ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಥೆ: ನಿರಂತರ ಸಾಂಸ್ಕೃತಿಕ ಪ್ರಕ್ರಿಯೆ'

Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಚಿನುವಾ ಅಚಿಬೆ ಮೈಸೂರಿಗೆ ಭೇಟಿ ನೀಡಿದ್ದು 1981ರಲ್ಲಿ. ಆಗ ಇಂಗ್ಲಿಷ್ ವಿಭಾಗದ ಮುಖ್ಯಸ್ಥರೂ ಕಾಮನ್‌ವೆಲ್ತ್ ಸೆಂಟರ್‌ನ ನಿರ್ದೇಶಕರೂ ಆಗಿದ್ದ ಪ್ರೊ. ಎಚ್.ಎಚ್. ಅಣ್ಣಯ್ಯಗೌಡ ಅವರ ಪ್ರಯತ್ನದ ಫಲವಾಗಿ ಅಚಿಬೆ ಆಗಮಿಸಿದ್ದರು. ಇಂಗ್ಲಿಷ್ ವಿಭಾಗ ಹಾಗೂ ಪ್ರೊ. ಸಿ.ಡಿ. ನರಸಿಂಹಯ್ಯನವರು ಸ್ಥಾಪಿಸಿರುವ ಸಂಶೋಧನಾ ಕೇಂದ್ರ  `ಧ್ವನ್ಯಾಲೋಕ'ದಲ್ಲಿ ಅಚಿಬೆ ಉಪನ್ಯಾಸಗಳನ್ನು ನೀಡಿದ್ದರು. ನಿಜವಾಗಿ ಅಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಈ ಲೇಖನದಲ್ಲಿ ಮುಂದೆ ಚರ್ಚಿತವಾಗಿರುವ ಸಂಗತಿಗಳನ್ನೆಲ್ಲ ಅಚಿಬೆ ಪ್ರಸ್ತಾಪ ಮಾಡಿದರು. ತರುವಾಯ ಅವರು ಒಂದು ದಿನ ಮೈಸೂರಿನ ಸುತ್ತಮುತ್ತಲ ಗ್ರಾಮಗಳಲ್ಲಿ ದಲಿತರು ಹೇಗೆ ಬದುಕುತ್ತಿದ್ದಾರೆ ಎಂದು ತಿಳಿದುಕೊಳ್ಳುವ ದೃಷ್ಟಿಯಿಂದ ದೇವನೂರು ಮಹಾದೇವರ ಜೊತೆ ಹಳ್ಳಿಗಳಿಗೆ ಭೇಟಿ ನೀಡಿದ್ದರು. `ಇಲ್ಲಿನ ಪರಿಸ್ಥಿತಿ ಭಯಂಕರವಾಗಿದೆ' ಎಂದು ಅವರು ಹೇಳಿದ್ದ ನೆನಪು. `ಧ್ವನ್ಯಾಲೋಕ'ದಲ್ಲಿ  ನೀಡಿದ್ದ ಉಪನ್ಯಾಸದ ಸಂದರ್ಭದಲ್ಲಿ `ಇನ್ನೂ ಏಕೆ ನೀವು ಡಿ.ಎಚ್. ಲಾರೆನ್ಸ್, ಎಫ್.ಆರ್. ಲೀವಿಸ್, ಟಿ.ಎಸ್. ಎಲಿಯಟ್ ಎಂದು ಆ ಕಡೆ ಧ್ಯಾನಸ್ಥರಾಗಿದ್ದೀರಿ? ನಿಮ್ಮ ಸಮಸ್ಯೆಗಳನ್ನು ಕುರಿತು ಮಾತನಾಡಲಿಕ್ಕೆ ನಿಮ್ಮದೇ ಸಂಗತಿಗಳಿಲ್ಲವೆ?' ಎಂದು ನೇರವಾಗಿಯೇ ಕೇಳಿದ್ದರು.

ಅಚಿಬೆಯೊಡನೆ ಡಾ. ಯು.ಆರ್. ಅನಂತಮೂರ್ತಿ ಅವರು ಮಾಡಿದ ಸುದೀರ್ಘ ಸಂದರ್ಶನ `ಡೆಕ್ಕನ್ ಹೆರಾಲ್ಡ್' ಪತ್ರಿಕೆಯಲ್ಲಿ ಪ್ರಕಟವಾಯಿತು ( ಇದರ ಕನ್ನಡ ಅನುವಾದ ಕಳೆದ ವಾರ `ಪ್ರಜಾವಾಣಿ' ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿದೆ). ಅಚಿಬೆಯವರು ಮೈಸೂರಿನಲ್ಲಿ ತಿರುಗಾಡಿದ ಸಂಭ್ರಮ ಎಲ್ಲರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ.

1958ರಲ್ಲಿ ಅವರು ಕೇವಲ 28 ವರ್ಷದ ಯುವಕನಾಗಿದ್ದಾಗ ಬರೆದ `ಥಿಂಗ್ಸ್ ಫಾಲ್ ಅಪಾರ್ಟ್' ಕಾದಂಬರಿಯಲ್ಲಿ ತೃತೀಯ ಜಗತ್ತಿನ ವಸ್ತುಸ್ಥಿತಿಯನ್ನು ಕುರಿತು, ಮುಖ್ಯವಾಗಿ ಹೇಳಬೇಕಾದ ಸಂಗತಿಗಳನ್ನು ಹೇಳಿದ್ದಾರೆ. ಆಫ್ರಿಕಾ ಖಂಡವನ್ನು ಪ್ರವೇಶಿಸುವಾಗ  ಕಗ್ಗತ್ತಲ ಖಂಡಕ್ಕೆ ಬಂದಿದ್ದೇನೆ ಎಂದು ಯುರೋಪಿನವ ಘೋಷಿಸಿದ. ಅಂತೆಯೇ ಆ ಜನಗಳಿಗೆ ಬುದ್ಧಿ, ವಿವೇಕ ಕಲಿಸುವುದು  ಬಿಳಿಯನಾದ ತನ್ನ ಹೊಣೆಗಾರಿಕೆ  ಎಂದು ಸಾರಿದ. ಈ ರೀತಿಯಾಗಿ ಜನಜನಿತವಾದ ಮಿಥ್ಯೆಗಳನ್ನು ಒಡೆಯುವ ಕಾಯಕದಲ್ಲಿ ಅಚಿಬೆ ನಿರಂತರವಾಗಿ ತೊಡಗಿದರು. ಒಬ್ಬ ಲೇಖಕನ ಜವಾಬ್ದಾರಿ ಏನು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಅಚಿಬೆ, ಆತ ಯಾವಾಗಲೂ ತನ್ನ ಸಮುದಾಯದ ಉಪಾಧ್ಯಾಯ ಹಾಗೂ ಮಾರ್ಗದರ್ಶಿ  ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.

ಆ ಕಾರಣದಿಂದ ಕಲೆಯೆಂಬುದು ವೈಯಕ್ತಿಕ ಎನ್ನುವುದನ್ನು ಅಚಿಬೆ ಒಪ್ಪುವುದಿಲ್ಲ. ಅವರ ಪ್ರಕಾರ ಕಲೆ ಎನ್ನುವುದು  ಸಾಮುದಾಯಿಕ  ಹಾಗೂ ಕ್ರಿಯಾತ್ಮಕ. ಒಬ್ಬ ಲೇಖಕ ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸಬಹುದು ಮತ್ತು ಸೀಮಾತೀತವಾದ ಅಧಿಕಾರಕ್ಕೆ ಕಡಿವಾಣ ಹಾಕಬಹುದು. ಹಾಗಾಗಿ ಅಚಿಬೆ ನಿರೀಕ್ಷಿಸುವುದೇನೆಂದರೆ ಒಬ್ಬ ಲೇಖಕ ರಾಜಕೀಯ ಸಂಗತಿಗಳಿಗೆ ಮುಖಕೊಟ್ಟು ನಿಲ್ಲಬೇಕು. ಆದ್ದರಿಂದ ಅಚಿಬೆ ದೃಷ್ಟಿಯಲ್ಲಿ  ಶುದ್ಧ ಕಲೆ  (ಪ್ಯೂರ್ ಆರ್ಟ್) ಎಂಬುದು ಇಲ್ಲವೇ ಇಲ್ಲ.

ಅಧಿಕಾರದಲ್ಲಿರುವವರ ಇಷ್ಟಾನಿಷ್ಟಗಳೇನೇ ಇರಲಿ ಲೇಖಕನಾದವನು  ಸರಿಯಾದ ಹಾಗೂ ನ್ಯಾಯಸಮ್ಮತವಾದ ಸಂಗತಿಗಳಿಗೆ  ಮಾತ್ರ ಒದಗಿ ಬರಬೇಕು. `ಲೇಖಕ ಮತ್ತು ಅವನ ಸಮುದಾಯ' ಎಂಬ ಪ್ರಬಂಧದಲ್ಲಿ ಈ ವಿಷಯವಾಗಿ ಅಚಿಬೆ ಮಾತನಾಡಿದ್ದಾರೆ. ವಸಾಹತುಶಾಹಿಗಳು ತೃತೀಯ ಜಗತ್ತಿನ ಭೂಭಾಗವನ್ನು ಬಿಟ್ಟು ತೆರಳಿದ ಬಳಿಕ ತೆರವಾದ ಜಾಗಗಳನ್ನು ನಮ್ಮವರೇ ತುಂಬಿ ನವವಸಾಹತುಶಾಹಿಗಳಾಗಿ ಪರಿವರ್ತಿತರಾಗಿರುವ ಬಗ್ಗೆ ಅಚಿಬೆ ಬಹಳ ವಿಷಾದಪಟ್ಟಿದ್ದರು.
ವಸಾಹತುಶಾಹಿಯ ಅಸಮಾನತೆಯ ಮೂಲರಚನೆಯನ್ನು ಪುನರ್‌ಸ್ಥಾಪಿಸುವ ಯಾವುದೇ ಹುನ್ನಾರನ್ನು ಅಚಿಬೆ ಖಂಡಿಸುತ್ತಿದ್ದರು.

1969ರಲ್ಲಿ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಬರ್ನ್‌ತ್ ಲಿಂಡ್‌ಫರ್ಸ್ ಅವರಿಗೆ ನೀಡಿದ ಸಂದರ್ಶನದಲ್ಲಿ ಅಚಿಬೆ ಆಫ್ರಿಕನ್ ಲೇಖಕನಿಗೆ ಯುಗಳ ಜವಾಬ್ದಾರಿಗಳಿವೆ  ಎಂದು ಸೂಚಿಸಿದ್ದರು. ಮೊದಲನೆಯ ಜವಾಬ್ದಾರಿ ಎಂದರೆ ಶ್ರಿಮಂತವಾದ ಆಫ್ರಿಕನ್ ಸಂಸ್ಕೃತಿಯ ವಕ್ತಾರನಾಗುವುದು. ಏಕೆಂದರೆ ಆಫ್ರಿಕದವರಿಗೆ ಸಂಸ್ಕೃತಿಯೇ ಇಲ್ಲ ಎನ್ನುವ ಮಿಥ್ಯೆಯನ್ನು ಲಾಗಾಯ್ತಿನಿಂದ ಬಿತ್ತುತ್ತಾ ಬರಲಾಗಿದೆ. ಮೊದಲು ಅದನ್ನು ಒಡೆಯಬೇಕು. ಎರಡನೆಯ ಜವಾಬ್ದಾರಿ ಎಂದರೆ ಬಿಳಿಯ ವಸಾಹತುಶಾಹಿಯನ್ನು ಓಡಿಸಿ ಆ ಜಾಗದಲ್ಲಿ ಕಪ್ಪು ವಸಾಹತುಶಾಹಿ ಬಂದು ಕುಳಿತಿದ್ದಾನೆ. ಹಾಗಾಗಿ ಈತ ನವವಸಾಹತುಶಾಹಿ. ಇವನು ಬಿಳಿಯ ವಸಾಹತುಶಾಹಿ ಅನುಸರಿಸಿದ್ದ ಮಾರ್ಗಗಳನ್ನೇ ಅನುಸರಿಸುತ್ತಿದ್ದಾನೆ; ಅದರಲ್ಲಿ ಅನುಮಾನವಿಲ್ಲ.' (`ಎ ಮ್ಯೋನ್ ಆಫ್ ದ ಪೀಪಲ್'  ಕಾದಂಬರಿಯಲ್ಲಿ ಇದನ್ನು ಅಚಿಬೆ ಚೆನ್ನಾಗಿ ತೋರಿಸಿದ್ದಾರೆ). ಇದೇ ಸಂದರ್ಶನದಲ್ಲಿ ಅಚಿಬೆ  ಹೇಳಿರುವ ಮಾತುಗಳಿವು:  `ಆದ್ದರಿಂದಲೇ ನಾನು ಆಳುವವರ್ಗದ ಕಟು ಟೀಕಾಕಾರನಾಗಿ ಹೊರಹೊಮ್ಮಬೇಕಾಯಿತು. ಹಿಂದೆ ನಾನು ವಸಾಹತುಶಾಹಿಗಳಿಗೆ ವಿರುದ್ಧವಾಗಿ, ನನ್ನ ಜನಗಳ ಪರವಾಗಿ ಇದ್ದೆ; ಈಗ ಕಪ್ಪು ಜನರೇ ನಾಯಕರಾಗಿದ್ದಾರೆ. ನನ್ನ ಟೀಕೆ ಮುಂದುವರೆದಿದೆ'.  ಆದ್ದರಿಂದಲೇ ಅಚಿಬೆ  `ಸಾಂಸ್ಕೃತಿಕ ಚರಿತ್ರಕಾರ'  ಎಂಬ ಪಟ್ಟವನ್ನು ಬಿಟ್ಟುಕೊಟ್ಟು  `ಸಾಮಾಜಿಕ ವಿಮರ್ಶಕ' ಎಂಬ ಅಭಿದಾನವನ್ನು ಸ್ವೀಕರಿಸಿದ್ದು. ಸಾಮಾಜಿಕ ಕ್ರಾಂತಿಯ ಸಂದರ್ಭದಲ್ಲಿ ಲೇಖಕನಾದವನ ಸ್ಥಾನ ಇರುವುದು ಪರಿಧಿಯಲ್ಲಲ್ಲ, ಬದಲಿಗೆ ಆ ಹೋರಾಟದ ಕೇಂದ್ರದಲ್ಲಿ; ಸಾಧ್ಯವಾದರೆ ಆತ ತನ್ನ ಸಮಾಜದ ನಾಯಕತ್ವವನ್ನು ವಹಿಸಿಕೊಳ್ಳಬೇಕಾಗುತ್ತದೆ  ಎಂಬುದು ಅಚಿಬೆಯ ಸ್ಪಷ್ಟ ನಿಲುವು.

ನಿರಂಕುಶಪ್ರಭುಗಳು ಹಾಗೂ ಸರ್ವಾಧಿಕಾರಿಗಳ ವಿರುದ್ಧ ಅಚಿಬೆ ಸದಾ ದನಿ ಎತ್ತಿದವರು. ಯಾವ ಕ್ಷಣದಲ್ಲಾದರೂ ಇವರು ಜನರ ಮಧ್ಯದಲ್ಲಿ ಧುತ್ತೆಂದು ಕಾಣಿಸಿಕೊಳ್ಳಬಹುದು; ಹಾಗಾಗಿ ಇವರ ಹುಟ್ಟುವಳಿ ವಿರುದ್ಧ ನಾವು ಸದಾ ಜಾಗೃತರಾಗಿರಬೇಕು ಎಂಬುದು ಅಚಿಬೆಯ ಬುದ್ಧಿವಾದ. ಚರಿತ್ರೆಯ ಸವಾಲುಗಳನ್ನು ಎದುರಿಸಲು `ಕಥೆ' ನಮ್ಮನ್ನು ಸಿದ್ಧಗೊಳಿಸುತ್ತದೆ ಎಂಬುದರಲ್ಲಿ ಅಚಿಬೆಗೆ ಅಚಲವಾದ ನಂಬಿಕೆ. ಕಥೆ ಅನ್ನುವುದು ಒಂದು ನಿರಂತರವಾದ ಸಾಂಸ್ಕೃತಿಕ ಪ್ರಕ್ರಿಯೆಯಾಗಿರುವುದರಿಂದ ಸೃಜನಶೀಲ ಲೇಖಕರು ಎಂದು ಕರೆಯಿಸಿಕೊಳ್ಳುವಂಥ ಒಂದು ಗುಂಪಿನ ಜನರ ವಿರಾಮ ಕಾಲದ ಮನರಂಜನೆಯಲ್ಲ ಎನ್ನುತ್ತಾರೆ. ಈ ಚಟುವಟಿಕೆ ಅನ್ನುವಂಥದು ನಮ್ಮ ದೈನಂದಿನ ಬದುಕಿನೊಡನೆ ಅವಿನಾಭಾವವಾಗಿ ಬೆರೆತುಹೋಗಬೇಕು.

ಬಹಳ ಹಿಂದೆ ಜನರು ಬೆಂಕಿಯ ಸುತ್ತ ಕುಳಿತುಕೊಂಡು ತಮ್ಮ ಸಮುದಾಯದ ಅಸ್ಮಿತೆ ಹಾಗೂ ಚರಿತ್ರೆಯನ್ನು ಮುಂದುವರಿಸುವ ದೃಷ್ಟಿಯಿಂದ ಹಾಗೂ ತಮ್ಮ ಪರಿಸರದ ನಿರೀಕ್ಷೆಯಂತೆ ಬದುಕುವುದಕ್ಕಾಗಿ ಕಥೆಯನ್ನು ಹೇಳಿಕೊಳ್ಳುತ್ತಿದ್ದರು. ಈ ಕಥೆ ಹೇಳುವ ಕ್ರಿಯೆ ಇತರ ಚಟುವಟಿಕೆಗಳಿಗಿಂತ ಹೆಚ್ಚು ಪ್ರಾಧಾನ್ಯ ಪಡೆದುಕೊಳ್ಳುವುದು ಚರಿತ್ರೆಯ ಸುಳ್ಳುಗಳನ್ನು ಬುಡಮೇಲು ಮಾಡುವುದರ ಜೊತೆಗೆ ರಾಜಕೀಯವಾದ ಸರ್ವಾಧಿಕಾರವನ್ನು ಅದು ವಿರೋಧಿಸುತ್ತದೆ. ಕಥೆ ಹೇಳುವವರು ವಾಸ್ತವವಾಗಿ ವಿಶಿಷ್ಟ ಜನರೇ ಸರಿ.

ಏಕೆಂದರೆ ಎಲ್ಲ ಬಗೆಯ ಕಥೆ ದಬ್ಬಾಳಿಕೆಯ ವಿರುದ್ಧದ ಹೋರಾಟಗಳನ್ನೂ ದಾಖಲಿಸುತ್ತದೆ. ಪಾರಂಪರಿಕವಾಗಿ ಕಥೆ ಹೇಳುತ್ತಿದ್ದ ಕಥೆಗಾರ ಕೇವಲ ಕಲೆ ಹಾಗೂ ಪರಿಸರದ ಸೌಂದರ್ಯದ ಮುಖವನ್ನಷ್ಟೇ ಗಮನಿಸುತ್ತಿದ್ದವನಲ್ಲ; ಬದಲಿಗೆ ಮೌಲ್ಯಗಳ ಬಗ್ಗೆ ರಾಜಕೀಯ-ಸಾಮಾಜಿಕ ಬದಲಾವಣೆಗಳ ಬಗ್ಗೆ ಅವನ ಕಾಳಜಿಗಳು ಮುಖ್ಯವಾಗಿದ್ದವು.

ಅಚಿಬೆ ದೃಷ್ಟಿಯಲ್ಲಿ ಕಥೆ ಎನ್ನುವುದು ಸಂವಹನದ ಅಮೂರ್ತ ಚಟುವಟಿಕೆಯಲ್ಲ, ಅದು  ಜನರನ್ನು ಕ್ರಿಯೆಗೆ ಹಚ್ಚುವ ಮೂರ್ತ ಮಾರ್ಗದರ್ಶಿ. ವಿಶಾಲ ಸಮಾಜದ ಒಳಿತಿಗೆ ಒದಗಿ ಬರುವ ಸಾಧನ. ಓದುವ ಬರೆಯುವ ಚಟುವಟಿಕೆಯನ್ನು ವಿಶಾಲವಾದ ರಾಜಕೀಯ ಹೊಣೆಗಾರಿಕೆಯಿಂದ ಬೇರ್ಪಡಿಸಲು ಸಾಧ್ಯವಾಗುವುದೇ ಇಲ್ಲ.

ಕಥೆ ಏಕೆ ಮುಖ್ಯವಾಗುತ್ತದೆ? ಎಂಬ ಪ್ರಶ್ನೆಗೆ ಅಚಿಬೆ ಮತ್ತೆ ಮತ್ತೆ ಉತ್ತರ ನೀಡಿದ್ದಾರೆ. ಕಥೆ ಮುಖ್ಯವಾಗುವುದೇಕೆಂದರೆ ಅದು ತನ್ನ ಕಲ್ಪನೆಯ ಮೂಲಕ ನಮ್ಮನ್ನು ಸರಿದಾರಿಯಲ್ಲಿ ನಡೆಸುತ್ತದೆ. ವೀರತನ ಹಾಗೂ ಹೇಡಿತನದ ನಡುವಿನ ಗೆರೆ ಅಷ್ಟು ತೆಳುವಾಗಿರುವಾಗ ಕಥೆ ಎನ್ನುವುದು ವೀರತನ ಯಾವುದು ಹೇಡಿತನ ಯಾವುದು ಎಂಬುದನ್ನು ನಮಗೆ ಮನದಟ್ಟು ಮಾಡುತ್ತದೆ.

ಅಚಿಬೆ ನಮ್ಮ ಗಮನವನ್ನು ಇನ್ನೊಂದು ಸಂಗತಿಯ ಕಡೆಗೂ ಸೆಳೆಯುತ್ತಾರೆ: ಅದೇನೆಂದರೆ `ನಮ್ಮ ಕಲ್ಪನೆಯ ಮಗ್ಗದಲ್ಲಿ ಯಾವ ತರಹದ ವಸ್ತ್ರ ಸಿದ್ಧವಾಗುತ್ತಿದೆ' ಎಂಬುದೂ ಮುಖ್ಯ. ಉದಾಹರಣೆಗೆ ಜನಾಂಗದ ಬಗ್ಗೆ ಚಿಂತಿಸುತ್ತಾ ಇದು ಉತ್ತಮ, ಇದು ಅಧಮ ಎನ್ನುವಂಥ ತಿಳಿವಳಿಕೆ; ಗಡಿಯ ಆ ಕಡೆ ವಾಸ ಮಾಡುವ ಜನರು, ಬೇರೆ ಭಾಷೆ ಮಾತನಾಡುವ ಜನರು ಅಪಾಯಕಾರಿ ಎನ್ನುವ ಭಾವನೆ; ಕೆಲವು ಸವಲತ್ತುಗಳು ನಮಗೆ ಮಾತ್ರ ದಕ್ಕಬೇಕು, ಇತರರಿಗೆ  ಅವು ಸಿಕ್ಕಬಾರದು ಎನ್ನುವಂಥದ್ದು, ಗಂಡಸರು ಹೆಂಗಸರಿಗಿಂತ ಬುದ್ಧಿವಂತರು ಎಂಬ ನಂಬಿಕೆ- ಇಂಥ ಆಲೋಚನೆಗಳು ಜನಾಂಗದ್ವೇಷ ಹಾಗೂ ಕ್ರೌರ್ಯವನ್ನು ಒಡಲೊಳಗಿಟ್ಟು ಸಾಕುತ್ತವೆ. ಹಾಗಾಗಿ, ಅಪಾಯಕಾರಿ ಆಲೋಚನೆಗಳು ಮನಸ್ಸನ್ನು ಹೊಕ್ಕ ಕೂಡಲೇ ನಾವು ನಮ್ಮಳಗೆ ಕೆಂಪುದೀಪ ಹೊತ್ತಿಸಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಇದು ಅಚಿಬೆಯವರ ವಿವೇಕದ ನುಡಿಗಳು.

ಇತರರ ನೋವು ಸಂಕಟಗಳನ್ನು ಅರಿಯದಷ್ಟು ದಪ್ಪಚರ್ಮದವರು ನಾವಾದರೆ ಅದಕ್ಕಿಂತ ಕೇಡು ಇನ್ನೊಂದಿಲ್ಲ ಅನ್ನುತ್ತಾರೆ ಅಚಿಬೆ. ಅದಕ್ಕೊಂದು ಕಥೆ ಹೇಳುತ್ತಾರೆ: ಒಮ್ಮೆ ಒಬ್ಬಳು ದೊರೆಸಾನಿ ತನ್ನ ಕೋಚ್‌ಗಾಡಿಯಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದಳಂತೆ. ಮಾರ್ಗದಲ್ಲಿ ಗುಡಿಸಿಲೊಂದರ ಮುಂದೆ ಚಳಿಯಲ್ಲಿ ನಡುಗುತ್ತಾ ಕುಳಿತಿರುವ ಒಬ್ಬ ಹುಡುಗ ಕಣ್ಣಿಗೆ ಬೀಳುತ್ತಾನೆ. ಚಾಲಕನಿಗೆ ಹೇಳುತ್ತಾಳೆ  `ಅರಮನೆಗೆ ಹೋದ ಕೂಡಲೇ ನೆನಪಿಸು, ಈ ಹುಡುಗನಿಗೆ ಹೊದಿಕೆಯನ್ನು ಕಳಿಸುವಾ' ಎಂದು.

ಅರಮನೆ ತಲುಪಿದ ನಂತರ ಚಾಲಕ ದೊರೆಸಾನಿಗೆ ನೆನಪಿಸುತ್ತಾನೆ. `ಯಾವ ಹುಡುಗ, ಯಾವ ಗುಡಿಸಲು?' ಎಂದು ದೊರೆಸಾನಿ ಚಾಲಕನನ್ನೇ ಮರುಪ್ರಶ್ನಿಸುತ್ತಾಳೆ. ಅರಮನೆ ತಲುಪುವಷ್ಟರಲ್ಲಿ ಅವಳಿಗೆ ಮಾರ್ಗದಲ್ಲಿ ಕಂಡದ್ದೆಲ್ಲ ಮರೆತುಹೋಗಿರುತ್ತದೆ. ಇಷ್ಟಕ್ಕೂ ಬೆಚ್ಚನೆಯ ಅರಮನೆಯಲ್ಲಿ ಹೊರಗಿನ ಚಳಿಯ ನೆನಪಾಗುವುದು ಅಷ್ಟು ಸುಲಭವೇನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT