ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥಾ ಪರಂಪರೆ ಕಣ್ಮರೆ: ಕಂಬಾರ ವಿಷಾದ

ಬಿಜಿಎಸ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ
Last Updated 13 ಡಿಸೆಂಬರ್ 2012, 10:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: `ಇಡೀ ವಿಶ್ವದಲ್ಲಿ ಕಾಣಸಿಗದ ಅಪರೂಪದ ಕಥಾಪರಂಪರೆ ಕನ್ನಡನಾಡಿನಲ್ಲಿದ್ದು, ಆಧುನಿಕ ಕಾಲದ ದಟ್ಟ ಪ್ರಭಾವದಿಂದ ಪರಂಪರೆಗೆ ನಿಧಾನವಾಗಿ ಧಕ್ಕೆಯಾಗುತ್ತಿದೆ.

ಅತ್ಯಾಧುನಿಕತೆಯು ನಿಧಾನವಾಗಿ ಆವರಿಸಿಕೊಳ್ಳುತ್ತಿರುವುದರಿಂದ ಪರಂಪರೆ ಕಣ್ಮರೆಯಾಗುತ್ತಿದೆ' ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ. ಚಂದ್ರಶೇಖರ ಕಂಬಾರ ವಿಷಾದಿಸಿದರು.
ತಾಲ್ಲೂಕಿನ ಅಗಲಗುರ್ಕಿ ಗ್ರಾಮದ ಬಿಜಿಎಸ್ ಪ್ರೌಢಶಾಲೆ ಆವರಣದಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, `ನಮ್ಮ ನಾಡಿನಲ್ಲಿ ಬಗೆಬಗೆಯ ಕಥಾ ಪರಂಪರೆಗಳಿವೆ.

ಜಾನಪದ ಕಥಾಶೈಲಿ, ರಾಜರಾಣಿಯರ ಕಥೆ, ಕಾಡುಪ್ರಾಣಿಗಳ ಕಥೆಗಳು ಹೀಗೆ ಬಹುರೀತಿಯ ಕಥಾಪರಂಪರೆಗಳು ನಮ್ಮ ನಾಡಿನಲ್ಲಿದ್ದು, ನಾವು ಅವುಗಳ ಮಹತ್ವ ಅರಿತುಕೊಳ್ಳುವ ಪ್ರಯತ್ನ ಮಾಡಬೇಕಿದೆ. ಕಥೆಗಳು ನಮ್ಮ ಜೀವನದಲ್ಲಿ ಯಾವ್ಯಾವ ರೀತಿಯಲ್ಲಿ ಪ್ರಭಾವ ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕಿದೆ' ಎಂದರು.

`ಇತ್ತೀಚಿನ ಕೆಲ ವರ್ಷಗಳಿಂದ ಲಿಪಿಗಳ ಮೂಲಕ ಕಥೆ ಹೇಳುವ ಸಂಸ್ಕೃತಿ ಎಲ್ಲೆಡೆ ವ್ಯಾಪಿ ಸಿದೆ. ಹಿಂದಿನ ಶತಮಾನದಲ್ಲಿ ಹಳ್ಳಿಗಾಡಿನಲ್ಲೆಲ್ಲ ಗ್ರಾಮಸ್ಥರು ಗೀತೆ, ಅಭಿನಯ, ಜಾನಪದ ಕಲೆ ಮುಂತಾದವುಗಳ ಮೂಲಕ ಕಥೆಗಳನ್ನು ಹೇಳುತ್ತಿದ್ದರು. ಬಹುತೇಕ ಕಥೆಗಳು ಮೌಖಿಕ ರೂಪದಲ್ಲಿ ಇರುತ್ತಿದ್ದ ಕಾರಣ ಅವು ಲಿಪಿಗಳಲ್ಲಿ ದಾಖಲಾಗಲಿಲ್ಲ. ಜೀವನ, ನೀತಿ, ಬೋಧನೆ, ಪರಿಸರ ಮುಂತಾದವುಗಳ ಕುರಿತು ನಮ್ಮ ಪೂರ್ವಜರು ಹಲವಾರು ಕಥೆಗಳನ್ನು ರಚಿಸಿದ್ದಾರೆ.

ಮನಕ್ಕೆ ಮುಟ್ಟುವ ಹಾಗೆ ಅವುಗಳ ಸಂದೇಶವನ್ನು ಸಾರಿದ್ದಾರೆ' ಎಂದು ಅವರು ವಿವರಿಸಿದರು.
`ತಾಯಿಯು ತಮ್ಮ ಮಕ್ಕಳಿಗೆ, ಅಜ್ಜಿಯು ತಮ್ಮ ಮೊಮ್ಮಕ್ಕಳಿಗೆ ಕಥೆ ಹೇಳುವುದು ಕೂಡ ಮಹತ್ವ ಪಡೆದುಕೊಂಡಿತ್ತು. ಅಜ್ಜ- ಅಜ್ಜಿ ಕಥೆ ಹೇಳುತ್ತಾರೆಂದರೆ, ಮೊಮ್ಮಕ್ಕಳು ಹಿಗ್ಗಿನಿಂದ ಅವರ ಪಕ್ಕ ಕೂತು ಕಥೆಗಳನ್ನು ಆಲಿಸುತ್ತಿದ್ದರು.

ಕಥೆಗಳ ಸಾರವನ್ನು ತಿಳಿದುಕೊಳ್ಳುವವರೆಗೆ ಮಕ್ಕಳು ಸುಮ್ಮನಿರುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲವೂ ಬದಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಭಾರಿ ಪ್ರಗತಿ ಸಾಧಿಸಿದ್ದು, ಜನಜೀವನವು ಅದಕ್ಕೆ ಒಗ್ಗಿಕೊಂಡಿದೆ. ಜನರು ತಂತ್ರಜ್ಞಾನದ ಪ್ರಭಾವಕ್ಕೆ ಮರುಳಾಗಿ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದಾರೆ' ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಆದಿಚುಂಚನಗಿರಿ ಮಠದ ಸಿದ್ದೇಶ್ವರನಾಥ ಸ್ವಾಮೀಜಿ ಮಾತನಾಡಿ, `ಎಲ್ಲರೂ ತಮ್ಮ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಮತ್ತು ವಿಶ್ವಾಸವಿಡಬೇಕು. ಶ್ರದ್ಧೆ ಮತ್ತು ಭಕ್ತಿಯಿದ್ದಲ್ಲಿ, ಯಾವ ಕೆಲಸವೂ ಕಷ್ಟ ಎನಿಸುವುದಿಲ್ಲ. ಛಲ ಮತ್ತು ಆತ್ಮವಿಶ್ವಾಸವ್ದ್ದಿದಲ್ಲಿ ಯಾವುದೇ ಸವಾಲನ್ನು ಸುಲಭವಾಗಿ ಎದುರಿಸಬಹುದು' ಎಂದರು.

ಇದಕ್ಕೂ ಮುನ್ನ ಜಾನಪದ ಕಲಾಶೈಲಿಯ ಮೆರವಣಿಗೆ ಮೂಲಕ ಪ್ರೊ.ಚಂದ್ರಶೇಖರ ಕಂಬಾರ ಅವರನ್ನು ಶಾಲೆಗೆ ಕರೆತರಲಾಯಿತು. ಹಳ್ಳಿಗಾಡಿನ ವೇಷಭೂಷಣ ತೊಟ್ಟಿದ್ದ ಮಕ್ಕಳು ಕಂಬಾರ ಅವರನ್ನು ಸ್ವಾಗತಿಸಿದರು. ಕನ್ನಡಮಾತೆ, ಅಕ್ಕಮಹಾದೇವಿ, ಬಸವಣ್ಣ, ಪಂಡಿತ್ ಜವಹರಲಾಲ್ ನೆಹರೂ ಮುಂತಾದವರ ವೇಷ ತೊಟ್ಟ ಮಕ್ಕಳು ಗಮನಸೆಳೆದರು. ಪ್ರಾಧ್ಯಾಪಕ ರಾದ ಪ್ರೊ. ಎನ್.ಎಸ್.ಶಿವರಾಮರೆಡ್ಡಿ, ಎಚ್. ಬಿ.ರಮೇಶ್, ಮಂಚನಬಲೆ ಜಯರಾಂ, ಗಿರಿಬಾಬು, ವೆಂಕಟೇಶಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT