ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆಯ ಹಿಂದೆ ಕೋಮಲ್!

Last Updated 24 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಒಳ್ಳೆಯ ಕಥೆ ಯಾರು ಹೇಳುತ್ತಾರೋ ಅವರ ಹಿಂದೆ ಇರುವುದು! ಇದು ಕೋಮಲ್ ಕಂಡುಕೊಂಡಿರುವ ಹೊಸ ಸೂತ್ರ.

‘ಕಳ್ ಮಂಜ’ ಚಿತ್ರದ ಯಶಸ್ಸು ಕೋಮಲ್ ಅವರಿಗೆ ಖುಷಿಯ ಜೊತೆಗೆ ಅವಕಾಶಗಳನ್ನೂ ತಂದುಕೊಟ್ಟಿದೆ. ಕಥೆ ಹಿಡಿದುಕೊಂಡು ಅವರ ಮನೆಯ ಕದ ತಟ್ಟುವ ನಿರ್ಮಾಪಕ, ನಿರ್ದೇಶಕರ ಸಂಖ್ಯೆ ಹೆಚ್ಚಾಗಿದೆಯಂತೆ. ಎಡತಾಕಿದ ಅವಕಾಶಗಳನ್ನೆಲ್ಲ ಅಪ್ಪಿಕೊಳ್ಳುವ ಬದಲು, ‘ಕಥೆ ಚೆನ್ನಾಗಿದರಷ್ಟೇ ಹಸಿರು ನಿಶಾನೆ’ ಎನ್ನುವ ನಿರ್ಧಾರಕ್ಕೆ ಕೋಮಲ್ ಬಂದಿದ್ದಾರೆ.

ಮೊದಲು ಕಾಲ್‌ಷೀಟ್ ಕೊಡಿ. ಆಮೇಲೆ ಕಥೆಯ ಬಗ್ಗೆ ಯೋಚಿಸೋಣ ಎನ್ನುವವರು ಸಾಕಷ್ಟು ಮಂದಿಯಿದ್ದಾರೆ. ಹೀಗೆ ಬಂದ ಅವಕಾಶಗಳನ್ನೆಲ್ಲ ಒಪ್ಪಿಕೊಂಡರೆ, ನಮ್ಮನ್ನು ಪ್ರೇಕ್ಷಕ ಒಪ್ಪಿಕೊಳ್ಳಬೇಕಲ್ಲ? ಹಾಗಾಗಿಯೇ ಅವಕಾಶಗಳ ಬಗ್ಗೆ ಹುಷಾರಾಗಿದ್ದೇನೆ. ಹೊಸತನದ ಹಸಿವು ಇರುವ ಕಥೆಗಾರ, ನಿರ್ದೇಶಕರ ಹಿಂದೆ ಹೋಗಲು ನಿರ್ಧರಿಸಿದ್ದೇನೆ. ಯಶಸ್ಸಿನ ಪಾಲು ಕೊಂಚ ಕಡಿಮೆಯಾದರೂ ಪರವಾಗಿಲ್ಲ, ಒಳ್ಳೆಯ ಕಥೆ ಇರಲೇಬೇಕು- ಇದು ಸದ್ಯದ ಕೋಮಲ್ ಮನಸ್ಥಿತಿ.

ಅಂದಹಾಗೆ, ಕೋಮಲ್ ಮೂರ್ನಾಲ್ಕು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ‘ಗೋವಿಂದಾಯ ನಮಃ’ ಅವುಗಳಲ್ಲೊಂದು. ಪವನ್ ಒಡೆಯರ್ ಎನ್ನುವ ಹೊಸ ಪ್ರತಿಭೆ ಈ ಚಿತ್ರದ ನಿರ್ದೇಶಕ. ಯೋಗರಾಜ ಭಟ್ ಅವರ ಜೊತೆ ದುಡಿದಿರುವ ಒಡೆಯರ್ ಹೇಳಿದ ಕಥೆ ಕೋಮಲ್‌ಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಕಥೆ, ಬದುಕಿನ ಪಯಣದ ಕುರಿತಾದದ್ದು, ‘ಮೈ ಆಟೊಗ್ರಾಫ್’ ಮಾದರಿಯದು.

ಕಾನ್ಫಿಡೆಂಡ್ ಗ್ರೂಪ್‌ಗೆ ಕೋಮಲ್ ಒಂದು ಚಿತ್ರ ಒಪ್ಪಿಕೊಂಡಿದ್ದರಲ್ಲ, ಆ ಚಿತ್ರದ ಕಥೆಯೀಗ ಸಂಪೂರ್ಣ ಬದಲಾಗಿದೆಯಂತೆ. ನಿರ್ದೇಶಕರು ಕೂಡ ಬದಲಾಗಿದ್ದಾರೆ. ಮುರುಗನ್ ಎನ್ನುವವರು ಈ ಚಿತ್ರದ ನಿರ್ದೇಶಕರು.

ಸದ್ಯಕ್ಕೆ ‘ಮರ್ಯಾದೆ ರಾಮಣ್ಣ’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಕೊಂಡಿರುವ ಕೋಮಲ್, ಒಂದರ ನಂತರ ಮತ್ತೊಂದು ಸಿನಿಮಾ ಎನ್ನುವ ಶಿಸ್ತು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ತಮ್ಮನ್ನು ಎಡತಾಕುವ ನಿರ್ಮಾಪಕರಿಗೆ ಅವರು ಹೇಳುವುದು ಕೂಡ ನಿಧಾನವೇ ಪ್ರಧಾನ ಎನ್ನುವ ಮಾತನ್ನು. ‘ತಾವು ನಾಯಕರಾಗಿ ಅಭಿನಯಿಸುತ್ತಿರುವ ಎರಡು ಚಿತ್ರಗಳ ಬಿಡುಗಡೆಗೆ ಕನಿಷ್ಠ ಮೂರು ತಿಂಗಳ ಅಂತರ ಇರಬೇಕು’ ಎನ್ನುವುದು ನಿರ್ಮಾಪಕರಿಗೆ ಅವರ ಷರತ್ತು.

ಕೋಮಲ್ ಮಾತು ಮತ್ತೆ ಮತ್ತೆ ‘ಕಳ್ ಮಂಜ’ ಚಿತ್ರದ ಯಶಸ್ಸಿನತ್ತಲೇ ಹೊರಳುತ್ತದೆ. ಕ್ರಿಕೆಟ್ ಜ್ವರದ ನಡುವೆಯೂ ಸಿನಿಮಾ ಸಾಧಿಸಿದ ಗೆಲುವು ಅವರಿಗೆ ಸಮಾಧಾನ ತಂದುಕೊಟ್ಟಿದೆ. ‘ನನ್ನ ಚಿತ್ರದ ಆಜೂಬಾಜು ಮೂವತ್ತಕ್ಕೂ ಹೆಚ್ಚು ಸಿನಿಮಾ ತೆರೆಕಂಡಿವೆ. ಆದರೆ ಗೆದ್ದಿರುವುದು ಕಳ್ ಮಂಜ ಮಾತ್ರ. ಸುದೀಪ್‌ರ ಕೆಂಪೇಗೌಡ ಬಿಟ್ಟರೆ ನನ್ನ ಚಿತ್ರದ್ದೇ ದೊಡ್ಡ ಗೆಲುವು’ ಎನ್ನುವಾಗ ಅವರ ಧ್ವನಿಯಲ್ಲಿ ಖುಷಿ ಇಣುಕುತ್ತದೆ.

‘ಕಳ್ ಮಂಜ’ ನಂತರ ಪೋಷಕ ಪಾತ್ರಗಳಿಗೂ ಹೆಚ್ಚು ಅವಕಾಶಗಳು ಕೋಮಲ್ ಅವರಿಗೆ ಬರುತ್ತಿವೆಯಂತೆ. ಅವುಗಳನ್ನೇನೂ ಕೋಮಲ್ ಒಲ್ಲೆ ಎನ್ನುತ್ತಿಲ್ಲ. ಡೇಟ್ಸ್ ಹೊಂದಾಣಿಕೆ ಆಗುವಂತಿದ್ದರೆ ಪಾತ್ರ ಚಿಕ್ಕದಾದರೇನು ದೊಡ್ಡದಾದರೇನು ಎನ್ನುವ ನಿಲುವು ಅವರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT