ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತೆಯ ಜೀವಶಕ್ತಿಯೂ, ತಿಳಿವಳಿಕೆಯ ಹಾದಿಯೂ...

ನೆಲ ಸಿರಿ
Last Updated 31 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಪಾಶ್ಚಾತ್ಯ ಪ್ರಭಾವದ ಬಗ್ಗೆ, ಅದರ ಪರಿಣಾಮದ ಬಗ್ಗೆ ಎಲ್ಲ ಕಡೆ ಮಾತು. ಆಧುನಿಕ ಸಾಹಿತ್ಯ ಚರಿತ್ರೆಯ ಗತಿಯನ್ನು, ನಮ್ಮ ಚರ್ಚೆಯ ಸ್ವರೂಪವನ್ನೂ ಈ ಪ್ರಭಾವವೇ ರೂಪಿಸಿದೆ. ಆದರೆ `ಪಂಚತಂತ್ರ' ಓದುವಾಗ ಇದು ತಿರುವು ಮುರುವು. ಭಾರತೀಯ ಪ್ರತಿಭೆ ಪಶ್ಚಿಮದ ಮೇಲೆ ಬೀರಿರುವ ಪ್ರಭಾವ, ಭಾರತೀಯ ಪ್ರತಿಭೆಯ ಸ್ವರೂಪ ಈ ಬಗ್ಗೆ ಚಿಂತಿಸಲು `ಪಂಚತಂತ್ರ' ನಮ್ಮನ್ನು ಒತ್ತಾಯಿಸುತ್ತದೆ. ನಮ್ಮನ್ನು ನಾವು ಕಂಡುಕೊಳ್ಳಲು `ಪಂಚತಂತ್ರ' ಒಂದು ಪ್ರಮುಖ ಆಕರ.

ಪಂಚತಂತ್ರ ಜಗತ್ತಿನ ಸುಮಾರು ಎರಡುನೂರು ಭಾಷೆಗಳಿಗೆ ಅನುವಾದವಾಗಿದೆ. ಜಗತ್ತಿನಾದ್ಯಂತ ಇದರ ತೊಂಬತ್ತು ಪರಿಷ್ಕರಣಗಳು ದೊರೆಯುತ್ತವೆ. ಮಧ್ಯಯುಗದ ಯೂರೋಪ್ ಸಾಹಿತ್ಯದ ಮೇಲೆ ಪಂಚತಂತ್ರದ ಗಾಢ ಪ್ರಭಾವವಿರವುದನ್ನು ವಿದ್ವಾಂಸರು ಗುರ್ತಿಸಿದ್ದಾರೆ. ಆ ಕಾಲದ ಜನಪ್ರಿಯ ಕೃತಿಯಾದ ಇಟಾಲಿಯನ್ ಲೇಖಕ ಬೊಕೇಷಿಯೋನ `ಡೆಕಾಮೆರಾನ್' ಪಂಚತಂತ್ರದಿಂದ ಪ್ರಭಾವಿತವಾಗಿದೆ. ಛಾಸರ್‌ನ `ಕ್ಯಾಂಟರ್‌ಬರಿ ಟೇಲ್ಸ್', ಫ್ರೆಂಚ್ ಲೇಖಕ ಲಫಾಂತೇನ್‌ನ ಕತೆಗಳ ಮೇಲೆಯೂ ಇದರ ಪ್ರಭಾವವಿದೆ. ಲಫಾಂತೇನ್ ಭಾರತೀಯ ಕತೆಗಳಿಂದ ತಾನು ಪ್ರೇರಣೆ ಪಡೆದದ್ದಾಗಿ ಹೇಳಿಕೊಂಡಿದ್ದಾನೆ. ಡಾ. ವಿಂಟರ್‌ನಿಟ್ಸ್ ಪ್ರಕಾರ ಗ್ರೀಕ್‌ಭಾಷೆಯ ಈಸೋಪನ ನೀತಿಕತೆಗಳ ಮೂಲವೂ ಪಂಚತಂತ್ರವೇ. ಪಂಚತಂತ್ರ ಕತೆಗಳ ಪ್ರಮುಖ ಲಕ್ಷಣವೆಂದರೆ ಪ್ರಾಣಿಸಂಬಂಧೀ ಕತೆಗಳು. ಅರ್ನೆಸ್ಟ್ ರೈಸ್ ಹೇಳುವಂತೆ ಪ್ರಾಣಿಕತೆಗಳ ಮೂಲ ಭಾರತವೇ. ಈ ಪ್ರಭಾವದಿಂದಲೇ ಜಗತ್ತಿನ ಇತರ ಭಾಷೆಗಳಲ್ಲಿಯೂ ಇಂಥ ಕತೆಗಳು ರೂಪುಗೊಂಡಿವೆ.

ಪಂಚತಂತ್ರದ ಪ್ರಪಂಚ ಪರ್ಯಟನದ ಬಗ್ಗೆ ಒಂದು ಸ್ವಾರಸ್ಯಕರ ಕತೆಯಿದೆ. ಕ್ರಿ.ಶ. ಆರನೆಯ ಶತಮಾನದಲ್ಲಿ ಪರ್ಷಿಯಾದಲ್ಲಿ ಅನುಶಿರ್ವನ್ ಎಂಬ ರಾಜನಿದ್ದ. ಆತನ ಬಳಿ ಬುರ್ಜೊಯ್ ಎಂಬ ವೈದ್ಯಪಂಡಿತನಿದ್ದ. ರಾಜನಿಗೆ ಆಪ್ತನಾಗಿದ್ದ ಈತ ಸತ್ತವರನ್ನು ಮರಳಿ ಜೀವಂತಗೊಳಿಸುವ `ಸಂಜೀವಿನಿ'ಯ ಬಗ್ಗೆ ಕೇಳಿ ತಿಳಿದಿದ್ದ. ಇದು ಭಾರತದಲ್ಲಿ ಮಾತ್ರ ದೊರೆಯುತ್ತದೆಂದೂ ಗೊತ್ತಿತ್ತು. ರಾಜನ ಒಪ್ಪಿಗೆ ಪಡೆದು ಸಂಜೀವಿನಿ ತರಲು ಆತ ಭಾರತಕ್ಕೆ ಬರುತ್ತಾನೆ. ಭಾರತದ ಪರ್ವತಾರಣ್ಯ ಪ್ರದೇಶಗಳಲ್ಲಿ `ಸಂಜೀವಿನಿ'ಗಾಗಿ ಹುಡುಕಾಡುತ್ತಾನೆ. ಆತನಿಗೆ ಸಂಜೀವಿನಿ ಸಿಗುವುದಿಲ್ಲ. ನಿರಾಸೆಯಲ್ಲಿದ್ದಾಗ ಆತನಿಗೆ ಒಬ್ಬ ಸಂತನ ಭೇಟಿಯಾಗುತ್ತದೆ. ಬುರ್ಜೊಯನ್ ಸಮಸ್ಯೆಯನ್ನು ಕೇಳಿದ ಆತ ಪರ್ವತ ಎಂದರೆ ಜ್ಞಾನಿಗಳು. ಸತ್ತವರು ಎಂದರೆ ಅಜ್ಞಾನಿಗಳು. ಸತ್ತವರಿಗೆ ಸಂಜೀವಿನಿ ಜೀವ ಕೊಡುತ್ತದೆ ಎಂದರೆ ಜ್ಞಾನಿಗಳು ತಮ್ಮ ತಿಳಿವಳಿಕೆಯಿಂದ ಅಜ್ಞಾನಿಗಳಿಗೆ ಪುನರ್ಜನ್ಮ ನೀಡುತ್ತಾರೆಂದು ಅರ್ಥ. ನಮ್ಮ ಹಿರಿಯರು ಹೀಗೆ ಹೇಳಿದ್ದಾರೆ. ಇಂಥ ತಿಳಿವು `ಪಂಚತಂತ್ರ'ದಲ್ಲಿದೆ. ಅದೇ ಸಂಜೀವಿನಿ, ಅದನ್ನು ತೆಗೆದುಕೊಂಡು ಹೋಗು ಎಂದು ಹೇಳುತ್ತಾನೆ. ಬುರ್ಜೊಮ್ ಪರ್ಷಿಯಾಕ್ಕೆ ಪಂಚತಂತ್ರ ತೆಗೆದುಕೊಂಡು ಹೋಗಿ ಕ್ರಿ.ಶ. 550 ರಲ್ಲಿ ಅದನ್ನು ತಹಲವಿ ಭಾಷೆಗೆ ಅನುವಾದಿಸುತ್ತಾನೆ. ಆ ಅನುವಾದದಲ್ಲಿ ಈ ಕತೆಯೂ ಸೇರಿದೆ.

ಸತ್ತವರನ್ನು ಬದುಕಿರುವ ಸಂಜೀವಿನಿ ಎಂದರೆ ಕತೆಗಳು ಎಂಬ ಕತೆಯ ಜೀವಶಕ್ತಿಯನ್ನು ಹೇಳುವ ಈ ರೂಪಕವೇ ಅತ್ಯಂತ ಧ್ವನಿಪೂರ್ಣವಾಗಿದೆ. ಭಾರತೀಯ ಚಿಂತನೆಯ ಸ್ವರೂಪವನ್ನೂ ಇದು ತಿಳಿಸುತ್ತದೆ. ಆ ನಂತರದಲ್ಲಿ ಪಂಚತಂತ್ರ ಸಿರಿಯಾಕ್, ಅರಬ್ಬೀ, ಪರ್ಷಿಯನ್, ಯುನಾನಿ, ಲ್ಯಾಟಿನ್, ಜರ್ಮನ್, ಸ್ಲಾವ್, ಇಟಾಲಿಯನ್, ಹೀಬ್ರೂ, ಇಂಗ್ಲಿಷ್ ಹೀಗೆ ಅನೇಕ ಭಾಷೆಗಳಿಗೆ ಅನುವಾದಗೊಂಡು ಜಗತ್ತಿನಾದ್ಯಂತ ಜನಪ್ರಿಯವಾಗಿದೆ.

ಕತೆಯ ಜೀವಶಕ್ತಿಯನ್ನು ಹೇಳುವ ಒಂದು ಕತೆ `ಪಂಚತಂತ್ರ'ದಲ್ಲಿಯೇ ಇದೆ: ಉಜ್ಜಯಿನಿಯಲ್ಲಿದ್ದ ಡಾವರಡಾಕಿನಿ ಎಂಬುವವಳು ಕತೆ ಹೇಳುವುದರಲ್ಲಿ ನಿಸ್ಸೀಮಳು. ಆದರೆ ಸಾವಿರ ಗದ್ಯಾಣಗಳನ್ನು ಕೊಟ್ಟರೆ ಮಾತ್ರ ಆಕೆ ಕತೆ ಹೇಳುತ್ತಿದ್ದಳು. ದೇವದತ್ತ ಎಂಬ ಬ್ರಾಹ್ಮಣನಿಗೆ ಕತೆ ಕೇಳುವ ಹಂಬಲ. ಸಾವಿರ ಗದ್ಯಾಣಗಳನ್ನು ಹೊಂದಿಸಿಕೊಂಡು ಆತ ಡಾವರಡಾಕಿನಿ ಬಳಿಗೆ ಹೊರಡುತ್ತಾನೆ. ಹಾದಿಯ ಅರಣ್ಯದಲ್ಲಿ ಆತನನ್ನ ಒಂದು ಬ್ರಹ್ಮರಾಕ್ಷಸ ಹಿಡಿದುಕೊಳ್ಳುತ್ತದೆ. ದೇವದತ್ತ ಬ್ರಹ್ಮರಾಕ್ಷಸನಿಗೆ ತನ್ನ ಹಂಬಲ ತಿಳಿಸಿ, ಗಡುವು ಪಡೆದು ಉಜ್ಜಯಿನಿಗೆ ಬಂದು ಕತೆ ಕೇಳುತ್ತಾನೆ. ಆಕೆ ಹೇಳಿದ ಕತೆಯೆಂದರೆ `ಒರ್ಮೆ ಕಂಡವರ್ ಮತ್ತೊರ್ಮೆ ಕಂಡೊಡೆ ನಂಟರ್, ಇದುವೆ ಪರಮಾರ್ಥಂ'. ದೇವದತ್ತ ಬ್ರಹ್ಮರಾಕ್ಷಸನ ಬಳಿ ಬಂದಾಗ ಆತನಿಗೂ ಕತೆ ಕೇಳುವ ಹಂಬಲ. ದೇವದತ್ತ ಕತೆ ಹೇಳುತ್ತಾನೆ.

ಬ್ರಹ್ಮರಾಕ್ಷಸನನ್ನು ಮೊದಲು ಕಂಡಿದ್ದ ದೇವದತ್ತ ಈಗ ಮತ್ತೊಮ್ಮೆ ಭೇಟಿಯಾಗುತ್ತಿದ್ದಾನೆ. ಕತೆಯ ಪ್ರಕಾರ ದೇವದತ್ತ ಬ್ರಹ್ಮರಾಕ್ಷಸನ ಬಂಧು. ದೇವದತ್ತನನ್ನು ಕೊಂದು ತಿನ್ನಬೇಕೆಂದಿದ್ದ ಬ್ರಹ್ಮರಾಕ್ಷಸ ತನ್ನ `ಬಂಧು'ವನ್ನು ರಕ್ಷಿಸಿ, ಉಪಚರಿಸಿ, ಬೀಳ್ಕೊಡುತ್ತದೆ. ಕತೆಯಿಂದಾಗಿ ದೇವದತ್ತನ ಜೀವ ಉಳಿಯುತ್ತದೆ. ಕತೆಗಿರುವ ಜೀವದಾನ ಶಕ್ತಿಯನ್ನು ಈ ಕತೆ ಪರಿಣಾಮಕಾರಿಯಾಗಿ ಹೇಳುತ್ತದೆ.

ಕತೆಯ ಈ ಜೀವಶಕ್ತಿಯನ್ನು ನಮ್ಮ ಪ್ರಾಚೀನರು ಬಲ್ಲವರಾಗಿದ್ದರು. ನಮ್ಮದು ಪ್ರಧಾನವಾಗಿ ಕಥನಪರಂಪರೆ. ಜಗತ್ತಿನ ದೇಶಭಾಷೆಯಲ್ಲಿಯೂ ಕಾಣಸಿಗದ ಪ್ರಾಶಸ್ತ್ಯ ಭಾರತೀಯರಲ್ಲಿ ಕಥನ ಸಾಹಿತ್ಯಕ್ಕೆ ಸಿಕ್ಕಿದೆ. ಕಾವ್ಯ ನಾಟಕಗಳು ಕತೆಯನ್ನು ಆಶ್ರಯಿಸಿವೆ. ಕಥನಶಾಸ್ತ್ರ ಎನ್ನುವುದು ಭಾರತೀಯರಲ್ಲಿ ಪ್ರತ್ಯೇಕವಾಗಿ ಬೆಳೆದು ಬರಲಿಲ್ಲ ಎನ್ನುವುದು ನಿಜ. ಆದರೆ ಜಿ.ಎಸ್. ಆಮೂರರು ಗುರ್ತಿಸುವಂತೆ `ನಾಟ್ಯಶಾಸ್ತ್ರ'ದಷ್ಟು ವೈಜ್ಞಾನಿಕವಾಗಿ ಕತೆಯ ಮೂಲ ಆಕೃತಿಯನ್ನು ಆಧುನಿಕ ಕಥನಶಾಸ್ತ್ರಜ್ಞರೂ ಸಹ ವಿವರಿಸಿಲ್ಲ. ಇಪ್ಪತ್ತನೇ ಶತಮಾನದಲ್ಲಿ ಕಥನಶಾಸ್ತ್ರ (ಘ(Narratology ಪಾಶ್ಚಾತ್ಯರಲ್ಲಿ ಪ್ರಭಾವಿಯಾಗಿ ಬೆಳೆದಿದ್ದರೂ, ಭಾರತೀಯ ಚಿಂತನೆಯಲ್ಲಿ ಅದು ಮೊದಲಿನಿಂದಲೂ ಅಂತರ್ಗತವಾಗಿ ಬೆಳೆದುಬಂದಿದೆ.

ಈ ಹಿನ್ನೆಲೆಯಲ್ಲಿ ದುರ್ಗಸಿಂಹನ `ಪಂಚತಂತ್ರ' ನಮಗೆ ಅನೇಕ ಮಹತ್ವದ ಸಂಗತಿಗಳನ್ನು ಚರ್ಚಿಸಲು ಅನುವು ಮಾಡಿಕೊಡುವ ಒಂದು ಮುಖ್ಯ ಕೃತಿ. ಹನ್ನೊಂದನೇ ಶತಮಾನದ ಮೊದಲರ್ಧ ಭಾಗದಲ್ಲಿದ್ದ ಚಾಲುಕ್ಯರಾಜ ಜಗದೇಕಮಲ್ಲ ಜಯಸಿಂಹನ ಬಳಿ ದಂಡನಾಯಕನೂ, ಸಂಧಿವಿಗ್ರಹಿಯೂ ಆಗಿದ್ದ, ಸ್ಮಾರ್ತ ಭಾಗವತ ಸಂಪ್ರದಾಯಕ್ಕೆ ಸೇರಿದ್ದ ದುರ್ಗಸಿಂಹ (ಕ್ರಿ.ಶ. 1030) ಸಯ್ಯಡಿಯ ಪಂಡಿತ ಮನೆತನದವನು. ಪಂಪನಂತೆ ಕವಿಯೂ ಕಲಿಯೂ ಆಗಿದ್ದ ಈತನಿಗೆ ಸಹಜವಾಗಿಯೇ ರಾಜಕೀಯದಲ್ಲಿಯೂ ಆಸಕ್ತಿಯಿತ್ತು. ಆ ಕಾಲದಲ್ಲಿ ಪ್ರಚಲಿತದಲ್ಲಿದ್ದ ಮಾರ್ಗ ಪರಂಪರೆಗಿಂತ ಭಿನ್ನವಾಗಿ ಸಂಪೂರ್ಣ ಲೌಕಿಕ ವಸ್ತುವನ್ನಾರಿಸಿಕೊಂಡು ರಾಜನೀತಿ ಪ್ರತಿಪಾದಿಸುವ ಗ್ರಂಥ ರಚಿಸಿದ್ದು ದುರ್ಗಸಿಂಹನ ವೈಶಿಷ್ಟ್ಯ.

ಪಂಚತಂತ್ರದ ಕಥಾರಚನೆಗೂ ಹಿನ್ನೆಲೆಯಾಗಿ ಒಂದು ಕತೆ ಇದೆ. ಈ ಕತೆ ಲೌಕಿಕತೆಗೆ ಪುರಾಣದ ಚೌಕಟ್ಟು ಒದಗಿಸುವ ಪ್ರಯತ್ನದಂತೆ ತೋರುತ್ತದೆ. ಒಮ್ಮೆ ಶಿವನ ಒಡ್ಡೋಲಗದಲ್ಲಿ ಗಿರಿಜೆ ಶಿವನಿಗೆ ತನಗೊಂದು ಅಪೂರ್ವವಾದ ಕತೆ ಹೇಳುವಂತೆ ಕೇಳುತ್ತಾಳೆ. ಎಲ್ಲ ಗಂಡಂದಿರಂತೆ ಶಿವನೂ ತನ್ನ ಹೆಂಡತಿಯ ಮನಸ್ಸನ್ನು ಪ್ರಸನ್ನಗೊಳಿಸಲು ಕತೆ ಹೇಳಿದನಂತೆ. ಆಗ ಒಡ್ಡೋಲಗದಲ್ಲಿದ್ದ ಪುಷ್ಪದಂತನೆಂಬ ಒಬ್ಬ ಗಣಧರ ಎಲ್ಲವನ್ನೂ ಶ್ರದ್ಧೆಯಿಂದ ಕೇಳಿಸಿಕೊಂಡಿದ್ದು, ಕಾರಣಾಂತರದಿಂದ ಭೂಲೋಕದಲ್ಲಿ ಗುಣಾಢ್ಯನಾಗಿ ಜನಿಸಿ, ಶಾಲಿವಾಹನ ಚಕ್ರವರ್ತಿಯ ಬಳಿ ಕವಿಯಾಗಿದ್ದು ಹರ ಗಿರಿಜೆಗೆ ಹೇಳಿದ ಕತೆಗಳನ್ನು ಪೈಶಾಚಿ ಭಾಷೆಯಲ್ಲಿ `ಬೃಹತ್ಕಥೆ' ಎಂಬ ಹೆಸರಿನಲ್ಲಿ ರಚಿಸಿದನಂತೆ. ಇವುಗಳಲ್ಲಿ ಐದು ಕತೆಗಳನ್ನಾರಿಸಿಕೊಂಡು `ಪಂಚತಂತ್ರ' ಎಂಬ ಹೆಸರಿಟ್ಟು ವಸುಭಾಗಭಟ್ಟ ಸಂಸ್ಕೃತದಲ್ಲಿ ಗ್ರಂಥ ರಚಿಸುತ್ತಾನೆ. ಅದನ್ನು ದುರ್ಗಸಿಂಹ ಕನ್ನಡದಲ್ಲಿ `ಕರ್ನಾಟಕ ಪಂಚತಂತ್ರಂ' ಎಂದು ಪುನರ್‌ಸೃಷ್ಟಿಸಿದ್ದಾನೆ.

`ಪಂಚತಂತ್ರ'ದ ಎರಡು ಪ್ರಧಾನ ಧಾರೆಗಳಿವೆ. ಒಂದು ವಿಷ್ಣುಶರ್ಮನ ಪಂಚತಂತ್ರ. ಈತನೇ ಪಂಚತಂತ್ರದ ಕರ್ತೃ ಎಂಬ ಅಭಿಪ್ರಾಯವಿತ್ತು. ಉತ್ತರಭಾರತದಲ್ಲಿ ಈ ಸಂಪ್ರದಾಯ ಹೆಚ್ಚು ಪ್ರಚಲಿತದಲ್ಲಿದೆ. ಮತ್ತೊಂದು ವಸುಭಾಗಭಟ್ಟನ ಪಂಚತಂತ್ರ. ದಕ್ಷಿಣಭಾರತದಲ್ಲಿ ಇದು ಹೆಚ್ಚು ಪ್ರಚಲಿತ. ದುರ್ಗಸಿಂಹ ವಿಷ್ಣುಶರ್ಮನ ಹೆಸರನ್ನೂ ಪ್ರಸ್ತಾಪಿಸುವುದಿಲ್ಲ. ಹದಿನೇಳನೇ ಶತಮಾನದವರೆಗೂ ವಿಷ್ಣುಶರ್ಮನ ಸಂಪ್ರದಾಯದ ಕತೆಗಳು ಕನ್ನಡದಲ್ಲಿ ಪರಿಚಿತವಿರಲಿಲ್ಲ. ಕ್ರಿ.ಶ. 1650 ರಲ್ಲಿ ಶಂಕರಕವಿ ವಿಷ್ಣುಶರ್ಮನ ಪಂಚತಂತ್ರವನ್ನು ಕನ್ನಡಕ್ಕೆ ತಂದಿದ್ದಾನೆ. ವಸುಭಾಗಭಟ್ಟನ ಪರಂಪರೆಯ ಕತೆಗಳು ಜಾವಾ, ಥಾಯ್‌ಲ್ಯಾಂಡ್, ಲಾವೋಸ್, ಫ್ರಾನ್ಸ್ ಮೊದಲಾದ ದೇಶಗಳಲ್ಲಿಯೂ ದೊರೆಯುತ್ತವೆಂದು ಡಾ. ಅರ್ಟೊಲಾ ಹೇಳುತ್ತಾರೆ. ತಮಿಳಿನಲ್ಲಿಯೂ ವಸುಭಾಗಭಟ್ಟನ `ತಂತ್ರೋಪಖ್ಯಾನ'ದ ಭಾಷಾಂತರ ಸಿಗುತ್ತದೆ.

ಪಂಚತಂತ್ರ ಒಂದು ಕಥಾಪ್ರಪಂಚ. ಇದೊಂದು ರೀತಿ ಕಥಾಸರಣಿ. ಕತೆಯೊಳಗೆ ಕತೆ, ಆ ಕತೆ ಮತ್ತೊಂದು ಕತೆಗೆ ಪ್ರೇರಣೆ, ಆ ಕತೆ ಇನ್ನೊಂದು ಕತೆಗೆ ಸೂಚನೆ ಹೀಗೆ ಒಂದು ಕಥಾಜಗತ್ತು ನಿರ್ಮಾಣಗೊಳ್ಳುತ್ತದೆ. ದುರ್ಗಸಿಂಹನ ಪಂಚತಂತ್ರದ ಕಥಾಜಗತ್ತಿನಲ್ಲಿ ಇಂತಹ ಅರವತ್ತೈದು ಕತೆಗಳಿವೆ. ಹಾಗೆ ನೋಡಿದರೆ ಪ್ರಧಾನವಾಗಿ ಐದೇ ಕತೆಗಳು. ಉಳಿದವು ಅವುಗಳಿಗೆ ಪೂರಕವಾಗಿರುವಂಥವು. ಈ ಕಥಾಜಗತ್ತಿಗೆ ಪೀಠಿಕೆಯಾಗಿ ದುರ್ಗಸಿಂಹ ಒಂದು ಕತೆ ಹೇಳುತ್ತಾನೆ:

ಅಮರಸಿಂಹ ಎಂಬ ರಾಜ, ಆತನಿಗೆ ಅನೇಕಶಕ್ತಿ, ವಸುಶಕ್ತಿ ಹಾಗೂ ರುದ್ರಶಕ್ತಿ ಎಂಬ ಮೂವರು ಮಕ್ಕಳು. ಅವರೋ ದಡ್ಡಶಿಖಾಮಣಿಗಳು, ಉನ್ಮತ್ತರು ಅವಿನಯದಿಂದ ಕೂಡಿದ ಅವಿವೇಕಿಗಳು. ಅಮರಸಿಂಹ ಮಕ್ಕಳ ಭವಿಷ್ಯದ ಬಗ್ಗೆ ಚಿಂತಾಕ್ರಾಂತನಾಗಿ `ಈ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡುವವರಿಗೆ ಅವರು ಕೇಳಿದ್ದನ್ನು ಕೊಡುತ್ತೇನೆ' ಎಂದು ಘೋಷಿಸುತ್ತಾನೆ. ವಸುಭಾಗಭಟ್ಟ ಈ ಸವಾಲನ್ನು ಸ್ವೀಕರಿಸುತ್ತಾನೆ. ಆದರೆ ಆ ಮಕ್ಕಳು ವಸುಭಾಗಭಟ್ಟನ ಮಾತು ಕೇಳುವಂಥವರಲ್ಲ. ಏನು ಮಾಡುವುದು? ಒಂದು ದಿನ ಆ ಧೂರ್ತ ಹುಡುಗರು ಬೇಟೆಗೆಂದು ಹೊರಡುತ್ತಾರೆ. ವಸುಭಾಗಭಟ್ಟನೂ ಅವರ ಜೊತೆ ಹೋಗುತ್ತಾನೆ. ದಾರಿಯಲ್ಲಿ ಬೇಸರ ಕಳೆಯಲೆಂದು ಒಂದು ಕತೆ ಹೇಳುತ್ತಾನೆ. ಹುಡುಗರಿಗೆ ಕತೆ ಇಷ್ಟವಾಗುತ್ತದೆ. ಮತ್ತೊಂದು ಕತೆ ಹೇಳು ಎನ್ನುತ್ತಾರೆ. ಆಗ ವಸುಭಾಗಭಟ್ಟ ಅವರು ತಾನು ಹೇಳಿದ ಕತೆಯನ್ನು ಗಮನವಿಟ್ಟು ಕೇಳಿದ್ದಾರೆಯೋ ಇಲ್ಲವೋ ಎಂದು ಪರೀಕ್ಷಿಸಲು `ನಾನು ಹೇಳಿದ ಕತೆಯನ್ನು ನೀವು ಮತ್ತೊಮ್ಮೆ ಹೇಳಿ' ಎನ್ನುತ್ತಾನೆ. ಅವರು ಅಕ್ಷರ ತಪ್ಪದಂತೆ ಹೇಳುತ್ತಾರೆ. ಸಂಪ್ರೀತನಾದ ವಸುಭಾಗ ಅವರಿಗೆ ರಾಜನೀತಿ ಪ್ರತಿಪಾದಿಸುವ ಅನೇಕ ಕತೆಗಳನ್ನು ಹೇಳುತ್ತಾ ಹೋಗುತ್ತಾನೆ. ಕಡೆಗೆ ಆ ರಾಜಕುಮಾರರು ರಾಜನೀತಿ ನಿಪುಣರಾಗುತ್ತಾರೆ.

ಪಂಚತಂತ್ರದ ಆಶಯವನ್ನು ನಿರೂಪಿಸುವ ಈ ಕತೆಯೇ ಇಡೀ ಕೃತಿಯ ರಚನಾವಿನ್ಯಾಸವನ್ನೂ ರೂಪಿಸಿದೆ. ರಾಜನೀತಿಯ ಐದು ಪ್ರಧಾನ ತಂತ್ರಗಳು ಇಲ್ಲಿ ನಿರೂಪಿತವಾಗಿವೆ.

ಭೇದಃ ಪರೀಕ್ಷಾಃ ವಿಶ್ವಾಸಃ ಚತುರ್ಥಂ ವಂಚನಂ ತಥಾ
ಮಿತ್ರಕಾರ್ಯಂ ಚ ಪಂಚೈತೇ ಕಥಾಸ್ತಂತ್ರಾರ್ಥ ಸಂಜ್ಞಕಾಃ 
ಭೇದ, ಪರೀಕ್ಷೆ, ವಿಶ್ವಾಸ, ವಂಚನೆ ಹಾಗೂ ಮಿತ್ರಕಾರ್ಯ ಎಂಬಿವೇ ಆ ಐದು ತಂತ್ರಗಳು ಆತ್ಮೀಯ ಸ್ನೇಹಿತರಲ್ಲಿ ಒಡಕು ತರುವುದೇ ಭೇದ; ಯಾವ ಕಾರ್ಯವನ್ನೇ ಆಗಲಿ ವಿಚಾರಿಸದೆ ಮಾಡಬಾರದು ಎಂಬುದೇ ಪರೀಕ್ಷೆ; ನಂಬದವರನ್ನು ನಂಬುವಂತೆ ಮಾಡುವುದು ವಿಶ್ವಾಸ; ಸಮಯವರಿತು ಮೋಸ ಮಾಡುವುದು ವಂಚನೆ; ಅನ್ಯರನ್ನು ತನ್ನವರನ್ನಾಗಿ ಮಾಡಿಕೊಳ್ಳುವುದು ಮಿತ್ರಕಾರ‌್ಯ. ಈ ಐದು ರಾಜನೀತಿ ತಂತ್ರಗಳನ್ನು ಬೇರೆ ಬೇರೆ ನೆಲೆಗಳಲ್ಲಿ ಇಲ್ಲಿನ ಕತೆಗಳು ಪ್ರತಿಪಾದಿಸುತ್ತವೆ. ಕತೆಗಳ ನಡುವೆ ಸಂಸ್ಕೃತ ಶ್ಲೋಕಗಳೂ, ಸುಭಾಷಿತಗಳೂ ಹೇರಳವಾಗಿ ಬರುತ್ತವೆ. ದುರ್ಗಸಿಂಹನ ವಿಸ್ತಾರವಾದ ಓದು, ಶಾಸ್ತ್ರಜ್ಞಾನ, ಜೀವನಾನುಭವ ಇವೆಲ್ಲ ಒಂದು ಹದದಲ್ಲಿ ಇಲ್ಲಿ ಬೆರೆತು ಪಂಚತಂತ್ರದ ಓದು ಒಂದು ಆಹ್ಲಾದಕರ ಅನುಭವ ನೀಡುತ್ತದೆ.

`ಪಂಚತಂತ್ರ' ರಾಜಕೀಯ ಹಾಗೂ ಸಾಹಿತ್ಯದ ಸಂಬಂಧವನ್ನು ಅದ್ಭುತವಾಗಿ ನಿರೂಪಿಸುವ ಒಂದು ಕೃತಿ. ಅಮರಸಿಂಹನ ಮಕ್ಕಳಿಗೂ ಇವತ್ತಿನ ನಮ್ಮ ರಾಜಕಾರಣಿಗಳಿಗೂ ಅಂಥ ವ್ಯತ್ಯಾಸವೇನಿಲ್ಲ. ಅಪವಾದವೆನ್ನುವಂತೆ ಕೆಲವರು ವಿವೇಕಿಗಳಿದ್ದಾರೆ ನಿಜ. ಆದರೆ ಬಹುಪಾಲು ಅಮರಸಿಂಹನ ಸಂತತಿಯೇ! ಪಂಚತಂತ್ರ ಒಂದು ರೀತಿ ಸಾಹಿತ್ಯದ ಸಾಮಾಜಿಕ ಜವಾಬ್ದಾರಿಯನ್ನೂ ಸೂಚಿಸುತ್ತದೆ.
ಮತ್ತೊಂದು ಸಂಗತಿಯೆಂದರೆ ಶಿಕ್ಷಣಕ್ಕೂ ಸಾಹಿತ್ಯಕ್ಕೂ ಇರುವ ಸಂಬಂಧ. ನಮ್ಮ ಇಂದಿನ ಶಿಕ್ಷಣ ಮಾನವಿಕ ವಿಷಯಗಳನ್ನು ನಿರ್ಲಕ್ಷಿಸಿ, ಮಾಹಿತಿ ಸಂಗ್ರಹವೇ ಜ್ಞಾನ ಎಂಬ ನೆಲೆ ತಲುಪಿದೆ. ಶಿಕ್ಷಣದ ಹೆಸರಿನಲ್ಲಿ ನಾವು ರೋಬಟ್‌ಗಳನ್ನು ಸೃಷ್ಟಿಸುತ್ತಿದ್ದೇವೆ. ಮನುಷ್ಯ ಸಮಾಜವನ್ನು ರೂಪಿಸುವ ಶಿಕ್ಷಣದ ಪರ್ಯಾಯ ಸಾಧ್ಯತೆಗಳತ್ತ ಚಿಂತಿಸುವಂತೆ ಪಂಚತಂತ್ರ ನಮ್ಮನ್ನು ಒತ್ತಾಯಿಸುತ್ತದೆ.

ಸಾಹಿತ್ಯದ ಬಹುಮುಖೀ ಸಾಧ್ಯತೆಗಳತ್ತ ಪಂಚತಂತ್ರ ನಮ್ಮ ಗಮನ ಸೆಳೆಯುತ್ತದೆಂದೇ ಅದು ನಮ್ಮ ಕಾಲಕ್ಕೆ ಅತ್ಯಂತ ಪ್ರಸ್ತುತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT