ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮರೆಯಾಗುತ್ತಿರುವ ಸವತಿಬೀಜ...

Last Updated 6 ಏಪ್ರಿಲ್ 2013, 7:03 IST
ಅಕ್ಷರ ಗಾತ್ರ

ಲಿಂಗಸುಗೂರ: ಸುಗ್ಗಿಕಾಲ ಮುಗಿದು ಬೇಸಿಗೆಕಾಲ ಆರಂಭಗೊಳ್ಳುತ್ತಿದ್ದಂತೆ ಗ್ರಾಮೀಣ ಮಹಿಳೆಯರಲ್ಲಿ ದೈನಂದಿನ ಬದುಕಿನೊಂದಿಗೆ ಹೆಚ್ಚುವರಿಯಾಗಿ ಅಗತ್ಯ ವಸ್ತುಗಳ ಸಿದ್ಧತೆಯಲ್ಲಿ ತನ್ಮಯರಾಗುವುದು ಸಾಮಾನ್ಯ. ಆದರೆ, ಇತ್ತೀಚಿನ ವರ್ಷಗಳಲ್ಲಿ ಬೇಸಿಗೆಯಲ್ಲಿ ಅಡುಗೆಗಾಗಿ ಸಿದ್ಧಪಡಿಸಿಕೊಳ್ಳುವ ಸವತಿಬೀಜ, ಶ್ಯಾವಿಗೆ, ಪರಡಿ, ಗೌಲಿ, ಮರಗುಳಿಗೆ, ಸೊಂಡಿಗೆ, ಅಪ್ಪಳ ಇತರೆ ವಸ್ತುಗಳ ಸಿದ್ಧತೆ ವರ್ಷದಿಂದ ವರ್ಷಕ್ಕೆ ಕಣ್ಮರೆಯಾಗುತ್ತಿವೆ ಎಂದು ವಯೋವೃದ್ಧೆ ನೀಲಮ್ಮ ಹೇಳುತ್ತಾರೆ.

ಸವತಿಬೀಜ ಮತ್ತು ಶ್ಯಾವಿಗೆ ಮಾಡಲು ಈಗ ರೆಡಿಮೇಡ್ ಶ್ಯಾವಿಗೆ ರವ ಬಂದಿವೆ. ಆದರೆ, ರುಚಿಕಟ್ಟಾಗಿ ಸಿದ್ಧಪಡಿಸಲು ಸಾಂಪ್ರದಾಯಿಕವಾಗಿ ಗೋದಿ ತೊಳೆದು ನೆರಳಲ್ಲಿ ಒಣಗಿಸಿದ ಗೋದಿ ಬೀಸಿ ಬಂದ ಹಿಟ್ಟನ್ನು ಜರಡಿಯಿಂದ ಹಿಡಿಯುತ್ತಾರೆ. ಜರಡಿ ಹಿಡಿದ ಹಿಟ್ಟನ್ನು ಪಾತ್ರೆಯೊಂದಕ್ಕೆ ತೆಳ್ಳನೆ ಬಟ್ಟೆ ಕಟ್ಟಿ ಸೋಸಿ ತೆಗೆಯುತ್ತಾರೆ. ಸೋಸಿದ ಹಿಟ್ಟಿಗೆ ಕೇರಿದಾಗ ಬರುವ ರವ ಸೇರಿಸಿ ಹದಕ್ಕೆ ತಕ್ಕಂತೆ ಹಿಟ್ಟು ನಾದಿ ಸವತಿಬೀಜ, ಶ್ಯಾವಿಗೆ ಇತರೆ ವಸ್ತು ಮಾಡುವುದರಿಂದ ಬಾಳಿಕೆ ಕೂಡ ಬರುತ್ತವೆ ಎಂದು ವಿವರಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಕಟ್ಟೆ, ಬಂಕ, ಮರದ ನೆರಳು, ಶೆಡ್‌ಗಳಲ್ಲಿ ಎಲ್ಲೆಂದರಲ್ಲಿ ಅಕ್ಕ ಪಕ್ಕದ ಮನೆಯವರು ಪರಸ್ಪರ ಸಹಕಾರದಿಂದ ತಟ್ಟೆ ಅಥವಾ ಮರ ಹಿಡಿದು ಹಾಡು ಹೇಳುತ್ತ ಸವತಿಬೀಜ ಮಾಡುತ್ತಾರೆ. ಶ್ಯಾವಿಗೆ ಮಣೆಹಾಕಿ, ಮುಂದೆ ಮರ, ತಟ್ಟೆ ಅಥವಾ ಕೋಲು ಇಟ್ಟು ಎಳೆ ಎಳೆಯಾಗಿ ಬರುವ ಶ್ಯಾವಿಗೆಯನ್ನು ವೈವಿಧ್ಯಮಯ ವಿನ್ಯಾಸದಲದಲ್ಲಿ ಸಂಗ್ರಹಿಸುವುದು ಒಂದು ಕಲೆ. ಇದು ಎಲ್ಲರಿಗೂ ಬರುವುದು ಕಷ್ಟ ಎಂದು ಸಂಗನಬಸಮ್ಮ ಹಿಟ್ಟು ಸಿದ್ದಪಡಿಸುವ, ಹದಕ್ಕೆ ತಂದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ಕೇವಲ ಸವತೆಬೀಜ ಮತ್ತು ಶ್ಯಾವಿಗೆ ಮಾತ್ರವಲ್ಲ, ಪರಡಿ, ಗೌಲಿ, ಮರಗುಳಿಗೆ ಸಿದ್ಧಪಡಿಸಲಾಗುತ್ತದೆ. ಗೋದಿಯನ್ನು ಏಳು ದಿನ ನೆನೆಹಾಕಿ ರುಬ್ಬಿ ಬರುವ ಹಾಲನ್ನು ಸಂಗ್ರಹಿಸಿ ಬಸಿ ತೆಗೆದು ಜರಡಿಗೆ ಮುಳ್ಳು ಹಾಕಿ ಆಣೆಕಲ್ಲು ಸಿದ್ಧಪಡಿಸುವುದು ವಿಶಿಷ್ಟ. ಇಷ್ಟೆ ಅಲ್ಲದೆ ಅಕ್ಕಿ ಹಪ್ಪಳ, ಸೊಂಡಿಗೆ. ಮೆಟಿಗೆ , ಹೆಸರು ಇತರೆ ಹಪ್ಪಳ ಸಿದ್ಧಪಡಿಸುವುದು ವಾಡಿಕೆ. ಸವತಿಬೀಜ ಹೊರತುಪಡಿಸಿ ಉಳಿದೆಲ್ಲ ವಸ್ತುಗಳನ್ನು ಯಂತ್ರಗಳಿಂದ ಮಾಡುವುದರಿಂದ ಮಹಿಳೆಯರ ಬೇಸಿಗೆ ಹರ್ಷ ಕಣ್ಮರೆಯಾಗುತ್ತಿದೆ ಎಂದು  ಸರಸ್ವತಿ, ಶಂಕ್ರಮ್ಮ, ಯಂಕಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT