ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ಏಳಿರಿ ಎಚ್ಚರಗೊಳ್ಳಿರಿ!

Last Updated 24 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಗ್ರಾಮೀಣ ಭಾಗದಿಂದ ಹೆಚ್ಚು ಸುದ್ದಿಯನ್ನು ಮಾಡುವವ ಎಂದು ಜಿಲ್ಲೆಯಲ್ಲಿಯೇ ಗುರುತಿಸಿಕೊಂಡಿದ್ದ ಮತ್ತು ಗ್ರಾಮೀಣ ಪತ್ರಕರ್ತರ ಸಂಘವನ್ನು ಹುಟ್ಟು ಹಾಕಿ, ಅದರ ಕಾರ‌್ಯದರ್ಶಿಯೂ ಆಗಿದ್ದ ಸಿದ್ಲಿಂಗೇಶ ಅಂದಿನ ದಿನ ಪತ್ರಿಕೆಗಳನ್ನು ಹರವಿಕೊಂಡು ಜಿಲ್ಲಾದ ಸುದ್ದಿಗಳನ್ನು ನೋಡುತ್ತಿದ್ದನು.

ಯಾವ ಯಾವ ಸಮಸ್ಯೆಗಳನ್ನೆತ್ತಿಕೊಂಡು ಸುದ್ದಿ ಮಾಡಲಾಗಿದೆ, ತಾನು ತಮ್ಮೂರಿನಿಂದ ಅಂಥ ಸುದ್ದಿಗಳನ್ನು ಯಾವ ಆಂಗಲ್‌ನಿಂದ ಮಾಡಬಹುದು ಎಂದು ಯೋಚಿಸುತ್ತಿದ್ದವನಿಗೆ ಕಾಣಿಸಿದ್ದು ಎಲ್ಲಾ ಪತ್ರಿಕೆಗಳು `ಅಣ್ಣಾ~ಮಯವಾಗಿವೆ ಎಂದು.

ಅಣ್ಣಾ ಹಜಾರೆ ಕೈಗೊಂಡ ಸತ್ಯಾಗ್ರವನ್ನು ಬೆಂಬಲಿಸಿ ಅನೇಕ ತರಹದ ಮೆರವಣಿಗೆಗಳು, ಉರುಳುಸೇವೆ, ದೀಡ ನಮಸ್ಕಾರ, ಬೈಕ್‌ರ‌್ಯಾಲಿ, ಪತ್ರಚಳುವಳಿ, ರಕ್ತದಲ್ಲಿ ಸಹಿ ಸಂಗ್ರಹ ಇನ್ನೂ ಅನೇಕ ಬಗೆಯ ಬೆಂಬಲ ಪ್ರದರ್ಶನಗಳನ್ನು ಕಳೆದ ಎರಡು-ಮೂರು ದಿನಗಳಿಂದ ಪತ್ರಿಕೆಯಲ್ಲಿ ಕಾಣುತ್ತಲೆ ಇದ್ದನು.

ಅವು ಯಾವವು ತಮ್ಮೂರ ಸುದ್ದಿಗೆ ಹೊಂದಾಣಿಕೆ ಆಗುವಂಥವು ಅಲ್ಲವೆಂದು ಪತ್ರಿಕೆಗಳನ್ನು ಮಡಚಿ ಬಿಸಾಕಿ, ಟಿವಿ ಹಾಕಿದನು. ಅಲ್ಲಿಯೂ ಅದೇ ಸುದ್ದಿ. ದೆಹಲಿಯ ರಾಮಲೀಲಾ ಮೈದಾನ; ಹಜಾರೆಯವರ ಉಪವಾಸ ಹನ್ನೊಂದನೇ ದಿನಕ್ಕೆ ಎಂಬುದನ್ನು ತೋರಿಸುತ್ತಿತ್ತು.

ತೊತೊತೊ ಎನ್ನುತ್ತಾ ಟಿವಿ ಆರಿಸಿ ಒಂದು ಕ್ಷಣ ಕುಳಿತಲ್ಲಿಯೆ ಕಣ್ಣು ಮುಚ್ಚುತ್ತಿದ್ದಂತೆಯೆ `ಆವಾಜ್ ದೋ - ಹಮ್ ಏಕ್ ಹೈ~ ಎಂಬ ದೊಡ್ಡ ಕೂಗು ಕೇಳಿ ಬರತೊಡಗಿತು.

ಸಿದ್ಲಿಂಗೇಶನಿಗೆ ವಿಸ್ಮಯ !! ಈ ಕೂಗು ಎಲ್ಲಿಂದ ಬಂತು ?! ತಾನೆಲ್ಲಿದ್ದೇನೆ ಎಂದು ಅರೆಕ್ಷಣ ದಿಗಿಲಾಯಿತು. `ಏನೇ ಬರಲಿ - ಒಗ್ಗಟ್ಟಿರಲಿ~ ಮತ್ತೆ ಕೇಳಿಸಿದ ಕೂಗು ತನ್ನ ಮನೆಯ ಹಿಂದಿನಿಂದ ಬರುತ್ತಿದೆ ಎಂದರಿತು ಕಿಟಕಿಯಲ್ಲಿ ಹಣಕಿ ಹಾಕಿದನು.

 ಹದಿನೈದು ಇಪ್ಪತ್ತು ಜನ ಹೆಂಗಸರು ಕೂಗುತ್ತಾ ಬರುತಿದ್ದರು. `ನಮ್ಮ ಹಕ್ಕು - ನಮಗ ಕೊಡ್ರಿ, ಶೌಚಾಲಯ - ಸ್ವಚ್ಛಾ ಮಾಡಿ~ ಗುಂಪಿನಲ್ಲಿದ್ದ ಎಲ್ಲರ ಕೈಯಲ್ಲೂ ಚೆರಿಗೆಗಳಿದ್ದವು. ಅಂಗನವಾಡಿ ಶಿಕ್ಷಕಿ ಶಾಂತಾಬಾಯಿ ಒಂದೊಂದೆ ಘೋಷಣೆ ಹೇಳುತ್ತಿದ್ದರೆ ಹಿಂದಿನವರು ಅದರಂತೆ ಕೂಗುತ್ತಿದ್ದರು.

ಮೂಲಿಮನಿ ಚನ್ನವ್ವ ಹಾದಿಯಲ್ಲಿ ಬರುವ ಒಂದೊಂದೆ ಮನೆಯ ತೊಲಬಾಗಿಲಲ್ಲಿ ನಿಂತು ಆ ಮನೆಯ ಹೆಣ್ಮಕ್ಕಳನ್ನು ಕೂಗಿ ಕರೆಯುತ್ತಿದ್ದಳು. ಒಳಗಿದ್ದವರು ಅಲ್ಲಿಂದಲೇ ಉತ್ತರ ಕೊಟ್ಟು ತಪ್ಪಿಸಿಕೊಳ್ಳಲು ನೋಡಿದರೆ `ಅಯ್ಯ... ಇರ‌್ಲಿ ಬಾರವಾ, ರೊಟ್ಟಿ ಪಲ್ಲೆ ದಿನಾ ಇದ್ದದ್ದ. ಇದು ಗೊತ್ತೈತಿ ಇಲ್ಲ? ಎಂಥಾದು ಅಂತ. ಹೊತ್ತು ಹೊಂಡಾನ ಫಜೀತಿ. ಹೊತ್ತು ಮುನುಗಾನ ಫಜೀತಿ~ ಎಂದು ಜಬರದಸ್ತ ಮಾಡುತ್ತಿದ್ದಂತೆಯೇ ಅವಳ ಒತ್ತಾಯಕ್ಕೊ ಅಥವಾ ಆ ಫಜೀತಿಯ ಪರಿಸ್ಥಿತಿಯನ್ನು ನೆನಪಿಸಿಕೊಂಡೊ ಬಂದು ಗುಂಪು ಸೇರಿಕೊಳ್ಳುತ್ತಿದ್ದರು.

ನನಗೆ ಯಾವ ಸುಳಿವೂ ಇಲ್ಲದೆ ನಮ್ಮ ಊರಾಗ ಅದು ನನ್ನ ಓಣಿಯಾಗ ಇಂಥ ಚಳುವಳಿಯೇ !? ಭಳಾರೆ ವಿಚಿತ್ರಂ !! ಅಂದ ಸಿದ್ಲಿಂಗೇಶ.

ಗುಂಪು ರಸ್ತಾ ಹಿಡಿದು ಹಾಗೇ ಸಾಗಿತ್ತು. ಮಧ್ಯ ವಯಸ್ಸಿನ ಹೆಂಗಸರು ಯಾವುದೇ ಸಂಕೋಚವಿಲ್ಲದೆ ಕೈಯಲ್ಲಿ ತಂಬಿಗಿ ಹಿಡಿದುಕೊಂಡು ಒಬ್ಬರಿಗೊಬ್ಬರು ಮಾತಾಡಿಕೋಂತ ನಡೆಯುತ್ತಿದ್ದರು.
 
`ಆ ಮೆಂಬರಗೊಳ ಬಾಯಾಗ ನನ ಹಾಟ ಹನಿಸಲಿ. ಒಂದೂ ಕಿವಿಯಾಗ ಹಾಕ್ಕೊಳ್ಳಲಿಲ್ಲ ನಿನ,,,,,,!? ಎಲ್ಲಾರಿಗೂ ಹೇಳಿ ನೋಡಿದ್ಯಾ, ಅದಕ್ಕ ನಾವೂ ಇವತ್ತ ಮಿಕ್ಕಿ ತಂಬಗಿ ತುಗೊಂಡು ಪಂಚಾತಿಗೆ ಹೋಗಿಬಿಡೂಣ ನಡ್ರಿ ಅಂತ ಎಲ್ಲಾರ‌್ನೂ ಹೊಂಡಿಸಿ ಬಿಟ್ಟಿನಿ ನೋಡವಾ~ ಅಂದು ಅದೇ ಬಂದು ಗುಂಪು ಸೇರುತ್ತಿದ್ದ ಹೆಣ್ಮಕ್ಕಳಿಗೆ ಚನ್ನಮ್ಮ ವಿವರಿಸುತ್ತಿದ್ದಳು. `ಅವರು ಬೆಸ್ಯಾತು ಬಿಡು, ಬರೊಬ್ಬರಿ ಆಗುತ್ತ~ ಎಂದು ಸಮ್ಮತಿ ಸೂಚಿಸುತ್ತಿದ್ದರು.

 ಆದರೆ ತುಸು ಹರೆಯದ ಹೆಂಗಸರು, ಚೂಡಿದಾರ ತೊಡುವ ಹುಡಿಗಿಯರು ಚರಿಗೆ ಹಿಡಿದುಕೊಂಡು ಬರಲು ಅಸಹ್ಯ ಪಟ್ಟುಕೊಂಡು ಗುಂಪಿನ ನಡುವೆ ತೂರಿಕೊಂಡು ಸುಮ್ಮನೆ ಹೆಜ್ಜೆ ಹಾಕಲು ನೋಡುತ್ತಿದ್ದರು. ಅಂಥವರ ಬರಿಗೈ ಕಂಡೊಡನೆ ಚನ್ನವ್ವ `ತಂಗಿ, ತಂಬಗಿ ಬೇಕವಾ ತಂಬಗಿ. ತಂಬಗಿ ಇಲ್ಲದ ಮಂದಿ ಮ್ಯಾಲ ನಾವು ನಂಬಗಿ ಹೆಂಗ್ ಇಡ ಬೇಕು ಹೇಳು~ ಅಂದು ನಗುತ್ತಲೆ ಕೇಳುತ್ತಿದ್ದಳು. ಅವರು ನಾಚಿಕೆಯಿಂದ ಮುಖ ಮುಚ್ಚಿಕೊಂಡು ಮುಸಿ ಮುಸಿ ನಗುತ್ತಾ ಮನೆಕಡೆ ಓಡಿ ಬಿಡುತ್ತಿದ್ದರು ತಂಬಿಗೆ ತರಲು.

ಗುಂಪಿನಲ್ಲಿ ಈಗ ಐವತ್ತಕ್ಕೂ ಹೆಚ್ಚು ಜನ ಸೇರಿತ್ತು. ಕೈಯಲ್ಲಿ ಚರಿಗೆ ಹಿಡಿದುಕೊಂಡು ಘೋಷಣೆ ಕೂಗುತ್ತಾ ಹೊಂಟಿದ್ದ ಈ ಮಹಿಳಾಮಣಿಗಳನ್ನು ಕಂಡು ಹಾದಿಬದಿಯಲ್ಲಿ ಆಡುತ್ತಿದ್ದ ಹುಡುಗರು ಹ್ಹಿ ಹ್ಹಿ ಹಿ ಎಂದು ಇವರತ್ತ ನಗೆ ಬೀರುತ್ತಿದ್ದರು.

ಬಾಗಿಲ ತುದಿಯಲ್ಲಿ ಯಾರಾದರೂ ಹೆಂಗಸರು ಸುಮ್ಮನೆ ನೋಡುತ್ತ ನಿಂತಿದ್ದರೆ ಅಂಥವರ ರಟ್ಟೆ ಹಿಡಿದು ಚನ್ನವ್ವ ಎಳೆದುಕೊಂಡೆ ಬಂದು ಬಿಡುತ್ತಿದ್ದಳು. ಮದುವೆ ನಿಬ್ಬಣಕ್ಕೆ ಕರೆದಂತೆ ಹೆಂಗಸರೆಲ್ಲರನ್ನು ಕೂಗಿ ಕೂಗಿ ಕರೆಯುತ್ತಿದ್ದ ಚನ್ನವ್ವಳನ್ನು ಕಂಡು ಗರಡಿಮನೆಯ ಕಟ್ಟೆಯ ಮೇಲೆ ಹುಲಿ-ಮನೆ ಆಟ ಆಡುತ್ತಿದ್ದ ಹಳೇಮನಿ ಹನಮಂತ `ಯತ್ತೀ ನಾವು ಬರೂಣನಬೇ~ ಅಂದು ಕೆಣಕಿದ.

ಅಷ್ಟೇ ಸಾಕಾಗಿತ್ರು ಆ ಜೋರುಬಾಯಿಯ ಹೆಣ್ಮಗಳಿಗೆ.  `ಶೂರಾ... ಬಾಯಿ ಮುಚಗೊಂಡು ಸುಮ್ಮನ ಆಡು~ ಅನ್ನುತ್ತಲೆ ಅವನ ಜತೆಗಿದ್ದವರೆಲ್ಲ ಕೊಕಾಸಿ ನಗತೊಡಗಿದರು. ಚೆನ್ನವ್ವ ಅಷ್ಟಕ್ಕೆ ಬಿಡದೆ `ಮೂಳಾ... ನೀ ಯೇನು ಮುಂಜಾನೆದ್ದು ಯಾವುದರ ಕಂಟಿ ಮರೆಗೆ ಹೋಗಿ ಲಂಗಟಾ ಕಳದು ಹಿಂಬಂಡಿ ಮಾಡಿ ಬರತಿ ನಿಮಗ ಗಂಡ್ಸರಿಗೆ ಆದಂಗ ಹೆಣ್ಮಕ್ಕಳಿಗೆ ಆಗುತ್ತನು ಹೇಳು~ ಎಂದು ಎದಿ ಮ್ಯಾಲಿನ ಅಂಗಿ ಹಿಡಿದು ಕೇಳಿದಂತೆ ಕೇಳಿದಳು.

ಹಣಮಂತ ಯಾಕಾದರೂ ಈಕೆಯನ್ನು ತಡುವಿದ್ನೆಪಾ ಎಂದುಕೊಳ್ಳುತ್ತಾ, `ಇಲ್ಲಾ; ಖರೆ ಐತಿ ಯೆತ್ರಿ ನಿಂದು. ನಾ ಸುಮ್ಮನ ಹುಡುಗಾಟಕ್ಕ ಅಂದ್ನಿ~ ಅಂದ. `ನಿಮ್ಮಂತ ಮೂಳಗಳಿಗೆ ಎಲ್ಲಾ ಹುಡುಗಾಟನು.. ಮುಂಜಾನೆದ್ದು ತಿಪ್ಪಿ ದಂಡಿಮ್ಯಾಲ ಹೇಲಾಕ ಕುಂದ್ರುದು. ಹೆಂಗ್ಸೂರು ಹೆಂಡಿಕಸ ಚೆಲ್ಲಾಕ ಬಂದ್ರೂ  ತೆಲಿ ತೆಗ್ಗಿಸಿಕೊಂಡು ಹಂಗ ಕುಂತಿರ್ತಿರಿ; ನೋಡೀ ನೋಡಲಾರಧಂಗ. ಪಾಪ ಅವು ಹೆಡಗಿ ಹೊತಗೊಂಡು ಆ ಕಡೆಮಾರಿ ತಿರುಗಿಸಿಕೊಂಡು ನಿಂದ್ರಬೇಕು ನೀವು ಎದ್ದು ಬರೂತನಕ. ಇದು ವ್ಹಾರೆ ನಿಮ್ದು~  ಎಂದು ಹಂಗಿಸುತ್ತಿದ್ದರೂ ಅವರು ನಗುತ್ತಿದ್ದರು. `ನಿಮ್ಮ ಹೆಣ ಎತುವಲಿ~ ಬೈಯುತ್ತ ಆಕೆ ಮುನ್ನಡೆದಳು.      
      
`ಇಲ್ಲ ಭಾಳ ತೊದ್ರಿ ಐತೆಳಪಾ ಅವರ‌್ದು. ನೋಡೂ ಆಕಾರಿಲ್ಲ ಆ ದಿಡ್ಡೀನ. ಹೀಕ ಜಾಲಿ ಕಂಡೆ ಅತೋನಾತ ಬೆಳದು ಬಿಟ್ರೈತಿ ಅಡ್ಡಾಡಕ ಜಾಗ ಇಲ್ಲಲ್ಲಿ. ಇನ್ನ ಹೆಣ್ಣಕ್ಕಳು ಪಾಪ! ಹೆಂಗ ಸಂಡಾಸ ಕೂಡ್ರಾರೋ...  ದೇವರೆ ಬಲ್ಲ ಅವರ ಕಥಿ~
`ಮಳಿ ಆದ್ರಂತೂ ಹೊಲಸು ಹೊಲಗೇರಿ ಎಲ್ಲಾ ಏಕ್, ಯಾಕಾದ್ರೂ ಸಂಡಸ ಬರ್ತೈತೆಪಾ ಅಂತಿರತಾವು ಹೆಣ್ಣಕ್ಕಳು~.

`ಹೌದೌದು. ಅದರಾಗ ಅರ್ಧಾಊರ ಮಂದೀನ ಇದ ದಿಡ್ಡೀಗೆ ಬರ್ತಾರಪ್ಪ. ಆ ಕಮ್ಮೋರ ಓಣ್ಯಾಂದು ಪೂರ್ತಿ ಬಿದ್ದು ಹೋಗೇತಿ; ಅದನ್ನ ಕಟ್ಟಸುವರು ಯಾರು ದಿಕ್ಕ ಸೈತ ಇಲ್ಲ~.

ಹೆಣ್ಮಕ್ಕಳ ಹೊರಕಡೆ ದಿಡ್ಡಿಯ ಸುತ್ತ ಹುಟ್ಟಕೊಂಡ ಅವರ ಮಾತುಗಳು ತಾವುಡುತ್ತಿದ್ದ ಹುಲಿ - ಮನಿ ಆಟವನ್ನೆ ಮರೆಸಿ, ಸಾರ್ವತ್ರಿಕ ಶೌಚಾಲಯಗಳ ದುರಸ್ತಿ ಮಾಡಬೇಕಾದ ಸ್ಥಳೀಯ ಆಡಳಿತ ಮತ್ತು ಅಲ್ಲಿರುವ ಹುಲಿ ತೀಳಗಳ ಕಡೆ ಸುತ್ತುಕೊಂಡಿತು. `ಎರ‌್ಡ ಸಾವಿರ ಕೊಟ್ಟವರಿಗೆ ಹಸರು ಕಾರ್ಡ್ ಮಾಡಿಕೊಡ್ತಾರ.
 
ಐದು ಸಾವಿರ ಕೊಟ್ಟರ ಆಶ್ರಯ ಮನಿ, ಹತ್ತು ಸಾವಿರ ಕೊಟ್ರ ಇಂದಿರಾ ಆವಾಸ ಮನಿ ಹಾಕಿ ಕೊಡ್ತಾರ. ರೊಕ್ಕ ಕೊಟ್ಟರ ದುನಿಯಾನ ಉಲ್ಟಾ - ಸೀದಾ ಮಾಡ್ತಾರಪೊ. ಆ ಸೆಕ್ರೆಟರಿಯನ್ನ ನೋಡ್ರಿ. ತಿಂದು ತಿಂದು ಹಂಗ ತೇಲಿ ಬಂದ ಹೆಣ ಆಗ್ಯಾನ. ಬಾಗಲಕೋಟ ಕ್ರಾಸ್‌ನ್ಯಾಗ ಒಂದ್ ನಾಕ ಅಂತಸ್ತಿನ ಮನಿ, ಮುಧೋಳ ಕ್ರಾಸ್‌ದಾಗ ಒಂದು ಪೆಟ್ರೀಲ್ ಪಂಪು !!~ ಮಾತು ಹಾಗೆ ನಡೆದಿತ್ತು.

ಗುಂಪಿನ ಸಂಖ್ಯೆ ಹಾಗೆ ಹೆಚ್ಚುತ್ತ, ಅದು ಮುಂದೆ ಸಾಗುತ್ತ ಅದು ಈಗ ಗೌಡ್ರ ಓಣಿ ದಾಟಿತ್ತು. ಪರ ಓಣಿಯ ಮಂದಿಗೆ ಏನಿದು ಮೆರವಣಿಗೆ ಎಲ್ಲೆ ಹೊಂಟಾರ ಎಂದು ತಿಳಿಯದೆ ಎಲ್ಲರೂ ಇವರತ್ತ ಪಿಕಿಪಿಕಿ ನೋಡುತ್ತಿದ್ದರು. ಪಂಚಾಯತಿ ಕಡೆಗೇನೆ ಇವರೆಲ್ಲ ಸಂಡಾಸ ಕಂತ ಹೊಂಟಾರ ಎಂದು ಕೇಳಿ ಆ ಓಣಿಯ ಹಿರೇ ಮನುಷ್ಯಾಳು ಮತ್ತು ಸದರಿ ವಾರ್ಡಿನ ಪಂಚಾಯತಿ ಮೆಂಬರ‌್ರು ಆಗಿದ್ದ ಬಾಲವ್ವ ತುಸು ಗಾಬರಿಯಿಂದ ಅವಸರ ಮಾಡಿ ಇವರತ್ತ ಬಂದು ಚನ್ನವ್ವನನ್ನು ಕುರಿತು `ತಂಗೀ, ಯಾಕವ್ವಾ ಒಮ್ಮಿಲೆ ಇಂಥ ಹುನಾಕ್ಕ ಯಾಕ ಹೊಕ್ಕಿರಿ.

ನಾ ಎಲ್ಲ ಕೆಲಸ ಮಾಡಿಸಿಕೊಡ್ತಿನಿ. ಇದನ್ನ ಇಲ್ಲಿಗೆ ಮುಗಿಸಿಬಿಡ್ರಿ~ ಎಂದು ಸಮಾಧಾನ ಮಾಡಲು ನೋಡಿದಳು. ಆ ಪಾಯಖಾನೆಯ ದುರವಸ್ಥೆಯಿಂದ ಬೇಸತ್ತು ಹೋಗಿದ್ದ ಅವರ‌್ಯಾರು ಸಮಾಧಾನವಾಗುವ ಸ್ಥಿತಿಯಲ್ಲಿರಲಿಲ್ಲ. `ಯವ್ವಾ ಎಲ್ಲಾ ಮೆಂಬರಗುಳಿಗೆ ಹೇಳಿ ಹೇಳಿ ನಮ್ಮ ಬಾಯಿಮೊಂಡ ಆದುವು ಹೊರತು ಕೆಲಸ ಆಗಲಿಲ್ಲ. ನಮ್ಮ ತ್ರಾಸ್ ನಮಗ ಗೊತ್ತು~.

`ಆಗ ಬಿದ್ದ ಗ್ವಾಡಿ ಕಟ್ಟಿಸಿ ಕೊಡಲಿಲ್ಲ ಈಗ ಕಂಡಂಗ ಕಂಟಿ ಬೆಳೆದು ಹೊರಕಡೆ ದಿಡ್ಡಿ ಹೋಗಿ ಮುಳ್ಳಿನ ಕೊಂಪಿ ಆಗೇತಿ. ಹಿಂಗಾದ್ರ ನಾವು ಬೈಲ ಕಡೆಗೆ ಎಲ್ಲಿ ಹೋಗಬೇಕು. ನೀನ ಹೇಳು~ ಎಂದು ಗುಂಪಿನಲ್ಲಿಯ ಐದಾರು ಜನ ಬಾಲವ್ವನೊಡನೆ ವಾದಕ್ಕಿಳಿಯತೊಡಗಿದರು. ಚನ್ನವ್ವ ತುಸು ಸಮಾಧಾನದಿಂದ ಪರಿಸ್ಥಿತಿ ವಿವರಿಸತೊಡಗಿದರು.

ಆಕೆ ನಾಲ್ಕು ತಿಂಗಳಿಂದ ಕಂಡ ಕಂಡ ಮೆಂಬರುಗಳಿಗೆಲ್ಲ ಕೈ ಮುಗದು ಹೇಳಿದ್ದರೂ, ಎಲ್ಲಾರೂ `ಹೂಂ~ ಅಂದರೆ ಹೊರತು ಒಬ್ಬ ಪುಣ್ಯಾತ್ಮನು ಕೆಲಸ ಕೈಗೆ ತುಗೊಳಲಿಲ್ಲ. ವಯಸ್ಸಾದವರು, ಕಣ್ಣು ಕಾಣದವರು ಎಲ್ಲಾ ದಿನ ಬೆಳಗಾದರ ಬರಬೇಕು, ಹೋಗಬೇಕು.

ಮೊನ್ನೆ ನೆರಕಿ ನಿಂಬೆವ್ವ ಮುದ್ಕಿ ದಿಡ್ಡ್ಯಾಗ ಹೊಳ್ಳಿಕೊಂಡು ಬಿದ್ದು ಈಗ ಹಾಸಿಗೆ ಹಿಡಿದೈತಿ. ಹಿಂಗ ಬಿಟ್ನರ ಮುಂದ ಗತಿ ಹೆಂಗ್ ಯಕ್ಕಾ...? ಎಂದು ಪ್ರಶ್ನಿಸಿದಾಗ ಬಾಲವ್ವ ಅಸಹಾಯಕತೆಯಿಂದ `ಏನ್ ಮಾಡ್ಲಿ ತಂಗೀ ನಾನು ಇದರ ಬಗ್ಗೆ ರಗಡ ಹೇಳಿಸಿ. ಹೂಂ ಅಂತಾವು, ಕೈ ಬಿಡತಾವು. ನಾ ಒಬ್ಬೇಕಿ, ಅವು ನಾಕ ಕಡಿಮೆ ನಲವತ್ತು ಅದಾವು. ನನ್ನ ಮಾತು ಎಲ್ಲಿ ಕೇಳ್ತಾರ ಹೇಳು~ ಅಂದಬ್ಬ.

`ಅದಕ್ಕ ಯಕ್ಕ ನಮಗ ಇವತ್ತ ಮಿಕ್ಕಿ ತಲಿಕೆಟ್ಟು ಹೋಗೇತಿ. ಎರಡರಾಗ ಒಂದ್ ಆಗೇ ಬಿಡ್ಲಿ. ಪಾಯಖಾನಿ ಸ್ವಚ್ಛ ಮಾಡಿಸಿದ್ದಾದರೂ ಒಂದ್ ಆಗಲಿ, ಇಲ್ಲ ನಾವು ಪಂಚ್ಯಾತಿ ಮುಂದ ಸಂಡಾಸ ಕುಂತಿದ್ದರೆ ಒಂದ್ ಆಗಲಿ~ ಎಂದು ನಡೆದು ಬಿಟ್ಟರು. `ನಮ್ಮ ಹಕ್ಕು ನಮಗ ಕೊಡ್ರಿ, ಶೌಚಾಲಯಾ ಸ್ವಚ್ಛಾ ಮಾಡ್ರಿ~ ಕೂಗುತ್ತ.   

ಈ ಹೆಣ್ಮಕ್ಕಳಿಗೆ ಈ ಪರಿ ಸಿಟ್ಟು ಒಟ್ಟುಗೂಡಿ ರಸ್ತಾಕ ತಂಬಗಿ ತುಗೊಂಡು ನಿಲ್ಲುವಂತೆ ಮಾಡಿದ್ದು ಅವರ ಸಾಮೂಹಿಕ ಪಾಯಖಾನಿ ಸೀಗರಿ ಆಗಿ, ಹಂದಿಗೂಡಾಗಿ, ಗಬ್ಬೆದ್ದು ಹೋಗಿದಷ್ಟೆ ಕಾರಣವಾಗಿರಲಿಲ್ಲ.

ಈ ವರ್ಷದ ಮೊದಲ ಮಳೆ ಒಮ್ಮೆ ಹಚ್ಚಿ ಸುರುವಿದಾಗ ಇದೆ ಪಾಯಖಾನೆಯ ಗೋಡೆ ಒಂದಿಷ್ಟು ಬಿದ್ದುದು ಮರ್ಯಾದೆಯ ಕವಾಟಕ್ಕೆ  ಕನ್ನಾಹಾಕಿಧಂಗ ಆಗೇತಿ, ಚೇರ‌್ಮನ್ನಗ ಹೇಳಿ ಅದನ್ನೊಂದಿಟು ರಿಪೇರಿ ಮಾಡಿಸಿರೆಪ್ಪ ಅಂತ ಡಂಗುರ ಸಾರುವ ಶಿವಬಸಯ್ಯನ ಮುಂದೆ ಈ ಹೆಂಗಸರು ಹೇಳಿದ್ದರು. ಅದೇ ಶಿವಬಸಯ್ಯ ಮತ್ರೊಮ್ಮೆ ಡಂಗುರ ಸಾರಲು ಬಂದಾಗ ಚೇರ‌್ಮನ್ ಹೇಳಿದ್ದು ಹೆಣ್ಮಕ್ಕಳಿಗೆ ಹೇಳಿದನುವ.
 
`ರಸ್ತಾದಾಗ ಹೋಗೊ ಮಂದಿಗೆ ಬ್ಯಾರೆ ಕೆಲಸ ಇರಂಗಿಲ್ಲನೋ ಸ್ವಾಮಿ.. ಎಲ್ಲಾ ಬಿಟ್ಟು ಅಲ್ಲೆ ನೋಡ್ತಾರನು? ಮಾಡಸಣ ನಿಧಾನಕ್ಕ~ ಎಂದಿದ್ದನ್ನು ಕೇಳಿ, `ಅಯ್ಯ ಇದರ ಪತ್ರೋಳಿ!! ಹಿಂಗ್ ಅಂದ್ನಾ ಅಂವಾ. ಅವನ ಉಡದಾರ ಕತ್ತರಸ್ಲಿ! ಅವನ ಹೆಣಕ್ಕ ಹೆಂಟೆಗಲ್ಲು ಏರಸಲಿ~ ಎಂದೆಲ್ಲಾ ಆ ಓಣಿ ತುದಿಯ ಹೆಣ್ಮಕ್ಕಳೆಲ್ಲರೂ ಸಿಟ್ಟಿನಿಂದ ಬೈಗುಳದಲ್ಲಿ ಆ ಚೇರ‌್ಮನ್‌ನ ಹೆಣ ಸಿಂಗಾರ ಮಾಡಿದ್ದರು.

ಚೇರ‌್ಮನ್ ಹಿಂಗಂದ ಬಳಿಕ ತಾನೊಂದು ಪ್ರಯತ್ನ ಮಾಡಿನೋಡುಣಾಂತ ಶಾಂತಾಬಾಯಿ ತನ್ನ ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ವಿತರಣೆ ಕಾರ‌್ಯಕ್ರಮದ ನೆಪದಲ್ಲಿ ಪತ್ರಕರ್ತ ಸಿದ್ಲಿಂಗೇಶನನ್ನು ಕರೆದು ಅಂಗನವಾಡಿ ಕೇಂದ್ರದ ಹತ್ತರವೇ ಇದ್ದ ಶೌಚಾಲಯದ ಗೋಡೆ ಬಿದ್ದು ಹೋಗಿರುವುದನ್ನು ತೋರಿಸಿ ಅದರ ಕುರಿತು, ಪಂಚ್ಯಾತಿಯವರು ನಿರ್ಲಕ್ಷ್ಯವಹಿಸಿದ್ದಾರೆಂದು ಪೇಪರಿಗೆ ಬರೆಯಬೇಕೆಂದಳು.
ಚಹಾ ಬಿಸ್ಕಿಟ್‌ನ್ನು ಸೇವಿಸುತ್ತಿದ್ದ ಸಿದ್ಲಿಂಗೇಶ ಚಹಾ ಗುಟುಕರಿಸುತ್ತಾ ಅಲ್ಲೇ ಕಿಡಕಿಯಿಂದ ಬಿದ್ದ ಗೋಡೆಯತ್ತ ದೃಷ್ಠಿ ಬೀರಿದನು. ಯೂಸ್ ಅಂಡ್ ಥ್ರೋ ಕಪ್‌ನ್ನು ಥ್ರೋ ಮಾಡಿ ನಗತೊಡಗಿದ. `ಅಕ್ಕಾವರ ಒಂದ್ ಮಳೆಗೆ ಇಷ್ಟು ಗ್ವಾಡಿ ಬಿಧೈತಿ; ಇನ್ನೊಂದು ಮಳೆ ಹೊಡಿದರ ಇನ್ನೂ ಬೀಳುತ್ತ. ಆವಾಗ ಬರೀತಿನಿ ತುಗೋರಿ~ ಎನ್ನುತ್ತ ಇದೊಂದು ಸುದ್ದಿಯೇ ಅಲ್ಲವೆಂಬಂತೆ ನಗೆ ಬೀರುತ್ತಲೆ ಇದ್ದನು.

`ಪಂಚ್ಯಾತಿಯವರು ಈ ಕಡೆ ಕಣ್ಣು ತೆರದು ನೋಡವಲ್ಲರು. ನೀವು ಒಂದೀಟು ಪೇಪರಿಗೆ ಬರೆದರ... ಅನುಕೂಲ ಆಗುತ್ತಂತ...~  ಶಾಂತಾಬಾಯಿ ಅನ್ನುತ್ತಿರುವಾಗಲೇ `ಪಂಚ್ಯಾತಿಯವರೇನು ಮಾಡ್ತಾರಿ... ಅವರು ಬರೆ ಯಾವುದ್ರಾಗ ಹೆಂಗ್ ತಿನಬೇಕು ಅಂತ ನೋಡ್ತಿರ‌್ತಾರ. ಈಗ ನೋಡ್ರೀ ಉದ್ಯೋಗ ಖಾತ್ರಿ ಯೋಜನೆದಾಗ ಡೂಪ್ಲಿಕೇಟ್ ಜಾಬ್ ಕಾರ್ಡ ಮಾಡಿ ತಿನ್ನಾಕ ಹತ್ತ್ಯಾರ.

ಎಲ್ಲಾದ್ರೊಳಗೂ ಈಗಂತೂ ಡೂಪ್ಲಿಕೇಟ್ ನಡದುಬಿಟ್ಟೈತಿ. ಮತ್ತ ನೀವು ಹೆರಿಗೆ ಭತ್ಯ ಯಾರ‌್ಯಾರಿಗೆ ಮಾಡಿಸಿ ಕೊಡ್ತಿರಿ ಮತ್ತ...?~ ಎಂದು ಕೊಂಕು ತೆಗೆದು ವ್ಯಂಗ್ಯದ ರೀತಿಯಲ್ಲಿ ನಗುತ್ತ ಒಂದು ಅರಿವೆ ಹಾವು ಬಿಟ್ಟು ನೋಡಿದನು.

`ಯಾಕ್ರೀ ಅಣ್ಣಾರ.. ನಮ್ಮ ಬಗ್ಗೆ ಏನರೆ ಕಂಪ್ಲೇಟ್ ಕೇಳಿರೆನು ನೀವು?~ ಎಂದಳು ಶಾಂತಾಬಾಯಿ. `ಹ್ಯೆ... ಸುಮ್ಮನ ಅಂದ್ನ್ಯಾಳ್ರೀ~ ಎನ್ನುತ್ತ ತನ್ನ ಮಾತು ಸೀರಿಯಸ್ ಅಲ್ಲವೆಂದು ಬಿಂಬಿಸಲು ನಾನ್‌ಸ್ಟಾಪ್ ನಗುವಿಟ್ಟುಕೊಂಡು ನಡೆದುಬಿಟ್ಟನು. ತಣ್ಣಗಾತು ಬಿಡು!! ನಾಲ್ಕು ಸಿಂಗಲ್ ಚಹಾ, ಒಂದು ಪಾರ್ಲೆ ಬಿಸ್ಕಿಟ್ ಬಂಡಲ್ ಎಲ್ಲಾ ವೇಸ್ಟ್ ಆತು ಅಂದುಕೊಂಡಳು ಶಾಂತಾಬಾಯಿ.

ತಂಬಗಿ ಚಳುವಳಿ ಕೈಗೊಂಡ ಚನ್ನವ್ವನಾದಿಯಾಗಿ ಅಲ್ಲಿನ ಹೆಣ್ಣು ಮಕ್ಕಳೆಲ್ಲರೂ ಹೆಬ್ಬಟ್ಟಿನವರೆ ಆಗಿದ್ದರೂ ಕೂಡಾ ಈಗೀಗ ತಮ್ಮೂರ ಪಂಚಾಯತಿಯೊಳಗ ಚೇರ‌್ಮನ್, ಮೆಂಬರ್‌ಗೂಳು ಎಲ್ಲಾ ಸೇರಿಕೊಂಡು ಎಷ್ಟೆಷ್ಟು ರೊಕ್ಕ `ಗುಳುಂ~ ಅನ್ನಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದರು.

ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಸದಸ್ಯೆಯರಾದ ಇವರೆಲ್ಲ ಅಂಗನವಾಡಿಯಲ್ಲಿ ಸೇರಿ ಪ್ರತಿ ತಿಂಗಳು ನಿಗದಿತ ಮೊತ್ತದ ಹಣ ಸಂಗ್ರಹಿಸುತ್ತಿದ್ದರು. ಕೂಲಿಕಾರ ಮಹಿಳೆಯರಾದ ಇವರೆಲ್ಲ ಪ್ರತಿಸಲ ಸೇರಿದಾಗ `ಬಾಯಾಗ ಮಣ್ಣು ಹಾಕ್ಕೊಂಡು ಏಟು ಉಳಿಸಿದ್ರೂ ಬಾಳೇದಾಗ ರೊಕ್ಕನ ಉಳಿಯೂದಿಲ್ಲವ್ವ~ ಅನ್ನುತ್ತಿದ್ದರು. ಹೀಗೆ ರೊಕ್ಕ ಉಳಿಸುವ - ಗಳಿಸುವ ಮಾತು ಬಂದೊಡನೆ ಶಾಂತಾಬಾಯಿ  `ನೋಡ್ರೀ ನಮ್ಮ ಪಂಚ್ಯಾತಿ ಮೆಂಬರಗೂಳು ಹೆಂಗ್ ಉಳಿಸಿಕೊಂಡು, ಗಳಿಸಿಕೊಳ್ಳಾಕ ಹತ್ತ್ಯಾರ~ ಎಂದು ಶುರುವಿಟ್ಟುಕೊಳ್ಳುತ್ತಿದ್ದಳು.

ದ್ಯಾಮವ್ವನ ಗುಡಿ ಮುಂದಿನ ರಸ್ತಾ ರೀಪೇರಿಗೆ ಹಾಕಿದ್ದು ಎರಡು ಟ್ರ್ಯಾಕ್ಟರ್ ಮಣ್ಣು, ಅದಕ್ಕೆ ಬಿಲ್ ತಕ್ಕೊಂಡಿದ್ದು ಹತ್ತು ಸಾವಿರ!! ಗಿಡ ನೆಡಲಿಕ್ಕೆ ಖರ್ಚಾಗಿದ್ದು ಐವತ್ತು ಸಾವಿರ!! ಅವರು ಗಿಡ ಎಲ್ಲಿ ಬೆಳಿಸ್ಯಾರು ಅನ್ನೋದು ದೇವರಿಗೆ ಗೊತ್ತು. ಹೀಗೆ ಪ್ರತಿಯೊಂದು ಅಕ್ರಮವನ್ನು ಅಂಕಿ ಅಂಶದ ಸಮೇತ ವಿವರಿಸುತ್ತಾ ತನ್ನ ಮತ್ತು ಪಂಚಾಯತಿ ನಡುವಣ ಸಂಬಂಧವೆಂಥದು ಎಂಬುದನ್ನು ಸಾಬೀತುಪಡಿಸುತ್ತಾ ಜನರ ಅಧಿಕಾರ ಜನರಿಗೇ ಎಂಬ ಪಂಚಾಯತ ವ್ಯವಸ್ಥೆಯ ಧ್ಯೇಯ ವಾಕ್ಯವೊಂದನ್ನು ಸಾರ್ಥಕಪಡಿಸುವಲ್ಲಿ ಶ್ರಮಿಸುತ್ತಿದ್ದಳು.

 ಚನ್ನವ್ವ, ನಾಗವ್ವ, ಜನಾಬುಡ್ಡಿ, ಹುಸೇನಬಿ, ಯಮನವ್ವನಂಥವರು `ಯವ್ವಾ!! ಎಷ್ಟೆಷ್ಟು ಸಾವೇರ ನಿನ! ಅನ್ನಾಕ ಸೈತ ಬರವಲ್ಲದು. ಅಷ್ಟು ರೊಕ್ಕಾ ತುಗೊಂಡು ಆನಿ ತಿಂತಾವ... ಏನ್ ಒಂಟಿ ತಿಂತಾವ...?! ಹಡೆದವ್ವ~ ಗಾಬರಿಯಾಗಿದ್ದರು.

`ಇಷ್ಟೆಲ್ಲ ಹೇಲ ತಿಂದು, ಮ್ಯಾಲ ಹೆಂಡಿ ಆಣಿ ಮಾಡಿಕೋಂತ ಸಂಪನ್ನರಾಗಾಕ ಹೋಗ್ತಾರಲ್ಲ; ಇವರನ್ನ ಏನ್ ತುಗೊಂಡು ಹೊಡಿಬೇಕು?!~ ನಾಗವ್ವ ಹಲ್ಲು ಕಚ್ಚಿ ಕೇಳಿದಳು.

`ಮಾನುಳ್ಳವರಿಗೆ ಮಾತಿನ ಪೆಟ್ಟು ಮಾನಗೇಡಿಗಳಿಗೆ ಮಚ್ಛಿಪೆಟ್ಟು!!~ ಅಂದಳು ಚೆನ್ನವ್ವ. ಭಂಡರ ಕಡೆಯಿಂದ ಕೆಲಸ ತುಗೋಬೇಕಂದ್ರ ನಾವೂ ತುಸು ಭಂಡತನಕ್ಕ ಇಳಿಬೇಕಾಗುತ್ತ ಏನೋ ಎಂದ ಶಾಂತಾಬಾಯಿ, ನಾಳೆ ಎಲ್ಲಾರು ತಂಬಗಿ ತುಗೊಂಡು ಪಂಚಾಯತಿಗೆ ಹೋಗಿ ಬಿಡೂಣ ಅಂದಳು. ಅದೊಂದು ಆಗೇ ಬಿಡಲಿ ಎಂದು ತಯಾರಾಗಿ, ಸಂಜೆಯ ಕಡೆ ದಿಡ್ಡೀಗೆ ಬಂದವರಿಗೆ ಹೇಳಲಾಯಿತು. ಅದು ಓಣಿಯ ಎಲ್ಲ ಹೆಂಗಳೆಯರಿಗೂ ಮುಟ್ಟಿಬಿಟ್ಟಿತು.

`ಲೇ ಸಿದ್ಲಿಂಗ ಎಲ್ಲಿ ಅದಿಯಲೇ... ನಿಮ್ಮ ಓಣ್ಯಾನ ಹೆಣ್ಮಕ್ಕಳು ಭಾರಿ ಸ್ಟ್ರೈಕು ಮಾಡಾಕ ಹತ್ತ್ಯಾರಿಲ್ಲೆ ಪಂಚಾಯತಿ ಮುಂದ! ಸುದ್ದಿ ಸುದ್ದಿ ಅಂತ ಸಾಯ್ತಿರ‌್ತಿ ಮಗನ, ಈಗ ನೋಡಿದ್ರ ನಿನ್ನ ಸುಳಿವ ಇಲ್ಲಲ್ಲೆ ಮಂಗ್ಯಾ ; ಎಲ್ಲಿ ಅದಿ?~ ಊರಲ್ಲಿ ಮಹತ್ವದ ವಿದ್ಯಮಾನವೊಂದು ಜರಗುತ್ತಿರುವಾಗ ತನ್ನ ಖಾಸಾ ಗೆಳೆಯ ಪತ್ರಕರ್ತ ಸಿದ್ಲಿಂಗೇಶ ಅಲ್ಲಿ ಇಲ್ಲದಿರುವುದು ಶಿವಬಸಯ್ಯನಿಗೆ ಪರಮಾಶ್ಚರ್ಯವಾಗಿ, ಮೊಬೈಲ್ ಮೂಲಕ ಅವನನ್ನು ಈ ಪರಿ ವಿಚಾರಿಸಿಕೊಂಡನು.

ಗೆಳೆಯನ ಸಲುಗೆಯ ಮಾತು ಕೂಡಾ ಸಿದ್ಲಿಂಗೇಶನಿಗೆ ಚುಚ್ಚಿದಂತಾಗಿ `ಮಳ್ಳಾ... ನಾನ ಅವರನ್ನೆಲ್ಲ ಸಜ್ಜುಮಾಡಿ ಹಾಂಗ್ ಕಳಸೀನಿ. ಎಲ್ಲಿ ಅದಾರ ಈಗ? (ಕೇಳಿಸಿಕೊಳ್ಳುವನು) `ಹಾಂ, ಇರ‌್ಲಿ ತಡಿ~ ಎಂದು ಅದು ತನಗೆ ಗೊತ್ತಲ್ಲದೆ ಏನೂ ನಡೆಯುತ್ತಿಲ್ಲ ; ಬದಲಾಗಿ ಅದರ ಹಿಂದಿನ ಸೂತ್ರಧಾರ ತಾನೇ ಎಂಬಂತೆ ಕೊಚ್ಚಿಕೊಂಡು ತಾನೀಗ ಫೋಟೊಗ್ರಾಫರ್‌ನಿಗಾಗಿ ಕಾಯುತ್ತಿದ್ದು ಇನ್ನೈದು ನಿಮಿಷದಲ್ಲಿ ಅಲ್ಲಿಗೆ ಬರುತ್ತಿರುವುದಾಗಿ ತಿಳಿಸಿ, ಆ ಹೆಣ್ಣುಮಕ್ಕಳನ್ನು ತುಸು ತಡೆಯಲು ಹೇಳು ಎಂದಂದು ಫೋನ್ ಕಟ್ ಮಾಡಿದನು.

ಅಂದು ಮುಂಜಾನೆ ಸಿದ್ಲಿಂಗೇಶ ತಾನು ವರದಿ ಮಾಡುವ ಪತ್ರಿಕೆಯನ್ನು ಬಿಡಿಸುತ್ತಿದ್ದಂತೆ ಅವನ ಮುಖ ಪತ್ರಿಕೆಯಷ್ಟೇ ಹಿಗ್ಗಿತು!! ಅವನು ಬರೆದ ಸುದ್ದಿ ಮುಖಪುಟದಲ್ಲಿ ಪ್ರಕಟವಾಗಿತ್ತು. ರಾಜ್ಯಮಟ್ಟದ ಪತ್ರಿಕೆಯೊಂದರ ವರದಿಗಾರನಾಗಿ ಕಳೆದ ಹತ್ತು ವರ್ಷದಿಂದ ಬರೆಯುತ್ತಿದ್ದರೂ ಇದೇ ಮೊದಲ ಸಲ ಅವನ ವರದಿ ಮುಖಪುಟದಲ್ಲಿ ಬಂದಿತ್ತು. ಅದು ಭರ್ಜರಿ ನಾಲ್ಕು ಕಾಲಂ ಫೋಟೊ ಸುದ್ದಿಯ ಬಾಕ್ಸ್ ಐಟಂನಲ್ಲಿತ್ತು. ಅಂದು ಆ ಸುದ್ದಿಯೇ ಲೀಡಿಂಗ್ ಆಗಿ ತೋರುತ್ತಿತ್ತು.

`ಏಳಿರಿ ಎಚ್ಚರಗೊಳ್ಳಿರಿ!!~ ಶೀರ್ಷಿಕೆಯ ಕೆಳಗೆ `ನುಂಗಾಪುರ ಗ್ರಾಮದಲ್ಲಿ ಸಾರ್ಥಕಗೊಂಡ `ಅಣ್ಣಾ~ ಮಾದರಿ ಹೋರಾಟ ಒಂದೇ ಗಂಟೆಯಲ್ಲಿ ಸಮಸ್ಯೆ ಪರಿಹಾರ~ ಎಂಬ ಅಡಿ ಶೀರ್ಷಿಕೆ. ಜೊತೆಗೆ ಎರಡು ಚಿತ್ರಗಳನ್ನು ಬಳಸಿಕೊಳ್ಳಲಾಗಿತ್ತು.
ಒಂದು ಗ್ರಾಮ ಪಂಚಾಯತಿಯ ಎದುರು ನಿಂತು ಘೋಷಣೆ ಕೂಗುತ್ತಿರುವ ಮಹಿಳೆಯರದು. ಇನ್ನೊಂದು ಜೆ.ಸಿ.ಬಿ.ಯಿಂದ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವ ದೃಶ್ಯದ ಚಿತ್ರ.

ತಾನು ಬರೆದಿರುವುದನ್ನೇ ಪತ್ರಿಕೆಯಲ್ಲಿ ಮತ್ತೊಮ್ಮೆ ಓದತೊಡಗಿದನು. ಓದುತ್ತಾ ಓದುತ್ತಾ ಹೋದಂತೆ ಹಾಗೆ ಪುಳಕಗೊಳ್ಳತೊಡಗಿದ. ನಂತರ ಇತರ ಸುದ್ದಿಗಳತ್ತ ಕಣ್ಣಾಡಿಸುತ್ತಿರುವಾಗ ಯಾವುದೋ ಪ್ರಶಸ್ತಿಗೆ ಪುಸ್ತಕಗಳನ್ನು ಆಹ್ವಾನಿಸಿದ ಪ್ರಕಟಣೆಯೊಂದು ಕಂಡಿತು.

ತಕ್ಷಣ ಏನೋ ಹೊಳೆದು, ಜೋಡಿಸಿಟ್ಟಿದ್ದ ಹಳೆಯ ಪತ್ರಿಕೆಗಳನ್ನು ಕೆದಕತೊಡಗಿದನು. ಹಲವು ಪತ್ರಿಕೆಗಳನ್ನು ಪರಿಶೀಲಿಸಿದ ನಂತರ ಅವನು ಹುಡುಕುತ್ತಿದ್ದುದು ಸಿಕ್ಕಿತು. ಅದು ಮಾಧ್ಯಮ ಅಕಾಡೆಮಿಯು ಪತ್ರಿಕಾ ವರದಿಗಳಿಗೆ ಪುರಸ್ಕಾರ ನೀಡುವ ಪ್ರಕಟಣೆಯಾಗಿತ್ತು. ಅದನ್ನೊದಿದವನೇ ತನ್ನ ಇಂದಿನ ವರದಿಯನ್ನು ಕಟ್ ಮಾಡಿಕೊಳ್ಳತೊಡಗಿದನು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT