ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತಲ ಕೋಣೆಯಲ್ಲಿ 16 ವರ್ಷಗಳಿಂದ ಯುವಕ ಬಂದಿ

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಜಗಳೂರು: ಮಾನಸಿಕವಾಗಿ ಅಸ್ವಸ್ಥನಾದ ಯುವಕನ ಕೈಕಾಲುಗಳನ್ನು ಪೋಷಕರೇ ಸರಪಳಿಯಿಂದ ಕಟ್ಟಿಹಾಕಿ, 16 ವರ್ಷಗಳಿಂದ ಬಾಗಿಲೇ ಇಲ್ಲದ ಕತ್ತಲ ಕೋಣೆಯಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ತಾಲ್ಲೂಕಿನ ಲಕ್ಕಂಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

 ಗ್ರಾಮದ ದೇವದಾಸಿ ಮಹಿಳೆ ಚೌಡಮ್ಮ ಅವರ ಪುತ್ರ ಕೇಶವಮೂರ್ತಿ (38) ಸತತ 16 ವರ್ಷಗಳಿಂದ ಚಿಕ್ಕ ಕೋಣೆಯೊಂದರಲ್ಲಿ ಬಂಧನಕ್ಕೊಳಗಾದ ಯುವಕ.

ದ್ವಿತೀಯ ಪಿಯುನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದ ಪ್ರತಿಭಾನ್ವಿತ ಕೇಶವಮೂರ್ತಿ, ಬಿ.ಕಾಂ ಓದುತ್ತಿದ್ದ ಸಂದರ್ಭದಲ್ಲಿ ಮಾನಸಿಕವಾಗಿ ಅಸ್ವಸ್ಥನಾದ ಎನ್ನಲಾಗಿದೆ.

ಅನಕ್ಷರಸ್ಥ ಪೋಷಕರು ತಮ್ಮ ಮಗನಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಬದಲು ಕೈಕಾಲು ಸರಪಳಿಯಿಂದ ಬಿಗಿದು ಗೃಹ ಬಂಧನದಲ್ಲಿರಿಸಿದ್ದಾರೆ. ನಂತರ ಚಿಕ್ಕದಾದ ಕೋಣೆಯೊಂದರಲ್ಲಿ ಕೂಡಿಹಾಕಿ ಅಸ್ವಸ್ಥ ಯುವಕ ಹೊರಗೆ ಬರಲು ಸಾಧ್ಯವಿಲ್ಲದಂತೆ ಬಾಗಿಲನ್ನು ಮುಚ್ಚಿ ಶಾಶ್ವತವಾಗಿ ಗೋಡೆ ನಿರ್ಮಿಸಿದ್ದಾರೆ.

ಕೇವಲ ಎರಡು ಅಡಿ ಅಗಲದ ಕಿಟಕಿಯಲ್ಲಿ ಆತನಿಗೆ ನಿತ್ಯ ಊಟ, ನೀರು ಕೊಡಲಾಗುತ್ತಿದೆ. 16 ವರ್ಷಗಳಿಂದ ಸ್ನಾನ ಇಲ್ಲದೇ, ತಲೆ ಗೂದಲು, ಮೀಸೆ ಗಡ್ಡ ವಿಕಾರವಾಗಿ ಬೆಳೆದಿವೆ. ಮಲಮೂತ್ರದಿಂದ ಕೋಣೆ ದುರ್ನಾತ ಬೀರುತ್ತಿದೆ. ಸೂರ್ಯನ ಕಿರಣಗಳು ಮೈಮೇಲೆ ಬೀಳದೆ ಯುವಕ ಕೃಶನಾಗಿದ್ದು, ನೋಡುಗರ ಮನಕಲುಕುವಂತಿದೆ.

ತಹಶೀಲ್ದಾರ್ ಭೇಟಿ: ಗ್ರಾಮಸ್ಥರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಗೃಹಬಂಧನಕ್ಕೆ ಒಳಗಾದ ಕೇಶವಮೂರ್ತಿಯನ್ನು ತಹಶೀಲ್ದಾರ್ ವೆಂಕನಗೌಡ ಆರ್. ಪಾಟೀಲ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಅಸ್ವಸ್ಥನ ತಾಯಿ ಚೌಡಮ್ಮ ಅವರನ್ನು ಈ ಬಗ್ಗೆ ವಿಚಾರಿಸಿದಾಗ, `ನಾವು ಸಾಲ ಮಾಡಿ ಆಸ್ಪತ್ರೆಗೆ ತೋರಿಸಿದ್ದವು. ಆದರೂ, ಆರೋಗ್ಯ ಸುಧಾರಿಸಲಿಲ್ಲ. ಗ್ರಾಮದ ಬೇರೆಯವರಿಗೆ ತೊಂದರೆಯಾದೀತೆಂದು ಕೋಣೆಯಲ್ಲಿ ಕೂಡಿ ಹಾಕಿದ್ದೇವೆ~ ಎಂದು ಹೇಳಿದರು.

`ಮಾನಸಿಕ ಅಸ್ವಸ್ಥ ಎಂಬ ಕಾರಣಕ್ಕೆ ಕೋಣೆಯಲ್ಲಿ ಕೂಡಿ ಹಾಕಿರುವುದು ಅಮಾನವೀಯವಾಗಿದೆ. ತಾಲ್ಲೂಕು ವೈದ್ಯಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗಿದೆ.  ಮುಂದಿನ ಬುಧವಾರದ ಒಳಗಾಗಿ  ಗೋಡೆ ಒಡೆದು ಅಸ್ವಸ್ಥ ಯುವಕನನ್ನು ಚಿಕಿತ್ಸೆಗೆ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು~ ಎಂದು ವೆಂಕನಗೌಡ ಆರ್. ಪಾಟೀಲ್ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT