ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತಲೆಯ ಬದುಕಿನಲ್ಲಿ ಸುವರ್ಣರಶ್ಮಿಯ ಬೆಳಕು...

Last Updated 22 ಫೆಬ್ರುವರಿ 2011, 16:20 IST
ಅಕ್ಷರ ಗಾತ್ರ

ಧಾರವಾಡ:  ಬಹಿರಂಗದ ಬದುಕು ಕತ್ತಲಾದರೇನಂತೆ, ಅಂತರಂಗದಲ್ಲಡಗಿದ ಒಳಗಿನೊಳಗಿನ ಬೆಳಕಿನಲ್ಲಿ ನಡೆದ ಓದು, ಬರಹ, ಲೆಕ್ಕಾಚಾರದಿಂದಾಗಿ ಕತ್ತಲೆಯ ಬದುಕಿನಲ್ಲಿ ಸುವರ್ಣರಶ್ಮಿಯ ಬೆಳಕು ಮೂಡಿದೆ.

ತನ್ನೆರಡು ಕಣ್ಣುಗಳನ್ನು ಕಳೆದುಕೊಂಡು ಹುಟ್ಟಿನೊಂದಿಗೆ ಬಾಳ ಪಯಣದ ಬಹಿರಂಗದ ಬದುಕಿನಲ್ಲಿ ಶಾಶ್ವತ ಕತ್ತಲೆಯನ್ನೇ ತುಂಬಿಕೊಂಡಿರುವ ಬೀಳಗಿ ತಾಲ್ಲೂಕಿನ ಹೆರಕಲ್ ಗ್ರಾಮದ ಮಲ್ಲಪ್ಪ ನಿಂಗಪ್ಪ ಬಂಡಿ, ಮಂಗಳವಾರ ನಡೆದ ಕರ್ನಾಟಕ ವಿಶ್ವವಿದ್ಯಾಲಯದ 61ನೇ ಘಟಿಕೋತ್ಸವದಲ್ಲಿ ಬಿಎ ಕನ್ನಡ ಪದವಿ ಪರೀಕ್ಷೆಯಲ್ಲಿ ಐದು ಸುವರ್ಣ ಪದಕಗಳನ್ನು ಪಡೆಯುವುದರೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.

ಮಲ್ಲಪ್ಪ ಬಂಡಿ ತಮಗಿರುವ ಶಾಶ್ವತ ಕುರುಡುತನವನ್ನು ಮೀರಿ ಆರಂಭದಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಹಿರಿಮೆ ಸಾಧಿಸಿದ ಸಾಧಕ. ‘ಬಹಿರಂಗದ ಬದುಕಿನಲ್ಲಿ ಕತ್ತಲೆ ಇದ್ದರೇನಂತೆ, ಅಂತರಂಗದಲ್ಲಡಗಿದ ಒಳಗಿನೊಳಗಿನ ಬೆಳಗು, ನನ್ನ ಓದು- ಬರಹ- ಚಿಂತನೆಗೆ ಬದ್ಧತೆಯ ದಾರಿ ತೋರಿ ಕೈಹಿಡಿದು ಮುನ್ನಡೆಸಿದೆ’ ಎಂದು ಭಾವತುಂಬಿ ನುಡಿಯುವ ಮಲ್ಲಪ್ಪ ನಿಜಕ್ಕೂ ಆದರ್ಶ ವಿದ್ಯಾರ್ಥಿ.

ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಲಾ ಕಾಲೇಜಿನಲ್ಲಿ ಬಿಎ ಮುಗಿಸಿರುವ ಮಲ್ಲಪ್ಪ, ಈಗ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಎಂಎ ಪದವಿ ಓದುತ್ತಿದ್ದಾರೆ. ಇವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿ ರಾಜ್ಯ ಪ್ರಶಸ್ತಿ ಪಡೆದವರು. ಪಿಯುಸಿಯಲ್ಲಿ ಮುಂಬೈಯ ಧೀರೂಭಾಯಿ ಅಂಬಾನಿ ಫೌಂಡೇಶನ್ ಫೆಲೋಶಿಪ್ ಪಡೆದಿದ್ದರು.

ಚಿಕ್ಕವರಿದ್ದಾಗಲೇ ತಂದೆಯ ಪ್ರೀತಿಯನ್ನು ಕಳೆದುಕೊಂಡಿರುವ ಮಲ್ಲಪ್ಪ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಬ್ಬಳ್ಳಿಯ ಸಿದ್ಧಾರೂಢಮಠದ ಅಂಧಮಕ್ಕಳ ಸರ್ಕಾರಿ ಶಾಲೆಯಲ್ಲಿ ಪಡೆದಿದ್ದಾರೆ. ಇವರ ತಾಯಿ ಮಹಾದೇವಿ ಅವರು ಹೆರಕಲ್ ಗ್ರಾಮದಲ್ಲಿ ಹೊಲಗೆಲಸ ಮಾಡುತ್ತಿದ್ದಾರೆ. ತಮ್ಮ ಮಗನ ಚಿನ್ನದ ಸಾಧನೆಯನ್ನು ಕಣ್ಣಾರೆ ಕಂಡ ತಾಯಿಯ ನೇತ್ರಗಳಲ್ಲಿ ಆನಂದಭಾಷ್ಪಗಳು ಉದುರಿದವು.

’ಚಿನ್ನದ ಪದಕ ಪಡೆದಿದ್ದಕ್ಕೆ ನನಗೆ ಅತೀವ ಸಂತೋಷ ಆಗಿದೆ. ನಮ್ಮ ಸಾಮರ್ಥ್ಯವನ್ನು ಸಮಾಜ ಗಮನಿಸುವುದು ಮುಖ್ಯ. ಸರ್ಕಾರ ಸಹ ನಮ್ಮ ಸಾಮರ್ಥ್ಯ ಗಮನಿಸಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು. ಪ್ರತಿಭಾವಂತ ಅಂಧ ವಿದ್ಯಾರ್ಥಿಗಳು ಅನೇಕರಿದ್ದಾರೆ. ಅಂಥವರನ್ನು ಗುರುತಿಸಿ ಸೂಕ್ತ ಸೌಕರ್ಯ- ಸೌಲಭ್ಯ ಒದಗಿಸಬೇಕು. ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಸರ್ಕಾರ ನಮ್ಮಂಥವರಿಗೆ ಸೌಕರ್ಯ ಒದಗಿಸಬೇಕು’ ಎಂದು ಹೇಳುತ್ತಾರೆ ಮಲ್ಲಪ್ಪ.

’ನನ್ನ ಅದೃಷ್ಟ, ಈ ಸಾಧನೆಗೆ ನನ್ನ ಪ್ರಾಧ್ಯಾಪಕರು, ಸ್ನೇಹಿತರು ಹಾಗೂ ಕೆಎಲ್‌ಇ ಸಂಸ್ಥೆಯ ಸಹಕಾರವೇ ಕಾರಣ. ಸಾರ್ವಜನಿಕ ಆಡಳಿತ ಸೇವೆ ಮಾಡುವ ಗುರಿ ಇಟ್ಟುಕೊಂಡಿದ್ದೇನೆ, ಒಳ್ಳೆಯ ಪ್ರಾಧ್ಯಾಪಕನಾಗುವ ಆಸೆ ಕೂಡ ಇದೆ’ ಎಂದು ಹೆಮ್ಮೆಯಿಂದ ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT