ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದನ ಕುತೂಹಲ

Last Updated 12 ಮಾರ್ಚ್ 2011, 18:30 IST
ಅಕ್ಷರ ಗಾತ್ರ

‘ಕೆಂಪೇಗೌಡ’ ಚಿತ್ರ ಕುತೂಹಲ ಹುಟ್ಟಿಸಿದ್ದು ಎರಡು ಕಾರಣಗಳಿಗಾಗಿ. ಮೊದಲನೆಯದು, 2010ರಲ್ಲಿ ಬಹುದೊಡ್ಡ ಯಶಸ್ಸು ಕಂಡ ತಮಿಳಿನ ‘ಸಿಂಗಂ’ ಚಿತ್ರವನ್ನು ಸುದೀಪ್ ಯಾವ ರೀತಿ ಕನ್ನಡಕ್ಕೆ ತಂದಿದ್ದಾರೆ ಎನ್ನುವುದು. ಎರಡನೆಯ ಕಾರಣ, ‘ಕೆಂಪೇಗೌಡ’ ಎನ್ನುವ ಶೀರ್ಷಿಕೆ. ರೂಪಾಂತರದ ವಿಷಯದಲ್ಲಿ ಸುದೀಪ್ ಗೆದ್ದಿದ್ದಾರೆ, ಅನುಮಾನವೇ ಇಲ್ಲ.ಆದರೆ, ಈ ಮಾತನ್ನು ಶೀರ್ಷಿಕೆಯ ವಿಷಯಕ್ಕೆ ಹೇಳುವಂತಿಲ್ಲ. ‘ಕೆಂಪೇಗೌಡ’ ಹೆಸರಿಗೂ ಚಿತ್ರದ ಕಥೆಗೂ ಬಾದರಾಯಣ ಸಂಬಂಧವೂ ಇಲ್ಲ.

ಪರಭಾಷೆಯ ಚಿತ್ರಗಳನ್ನು ಅತ್ಯಂತ ಪ್ರೀತಿಯಿಂದ ತಮ್ಮದು ಮಾಡಿಕೊಳ್ಳುವುದು ಸುದೀಪ್ ಶೈಲಿ. ‘ಹುಚ್ಚ’, ‘ಆಟೋಗ್ರಾಫ್’, ‘73 ಶಾಂತಿನಿವಾಸ’, ‘ವೀರ ಮದಕರಿ’ ಮುಂತಾದ ಚಿತ್ರಗಳಲ್ಲಿ ಈ ತನ್ಮಯತೆಯನ್ನು ಸಾಬೀತುಪಡಿಸಿದ್ದ ಸುದೀಪ್, ‘ಕೆಂಪೇಗೌಡ’ ಮೂಲಕ ತಮ್ಮ ರೂಪಾಂತರದ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮೂಲ ಚಿತ್ರದ ಕಥೆಗೆ, ಪಾತ್ರಗಳಿಗೆ ಚ್ಯುತಿ ಬರದಂತೆ ಅವರು ‘ಸಿಂಗಂ’ ಅನ್ನು ಕನ್ನಡಕ್ಕೆ ತಂದಿದ್ದಾರೆ. ನಾಯಕ - ನಿರ್ದೇಶಕ ಎರಡೂ ಪಾತ್ರಗಳಲ್ಲಿ ಅವರು ಯಶಸ್ವಿಯಾಗಿದ್ದಾರೆ.

ನಿಷ್ಠಾವಂತ ಪೊಲೀಸ್ ಅಧಿಕಾರಿಯೊಬ್ಬ ಸಮಾಜ ವಿರೋಧಿ ಶಕ್ತಿಗಳನ್ನು ಮಟ್ಟಹಾಕುವ ‘ಕೆಂಪೇಗೌಡ’ನ ಕಥೆ ಕನ್ನಡ ಚಿತ್ರರಂಗಕ್ಕೆ ನವನವೀನವೇನೂ ಅಲ್ಲ. ಹಾಗೆನೋಡಿದರೆ, ಈಚಿನ ವರ್ಷಗಳಲ್ಲಿ ಕಳ್ಳ-ಪೊಲೀಸ್ ಆಟದ ಸಾಲುಸಾಲು ಕನ್ನಡ ಸಿನಿಮಾಗಳು ತೆರೆಯ ಮೇಲೆ ನೆತ್ತರ ಹೊಳೆಯನ್ನೇ ಹರಿಸಿವೆ (ಸಾಂಪ್ರದಾಯಿಕ ಪ್ರೇಕ್ಷಕ ಚಿತ್ರಮಂದಿರಗಳಿಂದ ದೂರಾಗಲಿಕ್ಕೆ ಈ ನೆತ್ತರ ಕಮಟು ಕೂಡ ಒಂದು ಕಾರಣವಿರಬಹುದು). ಆದರೆ, ಕಳ್ಳ-ಪೊಲೀಸ್ ಕಥೆ ಒಳಗೊಂಡೂ ‘ಕೆಂಪೇಗೌಡ’ ನೋಡುಗನಿಗೆ ಇಷ್ಟವಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ನಾಯಕನ ಪಾತ್ರಪೋಷಣೆಯಲ್ಲಿನ ಗಟ್ಟಿತನ.

ಚಿತ್ರದ ನಾಯಕ ಟಫ್ ಪೊಲೀಸ್ ಅಧಿಕಾರಿಯಾದರೂ ಆತನ ಬದುಕಿನಲ್ಲಿ ಬೇರೆ ಆದ್ಯತೆಗಳೂ ಇವೆ. ಅಪ್ಪನ ಕಿರಾಣಿ ಅಂಗಡಿಯನ್ನು ಮತ್ತಷ್ಟು ದೊಡ್ಡದಾಗಿಸಬೇಕು ಎನ್ನುವುದು ಆತನ ಆಸೆ. ಇಂಥದೊಂದು ವಿಶಿಷ್ಟ ಆಸೆಯನ್ನು ಹತ್ತಿಕ್ಕಿಕೊಂಡೇ ಪೊಲೀಸ್ ಕುರ್ಚಿಯಲ್ಲಿ ಕೂತಿರುವ ಕೆಂಪೇಗೌಡ, ದೂರಿನೊಂದಿಗೆ ಠಾಣೆಗೆ ಬರುವವರನ್ನು ಸ್ನೇಹದ ಮಾತಿನ ಮೂಲಕವೇ ಸಂಭಾಳಿಸುವವನು. ಸಿನಿಮಾದ ರೂಢಿಗತ ಸೂತ್ರಗಳಿಗೆ ಕೊಂಚ ಭಿನ್ನವಾದ ಈ ಪಾತ್ರದ ಕಾರಣದಿಂದಲೇ ಸಿನಿಮಾ ಇಷ್ಟವಾಗುತ್ತದೆ. ಅಲ್ಲದೆ, ಚಿತ್ರದ ಪ್ರಥಮಾರ್ಧದಲ್ಲಿನ ಗದಗ ಜಿಲ್ಲೆಯ ರೋಣದ ಪರಿಸರ ಕೂಡ ಸಿನಿಮಾಕ್ಕೆ ವಿಶಿಷ್ಟ ಕಳೆ ತಂದಿದೆ. ನಿರೂಪಣೆ ಎಲ್ಲಿಯೂ ವೇಗ ಕಳೆದುಕೊಳ್ಳದಿರುವುದು ಕೂಡ ಸಿನಿಮಾದ ಪರಿಣಾಮ ಹೆಚ್ಚಿಸಿದೆ.

‘ಸಿಂಗಂ’ನಲ್ಲಿ ಸೂರ್ಯ ನಿರ್ವಹಿಸಿರುವ ಪಾತ್ರವನ್ನು ಸುದೀಪ್ ಕೆಂಪೇಗೌಡನಾಗಿ ಆವಾಹಿಸಿಕೊಂಡಿದ್ದಾರೆ.ಈ ಆವಾಹನೆ ನಾಯಕನ ವಿಶಿಷ್ಟ ಮೀಸೆಯಿಂದ ಹಿಡಿದು, ನರಗಳನ್ನು ಹುರಿಗೊಳಿಸುವುದು, ಸಿಂಹದಂತೆ ಖಳರನ್ನು ಬೆನ್ನಟ್ಟುವುದು, ಅಂಗಿ ಬಿಚ್ಚುವುದು- ಹೀಗೆ, ವ್ಯಾಪಕವಾಗಿದೆ. ಪಾತ್ರ ನಿರ್ವಹಣೆಯಲ್ಲಿ ಸುದೀಪ್ ಸಿಳ್ಳೆ ಗಿಟ್ಟಿಸುತ್ತಾರಾದರೂ, ಈಗಾಗಲೇ ಪ್ರೇಕ್ಷಕರ ಎದುರಿಗೆ ಬಂದಿರುವ ಯಶಸ್ವಿ ಪಾತ್ರವೊಂದನ್ನು ಮತ್ತೊಬ್ಬ ಜನಪ್ರಿಯ ನಟ ಈ ಮಟ್ಟಿಗೆ ತನ್ನದಾಗಿಸಿಕೊಳ್ಳುವುದರ ಔಚಿತ್ಯ ಪ್ರಶ್ನೆಯನ್ನೂ ಹುಟ್ಟಿಸುತ್ತದೆ.ಯಾಕೆಂದರೆ ಅನುಕರಣೆ ಎನ್ನುವುದು ಒಂದು ಹಂತದ ನಂತರ ಮಿಮಿಕ್ರಿಯಾಗಿಬಿಡುವ ಸಾಧ್ಯತೆಯೂ ಇದೆ.

ನಾಯಕನು ಗದಗದ ರೋಣಾ ಮೂಲದವನು. ಆದರೆ, ಆತನಾಗಲೀ ಅವನ ಕುಟುಂಬದವರಾಗಲೀ ಅಲ್ಲಿನ ಸೊಗಡಿನ ಮಾತನ್ನು ಆಡುವುದಿಲ್ಲ. ಸಹಿ ಹಾಕಲು ಠಾಣೆಗೆ ಬರುವ ಖಳರ ಪಡೆಯವನು ಹುಬ್ಬಳ್ಳಿ ಕನ್ನಡದಲ್ಲಿ ಮಾತನಾಡುವುದನ್ನು ಪತ್ತೆ ಮಾಡುವ ನಾಯಕ ತಾನೇ ತನ್ನ ಪ್ರದೇಶದ ಮಾತನ್ನು ಆಡದೇ ಇರುವುದು ಎದ್ದುಕಾಣುವ ಲೋಪ. ಪಾತ್ರದ ಬೀಸಿಗೆ ಒತ್ತುಕೊಡುವ ಭರದಲ್ಲಿ ಇಂಥ ಸಾಂಸ್ಕೃತಿಕ ಸಂಗತಿ ನಿರ್ದೇಶಕರಿಗೆ ಮರೆತುಹೋಗಿರಬಹುದು.

ಆವಾಹನೆ - ಅನುಕರಣೆ ಹಿನ್ನೆಲೆಯಲ್ಲಿ ಖಳನ ಪಾತ್ರವನ್ನು ಪೋಷಿಸಿರುವ ರವಿಶಂಕರ್ ಅವರ ಪಾತ್ರವನ್ನು ನೋಡಲಿಕ್ಕೆ ಸಾಧ್ಯವಿದೆ. ‘ಕೆಂಪೇಗೌಡ’ ಚಿತ್ರ ಕಳೆಗಟ್ಟುವಲ್ಲಿ, ಆರ್ಮುಗಂ ಪಾತ್ರದಲ್ಲಿ ನಟಿಸಿರುವ ರವಿಶಂಕರ್ ಕೊಡುಗೆಯೂ ಇದೆ.ಮೂಲಚಿತ್ರದಲ್ಲಿ ಪ್ರಕಾಶ್ ರೈ ನಟಿಸಿರುವ ಪಾತ್ರದಲ್ಲಿ ನಟಿಸಿರುವ ರವಿಶಂಕರ್, ತಮ್ಮ ಪಾತ್ರದಲ್ಲಿ ಎಲ್ಲಿಯೂ ರೈ ಅವರನ್ನು ಅನುಸರಿಸಿಲ್ಲ. ಅವರ ಅಭಿನಯದಲ್ಲಿ ಸ್ವಂತಿಕೆಯಿದೆ. ಆಂಗಿಕವಾಗಿ ಹಾಗೂ ಶಾರೀರಿಕವಾಗಿ ಅವರ ಅಬ್ಬರ ಪ್ರಖರವಾಗಿದೆ.

‘ವೀರ ಮದಕರಿ’ ನಂತರ ಸುದೀಪ್‌ಗೆ ಮತ್ತೆ ಜೋಡಿಯಾಗಿರುವ ರಾಗಿಣಿ ಸಿನಿಮಾದ ಗ್ಲಾಮರ್ ಅಗತ್ಯವನ್ನು ಪೂರೈಸಿದ್ದಾರೆ. ಮಕ್ಕಳ ಕಾಳಜಿಯನ್ನು ಬಯಸುವ ಅಪ್ಪಂದಿರ ಪಾತ್ರಗಳಲ್ಲಿ ಗಿರೀಶ್ ಕಾರ್ನಾಡ್ ಹಾಗೂ ಅಶೋಕ್ ತಮ್ಮ ಪಾತ್ರಗಳ ತೂಕ ಹೆಚ್ಚಿಸಿದ್ದಾರೆ.ಯಡವಟ್ಟು ದಫೇದಾರನ ಪಾತ್ರದಲ್ಲಿ ಶರಣ್ ನಗಿಸುತ್ತಾರೆ.

ಗೀತೆಗಳಲ್ಲಿ ಮಾಧುರ್ಯ ತುಂಬುವ ಪ್ರಯತ್ನವಿದ್ದರೂ, ಚಿತ್ರದ ಹಿನ್ನೆಲೆ ಸಂಗೀತ ಹೆಚ್ಚು ಪರಿಣಾಮಕಾರಿಯಾಗಿದೆ.ಸಂಗೀತ ನಿರ್ದೇಶಕ ಅರ್ಜುನ್ ಹಾಗೂ ಎಸ್.ಕೃಷ್ಣ ಅವರ ಛಾಯಾಗ್ರಹಣ ಕಮರ್ಷಿಯಲ್ ಚಿತ್ರವೊಂದನ್ನು ಹೆಚ್ಚು ಅಬ್ಬರವಿಲ್ಲದೆ ಹಿಡಿದಿಡಲು ಪ್ರಯತ್ನಿಸಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT