ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: 26ರವರೆಗೆ ನಿಷೇಧಾಜ್ಞೆ, ಇಂದು ಶಾಲೆಗಳಿಗೆ ರಜೆ

Last Updated 24 ಆಗಸ್ಟ್ 2012, 4:40 IST
ಅಕ್ಷರ ಗಾತ್ರ

ಕನಕಪುರ: ಹುಟ್ಟುಹಬ್ಬ ಆಚರಿಸಿಕೊಂಡು ಮುತ್ತತ್ತಿಯಿಂದ ಬೆಂಗಳೂರು ಕಡೆಗೆ ವಾಪಸಾಗುತ್ತಿದ್ದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನು ವಿನಾಕಾರಣ ಕೆಲವರು ಥಳಿಸಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ರಾತ್ರಿಯಿಂದ ಕನಕಪುರ ಪಟ್ಟಣದಲ್ಲಿ ಶಾಂತಿ ಭಂಗವುಂಟಾಗಿದೆ. ಗುರುವಾರ ಬೆಳಿಗ್ಗೆ 3 ಬಾರಿ ಲಘು ಲಾಠಿ ಪ್ರಹಾರ ನಡೆದಿದೆ. ಪಟ್ಟಣದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು ಆ.26ರವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಗಲಭೆಗೆ ಕಾರಣಾದ ರಿಜ್ವಾನ್ ಷರೀಫ್, ವಾಸಿಮ್ ಅಕ್ರಮ್ ಖಾನ್, ಅಶ್ರಫ್ ಅಹಮದ್, ಸಯ್ಯದ್ ಮಸ್ತೀನ್, ಶಾಹಿದ್ ಅಹಮದ್ ಎಂಬ ಐವರನ್ನು ಬಂಧಿಸಿದ್ದು ಉಳಿದ ಆರೋಪಿಗಳಿಗಾಗಿ ಪತ್ತೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ: ಬೆಂಗಳೂರಿನ ದಯಾನಂದ ಸಾಗರ ಎಂಜಿನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಿಹಾರ ರಾಜ್ಯದ ಪಟ್ನಾ ಮೂಲದ ಐವರು ವಿದ್ಯಾರ್ಥಿಗಳು ಹಾಗೂ ಇಬ್ಬರು ವಿದ್ಯಾರ್ಥಿನಿಯರು ಬುಧವಾರ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಲುವಾಗಿ ಪ್ರವಾಸಿ ತಾಣ ಮುತ್ತತ್ತಿಗೆ ಬಂದಿದ್ದರು.

ಆಚರಣೆ ಮುಗಿಸಿಕೊಂಡು ರಾತ್ರಿ ಬೆಂಗಳೂರಿಗೆ ಇನ್ನೋವಾ ಕಾರಿನಲ್ಲಿ ಹಿಂದಿರುಗುವ ಸಂದರ್ಭದಲ್ಲಿ ತಮ್ಮ ಮುಂದೆ ಹೋಗುತ್ತಿದ್ದ ಜೆನ್ ಕಾರೊಂದನ್ನು ಹಿಂದಿಕ್ಕಿದರು. ಜೆನ್ ಕಾರಿನಲ್ಲಿದ್ದವರು ತಮ್ಮನ್ನು ಈ ವಿದ್ಯಾರ್ಥಿಗಳು ಚುಡಾಯಿಸಿದ್ದಾರೆ ಎಂದು ಕನಕಪುರದಲ್ಲಿನ ತಮ್ಮವರಿಗೆ ಸುದ್ದಿ ಮುಟ್ಟಿಸಿದರು.

ಇದರಿಂದ ಕನಕಪುರದ ಕೆಲವು ಯುವಕರು ಇನ್ನೋವಾ ಕಾರು ಪಟ್ಟಣಕ್ಕೆ ಬರುತ್ತಿದ್ದಂತೆಯೇ ಅದನ್ನು ಅಡ್ಡಗಟ್ಟಿ ಒಳಗಡೆಯಿದ್ದ ವಿದ್ಯಾರ್ಥಿಗಳನ್ನು ಹೊರಗೆಳೆದು ಮನಬಂದಂತೆ ಥಳಿಸಿದರು.

ಈ ಸಂದರ್ಭದಲ್ಲಿ ಇವರನ್ನು ಬಿಡಿಸಲು ಹೋದವರ ಮೇಲೂ ಹಲ್ಲೆ ನಡೆಸಲಾಯಿತು. ಇದರಿಂದ ಕುಪಿತಗೊಂಡ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಹಲ್ಲೆ ಮಾಡುತ್ತಿದ್ದ ಯುವಕರನ್ನು ಹಿಡಿಯಲು ಹೋದಾಗ ಅವರು ಅಲ್ಲಿಂದ ಪರಾರಿಯಾದರು.

ಅವರನ್ನು ಹಿಡಿಯಲು ಸಾರ್ವಜನಿಕರು ಮುಂದಾದಾಗ ಪೊಲೀಸರು ಮಧ್ಯ ಪ್ರವೇಶಿಸಿ ಅವರ ಮೇಲೆ ದೂರು ಪಡೆದು ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಇದರಿಂದ ಸಮಾಧಾನಗೊಳ್ಳದ ಸಾರ್ವಜನಿಕರು ರಾತ್ರಿ 11ಗಂಟೆ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಕಿ ಹಾಕಿ ಪ್ರತಿಭಟನೆಗೆ ಮುಂದಾದರು.

ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು ಬೆಳಿಗ್ಗೆಯೊಳಗೆ ಬಂಧಿಸುವ ಭರವಸೆ ನೀಡಿದ್ದರು. ಅದರಿಂದ ರಾತ್ರಿ ಪ್ರತಿಭಟನೆಯನ್ನು ಕೈಬಿಡಲಾಗಿತ್ತು. ಗುರುವಾರ ಬೆಳಿಗ್ಗೆ 9 ಗಂಟೆಯಾದರೂ ಆರೋಪಿಗಳನ್ನು ಪೊಲೀಸರು ಬಂಧಿಸದೇ ಹೋದದ್ದರಿಂದ ಆಕ್ರೋಶಗೊಂಡ ಜನರು ಪ್ರತಿಭಟನೆಗೆ ಮುಂದಾದರು.

ಆರೋಪಿಗಳನ್ನು ಬಂಧಿಸದೆ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಕ್ರೋಶಗೊಂಡ ಸಾರ್ವಜನಿಕರ ಗುಂಪು ಬೀದಿಗಿಳಿದು ಟೈರುಗಳಿಗೆ ಬೆಂಕಿ ಹಚ್ಚಿ ದಿಢೀರ್ ಪ್ರತಿಭಟನೆ ನಡೆಸಿತು. ಉದ್ವಿಗ್ನಗೊಂಡ ಯುವಕರ ಗುಂಪು ಅಲ್ಲಲ್ಲಿ ಜಮಾಯಿಸಿ ಅಂಗಡಿ ಮುಂಗಟ್ಟು ಮುಚ್ಚಿಸಿ ರಸ್ತೆ ತಡೆಗೆ ಮುಂದಾಯಿತು. ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಬುಧವಾರ ರಾತ್ರಿ ಗಲಭೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು.

ಇದರಿಂದಾಗಿ ಘಟನೆಯನ್ನು ನಿಯಂತ್ರಿಸಲು ಪೊಲೀಸರು ಮೂರು ಬಾರಿ ಲಘು ಲಾಠಿ ಪ್ರಹಾರ ಮಾಡಬೇಕಾಯಿತು. ಈ ಸಂದರ್ಭದಲ್ಲಿ ಆಟೊ ಚಾಲಕ ನಾಗೇಂದ್ರ ಎಂಬುವರ ಹಣೆಗೆ ಪೋಲಿಸರು ಹೊಡೆದ ಲಾಠಿ ಏಟಿನಿಂದ ಗಾಯವಾಗಿ ಪರಿಸ್ಥಿತಿ ಸ್ವಲ್ಪ ಬಿಗಡಾಯಿಸಿತು. ನಂತರ ಪೊಲೀಸರೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಆದರೂ ಪ್ರತಿಭಟನಾಕಾರರು ಸುಮ್ಮನಾಗದೆ, ಪೊಲೀಸರು ಆರೋಪಿಗಳನ್ನು ಬಂಧಿಸುವ ಬದಲು ನಮ್ಮನ್ನೇ ಸಮಾಧಾನ ಮಾಡುತ್ತಿದ್ದಾರೆ ಎಂದು ಕುಪಿತಗೊಂಡು ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ತಾಲ್ಲೂಕು ದಂಡಾಧಿಕಾರಿ ದಾಕ್ಷಾಯಿಣಿ ಪಟ್ಟಣದಾದ್ಯಂತ 144ನೇ ಸೆಕ್ಷನ್ ಜಾರಿಗೊಳಿಸಿದರು. 26ರ ಭಾನುವಾರ ಸಂಜೆವರೆಗೂ ನಿಷೇಧಾಜ್ಞೆ ಮುಂದುವರಿಯಲಿದೆ. ಒಂದು ಹಂತದಲ್ಲಿ ಪರಿಸ್ಥಿತಿ ತಿಳಿಯಾಗಿತ್ತು. ಸಂಜೆ ವೇಳೆಗೆ ಅಂಗಡಿ ಮುಂಗಟ್ಟು ತೆರೆದು ಮಾಮೂಲಿಯಾಗಿ ವಹಿವಾಟು ನಡೆಯಿತು.

ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರಿದಿದೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್, ಹೆಚ್ಚುವರಿ ಅಧೀಕ್ಷಕ ಶಂತನು ಸಿನ್ಹಾ, ಡಿವೈಎಸ್‌ಪಿ ಸಿದ್ದಪ್ಪ, ವೃತ್ತ ನಿರೀಕ್ಷಕರು ಸೇರಿದಂತೆ ಪೊಲೀಸ್ ಸಿಬ್ಬಂದಿ ಪಟ್ಟಣದಾದ್ಯಂತ ಕಟ್ಟೆಚ್ಚರ ವಹಿದ್ದಾರೆ.

ಭೇಟಿ: ವಿಷಯ ತಿಳಿದ ಕೂಡಲೇ ಶಾಸಕ ಡಿ.ಕೆ.ಶಿವಕುಮಾರ್ ಪಟ್ಟಣಕ್ಕೆ ಭೇಟಿ ನೀಡಿದರು. ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತುಕತೆ ನಡೆಸಿ ಪಟ್ಟಣದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT