ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತೆ, ಕವಿತೆಗಳಿಗೆ ಮಕ್ಕಳ ಮನ ತೆರೆಯಲಿ

Last Updated 23 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕತೆ ಬರೆಯುವ ಹವ್ಯಾಸವನ್ನು ಬೆಳೆಸುವುದರಿಂದ ಮಕ್ಕಳನ್ನು ಇತರೆ ಆಕರ್ಷಣೆಯಿಂದ ತಪ್ಪಿಸಲು ಸಾಧ್ಯವಿದ್ದು, ಕತೆ, ಕವಿತೆಗಳಿಗೆ ಮಕ್ಕಳ ಮನ ತೆರೆಯುವಂತೆ ಮಾಡಬೇಕು~ ಎಂದು ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹೇಳಿದರು.

ಬಾಲಭವನ ಸೊಸೈಟಿಯು ಸೋಮವಾರ ನಗರದಲ್ಲಿ  ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಾಹಿತ್ಯ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಕತೆ, ಕವಿತೆ ರಚಿಸುವುದಕ್ಕೆ ಅನುಭವದೊಂದಿಗೆ ಒಂದಷ್ಟು ಒಳಗಣ್ಣು ಇರಬೇಕು. ಪ್ರತಿ ನೋಟ, ಅನುಭವವನ್ನು ಕತೆಯಾಗಿ ರಚಿಸುವಂತೆ ಮಕ್ಕಳಲ್ಲಿ ಪ್ರೇರಣೆ ತುಂಬಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸೃಜನಶೀಲತೆಯೆಂಬುದು ಒತ್ತಡದಲ್ಲಿ ಹುಟ್ಟದೇ ಸಹಜತೆಯೊಂದಿಗೆ ಅರಳಬೇಕು~ ಎಂದು ಸಲಹೆ  ನೀಡಿದರು.

`ಟಿ.ವಿಯಂತಹ ಮೂರ್ಖರ ಪೆಟ್ಟಿಗೆಯು ಮಕ್ಕಳಲ್ಲಿರುವ ಕಲ್ಪನಾಶಕ್ತಿಯನ್ನು ಕಿತ್ತುಕೊಳ್ಳುತ್ತಿದೆ. ಕಾಮಿಕ್ಸ್‌ಗಳಲ್ಲಿ ಬರುವ ಪಾತ್ರಗಳು ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದೆ. ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಕೊಳ್ಳುವ ಅಗತ್ಯವಿದೆ~ ಎಂದು ತಿಳಿಸಿದರು.

ಲೇಖಕಿ ಡಾ.ಸಂಧ್ಯಾ ರೆಡ್ಡಿ, `ಅನುಭವವನ್ನು ಧ್ಯಾನಿಸುವುದರಿಂದ ಕತೆಗಳು ಸೃಷ್ಟಿಯಾಗುತ್ತವೆ. ಆ ಧ್ಯಾನಿಸುವ ಕಲೆಯನ್ನು ಮಕ್ಕಳಲ್ಲಿ ಪ್ರಾಥಮಿಕ ಹಂತದಲ್ಲೇ ಕಲಿಸುವುದರಿಂದ ಸಮಗ್ರ ವ್ಯಕ್ತಿತ್ವವನ್ನು ಮಕ್ಕಳು ಹೊಂದಲು ಸಾಧ್ಯವಾಗುತ್ತದೆ~ ಎಂದರು.

ಬಾಲಭವನದ ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ರಾಜ್ಯ ಗ್ರಂಥಾಲಯ ಇಲಾಖೆಯ ನಿರ್ದೇಶಕ ಕೆ.ಜಿ.ವೆಂಕಟೇಶ್, ಸಾಹಿತಿ `ಶೂದ್ರ~ ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT