ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದನ ಕುತೂಹಲಿಗಳು ಮತ್ತು ಢೋಂಗೀ ದೇಶಭಕ್ತರೂ...

Last Updated 23 ಜನವರಿ 2013, 19:59 IST
ಅಕ್ಷರ ಗಾತ್ರ

ಭಾರತ ಪಾಕಿಸ್ತಾನದ ಗಡಿಯಲ್ಲಿ ಪಾಕ್ ಸೈನಿಕರು ಇಬ್ಬರು ಭಾರತೀಯ ಯೋಧರ ಶಿರಚ್ಛೇದನ ಮಾಡಿದ ಘಟನೆಯ ನಂತರ ಉಭಯ ದೇಶಗಳ ನಡುವೆ ಅನೂಹ್ಯ ತಲ್ಲಣವೊಂದು ತುಳುಕಾಡುತ್ತಲೇ ಇದೆ.

ಅದರಲ್ಲೂ ಟಿ.ವಿ.ಯ ಸುದ್ದಿ ಚಾನೆಲ್‌ಗಳು ಹಾಗೂ ಕೆಲ ರಾಜಕಾರಣಿಗಳು ಇನ್ನೇನು ಎರಡೂ ದೇಶಗಳ ನಡುವೆ ಯುದ್ಧ ನಡೆದೇ ಬಿಡುತ್ತದೆ ಎಂಬಂತೆ ಕದನ ಕುತೂಹಲಿಗಳಾಗಿ ವರ್ತಿಸುತ್ತಿದ್ದಾರೆ. ಇವರ ಢೋಂಗಿ ದೇಶಭಕ್ತಿ ಹಾಗೂ ಯುದ್ಧಾಕಾಂಕ್ಷಿ  ತವಕಗಳನ್ನು ಗಮನಿಸಿದಾಗ ಇವೆಲ್ಲಾ ಎಂತಹ ವ್ಯಂಗ್ಯದ ಹಾಗೂ ಅನಪೇಕ್ಷಿತ ಮುಸುಕಿನ ಗುದ್ದಾಟ ಎಂಬುದು ಗೊತ್ತಾಗುತ್ತದೆ.

ಇಂತಹ ದಿಗಿಲಿನ ದಿನಗಳಲ್ಲೇ ದಕ್ಷಿಣ ಏಷ್ಯಾ ಉಪಖಂಡದ ದೇಶಗಳು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಇನ್ನಷ್ಟು ಅರ್ಥಪೂರ್ಣವಾಗುವ ಕೆಲಸವೊಂದನ್ನು ಸದ್ದಿಲ್ಲದೆ ನಡೆಸಿದ್ದು ಗಮನಾರ್ಹ.

ದಕ್ಷಿಣ ಏಷ್ಯಾ ಮುಕ್ತ ಮಾಧ್ಯಮ ಸಂಸ್ಥೆ (ಎಸ್‌ಎಎಫ್‌ಎಂಎ) ವತಿಯಿಂದ ನಡೆದ ಈ ಮಹತ್ವಪೂರ್ಣ ಕಾರ್ಯ ಜನವರಿ 6ರಂದು ಅಮೃತಸರದಲ್ಲಿ ಆರಂಭವಾಗಿ 8ಮತ್ತು 9ರಂದು ಲಾಹೋರ್‌ನಲ್ಲಿ ಪರಿಸಮಾಪ್ತಿಯಾಯಿತು.

“ಮನಸ್ಸುಗಳ ತೆರೆಯುವಿಕೆ ಮತ್ತು ಗಡಿಗಳ ಮುಕ್ತಗೊಳಿಸುವಿಕೆ” ಎಂಬ ಘೋಷ ವಾಕ್ಯದಡಿ ಉಭಯ ದೇಶಗಳ ಸಹೃದಯಿ ಮಾಧ್ಯಮ ಮಿತ್ರರು ಇಲ್ಲಿ ಈ ಸಂದರ್ಭದಲ್ಲಿ ಒಂದೆಡೆ ಕಲೆತು ವಿಚಾರ ವಿನಿಮಯ, ಚರ್ಚಾ ಸಂಕಿರಣಗಳನ್ನು ನಡೆಸಿದರು. ನಿಜಕ್ಕೂ ಇದೊಂದು ಅಪೂರ್ವ ಸಮಾಗಮ ಮತ್ತು ಮುಕ್ತ ಸಂವಾದವೇ ಆಗಿತ್ತು. ಈ ಸಂವಾದದಲ್ಲಿ ನನಗೂ ಪಾಲ್ಗೊಳ್ಳುವ ಸದವಕಾಶ ದೊರೆತಿತ್ತು.

ಎರಡೂ ದೇಶಗಳ ನಡುವಿನ ಗಡಿಯನ್ನು ಮುಕ್ತಗೊಳಿಸಬೇಕು ಎಂಬ ಪ್ರಯತ್ನದಲ್ಲಿ ಒಂದು ಹೆಜ್ಜೆ ಮುಂದೆ ಹೋದೆವೇನೋ ಎಂದುಕೊಳ್ಳುತ್ತಿರುವಾಗಲೇ ಹತ್ತು ಹೆಜ್ಜೆ ಹಿಂದೆ ಸರಿಯುವಂತೆ ಮಾಡುವ ಪರಿಸ್ಥಿತಿಯ ಸಂದರ್ಭದಲ್ಲೇ ಹೃದಯಗಳ ಬಾಗಿಲು ತೆರೆಯುವ ಈ ಪ್ರಯತ್ನ ಅಪರೂಪದ್ದು ಅನಿಸಿತು.

ನಾವು ಪಾಕ್‌ಗೆ ಭೇಟಿ ಕೊಟ್ಟಾಗ ಅನಿಸಿದ್ದು ಇದೇ. ಎರಡೂ ದೇಶಗಳಲ್ಲಿನ ಸಾವಿರಾರು ಜನರು ತಂತಮ್ಮ ರಕ್ತಸಂಬಂಧಿಗಳನ್ನು, ಪೂರ್ವಜರು ಬಾಳಿ ಬದುಕಿದ ಸ್ಥಳಗಳಲ್ಲಿ ನಡೆದಾಡುವ ಕಾತರ ಹೊಂದಿರುವುದು ಕಂಡು ಬಂತು. ತಾವು ಹುಟ್ಟಿ ಬೆಳೆದು ಆಡಿದ ನೆಲದಲ್ಲಿ ಬೀಸುವ ಗಾಳಿಯನ್ನು ಮತ್ತೊಮ್ಮೆ ಎಂದು ಹೀರುವೆವೋ, ಆ ನೆಲದ ಮಣ್ಣನ್ನು ಯಾವತ್ತು ಸ್ಪರ್ಶಿಸುವೆವೋ ಎಂಬ ಅದಮ್ಯ ಕನಸುಗಳನ್ನು ನಮ್ಮೆದುರು ಹರಡಿಕೊಂಡು ಮನಬಿಚ್ಚಿ ಆಪ್ತವಾಗಿ ಮಾತನಾಡಿದರು.

ನಾವು ಆವತ್ತು ಪಾಕಿಸ್ತಾನದಿಂದ ಹೊರಟು ಬರುವಾಗ ಗಡಿಯಲ್ಲಿ ನಮ್ಮ ಲಗೇಜುಗಳನ್ನು ಹೊತ್ತು ಬಂದ ದ್ವಾರಪಾಲಕ ಖುಷಿ ಮಹಮದ್‌ನಂತ ಸಾಮಾನ್ಯ ವ್ಯಕ್ತಿಯಲ್ಲೂ ಇಂತಹ ಗುಲಾಬಿ ಕನಸುಗಳು ಗೋಚರವಾದವು. ಖುಷಿ ಮಹಮದ್ ನಮ್ಮ ಲಗೇಜುಗಳನ್ನು ಹೊತ್ತು ತಂದದ್ದಕ್ಕೆ ಪ್ರತಿಯಾಗಿ ಹಣವನ್ನು ಕೇಳಲೇ ಇಲ್ಲ.

ನಾವೆಲ್ಲಾ ಶಾಂತಿ ನಿರ್ಮಾಣ ಪ್ರಕ್ರಿಯೆಯ ತಂಡದವರೆಂದು ತಿಳಿದು ಅವನಿಗೆ ಬಹಳಷ್ಟು ಆನಂದವಾಗಿತ್ತು. ದಾರಿಯಲ್ಲಿ ಲಗೇಜು ಹೊತ್ತು ನಮ್ಮಂದಿಗೆ ನಡೆದು ಬರುವಾಗ ಆತ ನಮ್ಮನ್ನು ಕೇಳಿದ್ದು `ಅಮ್ಮಾ ವೀಸಾ ಸಡಿಲಿಕೆ ಪ್ರಕ್ರಿಯೆಯಲ್ಲಿ ಏನಾದರೂ ಪ್ರಗತಿಯಾಗಿದೆಯೇ' ಎಂಬ ಪ್ರಶ್ನೆ.

`ನನಗೆ ನನ್ನ ಅಮ್ಮನ ಜನ್ಮಸ್ಥಳವಾದ ರಾಜಸ್ತಾನದ ಆ ಹಳ್ಳಿಯನ್ನು ನೋಡಬೇಕೆಂಬ ಆಸೆಯಿದೆ. ಆಕೆ ಹೇಳುತ್ತಿದ್ದ ತನ್ನ ಬಾಲ್ಯದ ಕಥೆಗಳ ಆ ಹಳ್ಳಿಯನ್ನು ಕಣ್ತುಂಬಿಕೊಳ್ಳಬೇಕೆಂಬ ಅದಮ್ಯ ಬಯಕೆ ಇದೆ' ಎಂದ. ತಕ್ಷಣವೇ ಅವನಿಗೆ `ನಿನ್ನ ಅಮ್ಮನನ್ನು ಅಲ್ಲಿಗೆ ಕರೆದುಕೊಂಡು ಹೋಗಬೇಕೆಂದು ಅನ್ನಿಸಿದೆಯೇ' ಎಂದೆ.

ಪಾಪ.. ಆತ ತನ್ನ ಕಣ್ಣಂಚಿನಲ್ಲಿ ದುಃಖದ ಹನಿಗಳನ್ನು ಹನಿಸುತ್ತಲೇ `ಆಕೆಗೆ ಆ ಭಾಗ್ಯ ಇಲ್ಲ. ಅವಳೀಗ ನಮ್ಮಂದಿಗೆ ಇಲ್ಲ. ಸತ್ತುಹೋಗಿದ್ದಾಳೆ' ಎಂದು ತುಟಿ ಕಚ್ಚಿದ. ಇಂತಹ ಹೃದಯ ಕಲಕುವ ಸಂಗತಿಗಳು ಪಾಕ್‌ನ ಉದ್ದಗಲಕ್ಕೂ ಹರಡಿವೆ ಎಂದು ನನಗನಿಸಿತು.

ಎರಡೂ ದೇಶಗಳ ಮಾಧ್ಯಮ ಪ್ರತಿನಿಧಿಗಳನ್ನು ಒಂದೆಡೆ ಕಲೆ ಹಾಕಿದ ಎಸ್‌ಎಎಫ್‌ಎಂಎ ಪ್ರಯತ್ನ ಶ್ಲಾಘನೀಯವೇ ಸರಿ. ಭಾರತ ಮತ್ತು ಪಾಕಿಸ್ತಾನಗಳ ಇನ್ನೂರು ಕೋಟಿ ಜನರ ಶಾಂತಿ ಮತ್ತು ಸೌಹಾರ್ದತೆಯ ವೃದ್ಧಿಯ ಕಸರತ್ತು ಮೂರು ದಿನ ಮೇಳೈಸಿತ್ತು. ಗತಕಾಲದ ಹೊರೆಗಳು ಹಾಗೂ ವರ್ತಮಾನದ ಪೂರ್ವಗ್ರಹತನಗಳು ನಮ್ಮನ್ನು ಬಾಧಿಸಬಾರದು. ಹೊಸ ಪರ್ವಕ್ಕೆ ನಾವೆಲ್ಲಾ ತೆರೆದು ಬದುಕಬೇಕು ಎಂಬ ಮುಕ್ತ ಮನಸ್ಸುಗಳು ಇಲ್ಲಿ ಹತ್ತು ಹಲವು ವಿಷಯಗಳನ್ನು ಹಂಚಿಕೊಂಡವು.

ಇಸ್ಲಾಮಾಬಾದ್‌ನಿಂದ ಪ್ರಕಟವಾಗುವ `ಡೈಲಿ ವಾಯ್ಸ ಆಫ್ ಪಾಕಿಸ್ತಾನ'ದ ಕಾರ್ಯನಿವಾಹಕ ಸಂಪಾದಕಿ ಶಕೀಲಾ ಜಲೀಲ್ ಎಂಬ 30 ವರ್ಷದ ಪತ್ರಕರ್ತೆ ನಮ್ಮಂದಿಗಿದ್ದರು. ಪಾಕಿಸ್ತಾನದ ವಾಯವ್ಯ ಪ್ರಾಂತ್ಯದಲ್ಲಿ  ಶಿಕ್ಷಣ ಪಡೆದ ಕೆಲವೇ ಮಹಿಳೆಯರಲ್ಲಿ ಅವರೂ ಒಬ್ಬರು.

ಭಾರತ ಅದರಲ್ಲೂ ಭಾರತೀಯ ಮುಸ್ಲಿಮರ ಕುರಿತಂತೆ  ಶಾಲಾ ದಿನಗಳಲ್ಲಿ ತಮಗೆ ಇದ್ದಂತಹ ಪರಿಕಲ್ಪನೆಗಳು ತೀವ್ರ ರೀತಿಯಲ್ಲಿ ಬದಲಾಗಿರುವುದನ್ನು ಅವರು ಒಪ್ಪಿಕೊಳ್ಳುತ್ತಾರೆ. `ಭಾರತೀಯರಿಗೆ ಸಾಂಸ್ಕೃತಿಕವಾಗಿ ನಾವು ಯಾವತ್ತೂ ಬಹಳಷ್ಟು ಹತ್ತಿರದಲ್ದ್ದ್‌ದೇವೆ.

ನನಗೊಂದು ವೇಳೆ ಬೇರೆ ದೇಶಕ್ಕೆ ಹೋಗುವ ಅವಕಾಶ ಸಿಕ್ಕರೆ ಮೊದಲು ಆರಿಸಿಕೊಳ್ಳುವುದು ಭಾರತವನ್ನೇ' ಎಂದ ಆಕೆ `ಅಜ್ಮೇರ್ ಮತ್ತು ಮುಂಬೈಗಳಿಗೆ ಭೇಟಿ ನೀಡಬೇಕೆಂಬುದು ನನ್ನ ಮಹದಾಸೆ' ಎಂದರು. `ಭಾರತದೊಂದಿಗೆ ನಾವು ಬಹಳಷ್ಟು ವಿಷಯದಲ್ಲಿ ಒಂದೇ ಅಭಿರುಚಿ ಹೊಂದಿದ್ದೇವೆ' ಎನ್ನುವ ಶಕೀಲಾರಿಗೆ ತಾವು ಪತ್ರಕರ್ತೆ ಆಗುವುದಕ್ಕೂ ಮುನ್ನ ಇದ್ದ ಅಭಿಪ್ರಾಯಗಳು ಈಗ ಸಾಕಷ್ಟು ಬದಲಾಗಿವೆ ಎಂಬ ಅರಿವಿದೆ.

`ಮೊದಲೆಲ್ಲಾ ನಾನು ಭಾರತದ ಮುಸ್ಲಿಮರು ಅತೀವ ತೊಂದರೆ ಅನುಭವಿಸುತ್ತಿದ್ದಾರೆ ಎಂದೇ ಭಾವಿಸುತ್ತಿದ್ದೆ. ಆದರೆ  ನಮ್ಮಂತೆಯೇ ಅವರೂ ಭಾರತೀಯರೆಂಬ ಭಾವನೆಯಲ್ಲಿ ಬದುಕುತ್ತಿದ್ದಾರೆ ಎಂಬುದು ನನಗೀಗ ವೇದ್ಯವಾಗಿದೆ. ನಮ್ಮಲ್ಲಿರುವ ಇತರೆ ಅಲ್ಪಸಂಖ್ಯಾತರಂತೆಯೇ ಅವರೂ ಅಲ್ಲಿ ಅಲ್ಪಸಂಖ್ಯಾತರಾಗಿ ಬದುಕುತ್ತಿದ್ದಾರೆ.

ಅವರ ಹಕ್ಕುಗಳು ರಕ್ಷಣೆಯಾಗುತ್ತಿವೆ ಎಂಬ ನಂಬಿಕೆ ನನಗಿದೆ' ಎಂದು ಅವರು ನುಡಿದರು.
ಭಾರತ ಮತ್ತು ಪಾಕಿಸ್ತಾನದ ಮಾಧ್ಯಮಗಳಲ್ಲಿ ಏಕತಾನತೆ ಇದೆ ಎಂದ ಶಕೀಲಾ ಎರಡೂ ದೇಶಗಳದ್ದೂ ಒಂದೇ ಭಾವ ಎಂಬುದನ್ನು ನಮಗೆ ಆಪ್ತವಾಗಿ ವಿವರಿಸಿದರು. ಹಿಂದಿ ಸಿನಿಮಾಗಳು ಪಾಕಿಸ್ತಾನಿ ವಿರೋಧಿ ದ್ವೇಷ ಭಾವನೆಯನ್ನು ಬಿತ್ತರಿಸುವುದನ್ನು ಕೈಬಿಡಬೇಕು. ಪ್ರೀತಿ ಪ್ರೇಮದ ಕಥೆಯನ್ನು ಒಳಗೊಂಡ `ವೀರ್ ಝಾರಾ'ದಂತಹ ಚಿತ್ರಗಳು ಹೆಚ್ಚು ಹೆಚ್ಚು ಬರಬೇಕು ಎಂದು ಅಭಿಪ್ರಾಯಪಟ್ಟರು.

ತಾವು ಅಮೃತಸರದಲ್ಲಿ ಉಳಿದಿದ್ದ ವಸತಿ ಗೃಹದಲ್ಲಿ  ತಮಗೆ ಪಾಕಿಸ್ತಾನ ಟಿ.ವಿ.ಚಾನೆಲ್ ನೋಡಲು ಸಿಗಲೇ ಇಲ್ಲ ಎಂಬುದನ್ನು ಅವರು ಸ್ಮರಿಸಿದರು. ಹಾಗೆಯೇ ಭಾರತೀಯ ಟಿವಿ ನ್ಯೂಸ್‌ಚಾನೆಲ್‌ಗಳಲ್ಲಿ  ಹಿಂಸಾಚಾರ, ಬಾಂಬ್ ದಾಳಿ ಬಿಟ್ಟರೆ  ಪಾಕಿಸ್ತಾನದ ಬೇರೆ ಯಾವ ಸುದ್ದಿಗಳೂ ಇರುವುದಿಲ್ಲ ಎಂದೂ ಶಕೀಲಾ ವಿವರಿಸಿದರು.

ಎರಡೂ ದೇಶಗಳ ನಡುವೆ ಇರುವ ತಪ್ಪುಕಲ್ಪನೆಗಳನ್ನು ಹೊಡೆದೋಡಿಸಲು ತರುಣ ಪತ್ರಕರ್ತ ವಿದ್ಯಾರ್ಥಿಗಳನ್ನು ವಿನಿಮಯ ಮಾಡಿಕೊಳ್ಳುವಂತಹ ಪ್ರಯತ್ನ ಇಂದು ಅಗತ್ಯವಾಗಿದೆ. ಪತ್ರಕರ್ತರು ಮತ್ತು ಮಾಧ್ಯಮಗಳು ತಮ್ಮ ಪಾತ್ರ ನಿರ್ವಹಣೆ ಏನು ಎಂಬುದನ್ನು ಅರಿಯಲು ಇದು ಸಹಾಯಕವಾಗುತ್ತದೆ.

`ನಾವು ಲೇಖನಿಯನ್ನು ಗೌರವಿಸಬೇಕು. ಯಾಕೆಂದರೆ ಲೇಖನಿ ಎಂಬುದು ನಮಗೆ ಜನರಿಂದ ದೊರೆತಿದೆ. ಮಾಧ್ಯಮ ಎಂಬುದು ಜನರ ಶಾಶ್ವತ ರಕ್ಷಣೆಗಾಗಿ ಇರುವ ಕೊಡುಗೆ ಎಂಬುದನ್ನು ನಾವು ಯಾವತ್ತೂ ಮರೆಯಬಾರದು' ಎಂದರು.

ಹೆಸರು ಹೇಳಲಿಚ್ಛಿಸದ ಮತ್ತೊಬ್ಬ ಯುವ ಪತ್ರಕರ್ತೆ ಹೇಳಿದ್ದೂ ಕೂಡಾ ಅತ್ಯಂತ ಸ್ವಾರಸ್ಯಕರವಾಗಿತ್ತು. `ಎರಡೂ ದೇಶಗಳು ಅನೇಕ ವಿಷಯಗಳಲ್ಲಿ ಒಂದೇ ಭಾವದಲ್ಲಿ ಬದುಕುತ್ತಿವೆ. ಇವುಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದೂ ಎರಡೂ ಇವೆ. ಅವುಗಳನ್ನೆಲ್ಲಾ ಪಟ್ಟಿ ಮಾಡುವುದು ಕಷ್ಟ. ಆದಾಗ್ಯೂ ನಮ್ಮಲ್ಲಿ ಇರುವಂತೆಯೇ ಭಾರತದಲ್ಲೂ ಬಡತನವಿದೆ. ಜಾತಿಪದ್ಧತಿ ಆಚರಣೆಯ್ಲ್ಲಲಿದೆ. ಪ್ರಾದೇಶಿಕ ಭಿನ್ನತೆ ಇದೆ.

ಸ್ತ್ರೀಯರು ಹೇಗೆ ನಮ್ಮಲ್ಲಿ ಎರಡನೇ ದರ್ಜೆ ಪ್ರಜೆಗಳು ಅನ್ನಿಸಿಕೊಂಡಿದ್ದಾರೋ ಭಾರತದಲ್ಲೂ ಅದೇ ಸ್ಥಿತಿ ಇದೆ. ವರದಕ್ಷಿಣೆ ಪಿಡುಗು  ನಿಮ್ಮಲ್ಲಿರುವಂತೆ ನಮ್ಮಲ್ಲೂ ಕಾಡುತ್ತಿದೆ. ನಾವೂ ನಿಮ್ಮಂತೆಯೇ ಸಂಗೀತ ಮತ್ತು ನೃತ್ಯವನ್ನು ಪ್ರೀತಿಸುತ್ತೇವೆ. ಬಾಲಿವುಡ್ ಎಂದರೆ ನಮಗೂ ಇಷ್ಟ...ಹೀಗೆ ಅನೆಕ ವಿಷಯಗಳಲ್ಲಿ ನಮ್ಮಲ್ಲಿ ಸಾಮ್ಯತೆ ಇದೆ.

ನಮ್ಮ ದೇಶಗಳ ನಡುವೆ ಇರುವ ದುಷ್ಟ ಗುಣಗಳ ವಿರುದ್ಧ ಹೋರಾಡಲು ನಮ್ಮ ಬೌದ್ಧಿಕ ಸಾಮರ್ಥ್ಯ ಹಾಗೂ ಇತರೆ ಸಂಪನ್ಮೂಲಗಳು ವಿನಿಮಯ ಆಗಬೇಕು. ಸಾಮಾನ್ಯ ಸಮಸ್ಯೆಗಳ ವಿರುದ್ಧ ಒಂದಾಗಿ ಸೆಣೆಸಬೇಕು ಹಾಗೂ ಇವೆಲ್ಲಾ ನಮ್ಮ ಸಾಮಾನ್ಯ ಗುರಿಗಳಾಗಬೇಕು' ಎಂದರು.

ಹೈದರಾಬಾದ್‌ನಿಂದ ಪ್ರಕಟವಾಗುವ ಸಿಂಧಿ ಭಾಷೆಯ `ಡೈಲಿ ಇಬ್ರತ್' ಪತ್ರಿಕೆಯ ಉಪ ಸಂಪಾದಕಿ 19 ವರ್ಷದ ತರುಣಿ ಸಲ್ಮಾ ಸುಮ್ರ ತನ್ನ ವೃತ್ತಿಯ ಹಿರಿಯರ ಕುರಿತಂತೆ ಹದಿಹರೆಯದ ಹುಮ್ಮಸ್ಸಿಗೆ ತಕ್ಕ ಹಾಗೆ ಭಯಭಕ್ತಿಯನ್ನೇನೂ ಹೊಂದಿರಲಿಲ್ಲ.   ಸಮ್ಮೇಳನದ ಕೆಲವು ಗೋಷ್ಠಿಗಳು ಹಾಗೂ ಹಿರಿಯ ಪ್ರತಿನಿಧಿಗಳು ಪಡೆದುಕೊಳ್ಳುತ್ತಿದ್ದ ಹೆಚ್ಚಿನ ಗಮನದ ಬಗೆಗೂ ಆಕೆಗೆ ಬೇಸರವಾಗಿತ್ತು.

  ತನ್ನ ವಯಸ್ಸಿಗಿಂತ ಹೆಚ್ಚಿನ ಪ್ರಬುದ್ಧತೆ ಹಾಗೂ ವಿವೇಕವನ್ನು ಆಕೆ ಪ್ರದರ್ಶಿಸಿದರು. ಅಂತಿಮವಾಗಿ ಆಕೆ ಹೇಳಿದ ಮಾತು `ನಮ್ಮ ನೆರೆಯವರು ಸಂತೋಷ, ನೆಮ್ಮದಿ ಹಾಗೂ ಸೌಹಾರ್ದ ಭಾವದಿಂದ ಬದುಕುತ್ತಿದ್ದಾರೆ ಎಂದರೆ, ನಾವೂ ಚೆನ್ನಾಗಿದ್ದೇವೆ ಎಂದೇ ಅರ್ಥ' ಎಂದರು.  ಅಂತೂ ಆರಂಭವಂತೂ ಆಗಿದೆ.

`ಏನೇ ಆಗಲೀ ಎಲ್ಲ ಸ್ತುತಿಗಳೂ ದೇವರಿಗೇ ಮೀಸಲು'  ಎಂಬ ಅರ್ಥದ `ಅಲಹಮ್‌ದುಲ್ಲಿಲ್ಲಾಹ್' ಮಂತ್ರ ನನ್ನೊಳಗೆ ಮಾರ್ದನಿಸುತ್ತಲೇ ಇತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT