ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದನ ಕಣದಲ್ಲಿ ಏಕೈಕ ಮಹಿಳೆ!

Last Updated 9 ಏಪ್ರಿಲ್ 2014, 6:56 IST
ಅಕ್ಷರ ಗಾತ್ರ

ಗುಲ್ಬರ್ಗ: ಬಿಸಿಲಿನೊಂದಿಗೆ ಲೋಕಸಭಾ ಚುನಾವಣೆ ಕಾವೂ ಹೆಚ್ಚುತ್ತಿದೆ. ಗುಲ್ಬರ್ಗ ಮೀಸಲು ಲೋಕಸಭಾ ಕ್ಷೇತ್ರದಿಂದ ಅಂತಿಮವಾಗಿ 8 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಈ ಪೈಕಿ ‘ಆಮ್ ಆದ್ಮಿ ಪಕ್ಷ’ದಿಂದ ಸ್ಪರ್ಧಿಸಿರುವ ಬಿ.ಟಿ.ಲಲಿತಾ ನಾಯಕ್ ಏಕೈಕ ಮಹಿಳೆ ಎನ್ನುವುದು ವಿಶೇಷ.

1952 ರಿಂದ 2009ರ ವರೆಗೆ ನಡೆದ 17 ಲೋಕಸಭಾ ಚುನಾವಣೆಗಳಲ್ಲಿ (2 ಉಪ ಚುನಾವಣೆ ಸೇರಿ) ಸ್ಪರ್ಧಿಸಿರುವ ಮಹಿಳಾ ಅಭ್ಯರ್ಥಿಗಳ ಪೈಕಿ ಬಿ.ಟಿ.ಲಲಿತಾ ನಾಯಕ್ ಎರಡನೆಯವರು. ಇದಕ್ಕೂ ಮುಂಚೆ, ಅಂದರೆ 1991ರಲ್ಲಿ ಪಕ್ಷೇತರ ಅಭ್ಯರ್ಥಿ ಯಾಗಿ ಸುಜಾತಾ ಪರಮೇಶ್ವರ ಜಾನೆ ಅವರು ಮೊದಲ ಮಹಿಳಾ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಧುಮುಕಿದ್ದರು.

ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಗುಲ್ಬರ್ಗ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಒಂದು ಬಾರಿಯೂ ಅವಕಾಶ ಕೊಟ್ಟಿಲ್ಲ. ಆದರೆ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಕೊನೆ ಕ್ಷಣದಲ್ಲಿ ಬಿ.ಟಿ.ಲಲಿತಾ ನಾಯಕ್ ಅವರನ್ನು ಕಣಕ್ಕೆ ಇಳಿ ಸುವ ಮೂಲಕ ಮಹಿಳಾ ಅಭ್ಯರ್ಥಿಗೆ ಮಣೆ ಹಾಕಿದೆ.

ಪರಿಚಯ: ಬಿ.ಟಿ. ಲಲಿತಾ ನಾಯಕ್ ಲೇಖಕಿ ಹಾಗೂ ರಾಜಕಾರಣಿ. ಚಿಕ್ಕಮಗ ಳೂರು ಜಿಲ್ಲೆ, ಕಡೂರು ತಾಲ್ಲೂಕಿನ ತಂಗಲಿ ತಾಂಡಾದಲ್ಲಿ 1945ರ ಏಪ್ರಿಲ್ 4ರಂದು ಜನಿಸಿದರು. ತಂದೆ ಬಾಲಾಜಿ ನಾಯಕ್, ತಾಯಿ ಗಂಗಾಬಾಯಿ. ಎಸ್ಸೆಸ್ಸೆಲ್ಸಿ ಮತ್ತು ಹಿಂದಿ ವಿಶಾರದಾ ಪರೀಕ್ಷೆ ಪಾಸಾದ ಇವರು ಲಂಕೇಶ ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದರು.

೧೯೮೬ರಲ್ಲಿ ರಾಜಕೀಯ ಪ್ರವೇಶಿಸಿದ ಇವರು, ೧೯೮೬ ರಿಂದ ೧೯೯೨ರ ವರೆಗೆ ವಿಧಾನ ಪರಿಷತ್ ಸದಸ್ಯೆಯಾಗಿದ್ದರು. ೧೯೯೪ ರಿಂದ ೧೯೯೯ರ ವರೆಗೆ ಸಚಿವೆಯಾಗಿ ಸೇವೆ ಸಲ್ಲಿಸಿದರು. ಇವರ ‘ಸಮಾಜ ಸೇವೆ’ಯನ್ನು ಗುರುತಿಸಿದ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ 2009–10ರಲ್ಲಿ ಇವರಿಗೆ ‘ಗೌರವ ಡಾಕ್ಟರೇಟ್’ ನೀಡಿ ಗೌರವಿಸಿದೆ.

ಸಾಹಿತ್ಯಕ್ಕೆ ಕೊಡುಗೆ: ‘ಹಬ್ಬ ಮತ್ತು ಬಲಿ’ (ಕಥಾ ಸಂಕಲನ), ‘ನೆಲೆ ಬೆಲೆ’, ‘ಗತಿ’ (ಕಾದಂಬರಿ), ‘ಚಂದ್ರ ಪರಾಭವ’ (ರೇಡಿಯೊ ನಾಟಕ), ‘ಭಟ್ಟನ ಕನಸು’ (ಮಕ್ಕಳ ಸಾಹಿತ್ಯ), ‘ನಂ ರೂಪ್ಲಿ’, ‘ಇದೇ ಕೂಗು ಮತ್ತೆ ಮತ್ತೆ’, ‘ಒಡಲ ಬೇಗೆ’, ‘ಸವಾ ಸೇರು’, ‘ಬಿದಿರು ಮೆಳೆ ಕಂಟಿಯಲಿ’ (ಕವನ ಸಂಕಲನ) ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

1991ರಲ್ಲಿ ಸುಜಾತಾ ಸ್ಪರ್ಧೆ
1952 ರಿಂದ ಇದುವರೆಗೆ ನಡೆದ 17 ಚುನಾವಣೆಗಳಲ್ಲಿ (2 ಉಪ ಚುನಾವಣೆ ಸೇರಿ) ಸ್ಪರ್ಧಿಸಿದ್ದ ಮಹಿಳೆಯರ ಪೈಕಿ ಬಿ.ಟಿ. ಲಲಿತಾನಾಯಕ್ ಎರಡನೇ ಮಹಿಳೆ ಆಗಿದ್ದಾರೆ. 1991ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಜಾತಾ ಪರಮೇಶ್ವರ ಜಾನೆ ಅವರು 1,284 (ಶೇ 0.31) ಮತಗಳನ್ನು ಪಡೆದು ಪರಾಭವಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT