ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮನ ಸೆಳೆಯುವ ಕೈ ಮಗ್ಗದ ಸೀರೆ

Last Updated 1 ಜುಲೈ 2012, 6:50 IST
ಅಕ್ಷರ ಗಾತ್ರ

ಚಾಮರಾಜನಗರ: ರೇಷ್ಮೆ, ಕಾಟನ್ ಸೀರೆ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚು. ಗುಣಮಟ್ಟದ ಸೀರೆಯನ್ನು ಚೌಕಾಸಿ ಮಾಡದೆ ಹಣ ನೀಡಿ ಖರೀದಿಸುತ್ತಾರೆ. ತಾಲ್ಲೂಕಿನ ಅಂಕನಶೆಟ್ಟಿಪುರ ಗ್ರಾಮದ ಕ್ವಾಟ್ರಸ್‌ನಲ್ಲಿರುವ ಚಾಮುಂಡೇಶ್ವರಿ ಕೈಮಗ್ಗ ನೇಕಾರರ ಸಹಕಾರಿ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘ ಇಂದಿಗೂ ಗುಣಮಟ್ಟದ ಸೀರೆ ನೇಯುವುದರಲ್ಲಿ ಪ್ರಸಿದ್ಧಿ ಪಡೆದಿದೆ.

ಇಲ್ಲಿನ ಮಾರಾಟ ಮಳಿಗೆಗೆ ಭೇಟಿ ನೀಡಿದರೆ ವಿವಿಧ ಬಣ್ಣದ ಸೀರೆಗಳು ಕಣ್ಮನ ಸೆಳೆಯುತ್ತವೆ. ಇಲ್ಲಿ ತಯಾರಾಗುವ ಸೀರೆಗಳಿಗೆ ಜಿಲ್ಲೆ ಸೇರಿದಂತೆ ವಿವಿಧೆಡೆಯಲ್ಲಿ ಬಾರೀ ಬೇಡಿಕೆಯಿದೆ. ಮೈಸೂರಿನಲ್ಲಿರುವ ಕರ್ನಾಟಕ ಸ್ಯಾರಿ ಸೆಂಟರ್, ಕೊಳ್ಳೇಗಾಲದ ಎಪಿಎಸ್ ಮಳಿಗೆ, ಬೆಂಗಳೂರಿನ ಮಳಿಗೆಗಳಿಗೆ ಇಲ್ಲಿಂದಲೇ ಸೀರೆ ಪೂರೈಸಲಾಗುತ್ತದೆ.

 ಆಧುನಿಕತೆಯ ಭರಾಟೆಯಲ್ಲಿ ಕೈಮಗ್ಗಗಳು ನೆಲೆಕಚ್ಚುತ್ತಿವೆ. ಇಂತಹ ಸಂಕ್ರಮಣ ಸ್ಥಿತಿಯಲ್ಲೂ ಈ ಸಂಘ ಉತ್ತಮ ಸೀರೆ ನೇಯ್ದು ಮಾರಾಟ ಮಾಡುತ್ತಿದೆ. ರಾಷ್ಟ್ರೀಯ ಹೆದ್ದಾರಿ-209 ಬದಿಯಲ್ಲಿ ಮಾರಾಟ ಮಳಿಗೆ ಇದೆ.

ಕೈಮಗ್ಗ ಘಟಕದಲ್ಲಿ ದಿನವೊಂದಕ್ಕೆ ಒಂದು ಕಾಟನ್ ಸೀರೆ ಮತ್ತು ಎರಡು ರೇಷ್ಮೆ ಸೀರೆ ಸಿದ್ಧಪಡಿಸಲಾಗುತ್ತದೆ. ಹೆಂಗಳೆಯರ ಮನಕ್ಕೆ ಒಪ್ಪುವಂತಹ ಬಣ್ಣ, ಗುಣಮಟ್ಟಕ್ಕೆ ಒತ್ತು ನೀಡಲಾಗುತ್ತಿದೆ. ಇದಕ್ಕಾಗಿ ಇಬ್ಬರು ಪುರುಷರು, ನಾಲ್ವರು ಮಹಿಳೆಯರು ಘಟಕದಲ್ಲಿ ದುಡಿಯುತ್ತಾರೆ. ಕಾಟನ್ ಸೀರೆಗೆ ರೂ 1,300ರಿಂದ 2,500ರವರೆಗೆ ಬೆಲೆಯಿದೆ. ರೇಷ್ಮೆ ಸೀರೆ ಯನ್ನು ರೂ 2,350ರಿಂದ 3,500ರವರೆಗೆ ಮಾರಾಟ ಮಾಡಲಾಗುತ್ತದೆ.

ರೇಷ್ಮೆ ನೂಲನ್ನು ಕೊಳ್ಳೇಗಾಲ ಸಮೀಪದ ಮುಡಿಗುಂಡಂ ರೇಷ್ಮೆ ಮಾರುಕಟ್ಟೆ ಹಾಗೂ ಹತ್ತಿ ನೂಲನ್ನು ಕೊಯಮತ್ತೂರು ತೆಪ್ಪಕೊಳಂನಲ್ಲಿ ಖರೀದಿಸಿ ತರುತ್ತಾರೆ. ಮಳಿಗೆಯಲ್ಲಿ ಪಂಚೆ, ಟವಲ್, ಖಾದಿ ಶರ್ಟ್‌ಗಳು ಮಾರಾಟಕ್ಕಿವೆ. ಇವುಗಳನ್ನು ತಮಿಳುನಾಡಿ ನಿಂದ ಖರೀದಿಸಿ ತಂದು ಮಾರಾಟ ಮಾಡಲಾಗುತ್ತಿದೆ.

ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಕಾರದಿಂದ 2004- 05ರಲ್ಲಿ ಈ ಸಂಘ ಪ್ರಾರಂಭಿಸಿದ ಮಳಿಗೆ ಇಂದಿಗೂ ಬೇಡಿಕೆ ಉಳಿಸಿಕೊಂಡಿ ರುವುದು ವಿಶೇಷ. ಗುಣಮಟ್ಟದ ಸೀರೆ ತಯಾರಿಕೆಗಾಗಿ ರಾಜ್ಯ ಸರ್ಕಾರ ನೀಡುವ `ರಾಜ್ಯಮಟ್ಟದ ಕೈಮಗ್ಗ ನೇಕಾರಿಕೆ~ ಪ್ರಶಸ್ತಿಗೂ ಸಂಘ ಭಾಜನವಾಗಿದೆ. ಗ್ರಾಹಕರಿಗೆ ರಿಯಾಯಿತಿಯ ಸೌಲಭ್ಯವೂ ಉಂಟು. ಶೇ. 20ರಷ್ಟು ರಿಯಾಯಿತಿ ದರದಡಿ ಸೀರೆ ಮಾರಾಟ ಮಾಡಲಾಗುತ್ತದೆ.

`ಘಟಕದಲ್ಲಿ ದುಡಿಯುವ ನೇಕಾರರಿಗೆ ಅನುಕೂಲವಾಗಲೆಂದು ಆರೋಗ್ಯ ವಿಮೆ, ವಸತಿ ಸೌಕರ್ಯ ಕಲ್ಪಿಸಲಾಗಿದೆ. ಹೆಚ್ಚಿನ ತರಬೇತಿ, ಅಧ್ಯಯನ ಪ್ರವಾಸಕ್ಕೆ ಅವಕಾಶ ನೀಡಲಾಗಿದೆ. ವಿವಿಧೆಡೆಗೆ ತೆರಳಿ ಪರಿಣತಿ ಪಡೆದಿರುವ ಘಟಕದ ನೌಕರರು ಗುಣಮಟ್ಟದ ಸೀರೆ ನೇಯುತ್ತಾರೆ. ಹೀಗಾಗಿ, ಆಂಧ್ರಪ್ರದೇಶ ಸೇರಿದಂತೆ ಇತರೇ ರಾಜ್ಯಗಳಲ್ಲೂ ನಮ್ಮ ಸೀರೆಗಳಿಗೆ ಬೇಡಿಕೆಯಿದೆ. ನಮ್ಮ ಸಂಘಕ್ಕೆ ಮಹಿಳಾ ಸ್ವಸಹಾಯ ಸಂಘಗಳ ಸಹಕಾರವೂ ಇದೆ~ ಎನ್ನುತ್ತಾರೆ ಸಂಘದ ಕಾರ್ಯದರ್ಶಿ ಸೆಂದಿಲ್‌ಕುಮಾರ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT