ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ : ಬೇಬಿ

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪ್ರತಿ ವರ್ಷದಂತೆ ಈ ಏಪ್ರಿಲ್ ಮಾಹೆಯಲ್ಲಿ ಕೋಡಿಹಳ್ಳಿಯಲ್ಲಿ ಕರಗ ಮಹೋತ್ಸವ ಗ್ರಾಂಡಾಗಿ ನಡೆಸಬೇಕೆಂದು ಕುಲಸ್ಥರು ನಿಶ್ಚಯಿಸಿದರು. ಉತ್ಸವದ ಸಮಿತಿ ಎಲ್ಲಾ ತೆರನಾದ ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಕೆಲಸ ಮಾಡಲು ಉತ್ಸಾಹ - ಹುಮ್ಮಸ್ಸು ತೋರಿಸುವ ಯುವಪಡೆಗೆ ಅಗತ್ಯ ಮಾಹಿತಿ ನೀಡುತ್ತಿತ್ತು.

ಊರಿನ ಎಲ್ಲಾ ಬೀದಿ, ಮನೆಗಳನ್ನೂ ತಿರುತಿರುಗಿ ಚಂದಾ ಕಲೆ ಹಾಕಲಾಯಿತು. ತೋಟಿಗರ ರಾಮಕೃಷ್ಣನಿಗೆ ಹೇಳಿ, ಊರ ಮೂಲಮೂಲೆಗೂ ತಲುಪುವ ಹಾಗೆ `ಸಾಟು~ ಹೊಡೆಸಲಾಯಿತು. ಅವನ ಶರಾಬುನೆಂದ ನಾಲಿಗೆಗೆ ಬಿಂಕ ಇರಲಿಲ್ಲ. ತೆಲುಗಿನಲ್ಲೊಮ್ಮೆ, ಕನ್ನಡದಲ್ಲೊಮ್ಮೆ ಕರಗದ ವಿಷಯ ಅರುಹಿ, ಊರಿನ ಮುತ್ತೈದೆಯರು ಹೇಗೆ, ಯಾವಾಗ, ಯಾವ ರೀತಿ ಕರಗಕ್ಕೆ ಪೂಜೆ ಸಲ್ಲಿಸಬೇಕು ಎಂಬುದರ ವಿವರಣೆ ನೀಡಿದ.

`ಹೂವಿನ ಕರಗ~ಕ್ಕೆ ಎರಡು ಮೂರು ದಿನಗಳ ಮುಂಚೆ `ಹಸಿ ಕರಗ~ ಮಾಡುತ್ತಾರೆ. ನಡುರಾತ್ರಿ ಹೊರಳಿದ ಮೇಲೆ ಮೂರು ಜನ ಅರಿಶಿನ ಬಣ್ಣದ ಬಟ್ಟೆ ತೊಟ್ಟು, ಬೆತ್ತಲು ಭುಜಗಳಿಗೆ ಕೆಂಪು ಚೌಕ ನಾಜೂಕಾಗಿ ಹೊದ್ದು ಹಸಿಕರಗವನ್ನು ಮೂವರೂ ತೋಲನ ತಪ್ಪದಂತೆ ಕುಣಿಸುತ್ತ ಊರಿನ ಬೀದಿಬೀದಿಯಲ್ಲೂ ಓಡಿದಂತೆ ನಡೆಯುತ್ತಾರೆ. ಅವರುಗಳ ಕೊರಳಲ್ಲಿ ನೀಳವಾಗಿ ಇಳಿಬಿದ್ದಿರುವ ಕೆಂಪು, ಅರಿಶಿನ ಚೆಂಡು ಹೂ ಅವರ ಓಡುನಡಿಗೆಗೆ ತಕ್ಕಂತೆ ಲಯಬದ್ಧವಾಗಿ ಎಗರಿ ಎಗರಿ ಬೀಳುತ್ತಿರುತ್ತದೆ.

ಬೀದಿಯ ಎಲ್ಲಾ ಮನೆಗಳ ಮುಂದೂ `ಹಸಿ ಕರಗ~ ಬರುತ್ತದೆ. ಸಲೂಪ ಹೊತ್ತು ನಿಂತು ಕುಣಿಯುತ್ತದೆ. ಮನೆಯ ಗೃಹಲಕ್ಷ್ಮಿಯೊ ಅಥವಾ ಗೃಹಲಕ್ಷಿ ಆಗಲಿರುವವಳೊ ಕಾದಿದ್ದು, ಕರಗ ಆಡಿಸುವ `ಪುಣ್ಯ ಪುರುಷ~ರ ಕಾಲುಗಳಿಗೆ ನೀರು ಚಿಮುಕಿಸಿ, ಕುಂಕುಮ ಹಚ್ಚಿ, ಕ್ಷಣಾರ್ಧದಲ್ಲಿ ಕಡ್ಡಿ ಅಂಟಿಸಿ, ಕರ್ಪೂರ ಬೆಳಗಿ ಕೈಮುಗಿಯುತ್ತಾಳೆ. ಕರಗದೇವತೆ ಮುಂದುವರಿಯುತ್ತದೆ; ಮುಂದಿನ ಮನೆಗೆ, ಪಾದಪೂಜೆಗೆ, ಕರ್ಪೂರದ ಬೆಳಗಿಗೆ...
ಕರಗ ಹೆಚ್ಚು ಹೊತ್ತು ಕುಣಿಯದೆ ಯಾರಾದರೂ ಮನೆಯ ಮುಂದಿನಿಂದ `ಪಾಸು~ ಆಗಿಬಿಟ್ಟರೆ ಆ ಮನೆಯಲ್ಲಿ ಏನೋ ಅಂಟು-ಮುಂಟು ಸಂಭವಿಸಿರಬೇಕೆಂದು ಜನ ತಿಳಿಯುತ್ತಿದ್ದರು. ಗೌಡರ ಮನೆಗಳು, ರೆಡ್ಡಿಗಳ ಮನೆಗಳ ಮುಂದೆ ಸಾಮಾನ್ಯವಾಗಿ ಕರಗ ಹೆಚ್ಚು ಹೊತ್ತು ಕುಣಿಯುತ್ತಿತ್ತು. ಊರಿನ ಕಲಿತ ಹೈಕಳು- `ನೋಡ್ರೋ, ಚಂದಾ ಹೆಚ್ಚು ಕೊಟ್ಟೋರ ಮನೆ ಮುಂದೆ ಕರಗ ಹೆಂಗೆ ಕುಣಿಯುತ್ತೇ~ ಎಂದರೆ, ಹಿರಿ ತಲೆಗಳು ಅವರತ್ತ ಕತ್ತು ಹಾಕಿ `ಸಾಕು ನಿಲ್ಲಿಸ್ರೋ, ತಲೆಹರಟೆಗಳಾ... ಕರಗ ಹೊರೋರು ಮನ್ಸ್ರು ಅಂತಾ ತಿಳ್ಕಂಡ್ರಾ... ಆ ಕರಗಮ್ಮ ತಾಯಿನೇ ಮುಂದೆ ಮುಂದೆ ಕುಣೀತಾ ಓಡ್ತಾಳೆ... ಇವರು ಸುಮ್ಮನೆ ಆ ತಾಯಿ ಹಿಂದೆ ನಡೀತಾರೆ ಆಟೆ~ ಎಂದು ಗದ್ದರಿಸುತ್ತಿದ್ದರು. ಅಲ್ಲಿಗೆ ಆ ಹೈಕಳ ಮಾತು ಅಡಗುತ್ತಿತ್ತು.

ಆಚಾರಿ ಬಾಲಪ್ಪನ ಮನೆಗುಂಟ ಹೋಗುವ ಕರಗ ನಂತರ ರಿವರ್ಸ್ ತಗಂಡು ಬೇರೆ ಬೀದಿಗೆ ಹೊರಳುತ್ತಿತ್ತು. ಮುಂದೆ ಮಾದಿಗರ ಕೇರಿ- `ಮಾಲ್ಗೇರಿ~- ಇದ್ದುದರಿಂದ ಕರಗಮ್ಮ ಈ ರೀತಿ ಮಾಡುತ್ತಿತ್ತು. ಬಾಲಪ್ಪನ ಮನೆ ಮುಂದೆ ಜಮಾಯಿಸುವ ಆ ಕೇರಿಯ ಜನ ಕರಗಕ್ಕೆ ದೂರದಿಂದಲೇ ಅಡ್ಡ ಬೀಳುತ್ತಿದ್ದರು. ಕೈ ಮುಗಿದು `ಓ~ ಎಂದು ಕೂಗಿ ಹರ್ಷ ಪಡುತ್ತಿದ್ದರು. ಹಾಗೆ ಹೊರಳಿದ ಕರಗಮ್ಮ ಮುಂದೆ ಬದಿಯ ಬೀದಿಗಳಲ್ಲೂ ಸಾದ್ಯಂತ ಸಂಚಾರ ಮಾಡಿ ಮುಂಜಾವು ಕಾಣಿಸುವ ಹೊತ್ತಿಗೆ ತನ ಸ್ವಸ್ಥಾನವನ್ನು ಸೇರಿಕೊಳ್ಳುತ್ತಿದ್ದಳು.

ಕರಗ ಆಡಿಸುವ ಆ ಮೂವರು `ಪುಣ್ಯ ಪುರುಷ~ರು ನಂತರ ತಣ್ಣೀರಿನಲ್ಲಿ ಮಿಂದು, ಲಘು ಆಹಾರ ಸ್ವೀಕರಿಸಿ ವಿಶ್ರಮಿಸುತ್ತಿದ್ದರು. ಮಾರನೇ ದಿನ `ಪೋತುಲರಾಜನ ಗಾವು~ ಇರುತ್ತಿತ್ತು. ದಪ್ಪ ಗಾತ್ರದ ಚಾಟಿಯಿಂದ ತನ್ನ ಮೈಗೆ ತಾನೇ ಬಡಿದುಕೊಂಡು ಏನೂ ಆಗದ ತನ್ನ ಸಧೃಡ ದೇಹವನ್ನು ಭಕ್ತಾದಿಗಳಿಗೆ ಪ್ರದರ್ಶಿಸುವ ಧಾರ್ಮಿಕ ವಿಧಿ ಅದು. ಈ ವಿಧಿಯ ಉದ್ದಕ್ಕೂ ಪಂಜು ಹಿಡಿದು `ಹೊಲತಿ~ಯೊಬ್ಬಳು ಆಗಾಗ ಅದಕ್ಕೆ ಎಣ್ಣೆ ಸುರಕೊಂಡು ಬೆಂಕಿಯನ್ನು ಉದ್ದೀಪಿಸುತ್ತಿದ್ದಳು.

ಆ ಸಂಜೆ ಸತ್ತ ಮೇಲೆ, ನಸುಕು ಹುಟ್ಟುವ ಮುನ್ನ `ಹೂವಿನ ಕರಗ~ ವಿಜೃಂಭಣೆಯಿಂದ ನಡೆಯುತ್ತಿತ್ತು. ಇದನ್ನು ಹಸಿಕರಗದಂತೆ ಮೂವರು ಹೊರದೆ ಒಬ್ಬ ಮಾತ್ರ ತಲೆ ಮೇಲೆ ಹೊರುತ್ತಿದ್ದ. ಮಧ್ಯರಾತ್ರಿ ಕಳೆದ ಮೇಲೆ ಆರಂಭವಾಗಿ ಊರಿನ ಎಲ್ಲಾ ಬೀದಿಗಳಲ್ಲೂ ಕುಣಿಯುತ್ತಾ ಸಂಚರಿಸುತ್ತಾ ಓಡುವ ನಡುಗೆಯಲ್ಲಿ ಕರಗ ಸಾಗುತ್ತಿದ್ದರೆ, ಅದರ ಹಿಂದೆ ಅರಿಶಿನ ಬಣ್ಣದ ಅಂಗಿ, ಅದೇ ಕಲರಿನ ತೆಳು ಪ್ಯಾಂಟು ಧರಿಸಿ, ಭುಜಕ್ಕೆ ಕೆಂಪು ಚೌಕ ಹಾಸಿಕೊಂಡು, ಕೊರಳಿಗೆ ದಪ್ಪ ಹೂಮಾಲೆ ಹಾಕಿಕೊಂಡು, ಉದ್ದನೆಯ ಚೂಪು ಅಲಗೊಂದನ್ನು ಆಕಾಶದತ್ತ ಹಿಡಿದು `ವೀರ ಕುಮಾರ~ರು ಕರಗದ ವೇಗಕ್ಕೆ ತಕ್ಕಂತೆ ತಮ್ಮ ನಡಿಗೆಯನ್ನು ಕಾಯ್ದುಕೊಳ್ಳುತ್ತಿದ್ದರು. ಆಚಾರಿ ಬಾಲಪ್ಪನ ಮನೆಗುಂಟ ಸಾಗಿ ಮಾಮೂಲಿ ರಿವರ್ಸ್ ತಗಂಡು, ಪಕ್ಕಕ್ಕೆ ಹೊರಳಿ ಬೇರೆ ಬೀದಿ ಹೊಕ್ಕು, ಓಡುನಡಿಗೆಯಲ್ಲಿ ಸಾಗಿ ಧರ್ಮರಾಯನ ದೇವಾಲಯ ಸೇರುವ ಹೊತ್ತಿಗೆ ಸೂರ್ಯ ಅಂದಿನ ತನ್ನ ಡ್ಯೂಟಿ ಆರಂಭಿಸಿ ಮೂರ‌್ನಾಲ್ಕು ಗಂಟೆಗಳಾಗಿರುತ್ತದೆ.

***
ತೋಟಿಗರ ರಾಮಕೃಷ್ಣನ `ಸಾಟು~ ಕೇಳಿದ ಕೂಡಲೆ ಮಾಲ್ಗೇರಿಯ ಸಣ್ಣವೀರಪ್ಪನಿಗೆ ಒಳಗೊಳಗೆ ಒಂದು ತೆರೆನ ಮುದ ಉಕ್ಕಿತು. ಮೀಸೆಯಲ್ಲೇ ನಕ್ಕು ಅತ್ತಕಡೆ ಇನ್ನೂ ಕಿವಿ ಅರಳಿಸಿ ಕೇಳಿದ. ಮೊದಲಿನಿಂದಲೂ ಸಣ್ಣವೀರಪ್ಪನಿಗೆ ಒಂದು ಹಂಬಲ ಇತ್ತು. ಅದು ಮನಸ್ಸಿನಲ್ಲೇ ಗೂಡು ಕಟ್ಟಿಕೊಂಡು ಉಳಿದುಬಿಟ್ಟಿತ್ತು. ಒಮ್ಮೆ ಆದರೂ ಕರಗಮ್ಮ ತಾಯಿಗೆ ಪೂಜೆ ಸಲ್ಲಿಸಿ ಕೃತಾರ್ಥನಾಗಬೇಕೆಂಬ ಅದಮ್ಯ ಬಯಕೆ ಅದು. ಆದರೆ ಪಾಪ, ಕರಗಮ್ಮ ತಾಯಿ ಅವನ ಕೇರಿಗೆ ಹೋಗುವುದಿಲ್ಲವಲ್ಲ. ಬಾಲಪ್ಪನ ಮನೆತನಕ ಬಂದು ರಿವರ್ಸ್ ತಗೋತದೆ ಎಂಬ ಖೇದ ಅವನಿಗಿತ್ತು. ಅವನ ಹೆಂಡ್ತಿ ದ್ಯಾಮವ್ವಳಿಗೂ ಈ ಆಕಾಂಕ್ಷೆ ಇಲ್ಲದಿಲ್ಲ. ಕರಗದ ಕಾಲಿಗೆ ಎಲ್ಲರಂತೆ ತಾನೂ ಪಾದಪೂಜೆ ಸಲ್ಲಿಸಿ `ಮುತ್ತೈದೆ~ ಎನ್ನಿಸಿಕೊಳ್ಳುವ ಗುಪ್ತಬಯಕೆ ಅವಳಿಗೂ ಇತ್ತು. ಇನ್ನು, ಸಣ್ಣವೀರಪ್ಪನ ಕುಲಪುತ್ರ ಚಂದ್ರೂಗೆ ಇದರಲ್ಲಿ ಆಸ್ಥೆ ಇರಲಿಲ್ಲ. ಕ್ರಮವಾಗಿ ಎರಡೆರಡು ಬಾರಿ ಎಸ್ಸೆಸೆಲ್ಸಿ, ಪಿ.ಯು.ಸಿ.ಗಳಲ್ಲಿ ಫಲ್ಟಿ ಹೊಡೆದಿದ್ದ ಇವನು ಪ್ರಗತಿಪರ ಧೋರಣೆ ಇರಿಸಿಕೊಂಡಿದ್ದವ. ಅವರ ಕೇರಿಯಲ್ಲಿ ಇಷ್ಟರ ತನಕ ಓದಿದ ಮೊದಲಿಗ ಮತ್ತು ಏಕೈಕ ವ್ಯಕ್ತಿ ಎಂಬ ಕೀರ್ತಿಗೆ ಚಂದ್ರು ಪಾತ್ರನಾಗಿದ್ದ. ಹಾಗಾಗಿ ಅವನಲ್ಲಿ ಆತ್ಮವಿಶ್ವಾಸದ ಜತೆಗೆ ಅದರ ಅತಿಯಿಂದಲೇ ಹುಟ್ಟುವ `ಅಹಂ~ ಕೂಡ ಜಮೆಯಾಗಿತ್ತು. `ಅಪ್ಪನದು ಬರೀ ಬೂಟಾಟಿಕೆ, ಈ ಯಮ್ಮನಿಗೂ ಬೇರೆ ಕೆಲಸ ಇಲ್ಲ~ ಎಂದು ಉರಿಯುತ್ತಿದ್ದ.

ಚಂದ್ರು ಉನ್ನತ ಓದು ಓದಲಿಲ್ಲ. ಅವನಪ್ಪ ಸಣ್ಣವೀರಪ್ಪ, ತಾಯಿ ದ್ಯಾವವ್ವರು ಹೊತ್ತಾರೆಯಿಂದ ಸಂಜೀತನಕ ಗೌಡರ ಜಮೀನಿನಲ್ಲಿ ದುಡಿದು ಹಣ್ಣಾಗುತ್ತಿದ್ದರು. ಸಂಜೆ ಗೌಡ ಕೊಡುವ ಕೂಲಿ ಹಣದಲ್ಲಿ ಅರ್ಧ ಶರಾಬು ಅಂಗಡಿಗೆ ಹೋದರೆ, ಉಳಿದರ್ಧದಲ್ಲಿ ಸಂಸಾರ ನೌಕೆ ತೇಲಿಸಬೇಕಾಗಿತ್ತು.

ಪ್ರಾರಂಭದಲ್ಲಿ ದ್ಯಾಮವ್ವ ಒಲ್ಲೆ ಎಂದರೂ `ರುಚಿ~ ಹತ್ತಿದ ಮೇಲೆ ಗಂಡನ ಜತೆ ಕೂತು ತಾನೂ ಕುಡಿದು ಅಂದಿನ ದಿನದ ಕತ್ತೆ ದುಡಿತಕ್ಕೆ ಶಾಂತಿ ತಂದುಕೊಳ್ಳುತ್ತಿದ್ದಳು. ಮಾರನೇ ದಿನ ಸೂರ್ಯ ಕಣ್ಣು ಬಿಡುವ ಹೊತ್ತಿಗೆಲ್ಲಾ ಇವರು ಮಾಮೂಲಿ ಕತ್ತೆಚಾಕರಿಗೆ ರೆಡಿಯಾಗಿರಬೇಕಿತ್ತು. ರಾತ್ರಿಯಲ್ಲಿ ಸಿಕ್ಕುವ ಈ `ಅಮೃತ~ದಿಂದಷ್ಟೇ ಈ ದಂಪತಿ ಆನಂದವನ್ನು ಕಂಡುಕೊಂಡಿದ್ದರು.

***
ದಾಯಾದಿ ಕಲಹಕ್ಕೆ ಸಿಕ್ಕಿ ಕೋರ್ಟು ಸೇರಿದ್ದ ಜಮೀನು ಕೇಸೊಂದರಲ್ಲಿ ತಿಮ್ಮೇಗೌಡನಿಗೆ ಜಯ ಲಭಿಸಿತು. ಗಟ್ಟಿಕುಳವಾಗಿದ್ದ ಗೌಡನಿಗೆ ಯಾವ ಎವಿಡೆನ್ಸ್ ಬೇಕಿದ್ದರೂ ದುಡ್ಡು ಚೆಲ್ಲಿ ಕೊಳ್ಳುವ ತಾಕತ್ತಿತ್ತು. ಗೆದ್ದ ಪ್ರಯುಕ್ತ ಮನೆಯಲ್ಲಿ ಹಬ್ಬ ಮಾಡಿಸಿದ. ಚಿಕ್ಕಂದಿನಿಂದಲೂ ತನ್ನ ಮನೆ - ತೋಟದಲ್ಲಿ ಗೇಯುತ್ತಿರುವ ಸಣ್ಣವೀರಪ್ಪನನ್ನು ಕರೆದು- `ಲೇ ಇವನೇ ತಗಾ~ ಎಂದು ಸಾವಿರ ರೂಪಾಯಿಗಳ ಚಿಕ್ಕ ಕಂತೆಯೊಂದನ್ನು ಕೊಟ್ಟ. ಅಷ್ಟು ದುಡ್ಡನ್ನು ನೋಡಿ ದಿಗಿಲುಬಿದ್ದ ಇವನು ಹಿಂದೆ ಸರಿದ. ಗೌಡ ಪಿನ್‌ಟು ಪಿನ್ ವಿವರಿಸಿದ ಮೇಲೆ ಹಣವನ್ನು ಇಸಿದುಕೊಂಡು ತನ್ನೆರಡು ಕಣ್ಣಿಗೂ ಸೋಕಿಸಿ ಜೇಬಿಗಿಳಿಸಿದ.

ತನ್ನ ಹೆಂಡ್ತಿಗೆ ಖುಷಿಯಿಂದ ಎಲ್ಲವನ್ನೂ ಅರುಹಿದ. ಅದಕ್ಕವಳು `ದ್ಯಾವ್ರ ಮಹಿಮೆ~ ಎಂದಳು. ಅಷ್ಟಕ್ಕೇ ನಿಲ್ಲದೆ `ಈ ಸಾರಿ ಊರ ಹಬ್ಬಕ್ಕೆ ಎಮ್ಮೆ ಕಡೀತಿವಿ ಎಂದು ಕೋರಿಕೆ ಕಟ್ಟಳಾ~ ಎಂದು ಗಂಡನನ್ನು ಕೇಳಿದಳು. ಕೆಂಡ ತುಳಿದವನ ಹಾಗೆ ಸಿರ‌್ರನೆ ರೇಗಿ ಅವಳ ಮೇಲೆ ಇವನು ಮುರ‌್ಕಂಡು ಬಿದ್ದ.

`ಮಂದಿ ನಮ್ಮನ್ನ ಯಾಕೆ ದೂರ ಇಟ್ಟಾರೆ ಹೇಳು? ಕರಗಮ್ಮ ಕೂಡ ನಮ್ ಕೇರಿತಾಕ ಬರಾಕಿಲ್ಲ ಅಂತಾಳೆ, ಯಾಕೇಳು?~. ದ್ಯಾಮವ್ವ ಸುಮ್ಮನೆ ಅವನ ಉತ್ತರಕ್ಕೆ ಕಾದಳು. `ದನಾ ತಿಂತೀವಿ, ಎಮ್ಮೀ ಕಡೀತಿವಿ ಅಂತ! ಅದೆಲ್ಲಾ ಏನೂ ಬೇಡ, ನಂದು ಬ್ಯಾರೆನೆ ಲೆಕ್ಕಾ ಐತೆ ಬಿಡು~ ಎಂದ. ದ್ಯಾಮವ್ವ ಆ ಅರೆಗತ್ತಲಲ್ಲೂ ಕಣ್ಣು ಅರಳಿಸಿದ್ದು ಅವನಿಗೆ ಕಾಣಿಸಿತು. ಅವನು ತನ್ನ ಖಾಕಿ ನಿಕ್ಕರಿನಿಂದ ಎರಡು `ಬೇಬಿ~ಗಳನ್ನು ಹೊರತೆಗೆದು ಚಾಪೆ ಮೇಲೆ ಇಟ್ಟ.
ಅವಳು ಅರ್ಥವಾದವಳಂತೆ ಒಳಗೋಗಿ ಎರಡು ಸ್ಟೀಲು ಗಿಲಾಸು ತಂದಳು. ಅರ್ಧ ಚೊಂಬು ನೀರು ತರುವುದನ್ನು ಮರೆಯಲಿಲ್ಲ. `ಬೇಬಿ~ಯ ಮೂಲೆಗೆ ಕಚ್ಚಿ, ರಂಧ್ರಮಾಡಿ ಲೋಟಕ್ಕೆ ಸುರಿದ. ಅವಳು ಅಳತೆ ಬಲ್ಲವಳಂತೆ ಸರಿಯಾಗಿ ಎಷ್ಟು ಬೇಕೋ ಅಷ್ಟು ನೀರು ಮಿಶ್ರ ಮಾಡಿದಳು. ಇಬ್ಬರೂ ಕುಡಿದರು. ಕಹಿಗೆ ಅವಳು ಮೊಕ ಸೊಟ್ಟಗೆ ಮಾಡಿದಳು.

ಅವಳ ಮೂತಿ ನೋಡಿ ಇವನು ನಕ್ಕು ಮಾತಾಡಿದ: `ಈ ಸಾರಿ ಕರಗಕ್ಕೆ ಊರಿನವರೆಲ್ಲಾ ತಮ್ಮ ತಮ್ಮ ಮನೆಗಳ ಮೇಲೆಲ್ಲಾ ಕಲರ್ ಕಲರ್ ಲೈಟು ಬಿಟ್ಕೋತಾರಲ್ಲ ಹಂಗೇಯಾ ನಾವು ಬಿಡುವಾ ಅಂತಾ!~. ಈ ಮಾತು ಕೇಳಿ ಅವಳಿಗೆ ಆಗಷ್ಟೇ ಒಳಗಿಳಿದಿದ್ದ ಪರಮಾತ್ಮ ಹೊರಬಂದಂತೆ ಮುಖ ಕಿವುಚಿದಳು. ಅವನು ಮಾತು ಮುಗಿಯಿತೆಂಬಂತೆ ಎದ್ದು ನಿಂತು, `ತಟ್ಟೆ ಹಾಕು~ ಎಂದೇಳಿ ಹಿತ್ತಲ ಕಡೆಗೆ ಹೋದ; ಒಂದಾ ಮಾಡುವುದಕ್ಕೇ!

***
ಐದುನೂರು ರೂಪಾಯಿ ವ್ಯಯ ಮಾಡಿ ತನ್ನ ಗುಡಿಸಲಿನಂತಹ ಮನೆಗೆಲ್ಲಾ, ಆ ಬೀದಿಗುಂಟ ಝಗಮಗಿಸುವ ನಮೂನೆಯ ವಿದ್ಯುತ್ ದೀಪಗಳನ್ನು ಸಣ್ಣವೀರಪ್ಪ ಹಾಕಿಸಿದ. ಊರು ಈಗ ನಿಧಾನವಾಗಿ ಬೆಳೆಯತೊಡಗಿತ್ತು. ಹೊಸ ಮನೆಗಳೂ ನಿರ್ಮಾಣ ಆಗಿದ್ದವು. ಆಚಾರಿ ಬಾಲಪ್ಪನ ಮನೆ ಈಗ ಮಾಲ್ಗೇರಿಗೆ `ಗಡಿ~ ಆಗಿರಲಿಲ್ಲ. ಇನ್ನೂ ಮುಂದಕ್ಕೆ ಮನೆಗಳು ನಿರ್ಮಾಣ ಆಗಿದ್ದವು. ಗುಡಿ ಮುಂದಕ್ಕೆ ವಿಸ್ತರಿಸಿತ್ತು.

ವಿಧಿಗಳನ್ನೆಲ್ಲಾ ಪುರೈಸಿಕೊಂಡು ನಡುರಾತ್ರಿ ಹೊರಟ ಕರಗ ಬೀದಿ ಬೀದಿಗಳಲ್ಲಿ ಕುಣಿಯುತ್ತಾ ಬರುತ್ತಿತ್ತು. ಎಂದಿನಂತೆ ರೆಡ್ಡಿ, ಗೌಡರ ಮನೆಗಳ ಮುಂದೆ ಹೆಚ್ಚು ಸಮಯ ಕುಣಿದು ಉಳಿಕೆ ಮನೆಗಳ ಮುಂದೆ ಶಾಸ್ತ್ರಕ್ಕೆ ನಿಂತಂತೆ ಮಾಡಿ ಮುಂದೆ ಓಡಿಬಿಡುತ್ತಿತ್ತು. ಕರಗದ ಹಿಂದೆ ಉದ್ದನೆಯ ಚೂಪು ಅಲುಗು ಹಿಡಿದು ವೀರಕುಮಾರರು ಬರುತ್ತಿದ್ದರು.

ಆಚಾರಿ ಬಾಲಪ್ಪನ ಮನೆಯ ಮುತ್ತೈದೆಯಿಂದ ಪಾದ ಪೂಜೆ ಮಾಡಿಸಿಕೊಂಡ ಮೇಲೆ ಕರಗಮ್ಮ ಮಿಸುಕಾಡಿದಳು. ಯಾರೋ ಕರಗಮ್ಮನ ಕಿವಿಯಲ್ಲಿ ಉಸುರಿದರು: `ಇನ್ನೂ ನಮ್ಮವರ ಮನೆಗಳಿವೆ, ಮುಂದೆ~.

ವಿದ್ಯುತ್ ದೀಪ ಅಲಂಕಾರಗಳಿಂದ ಮುಚ್ಚಿ ಹೋಗಿದ್ದ ಸಣ್ಣವೀರಪ್ಪನ ಮನೆ ಮುಂದೆ ಕರಗಮ್ಮ ಬಂದು ನಿಂತುಬಿಟ್ಟಳು. ವಿದ್ಯುತ್ ಪ್ರಭೆಯಿಂದ ಕನ್‌ಪ್ಯೂಸ್ ಆದ ಕರಗಮ್ಮ ಗಡಿ ದಾಟಿ ಮಾಲ್ಗೇರಿ ಒಳಕ್ಕೆ ಬಂದುಬಿಟ್ಟಿದ್ದಳು. ತನ್ನ ಜೀವದ ಆಸೆ ಹೀಗೆ, ಅಚಾನಕ್ಕಾಗಿ `ಅಕಾಲ~ ಮಳೆಯಂತೆ ಕೂಡಿ ಬರುತ್ತದೆ ಎಂದು ಸಣ್ಣವೀರಪ್ಪನಾದರೂ ಹೇಗೆ ಎಣಿಸಿಯಾನು?

ಕನಸೊಂದು ನಿರೀಕ್ಷಿಸದ ರೀತಿ ನನಸಾಗಿ ಕಣ್ಣಮುಂದೆ ನಿಂತಿರುವಾಗ ಸಣ್ಣವೀರಪ್ಪ ಕ್ಷಣ ಗೊಂದಲಕ್ಕೆ ಬಿದ್ದ. ಕೈ ಮುಗಿದು ನಿಂತ. ಅವನ ಹೆಂಗಸು ಕರಗಮ್ಮ ಕಾಲಿಗೆ ನೀರು ಚಿಮುಕಿಸಿ, ಕುಂಕುಮ ಹಚ್ಚಿ, ಕಡ್ಡಿ ಅಂಟಿಸಿ, ಕರ್ಪೂರದ ಬೆಳಗು ಕಾಣಿಸಿದಳು. ಇವೆಲ್ಲಾ ಸೆಕೆಂಡುಗಳಲ್ಲಿ ಜರುಗಿಹೋಯಿತು. ಕರಗಮ್ಮನ `ಗಡಿ ಲಂಘನ~ವನ್ನು ನಿರೀಕ್ಷಿಸದ ಜನರಲ್ಲಿ ಸಣ್ಣ ಗೌಜು ಉಂಟಾಯಿತು. `ಕರಗಕ್ಕೆ ಮೈಲಿಗೆಯಾಯಿತು~ ಎಂದು ಯಾರೋ ಕಿಡಿ ಹಬ್ಬಿಸಿದರು. ಕುಲಸ್ಥರೆಲ್ಲ ದಡಬಡಿಸಿ ಓಡಿ ಬಂದರು. ಸಣ್ಣವೀರಪ್ಪನಿಗೆ ಇದು ಜರುಗಿದ್ದು `ಆಕಸ್ಮಿಕ~ ಎಂದು ತಿಳಿದು ಭಯಗೊಂಡ. ಅವನ ಹೆಂಗಸು `ಗೂಡು~ ಸೇರಿಕೊಂಡಳು.

ಮಧ್ಯರಾತ್ರಿಯಿಂದ ಕುಣಿದು ಕುಣಿದು ಸುಸ್ತಾದ ಕರಗ ಹೊತ್ತವನಿಗೆ ಇದು ಸ್ವಲ್ಪ ಸುಧಾರಿಸಿಕೊಳ್ಳುವ ಸಮಯ ಎನ್ನಿಸಿ ಕುಣಿಯದೆ ಹಾಗೇ ನಿಂತ. `ಆದದ್ದು ಆಯ್ತು, ಬೆಳಿಗ್ಗೆ ವಿಚಾರಿಸುವ, ಈಗ ತಾಯಿಗೆ ದಾರಿ ಬಿಡಿ~ ಎಂದು ಯಾರೊ ಸಮಜಾಯಿಷಿ ಕೊಟ್ಟರು. ಕರಗ ಹೊತ್ತವನಿಗೆ ಮತ್ತೆ ಕುಣಿಯುವಂತೆ ಹೇಳಲಾಯಿತು. ಅವನ ಕಾಲುಗಳು ಸೋಲಲಿಕ್ಕೇ ಶುರುವಾಗಿತ್ತು. ಅವನಿಗೆ ಸುಸ್ತು ಎಷ್ಟು ಆವರಿಸಿತ್ತೇಂದರೆ ಅವನಿಗೆ ಬವಳಿ ಬರುವುದು ಬಾಕಿಯಿತ್ತಷ್ಟೇ.

ಸಣ್ಣವೀರಪ್ಪನ ಮನೆಯಿಂದ ರಿವರ್ಸ್ ತಗಂಡು ಬೇರೆ ಬೀದಿಗೆ ಕರಗಮ್ಮ ಹೊರಳಿದಳು. ಒಂದು `ರಾಜ ಕಾಲುವೆ~ ಅಡ್ಡ ಬಂತು. ಅಲ್ಲಿನ ಸೇತುವೆ ಮುರಿದು ಬಿದ್ದಿದ್ದು ಎಲ್ಲರೂ ಕಾಲುವೆಯಲ್ಲಿ ಇಳಿದು ಮೇಲೆ ಏರುತ್ತಿದ್ದರು. `ಅಮ್ಮ~ನೂ ಕೂಡ ಇಳಿದು, ಏರಲಾರದೆ ದೊಪ್ಪನೆ ಕುಸಿದಳು. ವೀರಕುಮಾರರು ಸುತ್ತುವರಿದರು. ಈ ರೀತಿ ಕರಗ ಬಿದ್ದರೆ ಅಪಶಕುನವಂತೆ. ಆಗ ವೀರಕುಮಾರರು ಕರಗ ಹೊತ್ತವನ ತಲೆ ಕತ್ತರಿಸಬೇಕು ಎಂದು ಪುರಾಣ ಪ್ರಸಿದ್ಧ, ಪ್ರತೀತಿ ಇದೆ. ಹಾಗಾಗಿ ವೀರಕುಮಾರರು ಚೂಪು ಅಲಗುಗಳನ್ನು ಝಲಪಿಸಿದರು. ಸುದ್ದಿ ಕಿವಿಗೆ ಬಿದ್ದ್ದ್ದದೇ ಕುಲಸ್ಥರು ಹಾಜರಾಗಿ ಕುಮಾರರಿಗೆ ಹೇಳಿದರು- `ಅದು ಸಹಜವಾಗಿ ಬಿದ್ದಿದ್ದರೆ ಅವನ ತಲೆ ಕತ್ತರಿಸಬಹುದಿತ್ತು, ಆದರೆ ಸಣ್ಣವೀರಪ್ಪನ ಮನೆಯಿಂದ ಪೂಜೆ ಸ್ವೀಕಾರ ಆದುದರಿಂದಲೇ ಮೈಲಿಗೆಯಾಗಿ ಕರಗಮ್ಮ ಮುನಿಸಿಕೊಂಡು ಕೆಳಕ್ಕೆ ಬಿದ್ದಿದ್ದಾಳೆ. ಹಾಗಾಗಿ ಇವನ ತಲೆ ತೆಗೆಯುವುದು ಧರ್ಮವಲ್ಲ~ ಎಂದು ಅಪದ್ಧರ್ಮ ಹೇಳಿ ಅವನ ಪ್ರಾಣ ಉಳಿಸಿದರು. ಅದಾಗಿಯೂ ಒಂದಿಬ್ಬರು ವೀರಕುಮಾರರ ಮೈಮೇಲೆ ತಾಯಿ ಆವಾಹನೆಯಾಗಿ ಕುಣಿಯತೊಡಗಿದರು. ಕೂಡಲೇ ಕುಂಕುಮ ಹಚ್ಚಲಾಯಿತು. ದೇವಿ ಶಾಂತಳಾದಳು. ಕರಗ ಹೊತ್ತವನಿಗೆ ಯಾರೋ ನೀರು ಕುಡಿಸಿ, ಎದೆ ನೀವಿದರು. ಅವನ ಹೋದ ಜೀವ ಮತ್ತೆ ಕೂಡಿಕೊಂಡಿತು.

***
ತೋಟಿಗರ ರಾಮಕೃಷ್ಣನಿಂದ `ಸಾಟು~ ಹೊಡೆಸಲಾಯಿತು. ಊರಿನ ಜನರೆಲ್ಲಾ ಧರ್ಮರಾಯನ ದೇವಾಲಯದ ಅಂಗಳದಲ್ಲಿ ಸೇರಿದರು. ಒಂದು ಮೂಲೆಗೆ ಸಣ್ಣವೀರಪ್ಪ, ಅವನ ಹೆಂಗಸು ದ್ಯಾಮವ್ವ ಕೂಡ ಇದ್ದಳು. ಮಗ ಚಂದ್ರು ಕಳೆದವಾರದಿಂದ ಊರಿನಲ್ಲಿರಲಿಲ್ಲ. ಈಗ ಅವನು ತಾಲ್ಲೂಕಿನ ತನ್ನ ಜನಾಂಗದ ಹಾಸ್ಟೆಲ್ ಹುಡುಗರಿಗೆ ಸರಿಯಾದ ಮೂಲಭೂತ ಸೌಕರ್ಯ ಸಿಗಲಿಲ್ಲ ಎಂದು, ಸಿಗಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ವಿದ್ಯಾರ್ಥಿಗಳ ಜತೆ ಧರಣಿಗೆ ಕೂರುತ್ತಿದ್ದ. ಅಧಿಕಾರಿಗಳ ಕಾರಿಗೆ ಘೇರಾವ್ ಹಾಕಿ ಗಟ್ಟಿ ಧ್ವನಿಯಲ್ಲಿ ತನ್ನವರ ಅಹವಾಲು ಹೇಳುತ್ತಿದ್ದ. ಹಾಗಾಗಿ ಊರ ಘಟನೆಗಳು ಅವನಿಗೆ ತಿಳಿಯುತ್ತಿರಲಿಲ್ಲ ಅಥವಾ ಅವನಿಗವು ಮುಖ್ಯವಲ್ಲ ಎನ್ನಿಸಿರಬೇಕು.

ಕುಲಸ್ಥರು, ನ್ಯಾಯನಿರ್ಣಯಕರು ಎಲ್ಲಾ ಸೇರಿದ ಮೇಲೆ ಮಾತುಕತೆ ಆರಂಭವಾಯಿತು. ಕರಗದ ಐತಿಹಾಸಿಕತೆ, ಪುರಾಣ ಕತೆಗಳು ಮಧ್ಯೆ ಮಧ್ಯೆ ಬಂದು ಹೋದವು.

ಕರಗದ ಶಕ್ತಿ ಅರಿಯದ ಇಂಗ್ಲೀಷು ದೊರೆ ವ್ಯಂಗ್ಯವಾಡಿದ್ದುರಿಂದ ಅವನಿಗೆ ಬಂದ ದುರ್ಗತಿ ಬಗ್ಗೆ ಹೇಳಿದಾಗ ಸಣ್ಣವೀರಪ್ಪನಿಗೆ ದಿಗಿಲಾಯಿತು. ಅವನು ಎಳವೆಯಿಂದ ಕಂಡ ಹಾಗೆ ಕರಗ ಎಂದೂ ಕೆಳಕ್ಕೆ ಬಿದ್ದಿದ್ದನ್ನು ಕಂಡದ್ದಾಗಲೀ, ಕೇಳಿದ್ದಾಗಲೀ ಇರಲಿಲ್ಲ. ತನ್ನ ಮನೆಯವಳು ಪೂಜೆ ಮಾಡಿ ಸ್ಪರ್ಶ ಮಾಡಿದ್ದರಿಂದಲೇ ಕರಗ ಕಾಲುವೆಯಲ್ಲಿ ಉರುಳಿದ್ದು ಎಂದು ಅವನಿಗೂ ಅನ್ನಿಸತೊಡಗಿತು. ದ್ಯಾಮವ್ವ ಅಂತೂ ಇದು ಸೂರ್ಯನಷ್ಟೇ ಸತ್ಯ ಎಂದು ನಂಬಿ ಕೂತಿದ್ದಳು.

ಕೊನೆಗೆ ತೀರ್ಮಾನ ಹೊರಬಿತ್ತು: `ಎಂದೂ ಕೆಳಕ್ಕೆ ಬೀಳದ ಕರಗವನ್ನು ಸ್ಪರ್ಶ ಮಾಡಿ ಅದನ್ನು ಕೆಳಕ್ಕೆ ಬೀಳುವ ಹಾಗೆ ಮಾಡಿದ ಸಣ್ಣವೀರಪ್ಪನ ತಲೆ ಕಡಿದರೂ ಅಧರ್ಮ ಆಗೋಲ್ಲ, ಆದರೂ ಬಡವ ಅರಿಯದೆ ಮಾಡಿದ ತೆಪ್ಪು ಆದುದರಿಂದ ಮೂರುಸಾವಿರದ ಒಂದು ರೂಪಾಯಿ ತಪ್ಪು ಕಾಣಿಕೆ ಕೊಡಬೇಕು~. ಸಣ್ಣವೀರಪ್ಪನಿಗೆ ಎದೆಯಲ್ಲಿ ಕಂಪನ ಹುಟ್ಟಿತು. ಕಣ್ಣು ತುಂಬಿ ಬಂತು. `ಅಷ್ಟು ಹಣ ಅವ ತಾನೆ ಎಲ್ಲಿಂದ ತಂದಾನು? ಪಾಪ~ ಎಂದು ಕರುಣೆ ತೋರಿದವರು ಮೆಲ್ಲನೆ ಅಲ್ಲಿಂದ ಜಾರಿಕೊಂಡರು. ಸಣ್ಣವೀರಪ್ಪನಿಗೆ ಏಳು ದಿನ ಗಡುವು ನೀಡಲಾಯಿತು.

ಮನೆಗೆ ಬಂದವನು ಸುಮ್ಮನೆ ಮೂಲೆಗೆ ಒತ್ತಿ ಕೂತ.

`ಗೌಡ್ರು ಕೊಟ್ಟ ದುಡ್ಡು ಎಷ್ಟು ಐತೇ?~ ಅವನ ಹೆಂಗಸು ಕೇಳಿತು. ಅದಾಗಲೇ ಐನೂರಕ್ಕೂ ಹೆಚ್ಚು ವ್ಯಯಮಾಡಿ ವಿದ್ಯುತ್ ದೀಪಾಲಂಕಾರ ಮಾಡಿದ್ದರು. ಹಬ್ಬದೂಟ, ಅದೂ ಇದೂ ಅಂತ ಕೆಲವು ನೂರುಗಳನ್ನು ಹೆಚ್ಚುವರಿಯಾಗಿ ವ್ಯಯಿಸಿದ್ದರು.

ಇನ್ನೆಷ್ಟು ಉಳಿದೀತು?
ಮೂಲೆಗೆ ಒತ್ತಿ ಇಟ್ಟಿದ್ದ ಹಳೇ ಪೆಠಾರಿಯ ಮೆಲೆ ಎತ್ತರಕ್ಕೆ ಸೇರಿಸಿದ್ದ ಹಳೇ ಬಟ್ಟೆ, ಹಾಸಿಗೆಗಳನ್ನೆಲ್ಲಾ ಪಕ್ಕಕ್ಕೆ ಎಸೆದು ತೆಗೆದು ನೋಡಿದ. ಎಲ್ಲಿದೆ ಹಣ? ಅವನ ಕುಲಪುತ್ರ ಚಂದ್ರು ಅದ್ಯಾವ ಮಾಯದಲ್ಲಿ ಹಾರಿಸಿಕೊಂಡು ಹೋಗಿದ್ದನೋ ಏನೋ ಇವನಿಗೆ ತಾನೆ ಹೇಗೆ ಗೊತ್ತಾಗಬೇಕು? `ಹಣ ಮುಗಿಯುವ ತನಕ ಚಂದ್ರು ಮನೆಗೆ ಬರಲಾರನು~ ಎಂದು ತಾನೆ ಹೇಗೆ ಗೊತ್ತಾಗಬೇಕು? ಆ ದುಃಖದ ಜತೆ ಇದೂ ಬೆರೆತು ಸಣ್ಣವೀರಪ್ಪನಿಗೆ ಒಮ್ಮೆಲೆ ರೋಷ ಭುಗಿಲ್ಲನೆ ಸಿಡಿಯಿತು. ಆ ಕ್ಷಣದಲ್ಲಿ ಚಂದ್ರು ಸಿಕ್ಕಿದರೆ ಅವನ ಚಮಡಾ ಸುಲಿಯುತ್ತಿದ್ದನೊ ಏನೋ!

***
ಕೇಳಿದ ತಕ್ಷಣ ರೂಪಾಯಿಗಳನ್ನು ರಪ ರಪ ಎಣಿಸಿ ಕೊಟ್ಟು ಬಿಟ್ಟರೆ ತನ್ನ ಗತ್ತು ಎಲ್ಲಿ ಕೆಳಕ್ಕೆ ಬೀಳುತ್ತೊ ಎಂದು ತಿಮ್ಮೇಗೌಡ ಸ್ವಲ್ಪ ಹೊತ್ತು ತಾರಾಡಿದ ಮೇಲೆ ಆಜ್ಞಾಧ್ವನಿಯಲ್ಲಿ- `ಆಯ್ತು ವೀರಪ್ಪ, ಮೂರು ಸಾವಿರ ತಾನೆ ಕೊಡೋಣ ಬಿಡು. ನೀನೂ, ನಿನ್ಹೇಂಡ್ರು, ಸಾನೆ ವರ್ಷದಿಂದ ನಮ್ಮಲ್ಲಿ ದುಡಿತಿದೀರಿ, ಈಟು ಮಾತ್ರ ನಾನು ಮಾಡಕಿಲ್ಲವಾ... ಆದ್ರೆ ನೋಡುಪಾ, ಪ್ರತೀ ಸಂಜೀ ನಿಂಗೆ ಕೂಲಿ ಗೀಲಿ ಕೊಡಾಕಿಲ್ಲ. ನಿನ್ನ ಸಾಲಕ್ಕೆ ವಜಾ ಮಾಡ್ಕೋತಿನಿ... ಆಗ್‌ಬೋದಾ?~

ಸಣ್ಣವೀರಪ್ಪ ಕಿವಿ ತುರಿಸುತ್ತ ಒಂದು ನಮೂನೆ ನಕ್ಕ.
ಗೌಡರಿಗೆ ಅರ್ಥವಾಗಿ, ಅವರೂ ನಕ್ಕು- `ಆಯ್ತು, ಎಷ್ಟಲಾ ಒಂದು ಬೇಬಿ?~ ಎಂದರು.
`ಹನ್ನೇಲ್ಡು ರೂಪಾ ಸಾಮಿ!~
`ದಿನಾ ಎಷ್ಟು ತಗಾತೀರಾ?~

ಸಣ್ಣವೀರಪ್ಪ ಸ್ವಲ್ಪ ದೇಹ ಬಾಗಿಸಿ ಕಿವಿ ತುರಿಸುತ್ತ, `ಎಲ್ಡು~ ಎಂದ. `ಆತು ಕಣಲಾ... ದಿನಾ ಇಪ್ಪತ್ತೈದು ರೂಪಾಯಿ ಕೊಡ್ತೀನಿ. ಆದ್ರ ಅದೂ ಲೆಕ್ಕಕ್ಕೆ ಜಮೆ ಆಗ್ತದೆ ಗೊತ್ತಾತ!~
ಸಣ್ಣವೀರಪ್ಪ ದೈನ್ಯದಿಂದ ಕೈಮುಗಿದ.

ದುಡ್ಡು ದೊರಕಿ, ತಪ್ಪು ಕಾಣಿಕೆ ಸಲ್ಲಿಸಿದ್ದೂ ಆಯಿತು.
***
ರಾತ್ರಿ ಧೋ ಮಳೆ ಸುರಿಯುತ್ತಿತ್ತು. ದ್ಯಾಮವ್ವ ಅಲ್ಲಲ್ಲಿ ಸ್ಟೀಲುಗಳಾಸು, ಪಾತ್ರೆಗಳನ್ನು ಸೋರುವ ಮಳೆಗೆ ಇಟ್ಟಿದ್ದಳು. ಮಳೆ ಕಾರಣವಾಗಿ ವಿದ್ಯುತ್ ತೆಗೆಯಲಾಗಿತ್ತು. ಬಡವರಿಗೆ ಕಳೆದ ವರ್ಷವಷ್ಟೇ ಉಚಿತ ವಿದ್ಯುತ್ ಅನ್ನು ಸರ್ಕಾರ ಕೊಡಮಾಡಿತ್ತು. ಇದರ ಫಲವನ್ನು ಚಿಕ್ಕವೀರಪ್ಪನೂ ಪಡೆದಿದ್ದ. ಸೊಡರು ಮಿಣುಕು ಮಿಣುಕು ಎನ್ನುತ್ತಿತ್ತು. ಗಾಳಿ ಅದರ ಆಯಸ್ಸನ್ನು ನಿರ್ಧರಿಸಿದಂತಿತ್ತು. ಗಂಡ ಹೆಂಡ್ತಿ ಇಬ್ಬರೂ ಅರೆಗತ್ತಲಿನಲ್ಲಿ ಕೂತಿದ್ದರು. ಮೌನ ಅಲ್ಲಿ ಅಸಹ್ಯ ಎನ್ನಿಸುವಷ್ಟು ಆವರಿಸಿತ್ತು. ಇಬ್ಬರ ಮುಂದೂ ಎರಡು ಗಿಲಾಸುಗಳಿದ್ದವು. ಇನ್ನೇನು ಗ್ಲಾಸಿಗೆ ತುಟಿ ಹಚ್ಚಬೇಕು, ಯಾರೋ ಬಂದು ಹಣಿಕಿ ಹಾಕಿ ಕೂಗಿ ಹೇಳಿದರು: `ನಿಮ್ಮ ಮಗಂಗ ಪೊಲೀಸರು ಸರಿಯಾಗಿ ಕೊಟ್ಟು ಜೈಲಾಗೇ ಹಾಕ್ಯಾರಂತೆ, ಹೋಗ್ ನೋಡಿ~.

ತಾಯಿ ಕರುಳು ಕೇಳಿತು: `ಯಾಕಂತೆ?~
ಆಗಂತುಕ ದೊಡ್ಡ ದನಿಯಲ್ಲಿ ಹೇಳಿದ- `ಆಫೀಸರೊಬ್ಬರು ಕಾರಲ್ಲಿ ಹೋಗ್ತಾ ಇದ್ದರಂತೆ, ನಿಮ್ಮವನು ಹಿಂದಿನಿಂದ ತನ್ನ ಎಕ್ಕಡ ತೆಗೆದು ಎಸೆದನಂತೆ, ಪೊಲೀಸರು ಹಿಡಕೊಂಡು ಚೆನ್ನಾಗಿ ಹೊಡೆದರಂತೆ, ಜೇಲಲ್ಲಿ ಮಡಗಿದ್ದಾರಂತೆ~.

ದ್ಯಾಮವ್ವ ಗಂಡನನ್ನು ನೋಡಿದಳು. ಅವನು ನಿರ್ವಿಕಾರವಾಗಿ ನಕ್ಕು ಗ್ಲಾಸಿನಲ್ಲಿದ್ದನ್ನು ಗಟಗಟನೆ ಬರಿದು ಮಾಡಿದ. ಅವಳತ್ತ ಕಣ್ಣು ಹಾಕಿ `ಹ್ಞೂಂ!~ ಎಂದ. ಅವಳು `ಒಲ್ಲೆ~ ಎಂಬಂತೆ ಸುಮ್ಮನೆ ಉಳಿದಳು. ಸಲೂಪ ಹೊತ್ತು ಸುಮ್ಮನಿದ್ದು ಇವನು ಅದನ್ನೂ ತಾನೇ ಕುಡಿದು ಪೂರ್ತಿಗೊಳಿಸಿದ. ಎದ್ದು ನಿಂತು ಗಟ್ಟಿಧ್ವನಿಯಲ್ಲಿ `ತಟ್ಟೆ ಹಾಕು~ ಎಂದೇಳಿ ಹಿತ್ತಲಕಡೆ ನಡೆದ; ಒಂದಾ ಮಾಡುವುದಕ್ಕೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT