ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆಯ ಕಿಟಕಿಯಿಂದ ಹೊರ ಜಗತ್ತಿನ ದರ್ಶನ

Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

*ನೀವು ಮರಾಠಿಯಲ್ಲಿ ಹಲವು ವರ್ಷಗಳಿಂದ ಕಥೆಗಳನ್ನು ಬರೆಯುತ್ತಿದ್ದೀರಿ. ಹಾಗೆಯೆ, ಕಾದಂಬರಿ ಮತ್ತು ಲಲಿತ ಪ್ರಬಂಧಗಳನ್ನೂ ರಚಿಸುತ್ತ್ದ್ದಿದೀರಿ. ನಿಮ್ಮ ಬರವಣಿಗೆಯ ಬಗೆಗೆ ಹೇಳುತ್ತೀರಾ? ಹೇಗೆ ಆರಂಭಿಸಿದಿರಿ?

ನಾನು ಶಾಲಾ ಬಾಲಕಿಯಾಗಿದ್ದಾಗಿನಿಂದಲೇ ನನ್ನ ಬರವಣಿಗೆ ಆರಂಭವಾಯಿತು. ನನ್ನ ಹತ್ತನೇ ವಯಸ್ಸಿಗೆ ನಾನು ಕವಿತೆಗಳನ್ನು ರಚಿಸಿದೆ. ಉಳಿದವರಿಗೆ ಕಥೆ ಹೇಳುವ ಅಭಿರುಚಿಯೂ ನನಗಿತ್ತು. ಶಾಲೆ-ಕಾಲೇಜಿನ ಮ್ಯಾಗಝಿನ್‌ಗಳಿಗೂ ನಾನು ಬರೆಯುತ್ತಿದ್ದೆ. ಆ ನಂತರ ಬೇರೆ ಕಡೆಗೆ ಕಳುಹಿಸಲಾರಂಭಿಸಿದೆ.

ಮರಾಠಿ ಸಾಹಿತ್ಯಕ್ಕೆ ಹಳೆಯ ಮತ್ತು ಸುದೀರ್ಘ ಸಾಹಿತ್ಯ ಪರಂಪರೆಯಿತ್ತು. ಅರವತ್ತರ ದಶಕವನ್ನು ಮರಾಠಿಯ ನವ್ಯ ಕಥೆಯ ಕಾಲವೆಂದು ಪರಿಗಣಿಸಲಾಗುತ್ತದೆ. ನನ್ನ ಕಥೆಗಳು ಎಪ್ಪತ್ತರ ದಶಕದಲ್ಲಿ ಪ್ರತಿಷ್ಠಿತ ಪತ್ರಿಕೆಯಲ್ಲಿ ಪ್ರಕಟವಾಗಲಾರಂಭಿಸಿತು. ಆಗ ಮರಾಠಿಯಲ್ಲಿ ಸಶಕ್ತ ಕಥೆಗಳು ಪ್ರಕಟಗೊಳ್ಳುತ್ತಿದ್ದವು. ಹಲವು ಮಾಸಪತ್ರಿಕೆಗಳು ಕಥೆಗಳನ್ನು ಪ್ರಕಟಿಸುತ್ತಿದ್ದವು.

`ಸತ್ಯಕಥೆ' ಎಂಬ ಪ್ರಸಿದ್ಧ ಮಾಸಪತ್ರಿಕೆಯನ್ನು ಸಂಪಾದಕರಾದ  ಶ್ರೀ.ಪು. ಭಾಗವತ ಎಂಬವರು ಹೊರ ತರುತ್ತಿದ್ದರು. ಅಲ್ಲಿ ನಾನು ಸಾಕಷ್ಟು ಬರೆದೆ. ಉಳಿದ ಮಾಸಿಕಗಳೂ ಇದ್ದವು. ಅದೂ ಅಲ್ಲದೆ ಮರಾಠಿಯಲ್ಲಿ ದೀಪಾವಳಿ ವಿಶೇಷ ಸಂಚಿಕೆಗಳು ತುಂಬ ಜನಪ್ರಿಯ. ಓದುಗರು ತುಂಬ ಕುತೂಹಲದಿಂದ ಅದರ ಹಾದಿ ಕಾಯುತ್ತಿದ್ದರು. ಇಂಥ ಹಲವು ಪತ್ರಿಕೆಗಳಿಗೆ ನಾನು ಬರೆಯಲಾರಂಭಿಸಿದೆ. ಅನಂತರ ನನ್ನ ಕಥೆಗಳು ಕಥಾಸಂಗ್ರಹ ರೂಪದಲ್ಲಿ ಪ್ರಕಟಗೊಂಡವು. ಮುಂದೆ ನಾನು ನೀಳ್ಗತೆಯನ್ನೂ, ಕಾದಂಬರಿಯನ್ನೂ ಬರೆಯಲಾರಂಭಿಸಿದೆ.

ಕಥಾಸಾಹಿತ್ಯ ಪ್ರಕಾರವು ನನಗೆ ತುಂಬ ಇಷ್ಟ. ಮಹತ್ವದ್ದೂ ಎಂದೆನಿಸುತ್ತದೆ. ಇತ್ತೀಚೆಗೆ ಕೆಲವು ವಿಮರ್ಶಕರು ಕಥೆಗೆ ಎರಡನೇ ದರ್ಜೆ ನೀಡುತ್ತಾರೆ. ನನಗೆ ಹಾಗನಿಸುವುದಿಲ್ಲ. ಕಥೆ ಹೇಳುವ ಮತ್ತು ಕೇಳುವ ಪರಂಪರೆಯು ತುಂಬಾ ಪ್ರಾಚೀನವಾದುದು. ಏಕೆಂದರೆ, ಕಥೆ  ಮನುಷ್ಯರದ್ದಾಗಿರುತ್ತದೆ. ಅವರ ಬದುಕಿನದಾಗಿರುತ್ತದೆ. ತಾನು ಏಕೆ, ಯಾವುದಕ್ಕಾಗಿ ಅಸ್ತಿತ್ವದಲ್ಲಿದ್ದೇನೆ. ಈ ಆಯುಷ್ಯದ ಮತ್ತು ಜಗತ್ತಿನ ಅರ್ಥವೇನು ಎಂಬ ಪ್ರಶ್ನೆ ಸದಾ ಕಾಡುತ್ತಿರುತ್ತದೆ.

ಸಾಹಿತ್ಯದಲ್ಲಿ ಅದು ಅಭಿವ್ಯಕ್ತಗೊಳ್ಳುತ್ತದೆ. ಕಥೆ ಒಂದು ಕಿಟಕಿಯಿದ್ದ ಹಾಗೆ. ಅದರ ಮೂಲಕ ನಮಗೆ ಹೊರ ಜಗತ್ತಿನ ದರ್ಶನವಾಗುತ್ತದೆ. ಒಂದು ಪುಟ್ಟ ಅವಕಾಶ ಗೋಚರಿಸುತ್ತದೆ. ಕಾದಂಬರಿಯ ಕ್ಯಾನ್ವಾಸ್ ತುಂಬ ದೊಡ್ಡದು, ವಿಸ್ತೃತ. ಹೀಗಾಗಿ ಕಾದಂಬರಿಯು ವಿಶಾಲವಾದ ದರ್ಶನವನ್ನು ಮಾಡಿಸುತ್ತದೆ. ಆದರೆ ಕಥೆ ಬರೆಯುವುದು ಮತ್ತು ಅದರ ಅರ್ಥವನ್ನು ಅನಾವರಣಗೊಳಿಸುವುದು ಹೆಚ್ಚು ಸವಾಲಿನದು ಎಂಬುದು  ನನ್ನ ಅನಿಸಿಕೆ.

*ನಿಮ್ಮ ಬರವಣಿಗೆಯ ಪ್ರೇರಣೆ ಯಾವುದು? ನಿಮಗೆ ಏಕೆ ಬರೆಯಬೇಕೆಂದೆನಿಸುತ್ತದೆ? ನೀವು ಬರವಣಿಗೆಯ ಮೂಲಕ ಏನು ಹೇಳಲು ಬಯಸುತ್ತೀರಿ?
ಆರಂಭದಲ್ಲಿ ಬರೆಯಬೇಕೆಂದು ಅನಿಸಿದ್ದರಿಂದ ಬರೆಯುತ್ತಾ ಹೋದೆ. ನಮಗೆ ಬದುಕಿನಲ್ಲಿ ಹಲವು ಬಗೆಯ ಅನುಭವಗಳು ಬರುತ್ತಿರುತ್ತವೆ. ನನಗಂತೂ ಮನುಷ್ಯರ ಸಂಬಂಧಗಳ ಬಗೆಗೆ ತುಂಬ ಆಸಕ್ತಿ. ಮನುಷ್ಯರು ಪರಸ್ಪರರೊಂದಿಗೆ ಹೇಗೆ ಮತ್ತು ಏಕೆ ವರ್ತಿಸುತ್ತಾರೆ. ಯಾವ ಬಗೆಯ ಒತ್ತಡಗಳಿರುತ್ತವೆ, ಅವರ ಸುಖ-ದುಃಖಗಳು, ಬದುಕನ್ನು ನೋಡುವ ಬಗೆ, ಅವರಿಗಾದ ಬದುಕಿನ ಅರ್ಥ  - ಇದೆಲ್ಲವೂ ನನ್ನ ಬರವಣಿಗೆಯಲ್ಲಿ ಬರುತ್ತದೆ.

ನನ್ನ ಬರವಣಿಗೆಯಲ್ಲಿಯ ಪಾತ್ರಗಳು ಇದೆಲ್ಲದರ ಅರ್ಥವನ್ನು ಹುಡುಕುತ್ತಿರುತ್ತವೆ. ಆದ್ದರಿಂದ ನನ್ನ ದೃಷ್ಟಿಯಲ್ಲಿ ಬರವಣಿಗೆ ಒಂದು ಶೋಧನೆ ಎಂದೇ ನಾನು ಭಾವಿಸುತ್ತೇನೆ. ಈ ಶೋಧವನ್ನು ಸತತವಾಗಿ ನಡೆಸುವುದೇ ಒಂದು ಪ್ರೇರಣೆ.  ಮನದೊಳಗೆ ಹಲವು ಪ್ರತಿಮೆಗಳು ಮೂಡುತ್ತಿರುತ್ತವೆ. ಆ ಮನುಷ್ಯರು ನನಗೆ ಮನದೊಳಗೆ ಗೋಚರಿಸುತ್ತಾರೆ. ಆದರೆ ಅವರು ಸಂಪೂರ್ಣ ಖರೆಯಲ್ಲ. ಸುತ್ತಲಿನ ಜಗತ್ತಿನಿಂದ ಬಂದಿರುತ್ತಾರೆ.

ಅವರ ಕಥೆ ಮನದೊಳಗೆ ರೂಪ ತಾಳುತ್ತದೆ. ಮತ್ತು ಅವರು ಬರವಣಿಗೆಯಲ್ಲಿ ತಮ್ಮ ಆಯುಷ್ಯ ಬದುಕುತ್ತಿರುತ್ತಾರೆ. ಈ ಬಗೆಯ ಪ್ರಶ್ನೆಗಳನ್ನು, ನಾನು ಕೈಗೊಂಡ ಶೋಧವನ್ನು ಬರವಣಿಗೆಯಲ್ಲಿ ವ್ಯಕ್ತ ಮಾಡಬೇಕೆಂದು ನನಗೆ ಅನಿಸುತ್ತದೆ. ಅಂತಿಮವಾಗಿ ಉತ್ತರ ಸಿಕ್ಕೇ ಸಿಗುತ್ತದೆ ಎಂದೇನೂ ಅಲ್ಲ. ಹಾಗವು ಸಿಗುವುದೂ ಇಲ್ಲ. ಆದರೆ ನಮ್ಮ ಶೋಧನೆ ಮತ್ತು ಗ್ರಹಿಕೆಯ ಯಾತ್ರೆ ಮಾತ್ರ ಮುಂದುವರಿದಿರುತ್ತದೆ.

*ಮರಾಠಿಯಲ್ಲಿ ಹಲವು ಲೇಖಕಿಯರು ಬರೆಯುತ್ತಿದ್ದಾರೆ. ಅವರ ಬರವಣಿಗೆಯ ಸ್ವರೂಪ ಯಾವ ಮಾದರಿಯದು?
ಹಿಂದೆ ಮಹಿಳೆಯರು ತಮ್ಮ ಬದುಕಿಗೆ ಸಂಬಂಧಿಸಿದ ಸಾಹಿತ್ಯವನ್ನು ನಿರ್ಮಿಸುತ್ತಿದ್ದರು. ಹಾಡು ಓವ್ಹಿ, ಅಭಂಗ ಮುಂತಾದ ಸ್ವರೂಪದಲ್ಲಿ ಅವು ಇದ್ದವು. ಅವುಗಳಲ್ಲಿ ಕೆಲವು ಮೌಖಿಕ ಪರಂಪರೆಯು ಉಳಿಸಿಕೊಂಡಿತು. ಮುಂದೆ ಮಹಿಳೆ ಶಿಕ್ಷಣ ಪಡೆದು, ಬರೆಯ - ಓದಬಲ್ಲವಳಾದಳು. ಆಗ ಅವರ ಅನುಭವ ಲೋಕ ವಿಸ್ತರಿಸಿತು. ಅದರ ಆವಿಷ್ಕಾರ ಲಿಖಿತ ಸ್ವರೂಪದಲ್ಲಾಯಿತು. ಮರಾಠಿಯಲ್ಲಿ ಹಲವು ಕಥಾ ಲೇಖಕಿಯರಿದ್ದಾರೆ.

ವಿಭಾವರೀ ಶಿರೂರಕರ, ವಸುಂಧರಾ ಪಟವರ್ಧನ, ವಿಜಯಾ ರಾಜಾಧ್ಯಕ್ಷ - ಇವರಿಂದ ಈ ಪರಂಪರೆ ಆರಂಭಗೊಂಡಿತು. ಅನಂತರ ಕಮಲದೇಸಾಯಿ, ಗೌರೀ ದೇಶಪಾಂಡೆ, ಆಶಾ ಬಗೆ, ಸ್ವತಃ ನಾನು,  ಪ್ರಿಯಾ ತೆಂಡೂಲ್ಕರ್ ಮುಂತಾದ ಲೇಖಕಿಯರು ಆಧುನಿಕ ಜಗತ್ತಿನ ಸ್ತ್ರೀಯರನ್ನು ಸಾಹಿತ್ಯದಲ್ಲಿ ತಂದರು. ಆಕೆಯ ಒತ್ತಡ, ಕುಟುಂಬ ಮತ್ತು ಸಮಾಜದಿಂದಾಗುವ ಅವಳ ಒದ್ದಾಟ, ಅವಳ ಮೇಲೆ ಹೇರಲಾದ ಪಾರಂಪರಿಕ ಭೂಮಿಕೆ ಮತ್ತು ಅವಳ ಸ್ವಂತ ಅಪೇಕ್ಷೆ ಮತ್ತು ಮುಕ್ತ ಬಯಕೆ ಇವೆಲ್ಲ ಮಹಿಳೆಯರ ಬರವಣಿಗೆಯಲ್ಲಿ ಮುಕ್ತವಾಗಿ ಬರಲಾರಂಭಿಸಿತು. ಖರೆಯೆಂದರೆ, ಪುರುಷರ ಮತ್ತು ಮಹಿಳೆಯರ ಸಾಹಿತ್ಯವೆಂದು ವಿಭಾಗಿಸುವುದು ಸರಿಯಲ್ಲ. ಆದರೆ ವಿಮರ್ಶಕರು ಅನುಕೂಲಕ್ಕಾಗಿ ಹೀಗೆ ಮಾಡುತ್ತಿರುತ್ತಾರೆ.

ಹಲವು ಸಲ ಒಟ್ಟೂ ಅವಲೋಕನ ಮಾಡುವಾಗ ಮಹಿಳೆಯರ ಸಾಹಿತ್ಯವನ್ನು ಕೈ ಬಿಡಲಾಗುತ್ತದೆ. ಮಹಿಳೆಯರ ಅಸ್ತಿತ್ವವನ್ನು ಬಹಳ ಕಾಲದವರೆಗೆ ಗೌಣವಾಗಿ ಪರಿಗಣಿಸಿದ್ದನ್ನು ಎಂದೂ ಮರೆಯುವಂತಿಲ್ಲ. ಅದರ ಪರಿಣಾಮ ನಮ್ಮ ಚರಿತ್ರೆ, ಕಲಾವಿಷ್ಕಾರ ಮತ್ತು ಭಾಷೆಯ ಸ್ತರದ ಮೇಲಾಯಿತು. ಮಹಿಳೆಯರು ಯಾವ ವಿಷಯದಲ್ಲೂ ಹಿಂದೆ ಬಿದ್ದಿಲ್ಲವೆಂದು ವಿಜ್ಞಾನವೇ ಸಿದ್ದಮಾಡಿದೆ. ಸಮಾಜದಲ್ಲಿಯ ಧರ್ಮ-ಜಾತಿ-ಲಿಂಗ- ಪ್ರದೇಶ ಇವುಗಳನ್ನು ಆಧರಿಸಿದ ಯಾವ ವಿಭಜನೆಯೂ ಶಾಸ್ತ್ರ ಶುದ್ಧವಲ್ಲ. ಆದರೆ ಹಲವು ಶತಕಗಳ ಕಾಲ ಹೀಗೆ ಅನ್ಯಾಯವಾಗಿದ್ದರಿಂದ ಒಂದು ನಿರ್ದಿಷ್ಟ ದೃಷ್ಟಿಕೋನ ಸಿದ್ಧಗೊಳ್ಳುತ್ತದೆ. ನಾವದನ್ನು ಬದಲಾಯಿಸಲೇಬೇಕು.

ಅದರ ಮೂಲಕ ಮಹಿಳೆಯರ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಮಹಿಳೆಯರು ಸೀಮಿತ ಪರಿಧಿಯಲ್ಲಿ ಬರೆಯುತ್ತಾರೆ ಎಂದು ಟೀಕಿಸಲಾಗುತ್ತದೆ. ಆದರೆ ಮನುಷ್ಯರು, ಕುಟುಂಬ, ಹೆಣ್ಣಿನ ಒತ್ತಡ ಅವಳ ಮೇಲಾಗುವ ಅನ್ಯಾಯ ಮತ್ತು ಅವಳ ಹೋರಾಟ ಎರಡನೆಯ ದರ್ಜೆಯದಲ್ಲ. ಅದೂ ಮಹತ್ವದ್ದೇ. ಮರಾಠಿಯ ಹಲವು ಮಹಿಳಾ ಲೇಖಕಿಯರು ಮೌಲಿಕವಾದ ಕೊಡುಗೆಯನ್ನು ನೀಡಿದ್ದಾರೆಂದೇ ನನ್ನ ಭಾವನೆ. ಕಥೆ, ಕಾದಂಬರಿಯಷ್ಟೇ ಅಲ್ಲ, ಕವಿತೆ ಮತ್ತು ಆತ್ಮಕಥೆಯ ಬರವಣಿಗೆಯಲ್ಲೂ ಯಶಸ್ವಿಯಾಗಿದ್ದಾರೆ.

*ಮರಾಠಿ ಕಥಾ ಸಾಹಿತ್ಯದಲ್ಲಿ ಬದಲಾವಣೆಯಾಗಿದೆಯೆ?
ಯಾವುದೇ ಸಾಹಿತ್ಯ ಪ್ರವಾಹವು ಕಾಲಕ್ಕೆ ತಕ್ಕಂತೆ ಬದಲಾವಣೆಯಾಗುತ್ತಿರುತ್ತದೆ. ಆರಂಭದ ಬರಹವು ಒಂದು ಸುಶಿಕ್ಷಿತ ಮಧ್ಯಮ ವರ್ಗಕ್ಕಷ್ಟೇ ಸೀಮಿತವಾಗಿತ್ತು. ಅನಂತರ ಶಿಕ್ಷಣ ಮತ್ತು ಸಾಮಾಜಿಕ ಚಳವಳಿಯಿಂದ ಮೂಡಿದ ಅರಿವಿನಿಂದಾಗಿ ಹಲವರು ಬರೆಯತೊಡಗಿದರು. ಅದರಿಂದಾಗಿ ಮರಾಠಿಯಲ್ಲಿ ಗ್ರಾಮೀಣ, ದಲಿತ, ಆಡುಮಾತಿನ ಭಾಷೆಯಲ್ಲಿ ಸಾಹಿತ್ಯ ನಿರ್ಮಾಣಗೊಂಡಿತು. ಹಾಗೆಯೇ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಬರೆಯಲಾರಂಭಿಸಿದರು. ಹೀಗಾಗಿ ಇಂದು ಮರಾಠಿ ಸಾಹಿತ್ಯದಲ್ಲಿ ಹಲವು ಪ್ರವಾಹಗಳು ಗೋಚರಿಸುತ್ತವೆ.

ವಿಮರ್ಶಕರು ಈ ಬಗೆಯ ವಿಭಾಗವನ್ನು ಮಾಡಿದರೂ, ಕೊನೆಗೆ ಯಾವ ಬರವಣಿಗೆ ಮನುಷ್ಯನ ಆಯುಷ್ಯವನ್ನು ಚಿತ್ರಿಸುತ್ತದೆಯೋ, ಯಾವುದರಿಂದ ಓದುಗರಿಗೆ ಬದುಕಿನ ಬಗೆಗೆ ಅರಿವು ಮೂಡುತ್ತದೆಯೋ ಅದೇ ಉತ್ತಮವಾದ ಸಾಹಿತ್ಯವೆಂದು ನನ್ನ ಅನಿಸಿಕೆ. ಮರಾಠಿಯಲ್ಲಿ `ಸಾಮಾಜಿಕ ಬದ್ಧತೆಗೆ' ತುಂಬ ಮಹತ್ವವಿದೆ. ಸಮಾಜದಲ್ಲಿಯ ಉಪೇಕ್ಷಿತರ ಚಿತ್ರಣವಾಗಲಾರಂಭಿಸಿತು ಮತ್ತು ಸಾಹಿತ್ಯದಲ್ಲಿ ಆ ಪ್ರಜ್ಞೆ ವ್ಯಕ್ತವಾಗಲಾರಂಭಿಸಿದ್ದು ಸುಖದಾಯಕ ವಿಷಯ. ಆದರೆ ಯಾವುದೇ ಸಾಹಿತ್ಯವು ಒಂದು ವಿಶಿಷ್ಟ ಚೌಕಟ್ಟಿನಲ್ಲಿ ಸಿಕ್ಕಿಕೊಂಡಿರುವುದು ಸಾಧ್ಯವಿಲ್ಲ. ಕೊನೆಗೆ ಮನುಷ್ಯರು, ಅವರ ವಿಷಯ, ಭಾವನೆ, ವಿವಿಧ ಪರಿಸ್ಥಿತಿಯಲ್ಲಿ ಬದುಕುವ ರೀತಿ, ಇವೆಲ್ಲವೂ ಸಾಹಿತ್ಯದಲ್ಲಿ ಬರಬೇಕು. ಅದೂ ಅಲ್ಲದೆ ಎಲ್ಲ ಲೇಖಕರು ಒಂದೇ ಪದ್ಧತಿಯಲ್ಲಿ ಬರೆಯುವುದಿಲ್ಲ. ವಿವಿಧ ಬಗೆಯ ಚಿತ್ರಣ ಮಾಡುತ್ತಿರುತ್ತಾರೆ. ಹೀಗಾಗಿ ಎಲ್ಲರನ್ನೂ ಒಂದೇ ಮಾನದಂಡದಿಂದ ಅಳೆಯುವುದು ಸರಿಯಲ್ಲ.

* ನಿಮ್ಮ ಬರವಣಿಗೆಯ ವೈಶಿಷ್ಟ್ಯವೇನು ? ಅದು ಹೇಗೆ ಭಿನ್ನ ?
ಮನುಷ್ಯ ಸಂಬಂಧಗಳೇ ನನ್ನ ಬರಹದ ಕೇಂದ್ರ ಸೂತ್ರ. ಗಂಡು - ಹೆಣ್ಣುಗಳ ಸಂಬಂಧವೂ ಅದರಲ್ಲಿ ಬರುತ್ತದೆ. ಅದು ಹಲವು ಬಗೆಯಲ್ಲಿ ಬರುತ್ತದೆ. ನನ್ನ ಕಥೆ ಕಾದಂಬರಿಯಲ್ಲಿ ಬರುವ ಹೆಣ್ಣು ಸಶಕ್ತಿ, ನಗರ ಪ್ರಜ್ಞೆ ಉಳ್ಳವಳು. ಸಂವೇದನಾಶೀಲಳು. ಅವಳು ಪ್ರಶ್ನೆ ಕೇಳುತ್ತಾಳೆ ಸಹಜವಾಗಿ ಪರಿಸ್ಥಿತಿಯನ್ನು ಗಮನಿಸುತ್ತಾಳೆ. ಅವಳಿಗೆ ಸ್ವಂತ ವ್ಯಕ್ತಿತ್ವವನ್ನು ಒಪ್ಪಿಸುವ ಬಯಕೆಯಿದೆ. ಸ್ವತಂತ್ರವಾಗಿ ಯೋಚಿಸುವ ಇಚ್ಛೆಯಿದೆ. ಪರಂಪರೆ ಮತ್ತು ಸಮಾಜವು ನಿರ್ಧರಿಸಿದ ಭೂಮಿಕೆಯನ್ನು ಅವಳು ಕಣ್ಣು ಮುಚ್ಚಿ ಸ್ವೀಕರಿಸುವುದಿಲ್ಲ. ಅದಕ್ಕಾಗಿ ಅವಳು ಹೋರಾಡುತ್ತಾಳೆ.

ಕೊನೆಗವಳು ಒಂದು ತಿಳಿವಳಿಕೆಯ ಸನಿಹಕ್ಕೆ ಹೋಗುವ ಪ್ರಯತ್ನದಲ್ಲಿ ಅವಳಿರುತ್ತಾಳೆ. ಅವಳಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಒಪ್ಪಿಗೆಯಿಲ್ಲ. ತನ್ನ ಅಸ್ಮಿತೆಯನ್ನು ಪ್ರಖರವಾಗಿ ಉಳಿಸಿಕೊಳ್ಳುವ ಹೆಣ್ಣು ಅವಳು. ಅಂಥ ಹೆಣ್ಣಿನ ಸುಖ - ದುಃಖ, ಒತ್ತಡ ಉದ್ವಿಗ್ನತೆ, ಪರಿಸ್ಥಿತಿ ನಿರ್ಮಾಣ ಮಾಡಿದ ಅಡೆತಡೆಯನ್ನು ಅವಳು ವಿವೇಕದಿಂದ, ಬುದ್ಧಿಯಿಂದ ಹೋಗಲಾಡಿಸಿ ಹಾದಿಯನ್ನು ಹುಡುಕಲು ಬಯಸುತ್ತಾಳೆ. ಆದರೆ ಅವಳಿಗೆ ಮೂಲತಃ ಪ್ರೇಮ, ಮೈತ್ರಿ, ಸಂಬಂಧ, ಭಾವ ಭಾವನೆಯ ಬಗೆಗೆ ಮೋಹವಿದೆ. ಸ್ವಂತ ಇಚ್ಛೆಯ ಮೇರೆಗೆ ಬದುಕಬೇಕೆಂಬ ಉತ್ಕಟವಾದ ಇಚ್ಛೆ ಅವಳದು. ಈ ಕಾರಣದಿಂದಾಗಿ ನನ್ನ ಬರವಣಿಗೆ ಭಿನ್ನವಾಗಿರಬೇಕೆಂದು ನನಗೆ ಅನಿಸುತ್ತದೆ.

ಗತ ಜನ್ಮ
ಬೆಳಿಗ್ಗೆ ಅವಳು ಎದ್ದಾಗಿನಿಂದ ತಲೆ ನೋವು ಶುರುವಾಯಿತು. ಇತ್ತೀಚೆಗೆ `ಸತತ ತಲೆ ನೋಯಲು' ಶುರುವಾಗಿ ಹಲವು ದಿನಗಳಷ್ಟೇ ಅಲ್ಲ, ಹಲವು ತಿಂಗಳುಗಳೇ ಗತಿಸಿರುವುದು ಗಮನಕ್ಕೆ ಬಂದಿತ್ತು. ಆರಂಭಕ್ಕೆ ನಿರ್ಲಕ್ಷಿಸಿದೆ, ಬಳಿಕ ಕ್ರೊಸಿನ್ - ಆಸ್ಪಿರಿನ್ ತೆಗೆದು ಕೊಂಡಿದ್ದಾಯಿತು. ತಾತ್ಕಾಲಿಕ ಶಮನವೂ ಆಯಿತು. ಆದರೆ ನೋವು ಆರಂಭವಾಯಿತು. ಕಿರಿಕಿರಿಯಾಗಲಾರಂಭಿಸಿತು. ಆದರೆ ನಿತ್ಯದ ಜಂಜಾಟದಿಂದಾಗಿ ಹೆಚ್ಚು ಲಕ್ಷ್ಯ ಕೊಡುವುದೂ ಆಗಲಿಲ್ಲ. ಈಗ ಅದು ಉಗ್ರರೂಪವನ್ನು ಧಾರಣ ಮಾಡಿತ್ತು. ಈಗದು ಪ್ರತಿದಿನ ಶುರುವಾಗಿದೆ. ಗುಳಿಗೆ ತೆಗೆದುಕೊಂಡರೂ ನಿಲ್ಲುತ್ತಿಲ್ಲ ಎನ್ನುವುದು ಅವಳ ಗಮನಕ್ಕೆ ಬಂದಿತ್ತು. ಏನಾಗಿರಬಹುದು; ಉಳಿದದ್ದೆಲ್ಲ ಸವಿಯಾಗಿದೆ. ಅಂಥ ಯಾವ ತಕರಾರೂ ಇಲ್ಲ.

ಅವಳ ಮುಖ ಕಂಡು `ಮತ್ತೆ ಶುರುವಾಯಿತೇನು?' ಎಂದು ಗಂಡ ಕೇಳಿದ.
`ಹೌದು' ಅವಳು ಹೇಳಿದಳು.

`ಡಾಕ್ಟರ್‌ಗೆ ಏಕೆ ತೋರಿಸುವದಿಲ್ಲ? ಕಣ್ಣಾದರೂ ತಪಾಸಣೆ ಮಾಡಿಸಿಕೋ'
`ಮೊನ್ನೆ ಕಣ್ಣು ಪರೀಕ್ಷಿಸಿಯೇ ಕನ್ನಡಕ ತಂದಿದ್ದೇನೆ. ಇಷ್ಟು ಬೇಗ ಅದ್ಹೇಗೆ ನಂಬರ್ ಹೆಚ್ಚಾಗುತ್ತದೆ?' ಅವಳು ಬೇಸತ್ತು ಹೇಳಿದಳು.
`ಅದೇನು ಹೇಳಲು ಬರುವುದಿಲ್ಲ. ವಯಸ್ಸಾಗುತ್ತ ಬಂದ ಹಾಗೆ...' ಗಂಡ ಉತ್ತರಿಸಿದ.

ಇತ್ತೀಚೆಗೆ ಅವನು ಬೇಕೆಂದೆ ವಯಸ್ಸು ಉಲ್ಲೇಖಿಸುತ್ತಿರುವುದು ಅವಳ ಗಮನಕ್ಕೆ ಬಂದಿತ್ತು. ಈ ಹಿಂದೆ ಅವಳು ನಗುತ್ತ `ಹೌದು ವಯಸ್ಸಾಗಿದೆ. ನನ್ನ ಹಾಗೆ ನಿನ್ನದೂ' ಎಂದು ಹೇಳಿ ನೋಡಿದ್ದಳು. ಆದರೆ ಅವನದನ್ನು ಸಹಜವಾಗಿ ಸ್ವೀಕರಿಸಲಿಲ್ಲ. ಬದಲು ವಯಸ್ಸಿನ ಬಗೆಗೆ ಮುದ್ದಾಂ ಹೇಳುತ್ತಲೇ ಉಳಿದ. ಕಡಿಮೆಯಾಗುತ್ತಿರುವ ಅವಳ ಕಾಮೇಚ್ಛೆಯ ಬಗ್ಗೆ ಅವನು ಅಸಮಾಧಾನಗೊಂಡಿರುವುದು ಅವಳ ಗಮನಕ್ಕೆ ಬಂತು. ಹೆಂಗಸಿನ ವಿಷಯದಲ್ಲಿ ಇದು ಸಹಜ ಎಂದವಳಿಗನಿಸಿತು. ಮುಟ್ಟು ನಿಲ್ಲುವ ಕಾಲಕ್ಕೆ ಹೀಗಾಗುವುದು ಅವಳಿಗೆ ಗೊತ್ತಿತ್ತು. ಅವಳು ಈ ವಿಷಯವನ್ನು ಅವನಿಗೆ ತಿಳಿಸಿಯೂ ಇದ್ದಳು. ಆದರವನಿಗೆ ಒಪ್ಪಿಗೆಯಾಗಲಿಲ್ಲ ಅಥವಾ ಒಪ್ಪಲು ಮನಸ್ಸಾಗಲಿಲ್ಲ. ಇದರಿಂದ ಅವಳಿಗೆ ಅಪಮಾನವಾದಂತೆ ಎನಿಸಿತು. ಅವನು ಅರ್ಥ ಮಾಡಿಕೊಳ್ಳಲು ಏನು ತೊಂದರೆಯಿದೆ ಎಂದೂ ಅನ್ನಿಸಿತು.
ಮುಂದೆ ಬೆಳಿಗ್ಗೆ ಎಂದರೆ ಬೇಡವೆನಿಸಿತು. ಮತ್ತದೇ ರೊಟೀನು ಮತ್ತು ಕೆಲಸ, ತಲೆ ನೋವು. ಎಂದಿಗೆ ಮುಗಿಯುವುದು ಇದೆಲ್ಲ ಎಂದೂ ಅನಿಸುತ್ತಿತ್ತು. ಆದರೆ ಎಳೆಯುತ್ತಾ ಸಾಗದೇ ಅನ್ಯಮಾರ್ಗವಿಲ್ಲ. ಅಂದರೆ ಎದ್ದಾಗಿನಿಂದ ಏನೇನು ಮಾಡಬೇಕಾಗುವದೋ ಅದರಿಂದ ಬಿಡುಗಡೆ ಹೊಂದುವುದು ಹೇಗೆ'.

ಆಫೀಸಿನಲ್ಲಿ ಅವಳು ಗೆಳತಿಗೆ ಹೇಳಿದಳು... `ಈ ವಯಸ್ಸಿನಲ್ಲಿ ಹೀಗೆ ಹೀಗೆ  ಆಗೋದು ಸಾಧ್ಯವಿಲ್ಲವೇ' ಎಂದೂ ಕೇಳಿದಳು.
`ಸಾಧ್ಯವಿದೆ. ಹಾಗೆಯೇ ಗಂಡನೆಂಬ ಪುರುಷ ಪ್ರಾಣಿಗೆ ಅದು ಅರ್ಥವಾಗದೇ ಇರುವುದೂ ಸಹಜವೇ. ನೀನು ಮತ್ತೊಮ್ಮೆ ಗೈನಕಾಲಜಿಸ್ಟ್  ಬಳಿಗೆ ಹೋಗಿ ಚಿಕಿತ್ಸೆ ಮಾಡಿಸಿಕೋ' ಗೆಳತಿ ಸೂಚಿಸಿದಳು.

ಅವಳಿಗೆ ಅದು ಅಗತ್ಯವೆಂದೆನಿಸಲಿಲ್ಲ. ಆದರೆ ಮನೆಯಲ್ಲಿ ಮಗ ಮಗಳು ಎಲ್ಲರೂ ಒಂದು ಕಾರಣಕ್ಕಾಗಿ ತಕರಾರು ಮಾಡುವುದು ಕಂಡು ಬಂತು. ಅವಳ ಸ್ವಭಾವ ಕಿರಿಕಿರಿಯಾಗಿದೆ. ಕಾಯಂ ಬೇಸರ ಪಡುತ್ತಾಳೆ. ಈಗೀಗ ಸರಿಯಾಗಿ ಮಾತನಾಡುವುದೂ ಇಲ್ಲ. ಕೆರಳಿದ ಧ್ವನಿಯಲ್ಲಿ ಉತ್ತರಿಸುತ್ತಾಳೆ - ಇತ್ಯಾದಿ. ಇದಕ್ಕೆ ನಿಜವಾಗಿಯೂ ಅವಳು ಸಿಟ್ಟಿಗೆದ್ದು ಹೇಳಿದಳು - `ಸುತ್ತಲಿನದೆಲ್ಲ ಸಿಟ್ಟಿಗೇಳುವಂತಹದೇ ಇದೆಯಲ್ಲ'.

ಈ ಮಾತಿಗೆ ಎಲ್ಲರೂ ಸುಮ್ಮನಾಗಿ ಅವಳನ್ನು ನೋಡಲಾರಂಭಿಸಿದರು. ಮಗನಿಗೆ ಮನಸ್ಸಿಗೊಪ್ಪುವ ನೌಕರಿ ಸಿಗಲಿಲ್ಲ. ಇಷ್ಟೆಲ್ಲ ಕಲಿತ ಅವನು ಈವರೆಗೆ ಸರಿಯಾದ ಹಾದಿಗೆ ಹತ್ತಬೇಕಿತ್ತು ಎಂದವಳ ಹೇಳಿಕೆ. ತನಗೆ ನೌಕರಿಯೇ ಸಿಗದಿದ್ದರೆ ತಾನಾದರೂ ಏನು ಮಾಡಲಿ? ಎಂದವನ ಉತ್ತರ. ಅವನು ಸರಿಯಾಗಿ ಪ್ರಯತ್ನ ಮಾಡುವದಿಲ್ಲ ಎಂದವಳ ಅಭಿಪ್ರಾಯ. ಮನೆಯಲ್ಲಿ ಹಾಯಾಗಿ ತಿಂದು ಉಂಡು ಹೊರಳಾಡಲು ಸಿಕ್ಕಿರುವಾಗ ದುಡಿಯುವದು, ಸ್ವತಂತ್ರನಾಗಿ ಬದುಕುವದು ಅವನಿಗೇ ಬೇಕಾಗಿಲ್ಲ ಎಂದು ಅವಳಿಗನಿಸುತ್ತಿತ್ತು.

ಇದಕ್ಕೆ ಮಗ ಅವಳ ಜತೆ ಜಗಳಕ್ಕಿಳಿದ. ಮಗನ ಅನಿಸಿಕೆ ಏನೆಂದರೆ, ಅವನಲ್ಲಿ ಅಂಥ ಯೋಗ್ಯತೆಯಿದೆ. ಸರಿಯಾದ ನೌಕರಿ ಸಿಗುವ ತನಕ ಅವನು ಯಾವ ನಿರ್ಣಯವನ್ನು ತೆಗೆದುಕೊಳ್ಳುವದಿಲ್ಲ. ಅವಳ ಗಂಡನೂ ಅವನನ್ನೇ ಬೆಂಬಲಿಸುತ್ತಿದಂತಿತ್ತು. ಗಂಡ ಮಗಳ ಬಗೆಗೆ ತಕರಾರು ಮಾಡುತ್ತಿದ್ದ. ಏಕೆಂದರೆ, ಮಗಳು ಮನೆಯಲ್ಲೇ ಇರುತ್ತಿರಲಿಲ್ಲ. ಒಂದಲ್ಲ ಹಲವು ಕೆಲಸದಲ್ಲಿ ಅವಳು ತೊಡಗಿದಂತಿತ್ತು. ಏನು ಮಾಡುತ್ತಾಳೆ, ಎಲ್ಲಿಗೆ ಹೋಗುತ್ತಾಳೆ ಒಂದು ಸುಳಿವೂ ಮನೆಯವರಿಗೆ ನೀಡುತ್ತಿರಲಿಲ್ಲ.

ಅವಳಿಗೆ ಮಗಳ ಬಗೆಗೆ ಒಪ್ಪಿಗೆಯಿರಲಿಲ್ಲ ಎಂದೇನೂ ಅಲ್ಲ. ಮಗಳು ಅದನ್ನೆಲ್ಲ ತನಗೆ ತಿಳಿಸುತ್ತಿರಬೇಕೆಂದು ಅವಳಿಗನಿಸುತ್ತಿತ್ತು. ಆದರೆ ಮಗಳಿಗೆ ಅದರಲ್ಲಿ ಆಸಕ್ತಿಯಿರಲಿಲ್ಲ. ಪುರಸೊತ್ತೂ ಇರಲಿಲ್ಲ. ಮಗಳು ದಿಟ್ಟ ಸ್ವಭಾವದವಳಾಗಿದ್ದಳು. ಕೈಮೀರಿ ಹೊರಟಿದ್ದಾಳೆ ಎಂದೆನಿಸುತ್ತಿತ್ತು.

ಈ ಎಲ್ಲ ಪರಿಸ್ಥಿತಿಯಿಂದಾಗಿಯೇ ಅವಳ ತಲೆ ನೋಯುತ್ತಿದೆ ಎನ್ನುವುದು ಅವಳಿಗೆ ಗೊತ್ತಿತ್ತು. ಆದರೆ ಈ ಪರಿಸ್ಥಿತಿ ಸುಧಾರಿಸುವುದು ಹೇಗೆ? ಇಂಥದೊಂದು ನಡೆದ ಬಳಿಕ ತಲೆನೋವು ನಿಲ್ಲುತ್ತದೆ ಎಂದು ಖಚಿತವಾಗಿ ಹೇಳುವುದು ಸಾಧ್ಯವೇ?
ಆದರೂ ಆಫೀಸಿನ ಗೆಳತಿಯ ಸಲಹೆಯಂತೆ ಅವಳು ಡಾಕ್ಟರ್ ಬಳಿಗೆ ಹೋದಳು. ಅವರು ಎಂದಿನ ಪರೀಕ್ಷೆ ಮಾಡಿ, `ಅಂಥದ್ದೇನೂ ಇಲ್ಲ' ಈ ವಯಸ್ಸಿನಲ್ಲಿ ಮುಟ್ಟು ನಿಲ್ಲುವಾಗ ಬೇರೆ-ಬೇರೆ ಬದಲಾವಣೆ ಆಗುತ್ತಿರುತ್ತದೆ ಎಂದು ಹೇಳಿ, ಕ್ಯಾಲ್ಸಿಯಂ, ಬಿ-ಕಾಂಪ್ಲೆಕ್ಸ್ ವಗೈರೆ ತೆಗೆದುಕೊಳ್ಳಲು ಸಲಹೆ ನೀಡಿದರು.

ಮೊದಲಿನಂತೆ ಮತ್ತೆ ತಲೆನೋವು ಶುರುವಾಯಿತು. ಪ್ರತಿದಿನ ಎದ್ದ ಕೂಡಲೇ ತಲೆನೋವು ಶುರು. ಈಗಂತೂ ನಡುವೆಯೂ ಆರಾಮಿಲ್ಲ. ದಿನವಿಡೀ ನಿಂತು ನಿಂತು, ಆನಂತರ ಸತತ ಅದರ ಬಗೆಗಿನ ಅವಳ ತಕರಾರು ಕೇಳಿ ರೋಸಿದ ಗಂಡ ಹೇಳಿದ “ಈಗ ತಲೆಯನ್ನೇ ಪರೀಕ್ಷಿಸಿಕೋ”.

ಗೆಳತಿಯೂ ಚಿಂತೆಯಿಂದ ಹೇಳಿದಳು. “ಹೌದು, ಸ್ಪೆಶಲಿಸ್ಟ್ ಬಳಿಗೆ ಹೋಗು, ಸ್ಕ್ಯಾನ್ ಮಾಡಿಸಿಕೋ”.
ಅವಳು ಮೊದ-ಮೊದಲು ಮುಂದೆ ಮಾಡಿದಳು. ಕೊನೆಗೆ ನಿಜವಾಗಿ ಏನಾಗಿದೆ ಎಂದು ತಿಳಿದುಕೊಳ್ಳಲು ಸ್ಪೆಶಲಿಸ್ಟ್ ಬಳಿಗೆ ಹೋದಳು.
ಎಲ್ಲ ರಿಪೋರ್ಟ್ ಬಂತು. ಎಲ್ಲವೂ ನಾರ್ಮಲ್. ಗಂಡ ಹೇಳಿದ “ನಿನ್ನ ತಲೆಯಲ್ಲಿ ಇಂಥದೇನೋ ಹದಗೆಟ್ಟಿದೆಯಲ್ಲ, ಅದು ಯಾರಿಗೂ ಗೊತ್ತಾಗುತ್ತಿಲ್ಲ”. ಅವಳಿಗೂ ಅನಿಸಿತು, ಏನಿರಬಹುದು? ಬಳಿಕ ಅವಳು ಬೆಳಿಗ್ಗೆ ಎದ್ದಳು. ತಲೆನೋವಿನ ನಿರೀಕ್ಷೆಯಿಂದ. ಅವಳಿಗೆ ಒಮ್ಮೆಲೆ ಬಿದ್ದ ಕನಸಿನ ನೆನಪಾಯಿತು. ಎಂಥದೋ ಸಿಕ್ಕು-ಸಿಕ್ಕಾದ ಕನಸು. ಅವಳಿಗೆ ಯಾತನೆ, ನೋವು ನೀಡಿ ಹೈರಾಣುಗೊಳಿಸುವಂತಹುದು. ಅದರಿಂದ ಕಾಣಿಸಿಕೊಂಡ ತಲೆನೋವು.

ಅವಳು ಯೋಚಿಸುತ್ತ ಬಿದ್ದುಕೊಂಡಳು. ತಲೆನೋವು ಶುರುವಾಗಿಯೇ ಬಿಟ್ಟಿತು. ಎಚ್ಚರಗೊಂಡ ಗಂಡ ಅವಳತ್ತ ಹೊರಳಿದ, ಅವಳಿನ್ನೂ ಹಾಗೇ ಬಿದ್ದುಕೊಂಡಿರುವುದು ಕಂಡು, ಬಯಕೆಯಿಂದ ಅವಳ ಮೈ ಮುಟ್ಟಿದ. ಅವಳಿಗೆ ಒಮ್ಮೆಲೆ ಸಿಡಿಲೆರಗಿದಂತಾಗಿ, ಅದು ಬೇಡವೆನಿಸಿತು. ಅವಳು ನಿರಾಕರಿಸಿದಳು.

ಅವಳ ಪ್ರತಿಕ್ರಿಯೆಯಿಂದ ಬೆಚ್ಚಿದ ಗಂಡ ಎದ್ದು ಕೂತ. ಕೆರಳಿ ಹೇಳಿದ “ಸರಿ-ಸರಿ ಬೇಡವಾದರೆ ಬೇಡ. ಕಳೆದ ಆರು ತಿಂಗಳಿಂದ ನೀನು ನಿರಾಕರಿಸುತ್ತಲೇ ಇದ್ದೀಯಾ, ಆದರೆ ಹೀಗೆ ಕೈ ಝಾಡಿಸಲು ಏನು ಕಾರಣ?”

ಅವಳಿಗೂ ಅದು ಗೊತ್ತಾಗಲಿಲ್ಲ, ಅವಳು ಅವನನ್ನು ನೋಡಲಾರಂಭಿಸಿದಳು ಆದರೆ `ಸಾರಿ' ಎಂದು ಹೇಳಬೇಕೆಂದೂ ಅನಿಸಲಿಲ್ಲ. ಆತನ ಅಥವಾ ಅವನ ಕೈಯ, ಸ್ಪರ್ಶದ ಬಗೆಗೆ ಸಿಟ್ಟು ಬರಲಾರಂಭಿಸಿತ್ತು. ಅವಳು ಆತನ ಕಡೆಗೆ ಬೆನ್ನು ಮಾಡಿದಳು.

ತನಗೆ ಕನಸು ಬೀಳುತ್ತಿರುವದೂ ಅವಳ ಗಮನಕ್ಕೆ ಬರಲಾರಂಭಿಸಿತ್ತು. ಅಂದರೆ ಕನಸು ಎಲ್ಲರಿಗೂ ಬೀಳುತ್ತದೆ ಎನ್ನುವದೂ ಗೊತ್ತಿತ್ತು, ಆದರೆ ಹಲವು ಬಾರಿ ಅದು ನೆನಪಾಗುತ್ತಿಲ್ಲ. ಕೆಲವು ಸಲ ನೆನಪಾಗುತ್ತದೆ. ಆದರದು ಕೇವಲ ಕೆಟ್ಟದ್ದು, ಅಸಂಬದ್ಧ, ನಿರರ್ಥಕ, ಅಪರೂಪಕ್ಕೆ ಅರ್ಥಪೂರ್ಣ ಆದರೆ ತನಗೆ ಬೀಳುವ ಕನಸು ಯಾವ ಮಾದರಿಯದು ಎನ್ನುವದು ಅವಳಿಗೆ ಗೊತ್ತಾಗಲಿಲ್ಲ. ಆರಂಭಕ್ಕೆ ಅವಳು ನೆನಪಿಸುವ ಶತಪ್ರಯತ್ನ ಮಾಡಿದಳು. ಆದರೆ ಯಾವ ತಪಶೀಲೂ ನೆನಪಾಗುತ್ತಿರಲಿಲ್ಲ. ಬರೇ ಕನಸು ಬಿದ್ದಿದ್ದಷ್ಟೇ ಗೊತ್ತಾಗುತ್ತಿತ್ತು.

ಬಳಿಕ ಆ ಕನಸು ತೊಂದರೆ ಕೊಡುತ್ತಿತ್ತು. ಅಥವಾ ಕಸಿವಿಸಿ ಪಡುವಂತೆ ಮಾಡುತ್ತಿತ್ತು. ಇಲ್ಲವೇ ಕೆಡಕಾಗುತ್ತದೆ ಎಂದವಳಿಗನಿಸುತ್ತಿತ್ತು. ತಲೆನೋವಂತೂ ಇದ್ದೇ ಇತ್ತು. ಆದರೆ ಅದರಾಚೆಗೂ ಒಂದು ಬಗೆಯ ದಣಿವು ಮತ್ತು ಯಾತನೆಯನ್ನು ಉಂಟುಮಾಡುತ್ತಿತ್ತು.
ಇಷ್ಟೆಲ್ಲ ನಡೆದರೂ ಗಂಡನಿಗೆ ಅದನ್ನು ಹೇಳಬೇಕೆಂದೆನಿಸುವದಿಲ್ಲ. ಮೂಲತಃ ಅವನಂತೂ ಇತ್ತೀಚೆಗೆ ಅವಳ ಮೇಲೆ ಮುನಿದುಕೊಂಡೇ ಇದ್ದ. ಅಂಥದರಲ್ಲಿ ಗೂಢವಾದದ್ದು ಆಲಿಸುವ ರೂಢಿಯೇ ಅವನಿಗಿರಲಿಲ್ಲ. ಮಕ್ಕಳಿಗೆ ಹೇಳುವ ಪ್ರಶ್ನೆಯೇ ಇರಲಿಲ್ಲ. ಅವಳ ಕನಸಿನ ಬಗೆಗೆ ಯಾರಿಗಿದೆ ಆಸಕ್ತಿ? ಈಗ ಉಳಿದವಳೆಂದರೆ ಆಫೀಸಿನ ಗೆಳತಿ. ಆದರವಳು ಹೇಳಲು ಹಿಂಜರಿಯುತ್ತಿದ್ದಳು.
ಸಾನಿಯಾ ಅವರ ಮರಾಠಿ ಕಥೆಯ ಆಯ್ದ ಭಾಗ
ಕನ್ನಡಕ್ಕೆ: ಚಂದ್ರಕಾಂತ ಪೋಕಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT