ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತರಿಸಿ ಹಾಕ್ತೀನಿ: ಸಚಿವರ ಬೆದರಿಕೆ

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: `ಸರಿಯಾಗಿ ಕೆಲಸ ಮಾಡದಿದ್ದರೆ, ನಿಮ್ಮನ್ನ ಕತ್ತರಿಸಿ ಹಾಕ್ತೀನಿ. ನಾನು ಹೇಳಿದ ಕೆಲಸ ಆಗಬೇಕು. ಕೆಲಸ ಆಗದಿದ್ದರೆ, ಯಾವೊಬ್ಬ ಅಧಿಕಾರಿಯೂ ನನ್ನ ಮುಂದೆ ಇರಲ್ಲ. ಅಧಿಕಾರಿಗಳು ಎಂದು ಹೇಳಿಕೊಳ್ಳಲಿಕ್ಕೆ ನಿಮಗೆ ನಾಚಿಕೆ ಆಗಬೇಕು~.

ಹೀಗೆ ಆವೇಶಭರಿತವಾಗಿ ಆಕ್ರೋಶ ವ್ಯಕ್ತಪಡಿಸಿದವರು ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಸಚಿವರು, `ಬದ್ಧತೆ ಇಲ್ಲದಿದ್ದರೆ, ಯಾಕೆ ಕೆಲಸ ಮಾಡ್ತೀರಾ? ತಪ್ಪಿತಸ್ಥರನ್ನು ಸುಮ್ಮನೆ ಬಿಡಲ್ಲ~ ಎಂದು ಎಚ್ಚರಿಸಿದರು.

`ಸಂವಿಧಾನದ ಕೆಳಗೆ ಸಂಸ್ಕಾರದಿಂದ ಕೆಲಸ ಮಾಡಬೇಕು. ಶಾಸಕರು ಕರೆಯುವ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಅಧಿಕಾರಿಗಳು ಹಾಜರಾಗುವುದಿಲ್ಲ. ಕೆಲಸ ಸರಿಯಾಗಿ ಮಾಡುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲ ಅಸಹ್ಯಕರ~ ಎಂದು ಅವರು ತರಾಟೆಗೆ ತೆಗೆದುಕೊಂಡರು.

`ನಿಮ್ಮಂತಹವರಿಂದ ರಾಜಕಾರಣಿಗಳು ಬಯ್ಯಿಸಿಕೊಳ್ಳಬೇಕು. ಕೆಟ್ಟ ಹೆಸರು ಬರುತ್ತದೆ. ನಾನು ಬಂದು-ಹೋಗುವ ರಾಜಕಾರಣಿಯಲ್ಲ. ಸಾಮಾಜಿಕ ಕಾಳಜಿ ಮತ್ತು ಕಳಕಳಿಯಿಂದ 24 ಗಂಟೆಗಳ ಕಾಲ ಕೆಲಸ ಮಾಡ್ತೀನಿ. ಯಾವಾಗ ಕರೆದರೂ ಬರ‌್ತೀನಿ~ ಎಂದರು.

`ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಗಳಲ್ಲಿನ ನಡಾವಳಿ ಪುಸ್ತಕಗಳನ್ನು ತರಿಸಿಕೊಳ್ತೀನಿ. ಯಾರ‌್ಯಾರು ಗೈರುಹಾಜರಾಗಿದ್ದಾರೆ ಎಂದು ಪರಿಶೀಲಿಸ್ತಿನಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೀನಿ. ಒಂದೂವರೆ ತಿಂಗಳ ಅವಧಿಯೊಳಗೆ ಹೇಳಿದ ಕೆಲಸಗಳು ಆಗದಿದ್ದರೆ, ಮೇ ತಿಂಗಳ ವೇಳೆಗೆ ನೀವ್ಯಾರೂ ನನ್ನ ಕಣ್ಣು ಮುಂದೆ ಇರಲ್ಲ. ಈ ಜಿಲ್ಲೆಯಲ್ಲಿ ಇರಲ್ಲ~ ಎಂದು ಗುಡುಗಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT