ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮ ನ ತಣಿಸಿದ ‘ಹೋರಿ’ ಬೆದರಿಸುವ ಹಬ್ಬ

Last Updated 9 ಡಿಸೆಂಬರ್ 2013, 5:45 IST
ಅಕ್ಷರ ಗಾತ್ರ

ಹಿರೇಕೆರೂರ: ಮೊದಲೇ ಬೆದರಿದ್ದ ಹೋರಿಗಳು ಅಖಾಡದಲ್ಲಿ ಬಿಡುತ್ತಿದ್ದಂತೆ ಅಪಾರ ಜನಸ್ತೋಮವನ್ನು ಕಂಡು ಇನ್ನಷ್ಟು ಬೆದರಿ ಭುಸುಗುಡುತ್ತಾ ಜನ ಸಾಗರದ ಮಧ್ಯೆ ನುಗ್ಗುವ ದೃಶ್ಯ. ಅವುಗಳನ್ನು ಹಿಡಿಯಲು ಸಿದ್ಧವಾಗಿ ನಿಂತ ಪೈಲ್ವಾನರು ಮುಂದಡಿ ಇಡುತ್ತಿದ್ದಂತೆ ಭರ್ರನೆ ಕ್ಷಣ ಮಾತ್ರದಲ್ಲಿ ಮುಂದೆ ಸಾಗಿ ಕಣ್ಣಿಗೆ ಕಾಣದಂತಾಗುವ ಭಾರಿ ಹೋರಿಗಳ ಓಟ. ಹೋರಿಗಳು ಮೈಮೇಲೆ ನುಗ್ಗುವ ಭಯದಲ್ಲಿ ಇದ್ದೆನೋ ಬಿದ್ದೆನೋ ಎಂದು ಓಡುವ ಜನ...!

ಪಟ್ಟಣದ ಎಪಿಎಂಸಿ ಮೈದಾನದ ರಸ್ತೆಯಲ್ಲಿ ಭಾನುವಾರ ಏರ್ಪಡಿಸಿದ್ದ ಭಾರಿ ಹೋರಿ ಬೆದರಿಸುವ ಹಬ್ಬವು ಇಂತಹ ಹತ್ತಾರು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ನೆರೆದಿದ್ದ ಸಾವಿರಾರು ರೈತರಲ್ಲಿ ಮತ್ತು ಹೋರಿ ಹಬ್ಬ ಪ್ರಿಯರಲ್ಲಿ ಸಂಭ್ರಮ, ಸಂಚಲನ ಉಂಟು ಮಾಡಿತು.

ಮೈಮೇಲೆ ವಿವಿಧ ಬಣ್ಣಗಳ ಜೂಲಗಳಿಂದ ಅಲಂಕರಿಸಿ, ಗಾಳಿಯಲ್ಲಿ ತೇಲುತ್ತಾ ಆಕರ್ಷಕವಾಗಿ ಗೋಚರಿಸುವ  ವಿಧ ವಿಧವಾದ ಬಲೂನು ಮತ್ತು ರಿಬ್ಬನ್ನುಗಳನ್ನು ಎಣ್ಣೆ ಸವರಿ ನುಣುಪಾಗಿಸಿದ ಕೊಂಬುಗಳ ತುದಿಗೆ ಹಾಗೂ ಬೆನ್ನಿಗೆ ಕಟ್ಟಿ, ಕೊರಳು ಮತ್ತು ಎದೆಯ ಸುತ್ತ ಕಿಲೋಗಟ್ಟಲೆ ಒಣ ಕೊಬ್ಬರಿಯ ಸರವನ್ನು ಹಾಕಿಕೊಂಡು ರಾಜ ಗಾಂಭೀರ್ಯದಿಂದ ಮುನ್ನುಗ್ಗುವ ಹೋರಿಗಳನ್ನು ಹಿಡಿಯಲು ಗಂಡೆದೆಯ ಪೈಲ್ವಾನರು ಆತ್ಮವಿಶ್ವಾಸದಿಂದ ಏರಿ ಹೋಗುವ ದೃಶ್ಯ ಹೃದಯ ಬಡಿತವನ್ನು ಹೆಚ್ಚಿಸುತ್ತಿತ್ತು.

ಪ್ರತಿಯೊಂದು ಹೋರಿಗೆ ಸಂಘಟಕರು ಒಂದೊಂದು ಸಂಖ್ಯೆ ನೀಡಿ ಒಂದು ಕಡೆಯಿಂದ ಬಿಡುವ ವ್ಯವಸ್ಥೆ ಮಾಡಿ, ಮೈಕಿನಲ್ಲಿ ವೀಕ್ಷಕ ವಿವರಣೆಕಾರ ಎಚ್ಚರಿಕೆ ನೀಡುತ್ತಿದ್ದಂತೆ ಪೈಲ್ವಾನರು ಮುಂದಕ್ಕೆ ಅಡಿ ಇಟ್ಟು ಸಜ್ಜಾಗುತ್ತಿದ್ದರೆ ಕ್ಷಣಮಾತ್ರದಲ್ಲಿ ಕೆಲ ಹೋರಿಗಳು ಅಖಾಡದ ಗಡಿಯನ್ನು ದಾಟಿ ಹೋಗುತ್ತಿದ್ದವು. ಮತ್ತೆ ಕೆಲವು ಹೋರಿಗಳು ಅನುಭವಿ ಪೈಲ್ವಾನರ ಕೈ ಹಿಡಿತಕ್ಕೆ ಸಿಲುಕುತ್ತಿದ್ದಂತೆ ಜನರ ಕೇಕೆ ನೂರ್ಮಡಿಗೊಳ್ಳುತ್ತಿತ್ತು. ಅಖಾಡದಲ್ಲಿ ಬಿಡುತ್ತಿದ್ದಂತೆಯೇ ಕೆಲವು ಹೋರಿಗಳು ವಾಪಸು ಹೋದ ಘಟನೆಗಳು ಸಹ ನಡೆದವು.

ಹಬ್ಬದಲ್ಲಿ ಬೆದರಿಸುವ ಕಾರ್ಯಕ್ರಮಕ್ಕಾಗಿಯೇ ಖರೀದಿಸಿ ದಷ್ಟ ಪುಷ್ಟವಾಗಿ ಬೆಳೆಸಿದ್ದ, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಅನೇಕ ಹೋರಿಗಳು ಅಖಾಡದಲ್ಲಿ ಕಂಡು ಬಂದವು. ಪೈಲ್ವಾನರ ಕೈ ಸ್ಪರ್ಶಿಸಲೂ ಅವಕಾಶವನ್ನು ಕೊಡದೇ ಮುನ್ನುಗ್ಗಿದ ಹೋರಿಗಳು ಅನೇಕ.

ಅದೇ ರೀತಿ ಪೈಲ್ವಾನರ ಬಿಗಿ ಹಿಡಿತಕ್ಕೆ ಹೈರಾಣಾದ ಹೋರಿಗಳು ಸಹ ಹಲವು. ಕೈಗೆ ಸಿಗದ ಹೋರಿಗಳ ಮಾಲೀಕರು ಅವುಗಳ ಹಿಂದೆ ಕೇಕೆ ಹಾಕುತ್ತಾ ಯುದ್ಧವನ್ನು ಜಯಿಸಿದ ರೀತಿಯಲ್ಲಿ ಓಡುವುದು.  ಪೈಲ್ವಾನರ ಕೈಗೆ ಸಿಕ್ಕ ಹೋರಿಗಳ ಮಾಲೀಕರು ಸಪ್ಪೆ ಮೋರೆಯೊಂದಿಗೆ ಸಾಗುವುದು ಸಾಮಾನ್ಯವಾಗಿತ್ತು.

ದುರ್ಗಾದೇವಿ, ವೀರಮದಕರಿ, ಎಕೆ47, ಕೌರವ, ರಾಜಾಹುಲಿ, ಗಾಳಿಪಟ, ಸಂಗೊಳ್ಳಿ ರಾಯಣ್ಣ ಮುಂತಾದ ವಿವಿಧ ಹೆಸರಿನ ಹೋರಿಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT