ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತಿ ಕೊಟ್ಟಿದ್ದು ಪರಸ್ಪರ ಇರಿಯಲಿಕ್ಕಲ್ಲ

Last Updated 21 ಜನವರಿ 2012, 19:30 IST
ಅಕ್ಷರ ಗಾತ್ರ

ದಾವಣಗೆರೆ: `ನಿಮಗೆ ಕತ್ತಿ ಕೊಟ್ಟಿರುವುದು ಪರಸ್ಪರ ಇರಿಯಲು ಅಲ್ಲ. ಅದನ್ನು ಜನರ ರಕ್ಷಣೆಗಾಗಿ ಬಳಸಿ~.
-ಇದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ ಕಿವಿಮಾತು.

ನಗರದಲ್ಲಿ ಶನಿವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಕ್ಷತ್ರೀಯ ಮರಾಠ ಸಮಾಜ ವತಿಯಿಂದ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗೆ ಬೆಳ್ಳಿಯ ಕತ್ತಿ ನೀಡಿ ಸನ್ಮಾನಿಸಲಾಯಿತು. ಅಲ್ಲದೇ, ಶಿವಮೂರ್ತಿ ಸ್ವಾಮೀಜಿ ಅವರಿಗೆ ಶಾಲು ಮತ್ತು ಚಿನ್ನಲೇಪಿತ ದಂಡ ನೀಡಿ ಸನ್ಮಾನಿಸಲಾಯಿತು.

ಆಗ ಮಾತನಾಡಿದ ತರಳಬಾಳು ಸ್ವಾಮೀಜಿ, `ಈ ರಾಜಕಾರಣಿಗಳನ್ನು ಮತ್ತು ಜನರನ್ನು ಯಾವ ದೇವರಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಹಾಲಿ ಮತ್ತು ಮಾಜಿ ಸಿಎಂಗೆ ಬೆಳ್ಳಿಯ ಕತ್ತಿ ಮಾತ್ರ ನೀಡಿದ್ದೀರಿ. ಆದರೆ, ರಕ್ಷಣೆಗಾಗಿ ಗುರಾಣಿಯನ್ನೇ ಕೊಟ್ಟಿಲ್ಲ. ನನಗೆ ದಂಡ ನೀಡಿದ್ದೀರಿ. ಮರಾಠ ಸಮಾಜದವರು ನೀಡಿರುವ ಈ ಕತ್ತಿಗಳನ್ನು ಹಾಲಿ ಮತ್ತು ಮಾಜಿ ಸಿಎಂ ಪರಸ್ಪರ ತಿವಿಯಲು ಬಳಸದೇ, ಜನರ ರಕ್ಷಣೆಗಾಗಿ ಬಳಸಲಿ~ ಎಂದು ಕಿವಿಮಾತು ಹೇಳಿದರು.

 ನಂತರ ಶಿವಾಜಿ ಕುರಿತ ಕಥೆಯೊಂದನ್ನು ಹೇಳಿದ ಸ್ವಾಮೀಜಿ, `ಬಿಜಾಪುರದ ಸುಲ್ತಾನ ಅಫ್ಜಲ್‌ಖಾನ್, ಶಿವಾಜಿ ವಿರುದ್ಧ ಯುದ್ಧ ಮಾಡಲು ಹೊರಟಿದ್ದಾಗ, ಸಮಸ್ಯೆಯನ್ನು ಸಂಧಾನ ಮೂಲಕ ಬಗೆಹರಿಸಲು ಶಿವಾಜಿ ಒಲವು ತೋರಿ, ಅಫ್ಜಲ್‌ಖಾನ್ ಬಳಿಗೆ ತೆರಳುತ್ತಾನೆ. ಆದರೆ, ಭೇಟಿಯ ಸಮಯದಲ್ಲಿ ಖಾನ್ ಹಿಂದಿನಿಂದ ಬಂದು ಶಿವಾಜಿಯ ಬೆನ್ನಿಗೇ ಚೂರಿ ಹಾಕುತ್ತಾನೆ. ಖಾನ್‌ನ ಅಂತರಂಗ ಬಲ್ಲ ಶಿವಾಜಿ ಮೈಗೆ ಕಂಚಿನ ಕವಚ ಧರಿಸಿಯೇ ಹೋಗಿದ್ದರಿಂದ ಪ್ರಾಣ ಉಳಿಸಿಕೊಂಡು, ಖಾನ್‌ನನ್ನು ಅಲ್ಲಿಯೇ ಅಂತ್ಯಗೊಳಿಸುತ್ತಾನೆ~ ಎಂದು ಮಾರ್ಮಿಕವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT