕಾರಣದಿಂದ ಅಲ್ಲದ್ದರಿಂದ ಅಂತಹ ಸಂದರ್ಭಗಳಲ್ಲಿ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಆದಷ್ಟು ಆ ಚುಕ್ಕೆಗಳನ್ನು ಅಥವಾ ಆಕೃತಿಗಳನ್ನು ನಿರ್ಲಕ್ಷಿಸುವಂತೆ ಸಲಹೆ ನೀಡುತ್ತೇವೆ. ಆದರೆ ನಿರ್ದಿಷ್ಟ ಕಾಯಿಲೆಗಳಾದ ಹಿಂಭಾಗದ ತಾರಕೆಯ ಸೋಂಕು ಅಥವಾ ರೆಟಿನೋಕೋರೈಡೈಟಿಸ್ ಕಾಯಿಲೆಗಳ ಬಗೆಗಿನ ನಿರ್ದಿಷ್ಟ ಚಿಕಿತ್ಸೆ ಮಾಡಬೇಕು. ಹೆಚ್ಚಿನ ಪ್ರಮಾಣದ ಸಮೀಪದ ದೃಷ್ಟಿಯ ಕಾರಣದಿಂದ ಈ ಲಕ್ಷಣಗಳು ಕಾಣಿಸಿಕೊಂಡಾಗ ವಿವರವಾದ ಅಕ್ಷಿಪಟಲ ಪರೀಕ್ಷೆ ಕೈಗೊಂಡು ಚಿಕಿತ್ಸೆ ಅಗತ್ಯವಿದ್ದರೆ ಮಾಡಬೇಕು. ಆದರೆ ಕೆಲವೊಮ್ಮೆ ದೃಷ್ಟಿ ತೀರಾ ಕಡಿಮೆ ಮಾಡುವ ರೀತಿಯಲ್ಲಿ ಆಕೃತಿಗಳು ಕಾಣಿಸಿಕೊಂಡಾಗ, ಅನಿವಾರ‌್ಯವಾಗಿ ಕಾಚೀರಸದಲ್ಲಿ ಶಸ್ತ್ರಕ್ರಿಯೆ ಕೈಗೊಂಡು, ಅನಾರೋಗ್ಯಕರ ಕಾಚೀರಸ ಕತ್ತರಿಸಲು, ವಿಟ್ರೆಕ್ಟಮಿ ಎನ್ನುವ ಶಸ್ತ್ರಕ್ರಿಯೆ ಮಾಡಬೇಕು. ಕೊನೆಯ ಅಸ್ತ್ರವಾಗಿ ಇದನ್ನು ಮಾಡುತ್ತೇವೆ. ಹೆಚ್ಚಿನ ರೋಗಿಗಳಿಗೆ ಇದರ ಅಗತ್ಯ ಬೀಳುವುದಿಲ್ಲ.

ಹಾಗಾಗಿ ಕಣ್ಣಿನ ಎದುರು ಕಪ್ಪು ಚುಕ್ಕೆ ಅಥವಾ ಆಕೃತಿಗಳು ಕಾಣಿಸಿದ ತಕ್ಷಣ ಗಾಬರಿಗೊಳ್ಳುವ ಅಗತ್ಯವಿಲ್ಲ. ಸೂಕ್ತ ನೇತ್ರ ವೈದ್ಯರಲ್ಲಿ ಪರೀಕ್ಷಿಸಿ, ಕಾಯಿಲೆ ಅಥವಾ ತೊಂದರೆಯಿಲ್ಲ ಎಂಬುದರ ಬಗೆಗೆ ನಿರ್ದಿಷ್ಟಪಡಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT