ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ರಿನಾಥ ಗ್ರಾಮಕ್ಕೆ ಶಾಸಕ ರಾಜು ಭೇಟಿ

Last Updated 9 ಜುಲೈ 2012, 5:25 IST
ಅಕ್ಷರ ಗಾತ್ರ

ಕನಕಪುರ: ಯಲಚವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕತ್ರಿನಾಥ ಗ್ರಾಮದಲ್ಲಿ ಅತಿ ಹಿಂದುಳಿದ ಜನಾಂಗದವರು ವಾಸ ಮಾಡುತ್ತಿದ್ದು ಕುಡಿಯುವ ನೀರು ಮತ್ತು ಮೂಲ ಸೌಕರ್ಯಗಳ ಸಮಸ್ಯೆ ಹೆಚ್ಚಿದೆ.

ಶಾಸಕರು ಈ ಬಗ್ಗೆ ತಕ್ಷಣವೇ ಹರಿಸಬೇಕೆಂದು ಗ್ರಾಮಸ್ಥರು ಶಾಸಕ ಕೆ. ರಾಜು ಅವರಲ್ಲಿ ಮನವಿ ಮಾಡಿದರು.

ರಾಮನಗರ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿರುವ ಮರಳವಾಡಿ ಹೋಬಳಿಗಳಲ್ಲಿ ಎಸ್‌ಸಿಪಿ ಮೀಸಲು ಆಧಾರದಡಿ ದಲಿತ ಕಾಲೋನಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸಲು ಬಂದಿದ್ದ ಶಾಸಕರ ಮುಂದೆ ಕತ್ರಿನಾಥ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡರು.

ಗ್ರಾಮದಲ್ಲಿ ಲಂಬಾಣಿ ಜನಾಂಗದವರೇ ಹೆಚ್ಚಾಗಿ ವಾಸ ಮಾಡುತ್ತಿದ್ದು ಗ್ರಾಮಕ್ಕೆ ಸರಿಯಾದ ರಸ್ತೆಯಿಲ್ಲದೆ ತೊಂದರೆ ಅನುಭವಿಸುತ್ತ್ದ್ದಿದಾರೆ. ಗ್ರಾಮಕ್ಕೆ ಬರಬೇಕಾದರೆ ಬೇರೊಬ್ಬರ ಜಮೀನಿನನ್ನು ಹಾಯ್ದು ಬರಬೇಕಿದೆ ಎಂದು ತಮ್ಮ ತೊಂದರೆಯನ್ನು ವಿವರಿಸಿದರು.

ಈ ಮನವಿಗೆ ಸ್ಪಂದಿಸಿದ ಶಾಸಕರು, ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ಗ್ರಾಮದ ರಸ್ತೆಗಳಿಗೆ ಸಿಮೆಂಟ್ ರಸ್ತೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಗ್ರಾಮಕ್ಕೆ ಬರುವ ರಸ್ತೆಗೆ ಜಮೀನು ಬಿಡಬೇಕಿರುವ ರೈತ ಕುಟುಂಬದವರನ್ನು ಕರೆಸಿ ಸ್ಥಳದಲ್ಲೇ ಮಾತನಾಡಿದರು. ಗ್ರಾಮಕ್ಕೆ ಬರುವ ರಸ್ತೆ ತೀರಾ ಕಿರಿದಾಗಿದ್ದು ಅದಕ್ಕಾಗಿ ರಸ್ತೆಗೆ ಜಾಗ ಬಿಡುವಂತೆ ಜಮೀನಿನ ಮಾಲೀಕರ ಮನವೊಲಿಸಿದರು.

ಇದೇ ಸಂದರ್ಭದಲ್ಲಿ ಗೆಂಡೆಗೌಡನ ದೊಡ್ಡಿ ಹಾಗೂ ಭೀಮೇಗೌಡನ ದೊಡ್ಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಕುರಿತು ಗ್ರಾಮಸ್ಥರು ಸಮಸ್ಯೆ ತೋಡಿಕೊಂಡರು. ಈ ವೇಳೆ ಮಾತನಾಡಿದ ಗೆಂಡೇಗೌಡನ ದೊಡ್ಡಿಯ ಗಣೇಶ್, ತಮ್ಮ ಜಮೀನಿನಲ್ಲಿ ಗ್ರಾಮಕ್ಕಾಗಿ ಕುಡಿಯುವ ನೀರಿಗೆ ಕೊಳವೆ ಬಾವಿ ಕೊರೆಸಿದರೆ ಉಚಿತವಾಗಿ ಜಾಗವನ್ನು ಬಿಟ್ಟು ಕೊಡುವುದಾಗಿ ತಿಳಿಸಿದರು. ಶಾಸಕರು ಅವರ ಮನವಿಗೆ ಸ್ಪಂದಿಸಿ ಕೂಡಲೇ ಹೊಸದಾಗಿ ಕೊಳವೆ ಬಾವಿ ಕೊರೆಯಲು ಅಥವಾ ಇರುವುದಕ್ಕೇ ಬೇರೆ ಮೋಟಾರ್ ವ್ಯವಸ್ಥೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ, ಅಧಿಕಾರಿಗಳು ಕೂಡಲೇ ಜನತೆಗೆ ಅಗತ್ಯ ಸವಲತ್ತು ಕಲ್ಪಿಸಿಕೊಡಬೇಕೆಂದು ಸೂಚಿಸಿದರು.

ಎಲ್ಲಾ ಕೆರೆ, ಕಟ್ಟೆ, ಹಳ್ಳಗಳಲ್ಲಿ ನೀರು ಬತ್ತಿಹೋಗಿದ್ದು ದನಗಳಿಗೆ ಕುಡಿಯುವ ನೀರಿನ ಸಮಸ್ಯೆಯಿರುವುದರಿಂದ ಗ್ರಾಮದಲ್ಲಿ ನೀರಿನ ತೊಟ್ಟಿ ನಿರ್ಮಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದಾಗ ಪಂಚಾಯಿತಿ ವತಿಯಿಂದ ನೀರಿನ ತೊಟ್ಟಿ ನಿರ್ಮಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.

ಎಸ್‌ಸಿಪಿ ಯೋಜನೆಯಡಿ ತೋಕಸಂದ್ರ ಗ್ರಾಮ ಪಂಚಾಯಿತಿಯ ಬಳಗೆರೆ ಕಾಲೋನಿ, ಟಿ.ಹೊಸಳ್ಳಿ ಗ್ರಾಮ ಪಂಚಾಯಿತಿಯ ಪಡುವಣಗೆರೆ ಕಾಲೋನಿಯಲ್ಲಿ ತಲಾ 10 ಲಕ್ಷದ ಸಿಮೆಂಟ್ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು. ರಾಮನಗರ ನಿರ್ಮಿತಿ ಕೇಂದ್ರವು ಕಾಮಗಾರಿ ನಡೆಸುತ್ತಿದೆ.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎನ್.ನಾಗರಾಜು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಾಮಕೃಷ್ಣ, ಮರಳವಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭೈರೇಗೌಡ, ತೋಕಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿಕ್ಕಮುನಿಯಪ್ಪ, ಉಪಾಧ್ಯಕ್ಷ ವೆಂಕಟೇಶ್ (ಗುಂಡಪ್ಪ), ಪಡುವಣಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದರಾಜು, ಮಾಜಿ ಅಧ್ಯಕ್ಷ ಹೊಂಬಾಳೇಗೌಡ, ಯಲಚವಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೆಂಕಟೇಶ್ ನಾಯ್ಕ, ಜೆಡಿಎಸ್ ತಾಲ್ಲೂಕು ಯುವಕ ಘಟಕದ ಅಧ್ಯಕ್ಷ ನಾಗೇಶ್, ಮುಖಂಡರುಗಳಾದ ಶಿವರಾಜು, ಶಂಕರ್, ಮರಿಯಪ್ಪ, ಕುಮಾರ್,ಅಭಿವೃದ್ಧಿ ಅಧಿಕಾರಿಗಳಾದ ಚನ್ನೇಗೌಡ, ಮುನಿರಾಮು, ಉಪ ತಹಸೀಲ್ದಾರ್ ಹನುನಂತಯ್ಯ, ಆರ್.ಐ. ಬಸವರಾಜು, ಕಾರ್ಯದರ್ಶಿ ಶಿವರುದ್ರಯ್ಯ ಇತರರು ಉಪಸ್ಥಿತರಿದ್ದರು. 

ತಮ್ಮ ಸಮಸ್ಯೆಗಳನ್ನು ಶಾಸಕರ ಮುಂದೆ ಹಂಚಿಕೊಂಡು ಕಿಂಚಿತ್ತಾದರೂ ಪರಿಹಾರದ ಭರವಸೆ ಪಡೆದ  ಸಮಾಧಾನ ಗ್ರಾಮಸ್ಥರಲ್ಲಿ ಎದ್ದು ಕಾಣುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT